ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

ಲೋಕದ ಅಂತ್ಯ ಹತ್ತಿರವಿದೆಯಾ?

ಲೋಕದ ಅಂತ್ಯ ಹತ್ತಿರವಿದೆಯಾ?

1. ಮುಂದೆ ಏನಾಗಲಿದೆ ಎಂದು ನಮಗೆ ಹೇಗೆ ಗೊತ್ತಾಗುತ್ತದೆ?

ಟಿವಿಯಲ್ಲಿ ವಾರ್ತೆ ನೋಡುವಾಗ ಅಥವಾ ವಾರ್ತಾಪತ್ರಿಕೆಯಲ್ಲಿ ಸುದ್ದಿಗಳನ್ನು ಓದುವಾಗ ‘ಈ ಲೋಕದ ಪರಿಸ್ಥಿತಿ ಎಷ್ಟು ಹದಗೆಟ್ಟು ಹೋಗಿದೆ’ ಅಂತ ನೀವು ಯೋಚಿಸಿರಬಹುದು. ಲೋಕದಲ್ಲಿ ಈಗ ಆಗುತ್ತಿರುವ ಹಿಂಸೆ-ಪಾತಕಗಳನ್ನು, ದುರಂತಗಳನ್ನು ನೋಡಿ ಕೆಲವರು ‘ಲೋಕದ ಅಂತ್ಯ ತುಂಬ ಹತ್ತಿರ ಇರಬೇಕು’ ಅನ್ನುತ್ತಾರೆ. ನಿಜಕ್ಕೂ ಲೋಕದ ಅಂತ್ಯ ತುಂಬ ಹತ್ತಿರವಿದೆಯಾ? ಮುಂದೆ ಏನಾಗುತ್ತದೆ ಅಂತ ನಾವು ಹೇಗೆ ತಿಳಿದುಕೊಳ್ಳಬಹುದು? ಅದನ್ನು ನಾವಂತೂ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಯೆಹೋವ ದೇವರಿಗೆ ಆಗುತ್ತದೆ. ನಮಗೆ ಮತ್ತು ಈ ಭೂಮಿಗೆ ಮುಂದೆ ಏನಾಗಲಿದೆ ಎಂದು ಆತನು ಬೈಬಲಿನಲ್ಲಿ ಹೇಳಿದ್ದಾನೆ.—ಯೆಶಾಯ 46:10; ಯಾಕೋಬ 4:14.

2, 3. (ಎ) ಯೇಸುವಿನ ಶಿಷ್ಯರಿಗೆ ಏನು ತಿಳಿದುಕೊಳ್ಳುವ ಆಸೆಯಿತ್ತು? (ಬಿ) ಯೇಸು ಅದಕ್ಕೆ ಏನೆಂದು ಉತ್ತರಿಸಿದನು?

2 ಬೈಬಲಿನಲ್ಲಿ ಲೋಕದ ಅಂತ್ಯದ ಬಗ್ಗೆ ಹೇಳಲಾಗಿದೆ. ಹಾಗೆ ಹೇಳುವಾಗೆಲ್ಲ ಅದರರ್ಥ ಭೂಮಿ ನಾಶವಾಗುತ್ತದೆ ಎಂದಲ್ಲ, ಬದಲಿಗೆ ದುಷ್ಟತನದ ಅಂತ್ಯವಾಗುತ್ತದೆ ಎಂದಾಗಿದೆ. ಈ ಇಡೀ ಭೂಮಿಯನ್ನು ದೇವರ ಸರ್ಕಾರ ಆಳುತ್ತದೆ ಎಂದು ಯೇಸು ಕಲಿಸಿದನು. (ಲೂಕ 4:43) ಅದು ಯಾವಾಗ ಎಂದು ತಿಳಿದುಕೊಳ್ಳುವ ಆಸೆ ಯೇಸುವಿನ ಶಿಷ್ಯರಿಗಿತ್ತು. ಅದಕ್ಕೆ ಅವರು ಯೇಸುವಿಗೆ: “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” ಎಂದು ಕೇಳಿದರು. (ಮತ್ತಾಯ 24:3) ಆಗ ಯೇಸು ಅವರಿಗೆ ಒಂದು ದಿನಾಂಕವನ್ನು ಕೊಟ್ಟು ಈ ದಿನ ಅಂತ್ಯ ಬರುತ್ತದೆ ಎಂದು ಹೇಳಲಿಲ್ಲ. ಬದಲಿಗೆ, ಅಂತ್ಯ ಬರುವುದಕ್ಕಿಂತ ಸ್ವಲ್ಪ ಮುಂಚೆ ಏನೆಲ್ಲ ಆಗುತ್ತದೆಂದು ತಿಳಿಸಿದನು. ಆ ಎಲ್ಲ ವಿಷಯಗಳು ಈಗ ಆಗುತ್ತಿವೆ.

3 ಲೋಕದಲ್ಲಿರುವ ಎಲ್ಲ ಕೆಟ್ಟ ವಿಷಯಗಳಿಗೆ ಇನ್ನೇನು ಅಂತ್ಯ ಬರಲಿದೆ ಅನ್ನುವುದಕ್ಕಿರುವ ಪುರಾವೆಗಳನ್ನು ಈ ಅಧ್ಯಾಯದಲ್ಲಿ ನೋಡಲಿದ್ದೇವೆ. ಆದರೆ ಅದಕ್ಕೂ ಮೊದಲು ನಾವು ಸ್ವರ್ಗದಲ್ಲಿ ಆದ ಒಂದು ಯುದ್ಧದ ಬಗ್ಗೆ ಕಲಿಯಬೇಕು, ಆಗಲೇ ನಮಗೆ ಭೂಮಿಯ ಮೇಲೆ ಯಾಕಿಷ್ಟು ಕೆಟ್ಟ ವಿಷಯಗಳು ನಡೆಯುತ್ತಿವೆ ಎಂದು ಅರ್ಥವಾಗುತ್ತದೆ.

ಸರ್ಗದಲ್ಲಿ ಆದ ಯುದ್ಧ

4, 5. (ಎ) ಯೇಸು ರಾಜನಾದ ತಕ್ಷಣ ಸ್ವರ್ಗದಲ್ಲಿ ಏನಾಯಿತು? (ಬಿ) ಪ್ರಕಟನೆ 12:12⁠ರ ಪ್ರಕಾರ ಸೈತಾನನನ್ನು ಭೂಮಿಗೆ ದೊಬ್ಬಿದ ನಂತರ ಏನಾಯಿತು?

4 ಯೇಸು 1914⁠ರಲ್ಲಿ ರಾಜನಾಗಿ, ತನ್ನ ಆಳ್ವಿಕೆಯನ್ನು ಸ್ವರ್ಗದಲ್ಲಿ ಆರಂಭಿಸಿದನು ಎಂದು ನಾವು ಅಧ್ಯಾಯ 8⁠ರಲ್ಲಿ ಕಲಿತೆವು. (ದಾನಿಯೇಲ 7:13, 14) ಯೇಸು ರಾಜನಾದ ಮೇಲೆ ಏನಾಯಿತೆಂದು ಪ್ರಕಟನೆ ಪುಸ್ತಕದಲ್ಲಿದೆ. “ಸ್ವರ್ಗದಲ್ಲಿ ಯುದ್ಧವು ಆರಂಭವಾಯಿತು: ಮೀಕಾಯೇಲನೂ [ಅಂದರೆ ಯೇಸು] ಅವನ ದೂತರೂ ಘಟಸರ್ಪದೊಂದಿಗೆ [ಅಂದರೆ ಸೈತಾನನೊಂದಿಗೆ] ಯುದ್ಧಮಾಡಿದರು; ಘಟಸರ್ಪವೂ ಅದರ ದೂತರೂ ಯುದ್ಧಮಾಡಿದರು.” * ಸೈತಾನನು ಮತ್ತು ದೆವ್ವಗಳು ಆ ಯುದ್ಧದಲ್ಲಿ ಸೋತರು. ಅವರನ್ನು ಭೂಮಿಗೆ ದೊಬ್ಬಲಾಯಿತು. ಆಗ ದೇವದೂತರಿಗೆಲ್ಲ ತುಂಬ ಸಂತೋಷವಾಯಿತು. ಆದರೆ ಭೂಮಿಯಲ್ಲಿರುವ ಜನರಿಗೆ ತುಂಬ ಕಷ್ಟಗಳು ಬಂದವು. ಯಾಕೆ? ಯಾಕೆಂದರೆ ಸೈತಾನನು “ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು” ತುಂಬ ಸಿಟ್ಟಿನಿಂದ ಕುದಿಯುತ್ತಿದ್ದಾನೆ.—ಪ್ರಕಟನೆ 12:7, 9, 12.

5 ಭೂಮಿಯನ್ನು ಆದಷ್ಟು ಹೆಚ್ಚು ಕಷ್ಟ-ಸಮಸ್ಯೆಗಳಿಂದ ತುಂಬಿಸಲು ಸೈತಾನನು ತನ್ನಿಂದ ಆಗುವುದೆಲ್ಲವನ್ನು ಮಾಡುತ್ತಿದ್ದಾನೆ. ಬೇಗನೆ ದೇವರು ಅವನನ್ನು ನಾಶಮಾಡುವುದರಿಂದ ಅವನ ಸಿಟ್ಟು ಮಿತಿಮೀರಿದೆ. ಕಡೇ ದಿವಸಗಳಲ್ಲಿ ಅಂದರೆ ಅಂತ್ಯ ಬರುವುದಕ್ಕಿಂತ ಮುಂಚೆ ಏನೆಲ್ಲ ಆಗುತ್ತದೆಂದು ಯೇಸು ಹೇಳಿದ್ದನೋ ಅದರ ಕುರಿತು ಮುಂದೆ ನೋಡೋಣ.—ಟಿಪ್ಪಣಿ 23⁠ನ್ನು ನೋಡಿ.

ಕಡೇ ದಿವಸಗಳು

6, 7. ಯುದ್ಧ ಮತ್ತು ಆಹಾರದ ಕೊರತೆಯ ಬಗ್ಗೆ ಯೇಸು ಹೇಳಿದ್ದು ಇಂದು ಹೇಗೆ ನೆರವೇರುತ್ತಿದೆ?

6 ಯುದ್ಧ. “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು” ಎಂದು ಯೇಸು ಹೇಳಿದನು. (ಮತ್ತಾಯ 24:7) ನಮ್ಮ ಸಮಯದಲ್ಲಾದ ಯುದ್ಧಗಳಲ್ಲಿ ಸತ್ತಿರುವಷ್ಟು ಜನರು ಇತಿಹಾಸದ ಬೇರೆ ಯಾವ ಸಮಯದಲ್ಲೂ ಸತ್ತಿಲ್ಲ. ಇದರ ಕುರಿತು ಲೋಕ ಘಟನೆಗಳನ್ನು ಅಧ್ಯಯನ ಮಾಡುವ ಒಂದು ಸಂಘಟನೆ (ವರ್ಲ್ಡ್‌ವಾಚ್‌ ಇನ್‌ಸ್ಟಿಟ್ಯುಟ್‌) ಹೀಗೆ ವರದಿಸಿದೆ: 1914⁠ರಿಂದ ನಡೆದ ಯುದ್ಧಗಳಲ್ಲಿ 10 ಕೋಟಿಗಿಂತ ಹೆಚ್ಚು ಜನರು ಸತ್ತಿದ್ದಾರೆ. ಇಸವಿ 1⁠ರಿಂದ ಹಿಡಿದು 1900⁠ರ ವರೆಗೆ ಸಹ ಯುದ್ಧಗಳಾಗಿವೆ ಮತ್ತು ಅದರಲ್ಲೂ ಜನರು ಸತ್ತಿದ್ದಾರೆ. ಆದರೆ ಅದಕ್ಕಿಂತ 3 ಪಟ್ಟು ಹೆಚ್ಚು ಜನರು ಇಸವಿ 1900⁠ರಿಂದ 2000ದ ವರೆಗೆ ನಡೆದ ಯುದ್ಧಗಳಲ್ಲಿ ಸತ್ತಿದ್ದಾರೆ. ಲಕ್ಷಾಂತರ ಜನರಿಗೆ ಆ ಯುದ್ಧಗಳಿಂದ ಎಷ್ಟು ದುಃಖ ನೋವು ಆಗಿರಬೇಕೆಂದು ಸ್ವಲ್ಪ ಯೋಚಿಸಿ!

7 “ಆಹಾರದ ಕೊರತೆ.” ಈ ಕೊರತೆ ಇರುತ್ತದೆ ಎಂದು ಯೇಸು ಹೇಳಿದನು. (ಮತ್ತಾಯ 24:7) ಹಿಂದೆಂದಿಗಿಂತಲೂ ಈಗ ಹೆಚ್ಚು ಆಹಾರ ಉತ್ಪಾದಿಸಲು ಆಗುತ್ತಿದೆ. ಹಾಗಿದ್ದರೂ ತುಂಬ ಜನರಿಗೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಯಾಕೆ? ಯಾಕೆಂದರೆ ಅವರಿಗೆ ಆಹಾರ ಖರೀದಿಸಲು ಅಥವಾ ಬೆಳೆ ಬೆಳೆಯಲಿಕ್ಕಾಗಿ ತೋಟ ಖರೀದಿಮಾಡಲು ಸಾಕಷ್ಟು ದುಡ್ಡಿಲ್ಲ. 100 ಕೋಟಿಗಿಂತ ಹೆಚ್ಚು ಜನರ ಹತ್ತಿರ ಒಂದು ದಿನಕ್ಕೆ ಬೇಕಾಗುವಷ್ಟು ಹಣ ಸಹ ಇಲ್ಲ. ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಾಯುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಆಹಾರದ ಕೊರತೆಯಿಂದಾಗಿಯೇ ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

8, 9. ಭೂಕಂಪಗಳ ಬಗ್ಗೆ ಮತ್ತು ರೋಗಗಳ ಬಗ್ಗೆ ಯೇಸು ಹೇಳಿದ ಮಾತು ನಿಜವಾಗಿದೆ ಎಂದು ನಮಗೆ ಹೇಗೆ ಗೊತ್ತು?

8 ಭೂಕಂಪಗಳು. ‘ಮಹಾ ಭೂಕಂಪಗಳು ಆಗುತ್ತವೆ’ ಎಂದು ಎಷ್ಟೋ ಮುಂಚೆಯೇ ಯೇಸು ಹೇಳಿದನು. (ಲೂಕ 21:11) ಪ್ರತಿ ವರ್ಷ ಭೀಕರ ಭೂಕಂಪಗಳು ಆಗಬಹುದು ಎಂದು ಅಂದಾಜುಮಾಡಲಾಗಿದೆ. ಇಸವಿ 1900⁠ರಿಂದ ಹಿಡಿದು ಇಲ್ಲಿಯವರೆಗೆ ಆದ ಭೂಕಂಪಗಳಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನರು ಸತ್ತಿದ್ದಾರೆ. ಭೂಕಂಪಗಳು ಆಗುವುದನ್ನು ಮುಂಚೆಯೇ ಕಂಡುಹಿಡಿಯುವಷ್ಟು ತಂತ್ರಜ್ಞಾನ ಬೆಳೆದಿರುವುದಾದರೂ ಭೂಕಂಪಗಳಿಂದ ಜನರು ಸಾಯುವುದಂತೂ ನಿಂತಿಲ್ಲ.

9 ರೋಗಗಳು. “ಅಂಟುರೋಗಗಳೂ” ಬರುತ್ತವೆ, ಭಯಂಕರ ಕಾಯಿಲೆಗಳು ಬೇಗನೆ ಹರಡಿ ಅನೇಕರ ಜೀವವನ್ನು ಬಲಿ ತೆಗೆದುಕೊಳ್ಳುತ್ತವೆ ಎಂದು ಯೇಸು ಹೇಳಿದನು. (ಲೂಕ 21:11) ಅನೇಕ ರೋಗಗಳಿಗೆ ವೈದ್ಯರು ಔಷಧಿ ಕಂಡುಹಿಡಿದಿದ್ದಾರೆ, ಆದರೂ ಔಷಧಿಯೇ ಇಲ್ಲದ ಇನ್ನೂ ಅನೇಕ ರೋಗಗಳಿವೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಷಯರೋಗ (ಟಿಬಿ), ಮಲೇರಿಯ ಮತ್ತು ಕಾಲರಾ ಮುಂತಾದ ರೋಗಗಳಿಂದ ಸತ್ತುಹೋಗುತ್ತಿದ್ದಾರೆ ಎಂದು ಒಂದು ವರದಿಯಲ್ಲಿದೆ. ಅಷ್ಟೇ ಅಲ್ಲ, 30 ಹೊಸ ರೋಗಗಳನ್ನು ವೈದ್ಯರು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಅವುಗಳಲ್ಲಿ ಕೆಲವು ರೋಗಗಳಿಗೆ ಔಷಧಿ ಇಲ್ಲವೇ ಇಲ್ಲ.

ಕಡೇ ದಿವಸಗಳಲ್ಲಿ ಎಂಥ ಜನರು ಇರುತ್ತಾರೆ?

10. ಎರಡನೇ ತಿಮೊಥೆಯ 3:1-5⁠ರಲ್ಲಿರುವ ವಿಷಯ ಇಂದು ಹೇಗೆ ನಿಜವಾಗುತ್ತಿದೆ?

10 ಎರಡನೇ ತಿಮೊಥೆಯ 3:1-5⁠ರಲ್ಲಿ ಹೀಗಿದೆ: “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು.” ಆಗ ಎಂಥ ಜನರು ಇರುತ್ತಾರೆ ಎಂದು ಸಹ ಆ ವಚನದಲ್ಲಿ ಹೇಳಲಾಗಿದೆ. ಕಡೇ ದಿವಸಗಳಲ್ಲಿ ಜನರು

  • ಸ್ವಾರ್ಥಿಗಳು

  • ಹಣವನ್ನು ಪ್ರೀತಿಸುವವರು

  • ಹೆತ್ತವರ ಮಾತು ಕೇಳದವರು

  • ನಿಷ್ಠೆ ಇಲ್ಲದವರು

  • ಕುಟುಂಬದ ಮೇಲೆ ಪ್ರೀತಿ-ಮಮತೆಯಿಲ್ಲದವರು

  • ಸ್ವನಿಯಂತ್ರಣ ಇಲ್ಲದವರು

  • ಕ್ರೂರಿಗಳು ಮತ್ತು ಕೋಪಿಷ್ಠರು

  • ದೇವರಿಗಿಂತ ಹೆಚ್ಚಾಗಿ ತಮ್ಮ ಸುಖ-ಭೋಗವನ್ನೇ ಪ್ರೀತಿಸುವವರು

  • ದೇವಭಕ್ತಿ ಇದೆಯೆಂದು ತೋರಿಸಿಕೊಂಡು ದೇವರಿಗೆ ವಿರುದ್ಧವಾಗಿ ನಡೆಯುವವರು

11. ಕೀರ್ತನೆ 92:7⁠ರ ಪ್ರಕಾರ ದುಷ್ಟ ಜನರಿಗೆ ಏನಾಗುತ್ತದೆ?

11 ನಿಮ್ಮ ಸುತ್ತಮುತ್ತ ಇಂಥ ಜನರು ಇದ್ದಾರಾ? ಇಂಥವರು ಇಡೀ ಲೋಕದಲ್ಲಿ ತುಂಬಿಕೊಂಡಿದ್ದಾರೆ. ಆದರೆ ದೇವರು ಇವರನ್ನೆಲ್ಲ ಬೇಗನೆ ನಾಶ ಮಾಡಲಿದ್ದಾನೆ. ಆತನು ಅವರ ಬಗ್ಗೆ ಹೀಗೆ ಹೇಳಿದ್ದಾನೆ: “ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ [ಅಂದರೆ ಶಾಶ್ವತವಾಗಿ ನಾಶ ಆಗುವುದಕ್ಕಾಗಿಯೇ].”—ಕೀರ್ತನೆ 92:7.

ಕಡೇ ದಿವಸಗಳಲ್ಲಿ ಸಿಹಿಸುದ್ದಿ

12, 13. ಈ ಕಡೇ ದಿವಸಗಳಲ್ಲಿ ದೇವರು ನಮಗೆ ಏನೆಲ್ಲ ಕಲಿಸಿದ್ದಾನೆ?

12 ಕಡೇ ದಿವಸಗಳಲ್ಲಿ ಇಡೀ ಲೋಕ ಕಷ್ಟ-ಸಂಕಟದಲ್ಲಿ ಮುಳುಗಿರುತ್ತದೆ ಎಂದು ಬೈಬಲ್‌ ಹೇಳಿದೆ ನಿಜ. ಆದರೆ ಕೆಲವು ಒಳ್ಳೇ ವಿಷಯಗಳು ಸಹ ನಡೆಯುತ್ತವೆ ಎಂದು ತಿಳಿಸಿದೆ.

“ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು.” —ಮತ್ತಾಯ 24:14

13 ಬೈಬಲಿನ ಬಗ್ಗೆ ತಿಳುವಳಿಕೆ. ಕಡೇ ದಿವಸಗಳಲ್ಲಿ ಬೈಬಲಿನ ಬಗ್ಗೆ ‘ತಿಳುವಳಿಕೆ ಹೆಚ್ಚಾಗುತ್ತದೆ’ ಎಂದು ಪ್ರವಾದಿ ದಾನಿಯೇಲನು ಬರೆದನು. (ದಾನಿಯೇಲ 12:4) ಅದರರ್ಥ ಬೈಬಲನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ದೇವರು ತನ್ನ ಜನರಿಗೆ ಕಡೇ ದಿವಸಗಳಲ್ಲಿ ಕೊಡಲಿದ್ದನು. ಮುಖ್ಯವಾಗಿ ಇಸವಿ 1914⁠ರಿಂದ ದೇವರು ಇದನ್ನು ಮಾಡುತ್ತಾ ಬಂದಿದ್ದಾನೆ. ಉದಾಹರಣೆಗೆ, ಆತನು ತನ್ನ ಹೆಸರಿಗಿರುವ ಅರ್ಥವನ್ನು, ಅದರ ಪ್ರಮುಖತೆಯನ್ನು ತಿಳಿಸಿದ್ದಾನೆ. ಭೂಮಿಯನ್ನು ಯಾಕೆ ಸೃಷ್ಟಿ ಮಾಡಿದ್ದಾನೆಂದು ಸಹ ತಿಳಿಸಿದ್ದಾನೆ. ವಿಮೋಚನಾ ಮೌಲ್ಯವನ್ನು ಯಾಕೆ ಕೊಡಬೇಕಾಯಿತು ಎನ್ನುವುದನ್ನು ಸ್ಪಷ್ಟಪಡಿಸಿದ್ದಾನೆ. ಸತ್ತ ಮೇಲೆ ನಮಗೆ ಏನಾಗುತ್ತದೆ ಎನ್ನುವುದರ ಬಗ್ಗೆ ಮತ್ತು ಪುನರುತ್ಥಾನದ ಬಗ್ಗೆ ಸತ್ಯ ಕಲಿಸಿದ್ದಾನೆ. ದೇವರ ರಾಜ್ಯ ಮಾತ್ರ ನಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಕಲಿಸಿ, ನಾವು ಸಂತೋಷದಿಂದ ಇರಲು ಏನು ಮಾಡಬೇಕು, ಆತನು ಮೆಚ್ಚುವಂಥ ರೀತಿಯಲ್ಲಿ ಜೀವಿಸುವುದು ಹೇಗೆ ಎನ್ನುವುದನ್ನು ಸಹ ತಿಳಿಸಿದ್ದಾನೆ. ಇಷ್ಟೆಲ್ಲ ಕಲಿತ ದೇವರ ಸೇವಕರು ಏನು ಮಾಡುತ್ತಾರೆ? ಇದಕ್ಕೆ ಉತ್ತರವನ್ನು ಇನ್ನೊಂದು ಪ್ರವಾದನೆಯಿಂದ ತಿಳಿದುಕೊಳ್ಳೋಣ.—ಟಿಪ್ಪಣಿ 20⁠ನ್ನು ಮತ್ತು 24⁠ನ್ನು ನೋಡಿ.

14. (ಎ) ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲೆಲ್ಲಿ ಸಾರಲಾಗುತ್ತದೆ? (ಬಿ) ಈ ಸುವಾರ್ತೆಯನ್ನು ಯಾರು ಸಾರುತ್ತಿದ್ದಾರೆ?

14 ಪ್ರಪಂಚದ ಮೂಲೆಮೂಲೆಗೂ ಸುವಾರ್ತೆ. ಕಡೇ ದಿವಸಗಳ ಕುರಿತು ಮಾತಾಡುತ್ತಾ ಯೇಸು ಹೀಗಂದನು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು.” (ಮತ್ತಾಯ 24:3, 14) ಇಂದು 230ಕ್ಕೂ ಹೆಚ್ಚು ದೇಶದ್ವೀಪಗಳಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು 700ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾರಲಾಗುತ್ತಿದೆ. ದೇವರ ರಾಜ್ಯ ಎಂದರೇನು, ಆ ರಾಜ್ಯದಿಂದ ನಮ್ಮೆಲ್ಲರಿಗೆ ಏನೆಲ್ಲ ಪ್ರಯೋಜನ ಸಿಗಲಿದೆಯೆಂದು ಯೆಹೋವನ ಸಾಕ್ಷಿಗಳು ಭೂಮಿಯಾದ್ಯಂತ ‘ಎಲ್ಲ ಜನಾಂಗಗಳಿಗೂ ಕುಲಗಳಿಗೂ’ ಸಾರಿ ಹೇಳುತ್ತಿದ್ದಾರೆ. (ಪ್ರಕಟನೆ 7:9) ಈ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದಾರೆ. ಯೇಸು ಹೇಳಿದಂತೆಯೇ, ಅವರಿಗೆ ಸಾರುವಾಗ ತುಂಬ ಹಿಂಸೆ ವಿರೋಧ ಬರುತ್ತಿದೆಯಾದರೂ ಸುವಾರ್ತೆ ಸಾರುವುದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ.—ಲೂಕ 21:17.

ಈಗ ನೀವೇನು ಮಾಡಬೇಕು?

15. (ಎ) ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂದು ನೀವು ನಂಬುತ್ತೀರಾ? ಯಾಕೆ? (ಬಿ) ಯೆಹೋವ ದೇವರ ಮಾತು ಕೇಳದವರಿಗೆ ಮತ್ತು ಮಾತು ಕೇಳುವವರಿಗೆ ಏನಾಗುತ್ತದೆ?

15 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂದು ನೀವೀಗ ನಂಬುತ್ತೀರಾ? ಕಡೇ ದಿವಸಗಳ ಬಗ್ಗೆ ಬೈಬಲಿನಲ್ಲಿ ತಿಳಿಸಿರುವ ಎಲ್ಲ ವಿಷಯಗಳು ನಿಜವಾಗುತ್ತಿವೆ. ಬೇಗನೆ ಯೆಹೋವ ದೇವರು ನಮಗೆ ‘ಸುವಾರ್ತೆ ಸಾರುವುದನ್ನು ನಿಲ್ಲಿಸಿ’ ಎಂದು ಹೇಳುತ್ತಾನೆ. ಆಮೇಲೆ ಅಂತ್ಯ ಬರುತ್ತದೆ. (ಮತ್ತಾಯ 24:14) ಅಂತ್ಯ ಬರುವುದು ಅಂದರೆ ಏನು? ಅರ್ಮಗೆದ್ದೋನ್‌ ಯುದ್ಧ ಆಗುತ್ತದೆ. ಆಗ ದೇವರು ತನ್ನ ಮತ್ತು ಯೇಸುವಿನ ಮಾತು ಕೇಳದ ದುಷ್ಟ ಜನರನ್ನು ನಾಶಮಾಡುತ್ತಾನೆ. ಇದಕ್ಕಾಗಿ ಯೇಸುವನ್ನು ಮತ್ತು ಶಕ್ತಿಶಾಲಿ ದೇವದೂತರನ್ನು ಬಳಸಲಾಗುತ್ತದೆ. (2 ಥೆಸಲೊನೀಕ 1:6-9) ನಂತರ ಸೈತಾನನಾಗಲಿ ದೆವ್ವಗಳಾಗಲಿ ಜನರಿಗೆ ಮೋಸ ಮಾಡಲು ಆಗುವುದಿಲ್ಲ. ದೇವರು ಹೇಳಿದಂತೆ ಕೇಳುವ ಮತ್ತು ಆತನ ಸರ್ಕಾರದ ಪಕ್ಷವಹಿಸುವ ಜನರು ದೇವರು ಕೊಟ್ಟ ಪ್ರತಿಯೊಂದು ಮಾತು ನಿಜವಾಗುವುದನ್ನು ಕಣ್ಣಾರೆ ಕಾಣುತ್ತಾರೆ.—ಪ್ರಕಟನೆ 20:1-3; 21:3-5.

16. ಅಂತ್ಯ ತುಂಬ ಹತ್ತಿರ ಇರುವುದರಿಂದ ನೀವೀಗ ಏನು ಮಾಡಬೇಕು?

16 ಸೈತಾನನು ಆಳುತ್ತಿರುವ ಈ ಲೋಕ ಬೇಗನೆ ಅಂತ್ಯ ಕಾಣಲಿದೆ. ಹಾಗಾಗಿ ‘ಈಗ ನಾನೇನು ಮಾಡಬೇಕು?’ ಎನ್ನುವ ಪ್ರಶ್ನೆಯನ್ನು ನೀವು ಕೇಳಿಕೊಳ್ಳಲೇಬೇಕು. ನೀವು ಬೈಬಲನ್ನು ಸಾಧ್ಯವಾದಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎನ್ನುವುದು ಯೆಹೋವ ದೇವರ ಬಯಕೆ. ಹಾಗಾಗಿ ಈ ಬೈಬಲ್‌ ಅಧ್ಯಯನವನ್ನು ಮಾಮೂಲಿಯಾಗಿ ನೆನಸದೆ ಗಂಭೀರವಾಗಿ ತೆಗೆದುಕೊಳ್ಳಿ. (ಯೋಹಾನ 17:3) ಪ್ರತಿವಾರ ಯೆಹೋವನ ಸಾಕ್ಷಿಗಳು ಕೂಟಗಳನ್ನು ನಡೆಸುತ್ತಾರೆ. ಈ ಕೂಟಗಳು ಬೈಬಲನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಮಾಡುತ್ತವೆ. ಅವುಗಳಿಗೆ ತಪ್ಪದೆ ಹಾಜರಾಗಲು ಪ್ರಯತ್ನಿಸಿ. (ಇಬ್ರಿಯ 10:24, 25 ಓದಿ.) ಬೈಬಲ್‌ ಅಧ್ಯಯನ ಮಾಡುವಾಗ ಜೀವನದಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಅಂತ ನಿಮಗನಿಸಿದರೆ ಅದನ್ನು ಮಾಡಲು ಹೆದರಬೇಡಿ. ಹೀಗೆ ಬದಲಾವಣೆ ಮಾಡುತ್ತಾ ಇರುವಾಗ ಯೆಹೋವ ದೇವರೊಟ್ಟಿಗಿರುವ ನಿಮ್ಮ ಸ್ನೇಹ ಇನ್ನಷ್ಟು ಗಟ್ಟಿಯಾಗುತ್ತದೆ.—ಯಾಕೋಬ 4:8.

17. ಅಂತ್ಯ ಬಂದಾಗ ತುಂಬ ಜನರಿಗೆ ಯಾಕೆ ಆಶ್ಚರ್ಯವಾಗುತ್ತದೆ?

17 “ರಾತ್ರಿಯಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ” ದುಷ್ಟರ ಮೇಲೆ ನಾಶನ ಬರುತ್ತದೆ ಎಂದು ಬೈಬಲ್‌ ತಿಳಿಸುತ್ತದೆ. ಅದರರ್ಥ ಯಾರೂ ಯೋಚಿಸಿರದ ಸಮಯದಲ್ಲಿ ಅಂತ್ಯ ಬರುತ್ತದೆ. (1 ಥೆಸಲೊನೀಕ 5:2) ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇದ್ದರೂ ತುಂಬ ಜನರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಇದರ ಬಗ್ಗೆ ಯೇಸು ಸಹ ಹೇಳಿದ್ದನು. ಆತನು ಹೇಳಿದ್ದು: “ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ [ಅಥವಾ, ಕಡೇ ದಿವಸಗಳು] ಇರುವುದು. ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯೊಳಗೆ ಪ್ರವೇಶಿಸುವ ದಿನದ ವರೆಗೆ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು; ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.”—ಮತ್ತಾಯ 24:37-39.

18. ಯೇಸು ನಮಗೆ ಯಾವೆಲ್ಲ ಎಚ್ಚರಿಕೆಗಳನ್ನು ಕೊಟ್ಟಿದ್ದಾನೆ?

18 “ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ” ಅಪಕರ್ಷಿತರಾಗಬೇಡಿ ಎಂದು ಯೇಸು ನಮಗೆ ಎಚ್ಚರಿಸಿದನು. ಅಂತ್ಯ “ಥಟ್ಟನೆ ಉರ್ಲಿನಂತೆ” ಬರುತ್ತದೆ ಮತ್ತು ‘ಅದು ಇಡೀ ಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲರ ಮೇಲೆ ಬರುತ್ತದೆ’ ಎಂದು ಆತನು ಹೇಳಿದನು. “ಆದುದರಿಂದ, ಸಂಭವಿಸುವಂತೆ ವಿಧಿಸಲ್ಪಟ್ಟಿರುವ ಈ ಎಲ್ಲ ಸಂಗತಿಗಳಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಸಾಧ್ಯವಾಗುವಂತೆ ಎಲ್ಲ ಸಮಯದಲ್ಲಿ ಯಾಚನೆಗಳನ್ನು [ಅಥವಾ, ಮನಸಾರೆ ಪ್ರಾರ್ಥನೆಗಳನ್ನು] ಮಾಡುತ್ತಾ ಎಚ್ಚರದಿಂದಿರಿ” ಎಂದು ಸಹ ಹೇಳಿದನು. (ಲೂಕ 21:34-36) ಯೇಸುವಿನ ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡುವುದು ತುಂಬ ಪ್ರಾಮುಖ್ಯ. ಏಕೆ? ಏಕೆಂದರೆ ಸೈತಾನನ ದುಷ್ಟ ಲೋಕ ಬೇಗನೆ ನಾಶವಾಗಲಿದೆ. ಯೆಹೋವ ದೇವರ ಮತ್ತು ಯೇಸುವಿನ ಒಪ್ಪಿಗೆ ಪಡೆದಿರುವ ಜನರು ಮಾತ್ರ ಈ ಅಂತ್ಯವನ್ನು ಪಾರಾಗುತ್ತಾರೆ ಮತ್ತು ಹೊಸ ಲೋಕದಲ್ಲಿ ಸಾವೇ ಇಲ್ಲದೆ ಜೀವಿಸುತ್ತಾರೆ.—ಯೋಹಾನ 3:16; 2 ಪೇತ್ರ 3:13.

^ ಪ್ಯಾರ. 4 ಯೇಸು ಕ್ರಿಸ್ತನಿಗಿರುವ ಇನ್ನೊಂದು ಹೆಸರು ಮೀಕಾಯೇಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟಿಪ್ಪಣಿ 22⁠ನ್ನು ನೋಡಿ.