ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

ನಮ್ಮನ್ನು ಪಾಪದಿಂದ ಬಿಡಿಸಲು ದೇವರು ಮಾಡಿದ ಏರ್ಪಾಡು

ನಮ್ಮನ್ನು ಪಾಪದಿಂದ ಬಿಡಿಸಲು ದೇವರು ಮಾಡಿದ ಏರ್ಪಾಡು

1, 2. (ಎ) ಯಾವ ರೀತಿಯ ಸಹಾಯವನ್ನು ನಾವು ಯಾವತ್ತೂ ಮರೆಯುವುದಿಲ್ಲ? (ಬಿ) ದೇವರು ವಿಮೋಚನಾ ಮೌಲ್ಯ ಕೊಟ್ಟದ್ದು ನಮಗೆ ಆತನು ಮಾಡಿರುವ ಅತ್ಯಂತ ದೊಡ್ಡ ಸಹಾಯವೇಕೆ?

ನಮಗೆ ತುಂಬಾ ಅಗತ್ಯವಿರುವ ಸಹಾಯವನ್ನು ಯಾರಾದರೂ ಮಾಡಿದರೆ ಅದನ್ನು ನಾವು ಯಾವತ್ತೂ ಮರೆಯುವುದಿಲ್ಲ. ಬದುಕಿರುವ ವರೆಗೂ ಅವರಿಗೆ ನಾವು ಋಣಿಗಳಾಗಿರುತ್ತೇವೆ.

2 ಅಂಥ ಒಂದು ದೊಡ್ಡ ಸಹಾಯವನ್ನು ಯೆಹೋವ ದೇವರು ನಮಗೆ ಮಾಡಿದ್ದಾನೆ. ಅದೇನು? ನಮ್ಮನ್ನು ಪಾಪದಿಂದ ಬಿಡಿಸಲಿಕ್ಕಾಗಿ ವಿಮೋಚನಾ ಮೌಲ್ಯವನ್ನು ಕೊಟ್ಟಿದ್ದಾನೆ ಅಂದರೆ ತನ್ನ ಮಗನಾದ ಯೇಸು ಕ್ರಿಸ್ತನ ಜೀವವನ್ನೇ ಕೊಟ್ಟಿದ್ದಾನೆ. ಇದರಿಂದಾಗಿ ನಾವು ಎಂದಿಗೂ ಸಾಯದೆ ಸಂತೋಷವಾಗಿ ಜೀವಿಸಲು ಸಾಧ್ಯವಾಗುತ್ತದೆ. (ಮತ್ತಾಯ 20:28 ಓದಿ.) ಅಷ್ಟೇ ಅಲ್ಲ, ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ ಎಂದು ಸಹ ಇದರಿಂದ ಗೊತ್ತಾಗುತ್ತದೆ.

ನಮ್ಮನ್ನು ಪಾಪದಿಂದ ಬಿಡಿಸುವ ಅವಶ್ಯಕತೆ ಇತ್ತಾ?

3. ನಾವೆಲ್ಲರೂ ಯಾಕೆ ಸಾಯುತ್ತೇವೆ?

3 ಮನುಷ್ಯರನ್ನು ಪಾಪ ಮತ್ತು ಮರಣದಿಂದ ಬಿಡಿಸಲು ಯೆಹೋವನು ವಿಮೋಚನಾ ಮೌಲ್ಯದ ಏರ್ಪಾಡು ಮಾಡಿದನು. (ಎಫೆಸ 1:7) ಇದರ ಅವಶ್ಯಕತೆ ಇತ್ತಾ? ಇದನ್ನು ಅರ್ಥಮಾಡಿಕೊಳ್ಳಲು ಮೊದಲು ನಾವು ಸಾವಿರಾರು ವರ್ಷಗಳ ಹಿಂದೆ ಏದೆನ್‌ ತೋಟದಲ್ಲಿ ಏನಾಯಿತೆಂದು ತಿಳಿದುಕೊಳ್ಳಬೇಕು. ಮೊದಲ ಮನುಷ್ಯರಾದ ಆದಾಮ ಮತ್ತು ಹವ್ವ ಪಾಪ ಮಾಡಿದರು. ಅದರಿಂದಾಗಿ ಸತ್ತರು. ನಾವೆಲ್ಲರೂ ಅವರ ಮಕ್ಕಳಾಗಿರುವುದರಿಂದ ಪಾಪ ನಮ್ಮಲ್ಲೂ ಬಂತು, ಹಾಗಾಗಿ ನಾವೂ ಸಾಯುತ್ತೇವೆ.—ಟಿಪ್ಪಣಿ 9⁠ನ್ನು ನೋಡಿ.

4. (ಎ) ಆದಾಮನು ಯಾರು? (ಬಿ) ಅವನಿಗೆ ಯೆಹೋವನು ಏನೆಲ್ಲಾ ಕೊಟ್ಟಿದ್ದನು?

4 ಯೆಹೋವನು ಸೃಷ್ಟಿಸಿದ ಮೊದಲ ಮನುಷ್ಯ ಆದಾಮ. ದೇವರು ಅವನಿಗೆ ತುಂಬ ಬೆಲೆಬಾಳುವ ಪರಿಪೂರ್ಣ ಮಾನವ ಜೀವವನ್ನು ಕೊಟ್ಟನು. ಅಂದರೆ ಪರಿಪೂರ್ಣ ಮನಸ್ಸನ್ನು ಮತ್ತು ದೇಹವನ್ನು ಕೊಟ್ಟನು. ಹಾಗಾಗಿ ಅವನಿಗೆ ಕಾಯಿಲೆ ಅನ್ನುವುದೇ ಬರುತ್ತಿರಲಿಲ್ಲ, ವಯಸ್ಸಾಗುತ್ತಿರಲಿಲ್ಲ. ಅಷ್ಟೇ ಯಾಕೆ ಸಾವು ಕೂಡ ಇರಲಿಲ್ಲ. ಯೆಹೋವನೇ ಅವನನ್ನು ಸೃಷ್ಟಿಸಿದ್ದ ಕಾರಣ ಆತನೇ ಅವನಿಗೆ ತಂದೆಯಾಗಿದ್ದನು. (ಲೂಕ 3:38) ದೇವರು ಆದಾಮನೊಂದಿಗೆ ಮಾತಾಡುತ್ತಿದ್ದನು. ಏನು ಮಾಡಬೇಕು ಏನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತಿದ್ದನು. ಖುಷಿ ಖುಷಿಯಾಗಿ ಮಾಡುವಂಥ ಕೆಲಸವನ್ನು ಸಹ ಕೊಟ್ಟಿದ್ದನು.—ಆದಿಕಾಂಡ 1:28-30; 2:16, 17.

5. ಆದಾಮನನ್ನು ‘ದೇವರ ಸ್ವರೂಪದಲ್ಲಿ’ ಸೃಷ್ಟಿಸಲಾಯಿತು ಎನ್ನುವುದರ ಅರ್ಥವೇನು?

5 ಆದಾಮನನ್ನು ‘ದೇವರ ಸ್ವರೂಪದಲ್ಲಿ’ ಅಂದರೆ ದೇವರಲ್ಲಿದ್ದ ಗುಣಗಳನ್ನೇ ಇಟ್ಟು ಸೃಷ್ಟಿಸಲಾಯಿತು. (ಆದಿಕಾಂಡ 1:27) ದೇವರ ಮುಖ್ಯ ಗುಣಗಳಾದ ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿ ಅವನಲ್ಲಿತ್ತು. ದೇವರು ಆದಾಮನನ್ನು ಒಂದು ಯಂತ್ರದ ಹಾಗೆ ಸೃಷ್ಟಿಸಲಿಲ್ಲ. ಬದಲಾಗಿ ಅವನಿಗೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದನು. ಸರಿ ಯಾವುದು, ತಪ್ಪು ಯಾವುದು ಎಂದು ಯೆಹೋವನೇ ತಿಳಿಸುತ್ತಿದ್ದನಾದರೂ, ತನಗೆ ಯಾವುದು ಬೇಕೋ ಅದನ್ನು ಆದಾಮನೇ ಆರಿಸಿಕೊಳ್ಳಬಹುದಿತ್ತು. ಒಂದುವೇಳೆ ಅವನು ದೇವರಿಗೆ ವಿಧೇಯತೆ ತೋರಿಸುವ ಆಯ್ಕೆ ಮಾಡಿದ್ದರೆ ಇವತ್ತಿಗೂ ಸುಂದರ ಭೂಮಿಯಲ್ಲಿ ಸಂತೋಷವಾಗಿರುತ್ತಿದ್ದನು.

6. (ಎ) ಆದಾಮನು ದೇವರ ಮಾತು ಕೇಳದ ಕಾರಣ ಏನನ್ನು ಕಳೆದುಕೊಂಡನು? (ಬಿ) ಅದರಿಂದ ನಾವೇನು ಅನುಭವಿಸಬೇಕಾಗಿದೆ?

6 ಆದಾಮನು ಯೆಹೋವ ದೇವರ ಮಾತು ಕೇಳದ ಕಾರಣ ದೇವರೊಂದಿಗಿನ ಸ್ನೇಹ, ಪರಿಪೂರ್ಣ ಜೀವನ, ಸುಂದರ ತೋಟದಲ್ಲಿನ ವಾಸ ಇಂಥ ಅಮೂಲ್ಯ ವಿಷಯಗಳನ್ನು ಕಳೆದುಕೊಂಡನು. ಮುಂದೆ ಒಂದು ದಿನ ಅವನಿಗೆ ಸಾವು ಕೂಡ ಬಂತು. (ಆದಿಕಾಂಡ 3:17-19) ಆದಾಮ ಮತ್ತು ಹವ್ವ ದೇವರಿಗೆ ವಿರುದ್ಧವಾಗಿ ನಡೆಯುವ ಆಯ್ಕೆ ಮಾಡಿದ್ದರಿಂದ ತಮ್ಮ ಕೈಯಾರೆ ತಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಂಡರು. ಆದಾಮನ ಈ ತಪ್ಪಿನಿಂದ ‘ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿತು. ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.’ (ರೋಮನ್ನರಿಗೆ 5:12) ಹೀಗೆ ಆದಾಮನು ಪಾಪ ಮತ್ತು ಮರಣಕ್ಕೆ ತನ್ನನ್ನು ‘ದಾಸನಾಗಿ ಮಾರಿಕೊಂಡನು’ ಮತ್ತು ನಮ್ಮನ್ನು ಸಹ ಮಾರಿಬಿಟ್ಟನು. (ರೋಮನ್ನರಿಗೆ 7:14) ಹಾಗಾದರೆ ನಾವು ಪಾಪ ಮತ್ತು ಮರಣಕ್ಕೆ ದಾಸರಾಗಿಯೇ ಇರಬೇಕಾ? ಇಲ್ಲ, ಯೆಹೋವನು ನಮ್ಮನ್ನು ಬಿಡಿಸಲು ವಿಮೋಚನಾ ಮೌಲ್ಯದ ಏರ್ಪಾಡನ್ನು ಮಾಡಿದನು.

7, 8. ಯೆಹೋವನು ನಮಗೆ ಹೇಗೆ ಸಹಾಯಮಾಡಿದ್ದಾನೆ?

7 ವಿಮೋಚನಾ ಮೌಲ್ಯದ ಏರ್ಪಾಡನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆಗೆ ಗಮನಕೊಡಿ. ಒಬ್ಬ ವ್ಯಕ್ತಿ ವೈದ್ಯನ ಬಳಿಗೆ ಹೋದಾಗ ಅವನಿಗೊಂದು ಗಂಭೀರ ಕಾಯಿಲೆಯಿದೆ, ಅವನು ಹೆಚ್ಚು ದಿನ ಬದುಕುವುದಿಲ್ಲ ಎಂದು ಗೊತ್ತಾಗುತ್ತದೆ. ಆ ಕಾಯಿಲೆ ಬಂದಿರುವುದು ಅವನ ತಪ್ಪಿಂದಲ್ಲ, ಅವನ ತಂದೆತಾಯಿಯಿಂದ ಎಂದು ಸಹ ಗೊತ್ತಾಗುತ್ತದೆ. ಅದು ವಾಸಿಯಾಗಬೇಕಾದರೆ ಅವನು ಒಂದು ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು. ಅದಕ್ಕಾಗಿ ಬಹಳಷ್ಟು ಹಣ ಖರ್ಚಾಗುತ್ತದೆ. ಆದರೆ ಅಷ್ಟೊಂದು ಹಣ ಅವನಲ್ಲಿ ಇಲ್ಲ. ಹೀಗೆ ಅವನು ಬೇರೆ ದಾರಿಯೇ ಇಲ್ಲ ಅಂದುಕೊಳ್ಳುವಾಗ ವೈದ್ಯನು ಬಂದು, ‘ಶಸ್ತ್ರಚಿಕಿತ್ಸೆಯನ್ನು ನಾನು ಮಾಡಿಸುತ್ತೇನೆ, ಅದಕ್ಕೆ ಆಗುವ ಖರ್ಚನ್ನೆಲ್ಲ ನಾನೇ ನೋಡಿಕೊಳ್ಳುತ್ತೇನೆ’ ಎಂದು ಹೇಳುತ್ತಾನೆ. ಅದನ್ನು ಕೇಳಿದಾಗ ಆ ರೋಗಿಗೆ ವೈದ್ಯನ ಬಗ್ಗೆ ಹೇಗೆ ಅನಿಸಿರಬೇಕಲ್ಲವೇ!

8 ನಮ್ಮ ಪರಿಸ್ಥಿತಿ ಕೂಡ ಹಾಗೆಯೇ ಇದೆ. ನಮ್ಮ ತಪ್ಪಿಲ್ಲದಿದ್ದರೂ ಆದಾಮ ಹವ್ವರಿಂದ ಗಂಭೀರ ಕಾಯಿಲೆಯಂತಿರುವ ಪಾಪವನ್ನು ಪಡೆದಿದ್ದೇವೆ. ಹಾಗಾಗಿ ಯಾವ ಮನುಷ್ಯನಿಗೂ ಈ ಪಾಪವನ್ನು ತೆಗೆಯಲು ಸಾಧ್ಯವಿಲ್ಲ. ನಮ್ಮ ಭವಿಷ್ಯ ಕತ್ತಲಾಗಿದೆ. ರೋಗಿಯ ಮೇಲೆ ಕರುಣೆ ತೋರಿಸಿದ ಆ ವೈದ್ಯನಂತೆ ಯೆಹೋವನು ನಮ್ಮನ್ನು ಪಾಪದಿಂದ ಬಿಡಿಸಲು ಬೇಕಾಗುವ ಏರ್ಪಾಡನ್ನು ಮಾಡಿದನು, ಅದಕ್ಕಾಗಿ ತಗಲುವ ಬೆಲೆಯನ್ನು ಸಹ ಕೊಟ್ಟನು. ಅದನ್ನು ಹೇಗೆ ಕೊಟ್ಟನೆಂದು ನೋಡೋಣ.

ಯೆಹೋವನು ವಿಮೋಚನಾ ಮೌಲ್ಯವನ್ನು ಹೇಗೆ ಕೊಟ್ಟನು?

9. ಆದಾಮನು ಕಳೆದುಕೊಂಡ ಜೀವಕ್ಕೆ ಪ್ರತಿಯಾಗಿ ಎಂಥ ಜೀವವನ್ನು ಕೊಡಬೇಕಿತ್ತು?

9 ಆದಾಮನು ಕಳೆದುಕೊಂಡ ಪರಿಪೂರ್ಣ ಜೀವಕ್ಕೆ ಬದಲಿಯಾಗಿ ಯಾರೂ ಏನನ್ನೂ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ನಾವ್ಯಾರೂ ಪರಿಪೂರ್ಣರಲ್ಲ. ಕಳೆದುಕೊಂಡ ಪರಿಪೂರ್ಣ ಜೀವಕ್ಕೆ ಇನ್ನೊಂದು ಪರಿಪೂರ್ಣ ಮಾನವ ಜೀವವನ್ನು ಕೊಡಬೇಕಿತ್ತು. (ಕೀರ್ತನೆ 49:7, 8) “ಅನುರೂಪವಾದ ವಿಮೋಚನಾ ಮೌಲ್ಯ” ಅಂದರೆ ‘ಸರಿಸಮವಾದ ಬೆಲೆಯನ್ನು’ ಕೊಡಬೇಕಾಗಿತ್ತು. (1 ತಿಮೊಥೆಯ 2:6) ಇದು ಆದಾಮನು ಕಳೆದುಕೊಂಡ ಜೀವಕ್ಕೆ ಸಮಾನವಾಗಿ ಇರಬೇಕಿತ್ತು.

10. ನಮ್ಮನ್ನು ಪಾಪದಿಂದ ಬಿಡಿಸಲು ಯೆಹೋವನು ಏನು ಮಾಡಿದನು?

10 ನಮ್ಮನ್ನು ಪಾಪದಿಂದ ಬಿಡಿಸಲು ಯೆಹೋವನು ತನ್ನ ಮುದ್ದುಮಗನಾದ ಯೇಸುವನ್ನು ಭೂಮಿಗೆ ಕಳುಹಿಸಿದನು. ಆತನು ಯೆಹೋವನ ಮೊದಲ ಸೃಷ್ಟಿಯಾಗಿದ್ದನು. (1 ಯೋಹಾನ 4:9, 10) ಯೇಸು ತನ್ನ ತಂದೆಯನ್ನು ಮತ್ತು ತನ್ನ ವಾಸಸ್ಥಳವಾದ ಸ್ವರ್ಗವನ್ನು ಬಿಟ್ಟುಬರಲು ಹಿಂಜರಿಯಲಿಲ್ಲ, ಸಿದ್ಧಮನಸ್ಸು ತೋರಿಸಿದನು. (ಫಿಲಿಪ್ಪಿ 2:7) ಯೆಹೋವನು ಸ್ವರ್ಗದಲ್ಲಿದ್ದ ಯೇಸುವಿನ ಜೀವವನ್ನು ಭೂಮಿಯಲ್ಲಿದ್ದ ಒಬ್ಬ ಸ್ತ್ರೀಯ ಗರ್ಭದಲ್ಲಿಟ್ಟನು. ಹಾಗಾಗಿ ಯೇಸು ಪರಿಪೂರ್ಣ ಮನುಷ್ಯನಾಗಿ ಹುಟ್ಟಿದನು.—ಲೂಕ 1:35.

ಯೆಹೋವನು ನಮಗಾಗಿ ತನ್ನ ಮುದ್ದುಮಗನನ್ನೇ ವಿಮೋಚನಾ ಮೌಲ್ಯವಾಗಿ ಕೊಟ್ಟನು

11. ಎಲ್ಲ ಮನುಷ್ಯರನ್ನು ಮರಣದಿಂದ ಬಿಡಿಸಲು ಒಬ್ಬ ಮನುಷ್ಯನಿಂದ ಹೇಗೆ ಸಾಧ್ಯ?

11 ಆದಾಮನೊಬ್ಬನ ತಪ್ಪಿನಿಂದಾಗಿ ಎಲ್ಲ ಮನುಷ್ಯರು ಪರಿಪೂರ್ಣ ಜೀವವನ್ನು ಕಳೆದುಕೊಂಡರು. ಆದರೆ ಎಲ್ಲ ಮನುಷ್ಯರನ್ನು ಮರಣದಿಂದ ಬಿಡಿಸಲು ಒಬ್ಬ ಮನುಷ್ಯನಿಂದ ಸಾಧ್ಯವಾಗುತ್ತದಾ? ಖಂಡಿತ ಆಗುತ್ತದೆ. (ರೋಮನ್ನರಿಗೆ 5:19 ಓದಿ.) ಏಕೆಂದರೆ ನಮಗಾಗಿ ಜೀವಕೊಟ್ಟ ಯೇಸು ಪರಿಪೂರ್ಣ ವ್ಯಕ್ತಿಯಾಗಿದ್ದನು, ಆತನು ಯಾವುದೇ ಪಾಪಮಾಡಲಿಲ್ಲ. (1 ಕೊರಿಂಥ 15:45) ಅದರಿಂದಾಗಿ ಎಲ್ಲ ಮನುಷ್ಯರು ಮರಣದಿಂದ ಬಿಡುಗಡೆ ಪಡೆಯಲಿದ್ದಾರೆ.—1 ಕೊರಿಂಥ 15:21, 22.

12. ಯೇಸು ಯಾಕೆ ಚಿತ್ರಹಿಂಸೆ ಅನುಭವಿಸಿ ಸಾಯಬೇಕಿತ್ತು?

12 ಯೇಸುವನ್ನು ಎಷ್ಟು ಕ್ರೂರವಾಗಿ ಹಿಂಸಿಸಿ ಕೊಲ್ಲಲಾಯಿತೆಂದು ಬೈಬಲಿನಿಂದ ಗೊತ್ತಾಗುತ್ತದೆ. ಚೂಪಾದ ಎಲುಬುಗಳಿರುವ ಚಾಟಿಯಿಂದ ಆತನಿಗೆ ಹೊಡೆದರು, ಆತನನ್ನು ಮರದ ಕಂಬಕ್ಕೆ ಮೊಳೆಗಳಿಂದ ಜಡಿದು ನೇತುಹಾಕಿದರು. ಇಂಥ ಚಿತ್ರಹಿಂಸೆಯನ್ನು ಅನುಭವಿಸಿ ನೋವಿನಿಂದ ನರಳುತ್ತಾ ನರಳುತ್ತಾ ಯೇಸು ಪ್ರಾಣಬಿಟ್ಟನು. (ಯೋಹಾನ 19:1, 16-18, 30) ಇದನ್ನು ಓದುವಾಗ ಯೇಸು ಯಾಕಿಷ್ಟು ಚಿತ್ರಹಿಂಸೆ ಅನುಭವಿಸಿ ಸಾಯಬೇಕಿತ್ತು ಎಂಬ ಪ್ರಶ್ನೆ ನಿಮಗೆ ಬರಬಹುದು. ಇದಕ್ಕೆ ಕಾರಣ ಸೈತಾನನ ಒಂದು ಸವಾಲು. ಅದೇನೆಂದರೆ, ಒಬ್ಬ ಮನುಷ್ಯನಿಗೆ ಪ್ರಾಣ ಹೋಗುವಂಥ ಹಿಂಸೆ ಬಂದರೆ ಖಂಡಿತವಾಗಿ ಯೆಹೋವನನ್ನು ಬಿಟ್ಟುಬಿಡುತ್ತಾನೆ ಎಂದಾಗಿತ್ತು. ಆದರೆ ಯೇಸು ಸೈತಾನನ ಬಾಯಿಮುಚ್ಚಿಸಿದನು. ಪರಿಪೂರ್ಣನಾಗಿರುವ ಮನುಷ್ಯ ಎಷ್ಟೇ ಕಷ್ಟ ಸಂಕಟ ಬಂದರೂ ಯೆಹೋವನನ್ನು ಬಿಡುವುದಿಲ್ಲ, ಆತನಿಗೆ ನಿಷ್ಠೆಯಿಂದ ಉಳಿಯಲು ಸಾಧ್ಯ ಎಂದು ಆತನು ತೋರಿಸಿಕೊಟ್ಟನು. ಇಂಥ ಮಗನ ಬಗ್ಗೆ ಯೆಹೋವನಿಗೆ ಎಷ್ಟು ಹೆಮ್ಮೆ ಅನಿಸಿರಬೇಕಲ್ವಾ?—ಜ್ಞಾನೋಕ್ತಿ 27:11; ಟಿಪ್ಪಣಿ 15⁠ನ್ನು ನೋಡಿ.

13. ವಿಮೋಚನಾ ಮೌಲ್ಯವನ್ನು ಹೇಗೆ ಕೊಡಲಾಯಿತು?

13 ಯೆಹೂದಿ ಕ್ಯಾಲೆಂಡರಿನ ಪ್ರಕಾರ ಕ್ರಿ.ಶ. 33⁠ರ ನೈಸಾನ್‌ ತಿಂಗಳಿನ 14⁠ನೇ ತಾರೀಖಿನಂದು ವಿರೋಧಿಗಳು ಯೇಸುವನ್ನು ಕೊಂದರು. ಹಾಗಾಗುವಂತೆ ಯೆಹೋವನು ಬಿಟ್ಟನು. (ಇಬ್ರಿಯ 10:10) ಇದಾದ ಮೂರು ದಿನಗಳ ನಂತರ, ಯೆಹೋವನು ಯೇಸುವಿಗೆ ಪುನಃ ಜೀವಕೊಟ್ಟನು. ಆದರೆ ಮನುಷ್ಯನಾಗಿ ಅಲ್ಲ, ಆತ್ಮಜೀವಿಯಾಗಿ ಎಬ್ಬಿಸಿದನು. ಸ್ವಲ್ಪ ದಿನಗಳ ನಂತರ, ಯೇಸು ಸ್ವರ್ಗಕ್ಕೆ ಹೋದ ಮೇಲೆ ತನ್ನ ಪರಿಪೂರ್ಣ ಮಾನವ ಜೀವದ ಬೆಲೆಯನ್ನು ವಿಮೋಚನಾ ಮೌಲ್ಯವಾಗಿ ತನ್ನ ತಂದೆಗೆ ಒಪ್ಪಿಸಿದನು. (ಇಬ್ರಿಯ 9:24) ಇದರಿಂದಾಗಿ ನಮಗೆ ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆ ಹೊಂದುವ ಅವಕಾಶ ಸಿಕ್ಕಿತು.ರೋಮನ್ನರಿಗೆ 3:23, 24 ಓದಿ.

ವಿಮೋಚನಾ ಮೌಲ್ಯದಿಂದ ನಮಗೇನು ಪ್ರಯೋಜನ?

14, 15. ನಮ್ಮ ಪಾಪಗಳಿಗೆ ಕ್ಷಮೆ ಸಿಗಬೇಕಾದರೆ ನಾವೇನು ಮಾಡಬೇಕು?

14 ನಮ್ಮನ್ನು ಪಾಪದಿಂದ ಬಿಡಿಸಲಿಕ್ಕಾಗಿ ಯೆಹೋವನು ಮಾಡಿದ ಮಹಾತ್ಯಾಗದಿಂದ ಈಗಾಗಲೇ ನಾವು ಪ್ರಯೋಜನವನ್ನು ಪಡೆಯುತ್ತಿದ್ದೇವೆ. ಬನ್ನಿ, ಆ ಪ್ರಯೋಜನಗಳೇನೆಂದು ನೋಡೋಣ. ಜೊತೆಗೆ ಭವಿಷ್ಯತ್ತಿನಲ್ಲಿ ಯಾವ ಪ್ರಯೋಜನ ಸಿಗಲಿದೆ ಎಂದು ಸಹ ನೋಡೋಣ.

15 ಪಾಪಗಳಿಗೆ ಕ್ಷಮೆ ಸಿಗುತ್ತದೆ. ಎಲ್ಲ ಸಂದರ್ಭದಲ್ಲೂ ಸರಿಯಾದದ್ದನ್ನೇ ಮಾಡುವುದು ಅಷ್ಟು ಸುಲಭ ಅಲ್ಲ. ಒಂದಲ್ಲ ಒಂದು ತಪ್ಪನ್ನು ನಾವು ಮಾಡುತ್ತೇವೆ. ಹೇಳಬಾರದ್ದನ್ನು ಹೇಳಿಬಿಡುತ್ತೇವೆ, ಕೆಲವೊಮ್ಮೆ ಮಾಡಬಾರದ್ದನ್ನು ಮಾಡಿಬಿಡುತ್ತೇವೆ. (ಕೊಲೊಸ್ಸೆ 1:13, 14) ಹಾಗಾದರೆ ನಮ್ಮ ಪಾಪಗಳಿಗೆ ಕ್ಷಮೆ ಹೇಗೆ ಸಿಗುತ್ತದೆ? ನಮ್ಮ ತಪ್ಪನ್ನು ಅರ್ಥಮಾಡಿಕೊಂಡು ಪರಿತಪಿಸಿದಾಗ, ಮಾಡಿದ ತಪ್ಪಿಗಾಗಿ ಮನಸಾರೆ ಯೆಹೋವನಲ್ಲಿ ಕ್ಷಮೆ ಕೇಳಿದಾಗ ಆತನು ನಮ್ಮನ್ನು ಖಂಡಿತ ಕ್ಷಮಿಸುತ್ತಾನೆ.—1 ಯೋಹಾನ 1:8, 9.

16. ಒಳ್ಳೇ ಮನಸ್ಸಾಕ್ಷಿಯನ್ನು ಪಡೆಯಲು ನಾವು ಏನು ಮಾಡಬೇಕು?

16 ಒಳ್ಳೇ ಮನಸ್ಸಾಕ್ಷಿ ಇರುತ್ತದೆ. ನಾವು ಏನಾದರೂ ತಪ್ಪು ಮಾಡಿದ್ದರೆ ನಮ್ಮ ಮನಸ್ಸಾಕ್ಷಿ ನಮ್ಮನ್ನು ಚುಚ್ಚುತ್ತಾ ಇರುತ್ತದೆ. ಆಗ ನಮಗೆ ಬೇಸರವಾಗುತ್ತದೆ, ನಾವು ಯಾವ ಪ್ರಯೋಜನಕ್ಕೂ ಬಾರದವರು ಎಂದು ಅನಿಸಿಬಿಡುತ್ತದೆ. ಇಂಥ ಭಾವನೆಗಳಿಂದ ತಪ್ಪಿಸಿಕೊಳ್ಳಲು ದಾರಿಯೇ ಇಲ್ಲವೇನೋ ಅನಿಸಬಹುದು. ಹಾಗಂತ ನಾವು ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಯಾಕೆಂದರೆ ನಮ್ಮನ್ನು ಕ್ಷಮಿಸುವಂತೆ ಯೆಹೋವನಲ್ಲಿ ಅಂಗಲಾಚಿ ಬೇಡಿಕೊಂಡರೆ ಆತನು ನಮ್ಮ ಬೇಡಿಕೆಯನ್ನು ಕೇಳುತ್ತಾನೆ. ಖಂಡಿತವಾಗಿ ನಮ್ಮನ್ನು ಕ್ಷಮಿಸುತ್ತಾನೆ. (ಇಬ್ರಿಯ 9:13, 14) ನಮ್ಮ ಸಮಸ್ಯೆಗಳ ಬಗ್ಗೆ, ಕುಂದುಕೊರತೆಗಳ ಬಗ್ಗೆ ನಾವು ಆತನ ಹತ್ತಿರ ಹೇಳಿಕೊಳ್ಳಬೇಕು ಅಂತ ಯೆಹೋವನು ಬಯಸುತ್ತಾನೆ. (ಇಬ್ರಿಯ 4:14-16) ನಾವು ಹಾಗೆ ಮಾಡುವಾಗ ನಮಗೆ ಶಾಂತಿ-ನೆಮ್ಮದಿ ಸಿಗುತ್ತದೆ, ಒಳ್ಳೇ ಮನಸ್ಸಾಕ್ಷಿಯೂ ಇರುತ್ತದೆ.

17. ಯೇಸು ತನ್ನ ಜೀವ ಕೊಟ್ಟಿದ್ದರಿಂದ ನಾವು ಯಾವ ಆಶೀರ್ವಾದಗಳನ್ನು ಪಡೆಯಬಹುದು?

17 ಸಾವೇ ಇಲ್ಲದ ಜೀವನ ಸಿಗಲಿದೆ. “ಪಾಪವು ಕೊಡುವ ಸಂಬಳ ಮರಣ, ಆದರೆ ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ” ಎಂದು ಬೈಬಲಿನಲ್ಲಿದೆ. (ರೋಮನ್ನರಿಗೆ 6:23) ಯೇಸು ನಮಗಾಗಿ ತನ್ನ ಜೀವ ಕೊಟ್ಟಿದ್ದರಿಂದ ಸಾವೇ ಇಲ್ಲದ ಜೀವನವನ್ನು ಮತ್ತು ಪರಿಪೂರ್ಣ ಆರೋಗ್ಯವನ್ನು ನಾವು ಪಡೆಯಬಹುದು. (ಪ್ರಕಟನೆ 21:3, 4) ಆದರೆ ಈ ಆಶೀರ್ವಾದಗಳನ್ನು ಪಡೆಯಲು ನಾವೇನು ಮಾಡಬೇಕು?

ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಡುತ್ತೀರಾ?

18. ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಅಂತ ನಮಗೆ ಹೇಗೆ ಗೊತ್ತು?

18 ನಮಗೆ ಅಗತ್ಯ ಇರುವಾಗ ಯಾರಾದರೂ ಸಹಾಯ ಮಾಡಿದರೆ ನಾವು ಅದನ್ನು ಯಾವತ್ತೂ ಮರೆಯಲ್ಲ. ನಮಗಾಗಿ ಯೆಹೋವನು ವಿಮೋಚನಾ ಮೌಲ್ಯ ಕೊಟ್ಟದ್ದು ನಮಗೆ ಸಿಕ್ಕಿರುವ ಸಹಾಯಗಳಲ್ಲೇ ತುಂಬ ದೊಡ್ಡದು. ಅದಕ್ಕಾಗಿ ನಾವು ಯೆಹೋವನಿಗೆ ಋಣಿಗಳಾಗಿರಲೇಬೇಕು. ಬೈಬಲ್‌ ಹೀಗೆ ಹೇಳುತ್ತದೆ “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು.” (ಯೋಹಾನ 3:16) ಯೋಚಿಸಿ, ಯೆಹೋವನು ನಮಗಾಗಿ ತನ್ನ ಮುದ್ದು ಮಗನನ್ನೇ ಕೊಟ್ಟಿದ್ದಾನೆಂದರೆ ಆತನಿಗೆ ನಮ್ಮ ಮೇಲೆ ಅದೆಷ್ಟು ಪ್ರೀತಿ ಇರಬೇಕು! ಯೇಸುವಿಗೂ ನಮ್ಮ ಮೇಲೆ ತುಂಬ ಪ್ರೀತಿ ಇದೆ. ಆದ್ದರಿಂದಲೇ ನಮಗಾಗಿ ಪ್ರಾಣ ಕೊಡಲು ಸಹ ಆತನು ಹಿಂಜರಿಯಲಿಲ್ಲ. (ಯೋಹಾನ 15:13) ಯೆಹೋವ ದೇವರು ಮತ್ತು ಯೇಸು ನಮಗೋಸ್ಕರ ಇಷ್ಟೆಲ್ಲ ಮಾಡಿದ್ದು ಅವರು ನಮ್ಮನ್ನು ತುಂಬ ಪ್ರೀತಿಸುತ್ತಾರೆ ಎನ್ನುವುದಕ್ಕೆ ರುಜುವಾತಾಗಿದೆ.—ಗಲಾತ್ಯ 2:20.

ಯೆಹೋವನ ಬಗ್ಗೆ ಕಲಿಯುತ್ತಾ ಇದ್ದರೆ ಆತನ ಸ್ನೇಹಿತರಾಗುತ್ತೇವೆ ಮತ್ತು ಆತನ ಮೇಲೆ ಪ್ರೀತಿ ಹೆಚ್ಚಾಗುತ್ತದೆ

19, 20. (ಎ) ನಾವು ಹೇಗೆ ದೇವರ ಸ್ನೇಹಿತರಾಗಬಹುದು? (ಬಿ) ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿದೆ ಎಂದು ನೀವು ಹೇಗೆ ತೋರಿಸಬಹುದು?

19 ಯೆಹೋವ ದೇವರು ತೋರಿಸಿದ ಇಂಥ ಪ್ರೀತಿಯ ಬಗ್ಗೆ ಕಲಿತ ಮೇಲೆ ನಮಗೆ ಆತನ ಸ್ನೇಹಿತರಾಗಲು ಖಂಡಿತ ಮನಸ್ಸಾಗುತ್ತದೆ. ಆದರೆ ನಾವು ದೇವರ ಸ್ನೇಹಿತರಾಗುವುದು ಹೇಗೆ? ಪರಿಚಯ ಇಲ್ಲದ ಒಬ್ಬ ವ್ಯಕ್ತಿಯನ್ನು ಸ್ನೇಹಿತನಾಗಿ ಮಾಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಮೊದಲು ನಾವು ದೇವರ ಬಗ್ಗೆ ತಿಳಿದುಕೊಳ್ಳಬೇಕು. ನಾವು ‘ದೇವರ ಬಗ್ಗೆ ತಿಳಿದುಕೊಳ್ಳಲು’ ಸಾಧ್ಯ ಅಂತ ಯೋಹಾನ 17:3⁠ರಲ್ಲಿದೆ. ಆತನ ಬಗ್ಗೆ ಹೆಚ್ಚೆಚ್ಚು ಕಲಿಯುತ್ತಾ ಹೋದರೆ ಆತನ ಮೇಲೆ ನಮಗೆ ಪ್ರೀತಿ ಹೆಚ್ಚಾಗುತ್ತದೆ, ಆತನನ್ನು ಖುಷಿಪಡಿಸಬೇಕು ಎನ್ನುವ ಆಸೆ ನಮ್ಮಲ್ಲಿ ಹುಟ್ಟುತ್ತದೆ. ಆಗ ನಾವು ಆತನ ಸ್ನೇಹಿತರಾಗುತ್ತೇವೆ. ಆದ್ದರಿಂದ ಬೈಬಲಿನ ಸಹಾಯದಿಂದ ಯೆಹೋವನ ಬಗ್ಗೆ ಕಲಿಯುತ್ತಾ ಇರಿ.—1 ಯೋಹಾನ 5:3.

20 ಯೇಸುವಿನ ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಡಿ. ಯೇಸುವಿನಲ್ಲಿ “ನಂಬಿಕೆಯಿಡುವವನಿಗೆ ನಿತ್ಯಜೀವ” ಸಿಗುತ್ತದೆ ಎಂದು ಬೈಬಲ್‌ ಹೇಳುತ್ತದೆ. (ಯೋಹಾನ 3:36) ನಂಬಿಕೆ ಇಡುವುದು ಅಂದರೇನು? ಅದರರ್ಥ, ಯೇಸು ಕಲಿಸಿಕೊಟ್ಟಿದ್ದನ್ನು ನಮ್ಮ ಜೀವನದಲ್ಲಿ ಮಾಡುವುದೇ ಆಗಿದೆ. (ಯೋಹಾನ 13:15) ಹಾಗಾಗಿ ವಿಮೋಚನಾ ಮೌಲ್ಯವನ್ನು ನಂಬುತ್ತೇನೆ ಎಂದು ಕೇವಲ ಬಾಯಿಮಾತಿನಲ್ಲಿ ಹೇಳುವುದಲ್ಲ, ನಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸಬೇಕು. ಯಾಕೆಂದರೆ ಬೈಬಲಿನಲ್ಲಿ ಹೇಳಿದಂತೆ ‘ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದಾಗಿದೆ.’—ಯಾಕೋಬ 2:26.

21, 22. (ಎ) ಕ್ರಿಸ್ತನ ಮರಣದ ಸ್ಮರಣೆಗೆ ನಾವೆಲ್ಲರೂ ಯಾಕೆ ಪ್ರತಿವರ್ಷ ಹಾಜರಾಗಬೇಕು? (ಬಿ) ಮುಂದಿನ ಅಧ್ಯಾಯಗಳಲ್ಲಿ ನಾವು ಏನನ್ನು ಕಲಿಯಲಿದ್ದೇವೆ?

21 ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗಿರಿ. ತನ್ನ ಮರಣವನ್ನು ನೆನಪು ಮಾಡಿಕೊಳ್ಳಬೇಕೆಂದು ಯೇಸುವೇ ನಮಗೆ ಹೇಳಿದ್ದಾನೆ. ಹಾಗಾಗಿ ಯೆಹೋವನ ಸಾಕ್ಷಿಗಳಾದ ನಾವು ಪ್ರತಿವರ್ಷ ಯೇಸುವಿನ ‘ಮರಣದ ಸ್ಮರಣೆಯನ್ನು’ ಅಂದರೆ ‘ಕರ್ತನ ಸಂಧ್ಯಾ ಭೋಜನವನ್ನು’ ಮಾಡುತ್ತೇವೆ. (1 ಕೊರಿಂಥ 11:20; ಮತ್ತಾಯ 26:26-28) ನಮ್ಮ ಬಿಡುಗಡೆಗಾಗಿ ಯೇಸು ತನ್ನ ಪರಿಪೂರ್ಣ ಜೀವವನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟದ್ದನ್ನು ನಾವು ನೆನಪು ಮಾಡಿಕೊಳ್ಳಬೇಕೆಂದು ಆತನು ಬಯಸುತ್ತಾನೆ. ಆದ್ದರಿಂದಲೇ, “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಹೇಳಿದನು. (ಲೂಕ 22:19 ಓದಿ.) ವಿಮೋಚನಾ ಮೌಲ್ಯವನ್ನು, ಯೆಹೋವ ಮತ್ತು ಯೇಸು ನಿಮಗೆ ತೋರಿಸಿದ ಪ್ರೀತಿಯನ್ನು ನೀವು ಮರೆತಿಲ್ಲ ಎಂದು ಸ್ಮರಣೆಗೆ ಹಾಜರಾಗುವ ಮೂಲಕ ತೋರಿಸಿಕೊಡುತ್ತೀರಿ.—ಟಿಪ್ಪಣಿ 16 ನೋಡಿ.

22 ಯೆಹೋವನು ನಮಗಾಗಿ ವಿಮೋಚನಾ ಮೌಲ್ಯ ಕೊಟ್ಟದ್ದು ನಮಗೆ ಸಿಕ್ಕಿರುವ ಅತೀ ದೊಡ್ಡ ಸಹಾಯ ಎನ್ನುವುದರಲ್ಲಿ ಸಂಶಯವೇ ಇಲ್ಲ. (2 ಕೊರಿಂಥ 9:14, 15) ಈ ಏರ್ಪಾಡಿನಿಂದ ಕೇವಲ ನಮಗೆ ಮಾತ್ರ ಅಲ್ಲ, ಈಗಾಗಲೇ ತೀರಿಕೊಂಡಿರುವ ಕೋಟ್ಯಂತರ ಜನರಿಗೂ ಪ್ರಯೋಜನವಾಗಲಿದೆ. ಅದು ಹೇಗೆ ಎಂದು ಅಧ್ಯಾಯ 6 ಮತ್ತು 7⁠ರಲ್ಲಿ ಕಲಿಯೋಣ.