ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

ದೇವದೂತರು ಯಾರು?

ದೇವದೂತರು ಯಾರು?

1. ನಾವು ದೇವದೂತರ ಬಗ್ಗೆ ಯಾಕೆ ತಿಳಿದುಕೊಳ್ಳಬೇಕು?

ಯೆಹೋವ ದೇವರು ತನ್ನ ಕುಟುಂಬವನ್ನು ನಮಗೆ ಪರಿಚಯ ಮಾಡಲು ಇಷ್ಟಪಡುತ್ತಾನೆ. ಆತನ ಕುಟುಂಬದಲ್ಲಿ ದೇವದೂತರೂ ಇದ್ದಾರೆ. ಹಾಗಾಗಿಯೇ ಅವರನ್ನು ‘ದೇವಕುಮಾರರು’ ಎಂದು ಬೈಬಲಿನಲ್ಲಿ ಕರೆಯಲಾಗಿದೆ. (ಯೋಬ 38:6) ಈ ದೇವದೂತರ ಕೆಲಸ ಏನು? ಹಿಂದಿನ ಕಾಲದಲ್ಲಿ ಅವರು ಜನರಿಗೆ ಹೇಗೆ ಸಹಾಯ ಮಾಡಿದರು? ಈಗಲೂ ಸಹಾಯ ಮಾಡುತ್ತಾರಾ?—ಟಿಪ್ಪಣಿ 8⁠ನ್ನು ನೋಡಿ.

2. (ಎ) ದೇವದೂತರನ್ನು ಯಾರು ಸೃಷ್ಟಿ ಮಾಡಿದರು? (ಬಿ) ಎಷ್ಟು ಮಂದಿ ದೇವದೂತರಿದ್ದಾರೆ?

2 ದೇವದೂತರನ್ನು ಯಾರು ಸೃಷ್ಟಿ ಮಾಡಿದರು? ಕೊಲೊಸ್ಸೆ 1:16⁠ರಲ್ಲಿ ಹೇಳಿರುವ ಪ್ರಕಾರ ಯೆಹೋವ ದೇವರು ಯೇಸುವನ್ನು ಸೃಷ್ಟಿಸಿದ ನಂತರ ‘ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ಎಲ್ಲವುಗಳನ್ನು ಸೃಷ್ಟಿ ಮಾಡಿದನು.’ ಅಂದರೆ ದೇವದೂತರನ್ನು ಸಹ ಯೆಹೋವನೇ ಸೃಷ್ಟಿಮಾಡಿದನು. ಆದರೆ ಎಷ್ಟು ಮಂದಿ ದೇವದೂತರಿದ್ದಾರೆ? ಸ್ವರ್ಗದಲ್ಲಿ ಕೋಟಿಗಟ್ಟಲೆ ದೇವದೂತರಿದ್ದಾರೆ ಎಂದು ಬೈಬಲ್‌ ಹೇಳುತ್ತದೆ.—ಕೀರ್ತನೆ 103:20; ಪ್ರಕಟನೆ 5:11.

3. ಯೋಬ 38:4-7⁠ನೇ ವಚನದಿಂದ ನಮಗೆ ದೇವದೂತರ ಬಗ್ಗೆ ಏನು ತಿಳಿಯುತ್ತದೆ?

3 ಭೂಮಿಯನ್ನು ಸೃಷ್ಟಿಸುವ ಮೊದಲೇ ಯೆಹೋವನು ದೇವದೂತರನ್ನು ಸೃಷ್ಟಿಸಿದನು ಎಂದು ಬೈಬಲಿನಲ್ಲಿದೆ. ಹಾಗಾದರೆ ಭೂಮಿಯನ್ನು ಸೃಷ್ಟಿಮಾಡಿದಾಗ ಅವರು ಅದನ್ನು ನೋಡಿರಲೇಬೇಕು. ಆಗ ಅವರಿಗೆ ಹೇಗನಿಸಿತು? ಅವರಿಗೆ ತುಂಬ ಆನಂದವಾಯಿತು ಎಂದು ಬೈಬಲಿನ ಯೋಬ ಪುಸ್ತಕದಲ್ಲಿ ಹೇಳಲಾಗಿದೆ. ಈ ದೇವದೂತರು ಒಂದೇ ಕುಟುಂಬವಾಗಿದ್ದರು. ಯೆಹೋವನ ಸೇವೆಯನ್ನು ಒಟ್ಟಾಗಿ ಮಾಡುತ್ತಿದ್ದರು.—ಯೋಬ 38:4-7.

ದೇವದೂತರು ದೇವಜನರಿಗೆ ಸಹಾಯ ಮಾಡುತ್ತಾರೆ

4. ದೇವದೂತರಿಗೆ ಮನುಷ್ಯರ ಬಗ್ಗೆ ತುಂಬ ಆಸಕ್ತಿ ಇದೆ ಎಂದು ನಮಗೆ ಹೇಗೆ ಗೊತ್ತು?

4 ದೇವದೂತರಿಗೆ ಮನುಷ್ಯರ ಬಗ್ಗೆ ತುಂಬ ಆಸಕ್ತಿ ಇದೆ. ದೇವರು ಈ ಭೂಮಿಯ ಬಗ್ಗೆ ಮತ್ತು ಮನುಷ್ಯರ ಬಗ್ಗೆ ಇಟ್ಟುಕೊಂಡಿರುವ ಆಸೆ ಹೇಗೆ ನೆರವೇರುತ್ತದೆ ಎನ್ನುವುದರಲ್ಲಿ ಸಹ ಅವರಿಗೆ ಆಸಕ್ತಿಯಿದೆ. (ಜ್ಞಾನೋಕ್ತಿ 8:30, 31; 1 ಪೇತ್ರ 1:11, 12) ಆದಾಮ ಹವ್ವ ದೇವರ ವಿರುದ್ಧ ದಂಗೆ ಎದ್ದಾಗ ಖಂಡಿತವಾಗಿ ಅವರಿಗೆ ದುಃಖವಾಗಿರಬೇಕು. ಈಗಂತೂ ಹೆಚ್ಚಿನ ಜನರು ದೇವರ ಮಾತಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಅದನ್ನು ನೋಡುವಾಗ ಅವರಿಗೆ ಇನ್ನೂ ಹೆಚ್ಚು ದುಃಖವಾಗುತ್ತಿರಬೇಕು. ಆದರೆ ಯಾರಾದರೂ ತಮ್ಮ ತಪ್ಪಿಗೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ಹಿಂತಿರುಗಿ ಬಂದರೆ ದೇವದೂತರಿಗೆ ತುಂಬ ಸಂತೋಷವಾಗುತ್ತದೆ. (ಲೂಕ 15:10) ದೇವರ ಸೇವೆ ಮಾಡುತ್ತಿರುವವರ ಬಗ್ಗೆಯಂತೂ ದೇವದೂತರು ಬಹಳ ಆಸಕ್ತಿ ತೋರಿಸುತ್ತಾರೆ. ಯೆಹೋವ ದೇವರು ಭೂಮಿಯಲ್ಲಿರುವ ತನ್ನ ಸೇವಕರನ್ನು ರಕ್ಷಿಸಲು, ಅವರಿಗೆ ಸಹಾಯ ಮಾಡಲು ದೇವದೂತರನ್ನು ಉಪಯೋಗಿಸುತ್ತಾನೆ. (ಇಬ್ರಿಯ 1:7, 14) ಅಂಥ ಕೆಲವು ಸಂದರ್ಭಗಳನ್ನು ಈಗ ನೋಡೋಣ.

“ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು.”—ದಾನಿಯೇಲ 6:22

5. ಹಿಂದಿನ ಕಾಲದಲ್ಲಿ ದೇವದೂತರು ದೇವಜನರಿಗೆ ಹೇಗೆ ಸಹಾಯ ಮಾಡಿದರು?

5 ಲೋಟ ಮತ್ತು ಅವನ ಕುಟುಂಬವನ್ನು ಸೊದೋಮ್‌ ಗೊಮೋರದ ನಾಶನದಿಂದ ರಕ್ಷಿಸಲಿಕ್ಕಾಗಿ ದೇವರು ಇಬ್ಬರು ದೇವದೂತರನ್ನು ಕಳುಹಿಸಿದನು. (ಆದಿಕಾಂಡ 19:15, 16) ನೂರಾರು ವರ್ಷಗಳ ನಂತರ, ಪ್ರವಾದಿ ದಾನಿಯೇಲನನ್ನು ಶತ್ರುಗಳು ಸಿಂಹದ ಗವಿಯಲ್ಲಿ ಹಾಕಿದಾಗ “ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು [ಮುಚ್ಚಿಸಿದನು].” ಹಾಗಾಗಿ ದಾನಿಯೇಲನಿಗೆ ಏನೂ ಹಾನಿಯಾಗಲಿಲ್ಲ. (ದಾನಿಯೇಲ 6:22) ಅಪೊಸ್ತಲ ಪೇತ್ರನು ಸೆರೆಮನೆಯಲ್ಲಿದ್ದಾಗ ಅವನನ್ನು ಅಲ್ಲಿಂದ ಬಿಡಿಸಲು ಯೆಹೋವನು ದೇವದೂತನನ್ನು ಕಳುಹಿಸಿದನು. (ಅಪೊಸ್ತಲರ ಕಾರ್ಯಗಳು 12:6-11) ಯೇಸು ಭೂಮಿಯಲ್ಲಿದ್ದಾಗ ಆತನಿಗೂ ದೇವದೂತರು ಸಹಾಯಮಾಡಿದರು. ಉದಾಹರಣೆಗೆ, ಯೇಸುವಿನ ದೀಕ್ಷಾಸ್ನಾನದ ನಂತರ ‘ದೇವದೂತರು ಆತನಿಗೆ ಉಪಚಾರಮಾಡಿದರು.’ (ಮಾರ್ಕ 1:13) ಜನರು ಯೇಸುವನ್ನು ಕೊಲ್ಲಲಿಕ್ಕಾಗಿ ಹಿಡಿದುಕೊಂಡು ಹೋಗುವ ಸ್ವಲ್ಪ ಮುಂಚೆ ಸಹ ಒಬ್ಬ ದೇವದೂತನು ಬಂದು ಆತನನ್ನು “ಬಲಪಡಿಸಿದನು.”—ಲೂಕ 22:43.

6. (ಎ) ದೇವದೂತರು ಈಗಲೂ ದೇವಜನರಿಗೆ ಸಹಾಯ ಮಾಡುತ್ತಾರೆಂದು ನಮಗೆ ಹೇಗೆ ಗೊತ್ತು? (ಬಿ) ಯಾವ ಪ್ರಶ್ನೆಗಳಿಗೆ ನಾವು ಉತ್ತರ ತಿಳಿದುಕೊಳ್ಳಬೇಕು?

6 ಈಗ ದೇವದೂತರು ಜನರಿಗೆ ಕಾಣಿಸಿಕೊಳ್ಳುವುದಿಲ್ಲ, ಆದರೂ ದೇವರು ತನ್ನ ಜನರಿಗೆ ಸಹಾಯಮಾಡಲು ಅವರನ್ನು ಈಗಲೂ ಉಪಯೋಗಿಸುತ್ತಿದ್ದಾನೆ. “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ” ಎಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 34:7) ಆದರೆ ನಮ್ಮನ್ನು ಯಾಕೆ ಕಾಪಾಡಬೇಕು? ಯಾಕೆಂದರೆ, ತುಂಬ ಶಕ್ತಿಶಾಲಿಯಾಗಿರುವ ಕೆಲವು ವೈರಿಗಳು ನಮಗಿದ್ದಾರೆ. ಅವರು ನಮಗೆ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಅವರು ಯಾರು? ಅವರು ನಮಗೆ ಹೇಗೆ ಹಾನಿ ಮಾಡುತ್ತಾರೆ? ಅವರನ್ನು ಯಾರು ಸೃಷ್ಟಿ ಮಾಡಿದರು? ಇದನ್ನು ತಿಳಿದುಕೊಳ್ಳಬೇಕಾದರೆ ಆದಾಮ ಹವ್ವರನ್ನು ದೇವರು ಸೃಷ್ಟಿಮಾಡಿದ ಸ್ವಲ್ಪ ಸಮಯದ ನಂತರ ಏನಾಯಿತು ಅಂತ ತಿಳಿದುಕೊಳ್ಳಬೇಕು.

ನಮ್ಮ ಕಣ್ಣಿಗೆ ಕಾಣದ ವೈರಿಗಳು

7. ಮನುಷ್ಯರು ಸೈತಾನನಿಂದ ಮೋಸಹೋಗಿ ಏನು ಮಾಡಿದ್ದಾರೆ?

7 ನಾವು ಮೂರನೇ ಅಧ್ಯಾಯದಲ್ಲಿ, ಒಬ್ಬ ದೇವದೂತನು ದೇವರ ವಿರುದ್ಧ ದಂಗೆಯೆದ್ದು ಎಲ್ಲರ ಮೇಲೆ ಅಧಿಕಾರ ನಡೆಸಲು ಬಯಸಿದನು ಎಂದು ಕಲಿತದ್ದು ನೆನಪಿದೆಯಾ? ಅವನನ್ನು ಪಿಶಾಚನಾದ ಸೈತಾನನು ಎಂದು ಬೈಬಲಿನಲ್ಲಿ ಕರೆಯಲಾಗಿದೆ. (ಪ್ರಕಟನೆ 12:9) ತನ್ನಂತೆ ಮನುಷ್ಯರು ಸಹ ದೇವರ ವಿರುದ್ಧ ದಂಗೆ ಏಳಬೇಕು ಎನ್ನುವುದು ಸೈತಾನನ ಆಸೆ. ಆ ಆಸೆ ತೀರಿಸಿಕೊಳ್ಳಲಿಕ್ಕಾಗಿಯೇ ಅವನು ಹವ್ವಳನ್ನು ಮೋಸಗೊಳಿಸಿ ದೇವರ ವಿರುದ್ಧ ತಿರುಗಿಬೀಳುವಂತೆ ಮಾಡಿದನು. ಆವತ್ತಿನಿಂದ ತುಂಬ ಮನುಷ್ಯರನ್ನು ಹಾಗೆಯೇ ಮೋಸಗೊಳಿಸಿದ್ದಾನೆ. ಹಾಗಾಗಿ ಸೈತಾನನಂತೆ ಅವರು ಕೂಡ ದೇವರ ವಿರುದ್ಧ ದಂಗೆಯೆದ್ದಿದ್ದಾರೆ. ಹಾಗಿದ್ದರೂ ಹೇಬೆಲ, ಹನೋಕ, ನೋಹ ಮತ್ತು ಇನ್ನು ಕೆಲವರು ಯೆಹೋವ ದೇವರಿಗೆ ನಂಬಿಗಸ್ತರಾಗಿಯೇ ಉಳಿದರು.—ಇಬ್ರಿಯ 11:4, 5, 7.

8. (ಎ) ಕೆಲವು ದೇವದೂತರು ದೆವ್ವಗಳಾದದ್ದು ಹೇಗೆ? (ಬಿ) ಪ್ರಳಯ ಬಂದಾಗ ಕೆಟ್ಟ ದೇವದೂತರು ಏನು ಮಾಡಿದರು?

8 ನೋಹನು ಜೀವಿಸುತ್ತಿದ್ದ ಕಾಲದಲ್ಲಿ ಕೆಲವು ದೇವದೂತರು ದೇವರ ವಿರುದ್ಧ ದಂಗೆಯೆದ್ದು ಸ್ವರ್ಗವನ್ನು ಬಿಟ್ಟು ಮನುಷ್ಯರ ರೂಪ ತಾಳಿ ಭೂಮಿಗೆ ಬಂದರು. ಯಾಕೆ? ಅವರು ಭೂಮಿಯಲ್ಲಿದ್ದ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಮಾಡಿಕೊಳ್ಳಲು ಬಯಸಿ ಹೀಗೆ ಮಾಡಿದರೆಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 6:2 ಓದಿ.) ದೇವದೂತರಾದ ಅವರು ಹಾಗೆ ಮಾಡಿದ್ದು ದೊಡ್ಡ ತಪ್ಪಾಗಿತ್ತು. (ಯೂದ 6) ಆ ಸಮಯದಲ್ಲಿದ್ದ ಹೆಚ್ಚಿನ ಜನರು ಸಹ ಅವರಂತೆಯೇ ಕೆಟ್ಟವರಾದರು, ಕ್ರೂರಿಗಳಾದರು. ಹಾಗಾಗಿ ಯೆಹೋವ ದೇವರು ಇಡೀ ಭೂಮಿಯ ಮೇಲೆ ಪ್ರಳಯ ತಂದು ಆ ದುಷ್ಟ ಜನರನ್ನು ನಾಶ ಮಾಡಿದನು. ಆದರೆ ತನಗೆ ನಂಬಿಗಸ್ತರಾಗಿದ್ದ ವ್ಯಕ್ತಿಗಳನ್ನು ಕಾಪಾಡಿದನು. (ಆದಿಕಾಂಡ 7:17, 23) ತಾವು ಪ್ರಳಯದಲ್ಲಿ ಮುಳುಗಿ ಸಾಯಬಾರದೆಂದು ಕೆಟ್ಟ ದೇವದೂತರು ಸ್ವರ್ಗಕ್ಕೆ ವಾಪಸ್ಸು ಹೋಗಿ ಸೈತಾನನೊಟ್ಟಿಗೆ ಸೇರಿಕೊಂಡರು. ಅವರನ್ನೇ ಬೈಬಲಿನಲ್ಲಿ ದೆವ್ವಗಳು ಎಂದು ಕರೆಯಲಾಗಿದೆ. ಈ ದೆವ್ವಗಳಿಗೆ ಸೈತಾನನು ನಾಯಕನಾದನು.—ಮತ್ತಾಯ 9:34.

9. (ಎ) ಕೆಟ್ಟ ದೇವದೂತರು ಸ್ವರ್ಗಕ್ಕೆ ವಾಪಸ್ಸು ಹೋದಾಗ ಏನಾಯಿತು? (ಬಿ) ನಾವು ಯಾವ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ?

9 ಈ ಕೆಟ್ಟ ದೇವದೂತರು ಸ್ವರ್ಗಕ್ಕೆ ವಾಪಸ್ಸು ಹೋದಾಗ ಅವರನ್ನು ಯೆಹೋವನು ತನ್ನ ಕುಟುಂಬದೊಳಗೆ ಸೇರಿಸಿಕೊಳ್ಳಲಿಲ್ಲ. (2 ಪೇತ್ರ 2:4) ಅಷ್ಟೇ ಅಲ್ಲ, ಮನುಷ್ಯ ರೂಪ ತಾಳುವ ಶಕ್ತಿಯನ್ನು ಅವರಿಂದ ತೆಗೆದುಬಿಟ್ಟನು. ಹಾಗಿದ್ದರೂ ಅವರು ‘ಇಡೀ ಭೂಮಿಯಲ್ಲಿರುವ ಜನರನ್ನು ತಪ್ಪುದಾರಿಗೆ ನಡಿಸುತ್ತಿದ್ದಾರೆ.’ (ಪ್ರಕಟನೆ 12:9; 1 ಯೋಹಾನ 5:19) ಅವರು ಅಷ್ಟೊಂದು ಜನರನ್ನು ಹೇಗೆ ತಪ್ಪುದಾರಿಗೆ ನಡೆಸುತ್ತಿದ್ದಾರೆ, ಹೇಗೆ ಮೋಸ ಮಾಡುತ್ತಿದ್ದಾರೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ.2 ಕೊರಿಂಥ 2:11 ಓದಿ.

ದೆವ್ವಗಳು ಜನರಿಗೆ ಹೇಗೆ ಮೋಸಮಾಡುತ್ತವೆ?

10. ದೆವ್ವಗಳು ಜನರನ್ನು ಹೇಗೆ ಮೋಸಗೊಳಿಸುತ್ತವೆ?

10 ದೆವ್ವಗಳು ಬೇರೆ ಬೇರೆ ಉಪಾಯ ಮಾಡಿ ಜನರನ್ನು ಮೋಸಗೊಳಿಸುತ್ತವೆ. ಅನೇಕ ಜನರು ಮಾಟಮಂತ್ರ ಮಾಡುವವರ ಸಹಾಯದಿಂದ ಅಥವಾ ನೇರವಾಗಿ ಅವರೇ ದೆವ್ವಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಇದನ್ನು ಪ್ರೇತಸಂಪರ್ಕ ಎಂದು ಹೇಳುತ್ತಾರೆ. ಆದರೆ ದೆವ್ವಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳಿಂದ ನಾವು ದೂರವಿರಬೇಕೆಂದು ಬೈಬಲಿನಲ್ಲಿ ಹೇಳಲಾಗಿದೆ. (ಗಲಾತ್ಯ 5:19-21) ಯಾಕೆ? ಬೇಟೆಗಾರನು ಹೇಗೆ ಒಂದು ಬಲೆಯನ್ನಿಟ್ಟು ಪ್ರಾಣಿಗಳನ್ನು ಹಿಡಿಯುತ್ತಾನೋ ಹಾಗೆಯೇ ಈ ದೆವ್ವಗಳು ಪ್ರೇತಸಂಪರ್ಕವನ್ನು ಬಳಸಿ ನಮ್ಮನ್ನು ಹಿಡಿಯಲು ಹಾಗೂ ನಿಯಂತ್ರಿಸಲು ಪ್ರಯತ್ನಿಸುತ್ತವೆ.—ಟಿಪ್ಪಣಿ 25⁠ನ್ನು ನೋಡಿ.

11. (ಎ) ಭವಿಷ್ಯ ಅಥವಾ ಕಣಿ ಹೇಳುವವರು ಏನು ಮಾಡುತ್ತಾರೆ? (ಬಿ) ನಾವು ಅದರಿಂದ ದೂರವಿರಬೇಕು ಏಕೆ?

11 ಭವಿಷ್ಯ ಹೇಳುವವರ ಅಥವಾ ಕಣಿ ಹೇಳುವವರ ಮೂಲಕ ದೆವ್ವಗಳು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತವೆ. ಭವಿಷ್ಯ ಹೇಳುವವರು ದೆವ್ವಗಳ ಸಹಾಯದಿಂದ ಭವಿಷ್ಯವನ್ನು ನೋಡಲು ಅಥವಾ ಒಂದು ವಿಷಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ನಕ್ಷತ್ರಗಳನ್ನು ನೋಡುವ ಮೂಲಕ, ಶಕುನ ನುಡಿಯುವ ಮೂಲಕ, ಗಿಣಿ ಶಾಸ್ತ್ರದ ಮೂಲಕ, ಹಸ್ತ ರೇಖೆಗಳನ್ನು ಹಾಗೂ ಸ್ಫಟಿಕಗೋಲವನ್ನು (ಕ್ರಿಸ್ಟಲ್‌ ಬಾಲ್‌) ನೋಡುವ ಮೂಲಕ ಇದನ್ನು ಕಂಡುಹಿಡಿಯಲು ಅವರು ಪ್ರಯತ್ನಿಸಬಹುದು. ಇವುಗಳಿಂದ ಯಾವುದೇ ಅಪಾಯವಿಲ್ಲ ಎಂದು ತುಂಬ ಜನರು ನೆನಸುತ್ತಾರೆ. ನಿಜ ಏನೆಂದರೆ, ಇವು ತುಂಬ ಅಪಾಯಕಾರಿ. ಏಕೆಂದರೆ ಭವಿಷ್ಯ ಹೇಳುವವರು ದೆವ್ವಗಳೊಂದಿಗೆ ಜೊತೆಗೂಡಿ ಕೆಲಸಮಾಡುತ್ತಾರೆ ಎಂದು ಬೈಬಲ್‌ ಹೇಳುತ್ತದೆ. ಉದಾಹರಣೆಗೆ, ಅಪೊಸ್ತಲರ ಕಾರ್ಯಗಳು 16:16-18⁠ರಲ್ಲಿರುವ ಈ ಘಟನೆ ನೋಡಿ. ಪೌಲನು ಸುವಾರ್ತೆ ಸಾರುತ್ತಿದ್ದಾಗ, ‘ದೆವ್ವಹಿಡಿದಿದ್ದ ಒಬ್ಬ ಹುಡುಗಿಯು ಭವಿಷ್ಯ ನುಡಿಯುತ್ತಿದ್ದಳು.’ ಪೌಲನು ಆ ಹುಡುಗಿಯಲ್ಲಿದ್ದ ದೆವ್ವವನ್ನು ಬಿಡಿಸಿದ ಮೇಲೆ ಅವಳಿಗೆ ಭವಿಷ್ಯ ಹೇಳಲು ಆಗಲಿಲ್ಲ. ಆ ದೆವ್ವದ ಸಹಾಯದಿಂದಲೇ ಅವಳು ಭವಿಷ್ಯವನ್ನು ಹೇಳುತ್ತಿದ್ದಳು ಎಂದು ಇದರಿಂದ ಗೊತ್ತಾಗುತ್ತದೆ.

12. (ಎ) ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸುವುದು ಅಪಾಯಕಾರಿ ಏಕೆ? (ಬಿ) ನಾವು ದೆವ್ವಗಳಿಗೆ ಸಂಬಂಧಪಟ್ಟ ಯಾವುದೇ ಪದ್ಧತಿಗಳಲ್ಲಿ ಭಾಗವಹಿಸಬಾರದು ಏಕೆ?

12 ದೆವ್ವಗಳು ಜನರನ್ನು ಮೋಸಗೊಳಿಸಲು ಇನ್ನೊಂದು ವಿಧಾನವನ್ನು ಸಹ ಬಳಸುತ್ತವೆ. ಅದೇನೆಂದರೆ, ಸತ್ತವರ ಆತ್ಮ ಎಲ್ಲೋ ಜೀವಂತವಾಗಿರುತ್ತದೆ, ನಾವು ಸತ್ತವರೊಂದಿಗೆ ಮಾತಾಡಬಹುದು, ಅವರು ನಮಗೆ ಹಾನಿ ಮಾಡುತ್ತಾರೆ ಎಂದು ನಾವು ನಂಬುವಂತೆ ಮಾಡುವುದೇ. ಜನರು ಇದನ್ನು ನಂಬಿ ಮೋಸಹೋಗುತ್ತಾರೆ. ಉದಾಹರಣೆಗೆ, ಕೆಲವರು ತಮ್ಮ ಸ್ನೇಹಿತರು ಅಥವಾ ಕುಟುಂಬದವರು ತೀರಿಹೋದರೆ, ಪ್ರೇತಸಂಪರ್ಕ ಮಾಡುವವನ ಹತ್ತಿರ ಹೋಗಿ ಸತ್ತವರ ಹತ್ತಿರ ಮಾತಾಡಬೇಕೆಂದು ಕೇಳಿಕೊಳ್ಳುತ್ತಾರೆ. ಆಗ ಪ್ರೇತಸಂಪರ್ಕವಿರುವವನು ಸತ್ತವರ ಕುರಿತು ಏನಾದರೂ ಒಳ್ಳೆಯ ವಿಷಯಗಳನ್ನು ಹೇಳಬಹುದು ಅಥವಾ ಸತ್ತವರ ಸ್ವರದಲ್ಲೇ ಮಾತಾಡಬಹುದು. (1 ಸಮುವೇಲ 28:3-19) ಸತ್ತವರ ಆತ್ಮ ಬದುಕಿ ಉಳಿಯುತ್ತದೆ ಎಂದು ಜನರು ನಂಬುವುದರಿಂದಲೇ ಅದಕ್ಕೆ ಸಂಬಂಧಿಸಿ ಅನೇಕ ಪದ್ಧತಿ, ಆಚರಣೆಗಳನ್ನು ಅವರು ಮಾಡುತ್ತಾರೆ. ಶವಸಂಸ್ಕಾರದ ಆಚರಣೆಗಳು, ತಿಥಿ ಅಥವಾ ಪೂಜೆ ಮಾಡುವುದು, ಸತ್ತವರಿಗಾಗಿ ಬಲಿ ಅರ್ಪಿಸುವುದು, ವಿಧವಾ ಸಂಸ್ಕಾರಗಳು, ಶವವನ್ನಿಟ್ಟು ಜಾಗರಣೆಮಾಡುವ ಅಥವಾ ಗೋಳಾಡುವ ಆಚರಣೆಗಳು, ಇದನ್ನೆಲ್ಲ ಮಾಡುವುದು ಆ ನಂಬಿಕೆಯ ಕಾರಣದಿಂದಲೇ. ಮಾತ್ರವಲ್ಲ ಇವು ದೆವ್ವಗಳಿಗೆ ಸಂಬಂಧಪಟ್ಟ ಪದ್ಧತಿಗಳಾಗಿವೆ. ಈ ಪದ್ಧತಿಗಳಲ್ಲಿ ನಾವು ಭಾಗವಹಿಸದಿದ್ದಾಗ ನಮ್ಮ ಕುಟುಂಬದವರು, ಊರಿನವರು ನಮ್ಮನ್ನು ಬಯ್ಯಬಹುದು, ಅವಮಾನ ಮಾಡಬಹುದು, ನಮ್ಮನ್ನು ಯಾವುದಕ್ಕೂ ಸೇರಿಸಿಕೊಳ್ಳದೆ ದೂರ ಇಡಬಹುದು, ಮಾತು ಸಹ ಬಿಡಬಹುದು. ಆದರೆ ಸತ್ತವರು ಎಲ್ಲೂ ಇಲ್ಲ, ನಾವು ಅವರೊಂದಿಗಾಗಲಿ ಅವರು ನಮ್ಮೊಂದಿಗಾಗಲಿ ಮಾತಾಡಲು ಆಗುವುದಿಲ್ಲ, ಅವರು ನಮಗೆ ಸಹಾಯ ಮಾಡಲು ಅಥವಾ ಹಾನಿ ಮಾಡಲು ಸಹ ಆಗುವುದಿಲ್ಲ ಎಂದು ನಮಗೆ ತಿಳಿದಿದೆ. (ಕೀರ್ತನೆ 115:17) ಹಾಗಾಗಿ ಎಚ್ಚರಿಕೆಯಿಂದ ಇರಿ. ಸತ್ತವರೊಂದಿಗೆ ಮಾತಾಡುತ್ತೇವೆಂದು ಹೇಳುವವರನ್ನು ನಂಬಿ ದೆವ್ವಗಳ ಸಂಪರ್ಕ ಬೆಳೆಸಬೇಡಿ. ದೆವ್ವಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಗೆ ಕೈ ಹಾಕಬೇಡಿ.ಧರ್ಮೋಪದೇಶಕಾಂಡ 18:10, 11 ಓದಿ; ಯೆಶಾಯ 8:19.

13. ಒಂದು ಸಮಯದಲ್ಲಿ ದೆವ್ವಗಳಿಗೆ ಹೆದರುತ್ತಿದ್ದ ಅನೇಕ ಜನರು ಈಗ ಹೇಗೆ ಬದಲಾಗಿದ್ದಾರೆ?

13 ದೆವ್ವಗಳು ಜನರನ್ನು ಮೋಸಗೊಳಿಸುವುದಷ್ಟೇ ಅಲ್ಲ, ಹೆದರಿಸುತ್ತವೆ ಕೂಡ. ಸೈತಾನನಿಗೂ ಅವನ ಜೊತೆಯಿರುವ ದೆವ್ವಗಳಿಗೂ, ದೇವರು ತಮ್ಮನ್ನು ಬೇಗನೆ ನಾಶ ಮಾಡಲಿದ್ದಾನೆಂದು, ತಮಗೆ ಉಳಿದಿರುವುದು ‘ಸ್ವಲ್ಪವೇ ಸಮಯವೆಂದು’ ಗೊತ್ತಿದೆ. ಆದ್ದರಿಂದಲೇ ಅವುಗಳು ಜನರನ್ನು ಹೆಚ್ಚೆಚ್ಚು ಕ್ರೂರವಾಗಿ ಹಿಂಸಿಸುತ್ತಿವೆ. (ಪ್ರಕಟನೆ 12:12, 17) ಹಾಗಾಗಿ ಅನೇಕರು ದೆವ್ವಗಳಿಗೆ ಹೆದರುತ್ತಾರೆ. ಆದರೆ ಒಂದು ಸಮಯದಲ್ಲಿ ದೆವ್ವಗಳಿಗೆ ಹೆದರುತ್ತಿದ್ದ ಸಾವಿರಾರು ಜನರು ಈಗ ಅವುಗಳಿಗೆ ಸ್ವಲ್ಪವೂ ಹೆದರುವುದಿಲ್ಲ. ಅವರು ಆ ಭಯದಿಂದ ಹೇಗೆ ಹೊರಬಂದರು?

ದೆವ್ವಗಳನ್ನು ಎದುರಿಸಿರಿ ಮತ್ತು ಅವುಗಳ ಪ್ರಭಾವದಿಂದ ಮುಕ್ತರಾಗಿರಿ

14. ಒಂದನೇ ಶತಮಾನದ ಕ್ರೈಸ್ತರಂತೆ ನಾವು ಸಹ ದೆವ್ವಗಳ ಪ್ರಭಾವದಿಂದ ಹೇಗೆ ಮುಕ್ತರಾಗಬಹುದು?

14 ದೆವ್ವಗಳನ್ನು ಎದುರಿಸಿ ಅವುಗಳ ಪ್ರಭಾವದಿಂದ ಮುಕ್ತರಾಗುವುದು ಹೇಗೆಂದು ಬೈಬಲಿನಲ್ಲಿ ಹೇಳಲಾಗಿದೆ. ಉದಾಹರಣೆಗೆ, ಬೈಬಲಿನಲ್ಲಿರುವ ಈ ಘಟನೆಗೆ ಗಮನಕೊಡಿ. ಎಫೆಸ ಎಂಬ ಪಟ್ಟಣದಲ್ಲಿದ್ದ ಕೆಲವರು ಸತ್ಯವನ್ನು ಕಲಿತು ಕ್ರೈಸ್ತರಾದರು. ಕ್ರೈಸ್ತರಾಗುವ ಮುಂಚೆ ಅವರಿಗೆ ದೆವ್ವಗಳೊಂದಿಗೆ ಸಂಪರ್ಕವಿತ್ತು. ಅವುಗಳ ಪ್ರಭಾವದಿಂದ ಅವರು ಹೇಗೆ ಹೊರಬಂದರು? “ಮಾಟಮಂತ್ರಗಳನ್ನು ಮಾಡುತ್ತಿದ್ದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಒಟ್ಟುಗೂಡಿಸಿ ಎಲ್ಲರ ಮುಂದೆ ಅವುಗಳನ್ನು ಸುಟ್ಟುಬಿಟ್ಟರು” ಎಂದು ಬೈಬಲಿನಲ್ಲಿದೆ. (ಅಪೊಸ್ತಲರ ಕಾರ್ಯಗಳು 19:19) ಅವರಿಗೆ ಕ್ರೈಸ್ತರಾಗಲು ಇಷ್ಟವಿದ್ದದರಿಂದಲೇ ಅವರು ಹಾಗೆ ಮಾಡಿದರು. ಅದನ್ನೇ ನಾವು ಮಾಡಬೇಕು. ಯೆಹೋವನ ಸೇವೆ ಮಾಡಲು ಇಷ್ಟಪಡುವ ಪ್ರತಿಯೊಬ್ಬನು ದೆವ್ವಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ನಾಶ ಮಾಡಬೇಕು. ಅವು ದೆವ್ವಗಳಿಗೆ ಸಂಬಂಧಿಸಿದ ಪುಸ್ತಕಗಳು, ಪತ್ರಿಕೆಗಳು, ಪಂಚಾಂಗ-ಜಾತಕಗಳು, ಚಲನಚಿತ್ರಗಳು, ಸಂಗೀತ, ಆಟಗಳು, ಚಿತ್ರಗಳು ಆಗಿರಬಹುದು. ಇವು ದೆವ್ವಗಳಿಂದ ಮತ್ತು ಮಾಟಮಂತ್ರದಿಂದ ಯಾವುದೇ ಅಪಾಯವಿಲ್ಲ, ಅವು ಮಜಾ ಕೊಡುತ್ತವೆ ಎಂಬ ಭಾವನೆಯನ್ನು ತರಬಹುದು. ಆದರೆ ಅಂಥವುಗಳನ್ನು ಸಂಪೂರ್ಣವಾಗಿ ನಾಶಮಾಡಬೇಕು. ದುಷ್ಟ ಶಕ್ತಿಗಳಿಂದ ತಪ್ಪಿಸಿಕೊಳ್ಳಲು ಧರಿಸುವ ತಾಯಿತವನ್ನು ಸಹ ನಾವು ಇಟ್ಟುಕೊಳ್ಳಬಾರದು.—1 ಕೊರಿಂಥ 10:21.

15. ಸೈತಾನನಿಂದ ಮತ್ತು ದೆವ್ವಗಳಿಂದ ನಮಗೆ ಹಾನಿಯಾಗದಿರಲು ಇನ್ನೇನು ಮಾಡಬೇಕು?

15 ಎಫೆಸದ ಕ್ರೈಸ್ತರು ಮಾಟಮಂತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸುಟ್ಟುಹಾಕಿದ ಕೆಲವು ವರ್ಷಗಳ ನಂತರ ಅಪೊಸ್ತಲ ಪೌಲನು ಅವರಿಗೆ, ‘ನೀವು ಇನ್ನೂ “ದುಷ್ಟಾತ್ಮ ಸೇನೆಗಳ ವಿರುದ್ಧವಾಗಿ” ಹೋರಾಡಬೇಕು’ ಎಂದು ಹೇಳಿದನು. (ಎಫೆಸ 6:12) ಕಾರಣ, ದೆವ್ವಗಳು ಅವರಿಗೆ ಹಾನಿಮಾಡಲು ಆಗಲೂ ಪ್ರಯತ್ನಿಸುತ್ತಿದ್ದವು. ಅದರಿಂದ ತಪ್ಪಿಸಿಕೊಳ್ಳಲು ಅವರು ಇನ್ನೇನು ಮಾಡಬೇಕಿತ್ತು? ಪೌಲನು ಅವರಿಗೆ ಹೀಗೆ ಹೇಳಿದನು: “ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು ಹಿಡಿದುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು [ಅಥವಾ, ತಡೆಯಲು] ಶಕ್ತರಾಗುವಿರಿ.” (ಎಫೆಸ 6:16) ಒಬ್ಬ ಸೈನಿಕನ ಬಳಿ ಗುರಾಣಿ ಇದ್ದರೆ ಯುದ್ಧದಲ್ಲಿ ಅದು ಅವನಿಗೆ ರಕ್ಷಣೆ ಕೊಡುತ್ತದೆ. ಹಾಗೆಯೇ ನಮ್ಮಲ್ಲಿ ನಂಬಿಕೆಯಿದ್ದರೆ ಅದು ನಮ್ಮನ್ನು ರಕ್ಷಿಸುತ್ತದೆ. ಯೆಹೋವನು ನಮ್ಮನ್ನು ಖಂಡಿತ ರಕ್ಷಿಸುತ್ತಾನೆ ಎಂಬ ಪೂರ್ಣ ಭರವಸೆ ನಮಗಿದ್ದರೆ ಸೈತಾನನಾಗಲಿ ಅವನ ಜೊತೆಯಿರುವ ದೆವ್ವಗಳಾಗಲಿ ನಮಗೆ ಯಾವ ಹಾನಿಯನ್ನೂ ಮಾಡಲು ಆಗುವುದಿಲ್ಲ.—ಮತ್ತಾಯ 17:20.

16. ಯೆಹೋವನ ಮೇಲಿನ ನಮ್ಮ ನಂಬಿಕೆ ಹೆಚ್ಚಾಗಬೇಕಾದರೆ ಏನು ಮಾಡಬೇಕು?

16 ಯೆಹೋವನ ಮೇಲಿನ ನಮ್ಮ ನಂಬಿಕೆ ಹೆಚ್ಚಾಗಬೇಕಾದರೆ ಏನು ಮಾಡಬೇಕು? ಬೈಬಲನ್ನು ಪ್ರತಿ ದಿನ ಓದಬೇಕು, ಯೆಹೋವನೊಬ್ಬನೇ ನಮ್ಮನ್ನು ರಕ್ಷಿಸಬಲ್ಲನು ಎಂದು ನಂಬಿ ಆತನ ಮೇಲೆಯೇ ಹೊಂದಿಕೊಳ್ಳಬೇಕು. ನಮಗೆ ಯೆಹೋವನಲ್ಲಿ ಪೂರ್ಣ ನಂಬಿಕೆ ಇದ್ದರೆ ಸೈತಾನನು ಮತ್ತು ದೆವ್ವಗಳು ನಮಗೆ ಏನೂ ಮಾಡಲು ಆಗುವುದಿಲ್ಲ.—1 ಯೋಹಾನ 5:5.

17. ದೆವ್ವಗಳಿಂದ ರಕ್ಷಣೆ ಸಿಗಲು ನಾವು ಇನ್ನೇನು ಮಾಡಬೇಕು?

17 ಎಫೆಸದಲ್ಲಿದ್ದ ಕ್ರೈಸ್ತರು ಇನ್ನೇನು ಮಾಡಬೇಕಿತ್ತು? ಅವರಿದ್ದ ನಗರದಲ್ಲಿ ಎಲ್ಲಿ ನೋಡಿದರೂ ದೆವ್ವಗಳಿಗೆ ಸಂಬಂಧಪಟ್ಟ ವಿಷಯಗಳೇ ತುಂಬಿದ್ದರಿಂದ ‘ಪ್ರತಿಯೊಂದು ಸನ್ನಿವೇಶದಲ್ಲಿ ಪ್ರಾರ್ಥಿಸುತ್ತಾ ಇರಿ’ ಎಂದು ಪೌಲನು ಅವರಿಗೆ ಹೇಳಿದನು. (ಎಫೆಸ 6:18) ದೆವ್ವಗಳಿಂದ ತಮ್ಮನ್ನು ರಕ್ಷಿಸುವಂತೆ ಅವರು ಯಾವಾಗಲೂ ಯೆಹೋವನಲ್ಲಿ ಕೇಳಿಕೊಳ್ಳುತ್ತಾ ಇರಬೇಕಿತ್ತು. ನಮ್ಮ ಸನ್ನಿವೇಶವೂ ಎಫೆಸದವರಂತೆಯೇ ಇದೆ. ನಮ್ಮ ಸುತ್ತಮುತ್ತಲು ದೆವ್ವಗಳಿಗೆ ಸಂಬಂಧಪಟ್ಟ ವಿಷಯಗಳೇ ತುಂಬಿಕೊಂಡಿವೆ. ಹಾಗಾಗಿ ನಮ್ಮನ್ನು ರಕ್ಷಿಸುವಂತೆ ನಾವು ಯೆಹೋವ ದೇವರ ಹತ್ತಿರ ಪ್ರಾರ್ಥಿಸಬೇಕು. ಪ್ರಾರ್ಥಿಸುವಾಗ ಆತನ ಹೆಸರನ್ನು ಬಳಸಬೇಕು. (ಜ್ಞಾನೋಕ್ತಿ 18:10 ಓದಿ.) ನಮ್ಮನ್ನು ಸೈತಾನನಿಂದ ರಕ್ಷಿಸುವಂತೆ ಯೆಹೋವನಲ್ಲಿ ಯಾವಾಗಲೂ ಪ್ರಾರ್ಥಿಸುತ್ತಿದ್ದರೆ ಆತನು ಖಂಡಿತ ನಮ್ಮನ್ನು ರಕ್ಷಿಸುತ್ತಾನೆ.—ಕೀರ್ತನೆ 145:19; ಮತ್ತಾಯ 6:13.

18, 19. (ಎ) ಸೈತಾನ ಮತ್ತು ದೆವ್ವಗಳ ವಿರುದ್ಧ ಹೋರಾಟದಲ್ಲಿ ನಾವು ಹೇಗೆ ಜಯ ಗಳಿಸಬಲ್ಲೆವು? (ಬಿ) ಮುಂದಿನ ಅಧ್ಯಾಯದಲ್ಲಿ ನಾವು ಯಾವ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುತ್ತೇವೆ?

18 ದೆವ್ವಗಳಿಗೆ ಸಂಬಂಧಪಟ್ಟ ಯಾವುದೇ ವಿಷಯ ನಮ್ಮಲ್ಲಿದ್ದರೆ ಅವುಗಳನ್ನು ನಾಶಮಾಡುವ ಮೂಲಕ ಮತ್ತು ಯೆಹೋವನ ಮೇಲೆ ಪೂರ್ಣವಾಗಿ ಹೊಂದಿಕೊಳ್ಳುವ ಮೂಲಕ ಸೈತಾನನ ಮತ್ತು ದೆವ್ವಗಳ ವಿರುದ್ಧ ಹೋರಾಡಲು ನಮಗೆ ಸಾಧ್ಯವಾಗುತ್ತದೆ. ಹಾಗಾಗಿ ನಾವು ಹೆದರುವ ಅವಶ್ಯಕತೆಯೇ ಇಲ್ಲ. (ಯಾಕೋಬ 4:7, 8 ಓದಿ.) ದೆವ್ವಗಳಿಗಿಂತ ಯೆಹೋವ ದೇವರಿಗೆ ಎಷ್ಟೋ ಹೆಚ್ಚು ಶಕ್ತಿಯಿದೆ. ನೋಹನ ಸಮಯದಲ್ಲಿ ದೇವರು ದೆವ್ವಗಳಿಗೆ ಶಿಕ್ಷೆ ಕೊಟ್ಟನು. ಮುಂದೆ ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಾನೆ. (ಯೂದ 6) ಸೈತಾನ ಮತ್ತು ದೆವ್ವಗಳ ವಿರುದ್ಧ ನೀವು ಒಬ್ಬರೇ ಹೋರಾಡಬೇಕಾಗಿಲ್ಲ, ನಿಮ್ಮೊಂದಿಗೆ ಯೆಹೋವನಿದ್ದಾನೆ ಎನ್ನುವುದನ್ನು ಯಾವಾಗಲೂ ನೆನಪಿಡಿ. ಆತನು ದೇವದೂತರನ್ನು ಉಪಯೋಗಿಸಿ ನಿಮ್ಮನ್ನು ರಕ್ಷಿಸುತ್ತಾನೆ. (2 ಅರಸುಗಳು 6:15-17) ಹಾಗಾಗಿ ಯೆಹೋವನ ಸಹಾಯದೊಂದಿಗೆ ನಾವು ಸೈತಾನ ಮತ್ತು ದೆವ್ವಗಳ ವಿರುದ್ಧ ಹೋರಾಡಿ ಜಯ ಗಳಿಸಬಲ್ಲೆವು.—1 ಪೇತ್ರ 5:6, 7; 2 ಪೇತ್ರ 2:9.

19 ಸೈತಾನನಿಂದ ಮತ್ತು ದೆವ್ವಗಳಿಂದ ಜನರಿಗೆ ಇಷ್ಟು ಕಷ್ಟ ಆಗುತ್ತಿದೆ ಅಂದಮೇಲೆ ದೇವರು ಯಾಕೆ ಅವರನ್ನು ಇನ್ನೂ ನಾಶಮಾಡಿಲ್ಲ? ಇದಕ್ಕೆ ಉತ್ತರವನ್ನು ನಾವು ಮುಂದಿನ ಅಧ್ಯಾಯದಲ್ಲಿ ನೋಡೋಣ.