ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 16

ನಿಜವಾದ ದೇವರನ್ನು ಆರಾಧಿಸಿ

ನಿಜವಾದ ದೇವರನ್ನು ಆರಾಧಿಸಿ

1, 2. (ಎ) ನೀವು ನಿಮ್ಮನ್ನೇ ಯಾವ ಪ್ರಶ್ನೆ ಕೇಳಿಕೊಳ್ಳಬೇಕು? (ಬಿ) ಹಾಗೆ ಕೇಳಿಕೊಳ್ಳುವುದು ಯಾಕೆ ಪ್ರಾಮುಖ್ಯವಾಗಿದೆ?

ಈಗಾಗಲೇ ನೀವು ಬೈಬಲ್‌ ಅಧ್ಯಯನದಲ್ಲಿ ಕಲಿತಿರುವಂತೆ, ತುಂಬಾ ಜನ ತಾವು ಸರಿಯಾದ ಆರಾಧನೆಯನ್ನು ಮಾಡುತ್ತೇವೆಂದು ಹೇಳಿಕೊಳ್ಳುವುದಾದರೂ ದೇವರಿಗೆ ಇಷ್ಟವಾಗದಂಥ ವಿಷಯಗಳನ್ನು ಮಾಡುತ್ತಾರೆ ಅಥವಾ ಕಲಿಸುತ್ತಾರೆ. (2 ಕೊರಿಂಥ 6:17) ಹಾಗಾಗಿಯೇ ಯೆಹೋವನು ನಮಗೆ ‘ಮಹಾ ಬಾಬೆಲನ್ನು’ ಅಂದರೆ ತಪ್ಪಾದ ಆರಾಧನೆಯನ್ನು ಮಾಡುವ ಧರ್ಮಗಳನ್ನು ಬಿಟ್ಟುಬರುವಂತೆ ಎಚ್ಚರಿಸಿದ್ದಾನೆ. (ಪ್ರಕಟನೆ 18:2, 4) ನೀವೇನು ಮಾಡಬೇಕೆಂದಿದ್ದೀರಾ? ನೀವು ನಿಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನನ್ನ ನಿರ್ಧಾರ ದೇವರು ಇಷ್ಟಪಡುವಂಥ ರೀತಿಯಲ್ಲಿ ಆತನನ್ನು ನಾನು ಆರಾಧಿಸಬೇಕು ಅಂತನಾ? ಅಥವಾ ಈಗಾಗಲೇ ಯಾವ ರೀತಿಯಲ್ಲಿ ಆರಾಧಿಸುತ್ತಿದ್ದೇನೋ ಅದನ್ನೇ ಮುಂದುವರಿಸಬೇಕು ಅಂತನಾ?’ ಈ ಎರಡರಲ್ಲಿ ನೀವು ಯಾವುದಾದರೂ ಒಂದನ್ನು ಆಯ್ಕೆ ಮಾಡಲೇಬೇಕು.

2 ತಪ್ಪಾದ ಆರಾಧನೆ ಮಾಡುವ ಧರ್ಮವನ್ನು ನೀವು ಈಗಾಗಲೇ ಬಿಟ್ಟುಬಂದಿರಬಹುದು ಅಥವಾ ಅದಕ್ಕೆ ರಾಜೀನಾಮೆ ಕೊಟ್ಟಿರಬಹುದು. ಹಾಗೆ ಮಾಡಿದ್ದರೆ ಅದು ನಿಜವಾಗಿಯೂ ಮೆಚ್ಚುವಂಥ ವಿಷಯವಾಗಿದೆ. ಆದರೆ ನಿಮ್ಮ ಹೃದಯದ ಮೂಲೆಯಲ್ಲೆಲ್ಲೋ ಹಿಂದೆ ಮಾಡುತ್ತಿದ್ದ ಯಾವುದೋ ಒಂದು ಪದ್ಧತಿಯನ್ನು ಅಥವಾ ಆಚರಣೆಯನ್ನು ನೀವು ಇನ್ನೂ ಇಷ್ಟಪಡುತ್ತಿರಬಹುದು. ಬನ್ನಿ ಅವುಗಳ ಬಗ್ಗೆ ಈಗ ಚರ್ಚಿಸೋಣ. ಅವುಗಳ ಬಗ್ಗೆ ಯೆಹೋವನಿಗೆ ಯಾವ ಅನಿಸಿಕೆ ಇದೆ ಮತ್ತು ಅದೇ ರೀತಿಯ ಅನಿಸಿಕೆ ಯಾಕೆ ನಮಗೂ ಇರಬೇಕು ಎಂದು ತಿಳಿದುಕೊಳ್ಳೋಣ.

ವಿಗ್ರಹಾರಾಧನೆ ಮತ್ತು ತೀರಿಹೋದವರ ಆರಾಧನೆ

3. (ಎ) ಕೆಲವರಿಗೆ ವಿಗ್ರಹಗಳ ಆರಾಧನೆಯನ್ನು ಬಿಡುವುದು ಕಷ್ಟವೆಂದು ಯಾಕೆ ಅನಿಸುತ್ತದೆ? (ಬಿ) ದೇವರ ಆರಾಧನೆಯಲ್ಲಿ ವಿಗ್ರಹಗಳನ್ನು ಉಪಯೋಗಿಸುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

3 ಕೆಲವರು ತಮ್ಮ ಮನೆಗಳಲ್ಲಿ ವಿಗ್ರಹಗಳನ್ನು ಇಟ್ಟುಕೊಂಡಿರುತ್ತಾರೆ ಅಥವಾ ಅದನ್ನಿಡಲು ಚಿಕ್ಕ ಜಾಗವನ್ನು ಮಾಡಿಕೊಂಡಿರುತ್ತಾರೆ. ಈ ರೂಢಿ ತುಂಬ ವರ್ಷಗಳಿಂದ ಅವರಿಗೆ ಇರಬಹುದು. ಅಂಥವರಿಗೆ ದೇವರ ಆರಾಧನೆಗಾಗಿ ವಿಗ್ರಹಗಳನ್ನು ಉಪಯೋಗಿಸಬಾರದು ಎಂದು ಹೇಳಿದರೆ ತುಂಬಾ ಆಶ್ಚರ್ಯವಾಗುತ್ತದೆ ಅಥವಾ ವಿಗ್ರಹಗಳಿಲ್ಲದೆ ಆರಾಧನೆ ಮಾಡುವುದು ತಪ್ಪೆಂದು ಸಹ ಅವರಿಗೆ ಅನಿಸಬಹುದು. ನಿಮಗೂ ಹೀಗೆ ಅನಿಸುತ್ತದಾ? ನಾವು ಯಾವ ರೀತಿಯಲ್ಲಿ ಆತನನ್ನು ಆರಾಧಿಸಬೇಕೆಂದು ನಮಗೆ ಯೆಹೋವನೇ ಕಲಿಸುತ್ತಾನೆ ಎನ್ನುವುದನ್ನು ಮರೆಯಬೇಡಿ. ಆರಾಧನೆಯಲ್ಲಿ ವಿಗ್ರಹಗಳನ್ನು ಉಪಯೋಗಿಸಿದರೆ ಅದನ್ನು ಯೆಹೋವನು ಇಷ್ಟಪಡುವುದಿಲ್ಲ ಎಂದು ಬೈಬಲ್‌ ಸ್ಪಷ್ಟವಾಗಿ ಕಲಿಸುತ್ತದೆ.ವಿಮೋಚನಕಾಂಡ 20:4, 5 ಓದಿ; ಕೀರ್ತನೆ 115:4-8; ಯೆಶಾಯ 42:8; 1 ಯೋಹಾನ 5:21.

4. (ಎ) ತೀರಿಹೋದವರನ್ನು ನಾವು ಯಾಕೆ ಆರಾಧಿಸಬಾರದು? (ಬಿ) ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸಬಾರದೆಂದು ಯೆಹೋವನು ಯಾಕೆ ತನ್ನ ಜನರಿಗೆ ಆಜ್ಞೆ ಕೊಟ್ಟಿದ್ದನು?

4 ಕೆಲವರು ಸತ್ತವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ ಮತ್ತು ಅವರಿಗೆ ಆರಾಧನೆ ಸಹ ಮಾಡುತ್ತಾರೆ. ಅದಕ್ಕಾಗಿ ಸಾಕಷ್ಟು ಸಮಯ, ಶಕ್ತಿ ಮತ್ತು ಹಣವನ್ನು ವ್ಯಯಿಸುತ್ತಾರೆ. ಆದರೆ ನಾವು ಈಗಾಗಲೇ ಕಲಿತಿರುವಂತೆ ಸತ್ತವರು ನಮಗೆ ಸಹಾಯ ಮಾಡಲಿಕ್ಕೂ ಆಗುವುದಿಲ್ಲ, ಹಾನಿ ಮಾಡಲಿಕ್ಕೂ ಆಗುವುದಿಲ್ಲ. ಸತ್ತವರ ಆತ್ಮ ಬೇರೆಲ್ಲೋ ಹೋಗಿ ಜೀವಿಸುವುದೂ ಇಲ್ಲ. ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸುವುದು ಅಪಾಯಕಾರಿ. ಕಾರಣ ಅವರಂತೆ ನಮ್ಮೊಂದಿಗೆ ಮಾತಾಡುವವರು ಬೇರೆ ಯಾರೂ ಅಲ್ಲ ದೆವ್ವಗಳೇ. ಹಾಗಾಗಿಯೇ ಯೆಹೋವನು ಇಸ್ರಾಯೇಲ್ಯರಿಗೆ ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸಬಾರದೆಂದು ಮತ್ತು ದೆವ್ವಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳಲ್ಲಿ ಒಳಗೂಡಬಾರದೆಂದು ಆಜ್ಞೆ ಕೊಟ್ಟಿದ್ದನು.—ಧರ್ಮೋಪದೇಶಕಾಂಡ 18:10-12; ಟಿಪ್ಪಣಿ 25⁠ನ್ನು ಮತ್ತು ಟಿಪ್ಪಣಿ 30⁠ನ್ನು ನೋಡಿ.

5. ವಿಗ್ರಹಗಳ ಉಪಯೋಗವನ್ನು, ತೀರಿಹೋದವರ ಆರಾಧನೆಯನ್ನು ನಿಲ್ಲಿಸಲು ಯಾವುದು ಸಹಾಯ ಮಾಡುತ್ತದೆ?

5 ವಿಗ್ರಹಗಳ ಉಪಯೋಗವನ್ನು, ತೀರಿಹೋದವರ ಆರಾಧನೆಯನ್ನು ನಿಲ್ಲಿಸಲು ಯಾವುದು ಸಹಾಯ ಮಾಡುತ್ತದೆ? ಬೈಬಲನ್ನು ಓದಿ ಆರಾಧನೆಯ ವಿಷಯದಲ್ಲಿ ಯೆಹೋವನ ಇಷ್ಟವೇನೆಂದು ಯೋಚಿಸುವುದು ಸಹಾಯ ಮಾಡುತ್ತದೆ. ವಿಗ್ರಹಗಳ ಉಪಯೋಗ, ತೀರಿಹೋದವರ ಆರಾಧನೆ ಯೆಹೋವನಿಗೆ ‘ಹೇಯವಾದದ್ದಾಗಿದೆ’ ಅಂದರೆ ಅವು ಆತನಿಗೆ ಅಸಹ್ಯವಾದ ವಿಷಯಗಳಾಗಿವೆ. (ಧರ್ಮೋಪದೇಶಕಾಂಡ 27:15) ಈ ವಿಷಯಗಳ ಬಗ್ಗೆ ದೇವರು ಹೇಗೆ ಯೋಚಿಸುತ್ತಾನೋ ಅದೇ ರೀತಿ ನೀವು ಯೋಚಿಸಲು ಮತ್ತು ಆತನು ಇಷ್ಟಪಡುವಂಥ ರೀತಿಯಲ್ಲಿ ನೀವು ಆತನನ್ನು ಆರಾಧಿಸಲು ಸಹಾಯ ಮಾಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿ. (ಯೆಶಾಯ 55:9) ಹೀಗೆ ಮಾಡುವಾಗ ದೇವರಿಗೆ ಇಷ್ಟವಾಗದ ಆರಾಧನಾ ರೀತಿಗಳನ್ನು ಬಿಟ್ಟುಬಿಡುವಂತೆ ಆತನು ಖಂಡಿತವಾಗಿಯೂ ನಿಮಗೆ ಬಲ ಕೊಡುತ್ತಾನೆ.

ನಾವು ಕ್ರಿಸ್ಮಸನ್ನು ಆಚರಿಸಬಹುದಾ?

6. ಡಿಸೆಂಬರ್‌ 25⁠ನ್ನು ಯಾಕೆ ಯೇಸು ಹುಟ್ಟಿದ ದಿನವೆಂದು ಆಚರಿಸುತ್ತಾರೆ?

6 ಕ್ರಿಸ್ಮಸ್‌ ತುಂಬ ಪ್ರಸಿದ್ಧವಾದ ಹಬ್ಬ. ಈ ಹಬ್ಬವನ್ನು ಪ್ರಪಂಚದಾದ್ಯಂತ ಆಚರಿಸುತ್ತಾರೆ. ತುಂಬ ಜನರು ಇದು ಯೇಸು ಹುಟ್ಟಿದ ದಿನ ಅಂದುಕೊಂಡಿದ್ದಾರೆ. ಆದರೆ ಕ್ರಿಸ್ಮಸ್‌ ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಆಚರಣೆಯಾಗಿದೆ. ಇದರ ಬಗ್ಗೆ ಒಂದು ವಿಶ್ವಕೋಶ ಹೀಗೆ ತಿಳಿಸುತ್ತದೆ: ರೋಮಿನಲ್ಲಿದ್ದ ಕ್ರೈಸ್ತರಲ್ಲದ ಜನರು ಡಿಸೆಂಬರ್‌ 25⁠ನ್ನು ಸೂರ್ಯನ ಹುಟ್ಟುಹಬ್ಬವೆಂದು ಆಚರಿಸುತ್ತಿದ್ದರು. ಅವರನ್ನು ಸಹ ಕ್ರೈಸ್ತರನ್ನಾಗಿ ಮಾಡಬೇಕೆಂದು ಚರ್ಚಿನ ಮುಖಂಡರು ಬಯಸಿದರು. ಹಾಗಾಗಿ ಡಿಸೆಂಬರ್‌ 25⁠ರಂದು ಯೇಸು ಹುಟ್ಟಿರದಿದ್ದರೂ ಆ ದಿನಾಂಕವನ್ನು ಯೇಸುವಿನ ಜನ್ಮ ದಿನವೆಂದು ಆಚರಿಸಲು ಆರಂಭಿಸಿದರು. (ಲೂಕ 2:8-12) ಆದರೆ ಯೇಸುವಿನ ಶಿಷ್ಯರು ಯಾವತ್ತೂ ಆತನ ಹುಟ್ಟುಹಬ್ಬವನ್ನು ಆಚರಿಸಲಿಲ್ಲ. ಯೇಸು ಹುಟ್ಟಿ 200 ವರ್ಷಗಳಾದ ನಂತರ ಸಹ “ಯೇಸು ಹುಟ್ಟಿದ ದಿನಾಂಕ ಯಾರಿಗೂ ಗೊತ್ತಿರಲಿಲ್ಲ ಮತ್ತು ಅದರ ಬಗ್ಗೆ ತಿಳಿದುಕೊಳ್ಳಬೇಕೆಂದು ಯಾರೂ ಬಯಸಲಿಲ್ಲ” ಎಂದು ಒಂದು ಪುಸ್ತಕ (ಸೆಕ್ರೆಡ್‌ ಒರಿಜಿನ್ಸ್‌ ಆಫ್‌ ಪ್ರೊಫೌಂಡ್‌ ಥಿಂಗ್ಸ್‌) ಹೇಳಿತು. ಯೇಸು ಹುಟ್ಟಿ 300ಕ್ಕಿಂತ ಹೆಚ್ಚು ವರ್ಷಗಳಾದ ನಂತರ ಈ ಕ್ರಿಸ್ಮಸ್‌ ಆಚರಣೆ ಆರಂಭವಾಯಿತು.

7. ಯೆಹೋವನ ಸಾಕ್ಷಿಗಳೇಕೆ ಕ್ರಿಸ್ಮಸನ್ನು ಆಚರಿಸುವುದಿಲ್ಲ?

7 ಕ್ರಿಸ್ಮಸ್‌ ಆಚರಿಸುವುದು ಮತ್ತು ಅದಕ್ಕೆ ಸಂಬಂಧಿಸಿ ದೊಡ್ಡ ದೊಡ್ಡ ಔತಣ ಮಾಡುವುದು, ಉಡುಗೊರೆ ಕೊಡುವುದು ತಪ್ಪಾದ ಆರಾಧನೆಗೆ ಸಂಬಂಧಿಸಿದ್ದಾಗಿವೆ ಎಂದು ತುಂಬ ಜನರಿಗೆ ಗೊತ್ತು. ಉದಾಹರಣೆಗೆ, ಇಂಗ್ಲೆಂಡ್‌ನಲ್ಲಿ ಮತ್ತು ಅಮೆರಿಕದ ಕೆಲವೊಂದು ಭಾಗಗಳಲ್ಲಿ ಕ್ರಿಸ್ಮಸ್‌ ಆಚರಿಸುವುದನ್ನು ಬಿಟ್ಟುಬಿಟ್ಟಿದ್ದ ಒಂದು ಕಾಲವಿತ್ತು. ಕಾರಣ, ಅಲ್ಲಿನ ಜನಕ್ಕೆ ಅದು ತಪ್ಪಾದ ಆಚರಣೆಯಾಗಿದೆ ಎಂದು ಗೊತ್ತಿತ್ತು. ಯಾರಾದರೂ ಕ್ರಿಸ್ಮಸನ್ನು ಆಚರಿಸಿದರೆ ಅವರಿಗೆ ಶಿಕ್ಷೆಯಾಗುತ್ತಿತ್ತು. ವರ್ಷಗಳು ಉರುಳಿದಂತೆ ಅಲ್ಲಿನ ಜನರು ಪುನಃ ಕ್ರಿಸ್ಮಸ್‌ ಆಚರಿಸಲು ಶುರು ಮಾಡಿದರು. ಆದರೆ ಯೆಹೋವನ ಸಾಕ್ಷಿಗಳು ಕ್ರಿಸ್ಮಸನ್ನು ಆಚರಿಸುವುದಿಲ್ಲ. ಅವರು ಏನೇ ಮಾಡುವುದಾದರೂ ಯೆಹೋವನನ್ನು ಮೆಚ್ಚಿಸಲು ಬಯಸುತ್ತಾರೆ.

ನಾವು ಹುಟ್ಟುಹಬ್ಬವನ್ನು ಆಚರಿಸಬಹುದಾ?

8, 9. ಆರಂಭದ ಕ್ರೈಸ್ತರು ಯಾಕೆ ಹುಟ್ಟುಹಬ್ಬವನ್ನು ಆಚರಿಸುತ್ತಿರಲಿಲ್ಲ?

8 ತುಂಬ ಜನರು ಮಾಡುವ ಇನ್ನೊಂದು ಆಚರಣೆ ಹುಟ್ಟುಹಬ್ಬವಾಗಿದೆ. ನಾವು ಹುಟ್ಟುಹಬ್ಬವನ್ನು ಆಚರಿಸಬಹುದಾ? ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಇಬ್ಬರು ವ್ಯಕ್ತಿಗಳ ಬಗ್ಗೆ ಬೈಬಲ್‌ ತಿಳಿಸುತ್ತದೆ. ಆದರೆ ಅವರಿಬ್ಬರೂ ಯೆಹೋವನ ಆರಾಧಕರಾಗಿರಲಿಲ್ಲ. (ಆದಿಕಾಂಡ 40:20; ಮಾರ್ಕ 6:21) ಹಿಂದೆ ಜನರು ತಮ್ಮ ತಮ್ಮ ದೇವರುಗಳಿಗೆ ಗೌರವ ಕೊಡುವುದಕ್ಕಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಹಾಗಾಗಿಯೇ ಆರಂಭದ ಕ್ರೈಸ್ತರು “ಒಬ್ಬ ವ್ಯಕ್ತಿಯ ಹುಟ್ಟುಹಬ್ಬ ಆಚರಿಸುವುದನ್ನು ಬೇರೆ ಧರ್ಮಕ್ಕೆ ಸೇರಿದ ಪದ್ಧತಿಯೆಂದು ಎಣಿಸುತ್ತಿದ್ದರು.”—ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯ.

9 ಪುರಾತನ ರೋಮನ್ನರಲ್ಲಿ ಮತ್ತು ಗ್ರೀಕರಲ್ಲಿ ಒಂದು ನಂಬಿಕೆಯಿತ್ತು. ಪ್ರತಿಯೊಬ್ಬ ವ್ಯಕ್ತಿಯೂ ಒಬ್ಬ ದೇವರು ಹುಟ್ಟಿರುವ ದಿನದಂದೇ ಹುಟ್ಟಿರುತ್ತಾನೆ. ಆ ದೇವರಿಗೂ, ಒಂದು ಆತ್ಮಕ್ಕೂ ನಂಟಿರುತ್ತದೆ. ವ್ಯಕ್ತಿಯು ಹುಟ್ಟಿದ ದಿನದಿಂದ ಆ ಆತ್ಮ ಅವನನ್ನು ಸಂರಕ್ಷಿಸಲು ಆರಂಭಿಸುತ್ತದೆ. ಅದು ಆ ವ್ಯಕ್ತಿಯನ್ನು ಹಾಗೇ ಜೀವನಪೂರ್ತಿ ಸಂರಕ್ಷಿಸಬೇಕೆಂದರೆ ಅವನು ತನ್ನ ಹುಟ್ಟುಹಬ್ಬವನ್ನು ಆಚರಿಸಲೇಬೇಕು ಎನ್ನುವುದೇ ಅವರ ನಂಬಿಕೆಯಾಗಿತ್ತು. ಇದೊಂದು ತಪ್ಪಾದ ನಂಬಿಕೆಯಾಗಿತ್ತು.

10. ಯೆಹೋವನ ಸಾಕ್ಷಿಗಳು ಹುಟ್ಟುಹಬ್ಬವನ್ನು ಯಾಕೆ ಆಚರಿಸುವುದಿಲ್ಲ?

10 ಈ ರೀತಿಯ ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಆಚರಣೆಗಳನ್ನು ಯೆಹೋವನು ಒಪ್ಪಿಕೊಳ್ಳುತ್ತಾನಾ? (ಯೆಶಾಯ 65:11, 12) ಖಂಡಿತ ಇಲ್ಲ. ಹಾಗಾಗಿಯೇ ಯೆಹೋವನ ಸಾಕ್ಷಿಗಳು ಹುಟ್ಟುಹಬ್ಬವನ್ನಾಗಲಿ, ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಯಾವುದೇ ಹಬ್ಬವನ್ನಾಗಲಿ ಆಚರಿಸುವುದಿಲ್ಲ.

ಹಬ್ಬಗಳ ಆಚರಣೆಯ ಬಗ್ಗೆ ಇಷ್ಟೊಂದು ಯೋಚಿಸಬೇಕಾ?

11. (ಎ) ಕೆಲವರು ಹಬ್ಬಗಳನ್ನು ಯಾಕೆ ಆಚರಿಸುತ್ತಾರೆ? (ಬಿ) ನಮಗೆ ಯಾವುದು ಹೆಚ್ಚು ಪ್ರಾಮುಖ್ಯ?

11 ಕ್ರಿಸ್ಮಸ್‌ ಮತ್ತು ಬೇರೆ ಹಬ್ಬಗಳು ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಆಚರಣೆಗಳಾಗಿವೆ ಎಂದು ಕೆಲವರಿಗೆ ಗೊತ್ತು. ಆದರೂ ಅವರು ಆ ಆಚರಣೆಗಳನ್ನು ಮಾಡುತ್ತಾರೆ. ಕುಟುಂಬದವರೆಲ್ಲಾ ಸೇರಿ ಒಟ್ಟಿಗೆ ಸಮಯ ಕಳೆಯಲು ಅವು ಒಳ್ಳೆಯ ಅವಕಾಶಗಳಷ್ಟೆ ಎಂದು ಅವರು ಅಂದುಕೊಂಡಿದ್ದಾರೆ. ನಿಮಗೂ ಹಾಗೆ ಅನಿಸುತ್ತದಾ? ಕುಟುಂಬದೊಂದಿಗೆ ಸಮಯ ಕಳೆಯಬೇಕೆಂದು ಇಷ್ಟಪಡುವುದು ತಪ್ಪಲ್ಲ. ಕುಟುಂಬವನ್ನು ಮಾಡಿದವನು ಯೆಹೋವನೇ. ನಮ್ಮ ಮತ್ತು ನಮ್ಮ ಕುಟುಂಬದ ನಡುವೆ ಒಳ್ಳೇ ಅನುಬಂಧವಿರಬೇಕೆಂದು ಆತನೂ ಬಯಸುತ್ತಾನೆ. (ಎಫೆಸ 3:14, 15) ಆದರೆ ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಆಚರಣೆಗಳನ್ನು ಮಾಡಿ ನಮ್ಮ ಸಂಬಂಧಿಕರನ್ನು ಸಂತೋಷಪಡಿಸುವುದಕ್ಕಿಂತ, ನಮ್ಮ ಮತ್ತು ಯೆಹೋವನ ಆಪ್ತ ಸಂಬಂಧವೇ ಹೆಚ್ಚು ಪ್ರಾಮುಖ್ಯ. ಹಾಗಾಗಿಯೇ ಅಪೊಸ್ತಲ ಪೌಲನು ‘ಕರ್ತನಿಗೆ ಯಾವುದು ಮೆಚ್ಚಿಕೆಯಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾ ಇರಿ’ ಎಂದು ಹೇಳಿದನು.—ಎಫೆಸ 5:10.

12. ಎಂಥ ಆಚರಣೆಗಳನ್ನು ಯೆಹೋವನು ಮೆಚ್ಚುವುದಿಲ್ಲ?

12 ಹಬ್ಬಗಳು ಹೇಗೆ ಬಂದವು, ಎಲ್ಲಿಂದ ಬಂದವು ಎನ್ನುವುದರ ಬಗ್ಗೆ ತುಂಬ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಯೆಹೋವನು ಹಾಗಲ್ಲ. ಆ ವಿಷಯಗಳನ್ನು ಆತನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಆಚರಣೆಗಳನ್ನು, ಯಾವುದಾದರೂ ವ್ಯಕ್ತಿ ಅಥವಾ ದೇಶದ ಮೇಲಿನ ಅಭಿಮಾನದಿಂದಾಗಿ ಮಾಡುವಂಥ ಆಚರಣೆಗಳನ್ನು ಯೆಹೋವನು ಮೆಚ್ಚುವುದಿಲ್ಲ. ಇದಕ್ಕೊಂದು ಉದಾಹರಣೆ ಇಸ್ರಾಯೇಲ್ಯರದ್ದು. ಐಗುಪ್ತದವರು ತಮ್ಮ ದೇವರುಗಳಿಗಾಗಿ ಹಲವಾರು ಹಬ್ಬಗಳನ್ನು ಮಾಡುತ್ತಿದ್ದರು. ಅಲ್ಲಿದ್ದ ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಬಂದಾಗ ಅವರು ಮಾಡುತ್ತಿದ್ದಂಥ ಒಂದು ತಪ್ಪಾದ ಆಚರಣೆಯನ್ನು ತಾವೂ ಮಾಡಿದರು ಮತ್ತು ಅದನ್ನು ‘ಯೆಹೋವನ ಉತ್ಸವವೆಂದು’ ಕರೆದರು. ಆದರೆ ಅದನ್ನು ಯೆಹೋವನು ಮೆಚ್ಚಲಿಲ್ಲ, ಅವರನ್ನು ಶಿಕ್ಷಿಸಿದನು. (ವಿಮೋಚನಕಾಂಡ 32:2-10) ಹಾಗಾಗಿಯೇ ಪ್ರವಾದಿ ಯೆಶಾಯನು ಹೇಳಿರುವಂತೆ ನಾವು ‘ಅಶುದ್ಧವಾದ ಯಾವದನ್ನೂ ಮುಟ್ಟಬಾರದು.’ಯೆಶಾಯ 52:11 ಓದಿ.

ಬೇರೆಯವರು ಹಬ್ಬವನ್ನು ಆಚರಿಸುವಾಗ . . .

13. ಹಬ್ಬಗಳನ್ನು ಆಚರಿಸಬಾರದು ಎಂದು ನೀವು ನಿರ್ಧರಿಸುವಾಗ ನಿಮಗೆ ಯಾವ ಪ್ರಶ್ನೆಗಳು ಬರಬಹುದು?

13 ‘ಇನ್ನು ಮುಂದೆ ನಾನು ಹಬ್ಬಗಳನ್ನು ಆಚರಿಸಬಾರದು’ ಎಂದು ನೀವು ನಿರ್ಧರಿಸುವಾಗ ನಿಮಗೆ ಹಲವಾರು ಪ್ರಶ್ನೆಗಳು ಬರಬಹುದು. ಯಾರಾದರೂ ನನ್ನನ್ನು ನೀನು ಯಾಕೆ ಹಬ್ಬ ಮಾಡುವುದಿಲ್ಲ ಎಂದು ಕೇಳಿದರೆ ನಾನೇನು ಹೇಳಲಿ? ಯಾರಾದರೂ ನನಗೆ ಹಬ್ಬದ ಉಡುಗೊರೆ ಕೊಟ್ಟರೆ ನಾನೇನು ಮಾಡಲಿ? ಹಬ್ಬವನ್ನು ಮಾಡುವಂತೆ ನನ್ನ ಗಂಡ ಅಥವಾ ಹೆಂಡತಿ ಹೇಳಿದರೆ ಆಗೇನು ಮಾಡುವುದು? ಹಬ್ಬಗಳನ್ನು ಮತ್ತು ಹುಟ್ಟುಹಬ್ಬವನ್ನು ಆಚರಿಸದಿದ್ದಾಗ ನನ್ನ ಮಕ್ಕಳಿಗೆ ಬೇಜಾರಾಗದಂತೆ ಏನು ಮಾಡಲಿ?

14, 15. ಯಾರಾದರೂ ನಿಮಗೆ ಹಬ್ಬದ ಶುಭಾಶಯಗಳನ್ನು ಹೇಳಿದರೆ ಅಥವಾ ಉಡುಗೊರೆಯನ್ನು ಕೊಟ್ಟರೆ ನೀವೇನು ಮಾಡಬಹುದು?

14 ಯಾವ ಸಂದರ್ಭದಲ್ಲಿ ಏನು ಮಾತಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂದು ನಿಮಗೆ ಗೊತ್ತಿರುವುದು ತುಂಬಾ ಪ್ರಾಮುಖ್ಯ. ಉದಾಹರಣೆಗೆ, ಯಾರಾದರೂ ನಿಮಗೆ ‘ಹೊಸ ವರ್ಷದ ಶುಭಾಷಯಗಳು’ ಎಂದು ಹೇಳಿದರೆ, ಅವರ ಮಾತನ್ನು ಕೇಳಿಸಿಕೊಂಡೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಇರಬೇಕು ಎಂದೇನಿಲ್ಲ. ನೀವು ಅವರಿಗೆ “ಧನ್ಯವಾದ” ಹೇಳಿ ಸುಮ್ಮನಾಗಬಹುದು. ಆದರೆ ಕೆಲವರು, ಯಾಕೆ ನೀವು ಹಬ್ಬಗಳನ್ನು ಮಾಡುವುದಿಲ್ಲವೆಂದು ತಿಳಿದುಕೊಳ್ಳಲು ಬಯಸಬಹುದು. ಆಗ ಅವರೊಂದಿಗೆ ಸೌಜನ್ಯದಿಂದ, ಗೌರವದಿಂದ, ಯೋಚನೆಮಾಡಿ ಉತ್ತರಕೊಡಿ. ಬೈಬಲ್‌ ಹೀಗೆ ಹೇಳುತ್ತದೆ: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.” (ಕೊಲೊಸ್ಸೆ 4:6) ಬೇರೆಯವರೊಟ್ಟಿಗೆ ಸಮಯ ಕಳೆಯಲು, ಉಡುಗೊರೆಗಳನ್ನು ಕೊಡಲು ನಿಮಗೂ ಇಷ್ಟವೆಂದು, ಆದರೆ ಹಬ್ಬದ ಹೆಸರಿನಲ್ಲಿ ನೀವು ಅದನ್ನು ಮಾಡುವುದಿಲ್ಲವೆಂದು ಹೇಳಿ.

15 ಯಾರಾದರೂ ನಿಮಗೆ ಹಬ್ಬದ ಉಡುಗೊರೆಯನ್ನು ಕೊಟ್ಟರೆ ಏನು ಮಾಡುತ್ತೀರಾ? ಬೈಬಲ್‌ ನಮಗೆ ಹೀಗೆ ಮಾಡಿ, ಹೀಗೆ ಮಾಡಬೇಡಿ ಅಂತ ನಿಯಮಗಳ ಒಂದು ದೊಡ್ಡ ಪಟ್ಟಿಯನ್ನು ಕೊಟ್ಟಿಲ್ಲ. ಆದರೆ ನಮಗೆ ಒಳ್ಳೇ ಮನಸ್ಸಾಕ್ಷಿ ಇರಬೇಕೆಂದು ಹೇಳಿದೆ. (1 ತಿಮೊಥೆಯ 1:18, 19) ನಿಮಗೆ ಉಡುಗೊರೆಯನ್ನು ಕೊಡುತ್ತಿರುವ ವ್ಯಕ್ತಿಗೆ ನೀವು ಹಬ್ಬಗಳನ್ನು ಆಚರಿಸುವುದಿಲ್ಲವೆಂದು ಗೊತ್ತಿರದೆ ಇರಬಹುದು ಅಥವಾ ಗೊತ್ತಿದ್ದರೂ ‘ನೀನು ಹಬ್ಬವನ್ನು ಮಾಡುವುದಿಲ್ಲ ಅಂತ ನನಗೆ ಗೊತ್ತು. ಇದನ್ನು ಹಬ್ಬಕ್ಕೆ ಅಂತ ಕೊಡುತ್ತಿಲ್ಲ’ ಅಂತ ಹೇಳಿ ಕೊಡಬಹುದು. ಈ ಎರಡು ಸಂದರ್ಭದಲ್ಲೂ ಅದನ್ನು ತೆಗೆದುಕೊಳ್ಳಬೇಕಾ, ಬೇಡವಾ ಎಂದು ನೀವು ನಿರ್ಧಾರ ಮಾಡಬೇಕಾಗುತ್ತದೆ. ನಿಮ್ಮ ನಿರ್ಧಾರ ಏನೇ ಆಗಿರಲಿ ನಿಮ್ಮ ಮನಸ್ಸಾಕ್ಷಿ ಶುದ್ಧವಾಗಿರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಮತ್ತು ಯೆಹೋವನ ನಡುವೆ ಇರುವ ಆಪ್ತ ಸಂಬಂಧಕ್ಕೆ ಹಾನಿಯಾಗದಿರಲಿ.

ನಿಮ್ಮ ಕುಟುಂಬದವರ ಭಾವನೆಗಳಿಗೆ ಬೆಲೆಕೊಡಿ

ಯಾರು ಯೆಹೋವನನ್ನು ಆರಾಧಿಸುತ್ತಾರೋ ಅವರು ಸಂತೋಷವಾಗಿರುತ್ತಾರೆ

16. ನಿಮ್ಮ ಕುಟುಂಬದವರು ಹಬ್ಬವನ್ನು ಮಾಡಲು ಬಯಸಿದರೆ ಏನು ಮಾಡುತ್ತೀರಿ?

16 ನಿಮ್ಮ ಕುಟುಂಬದವರು ಹಬ್ಬವನ್ನು ಮಾಡಲು ಬಯಸಿದರೆ ಏನು ಮಾಡುತ್ತೀರಿ? ಹಬ್ಬ ಮಾಡುವುದು ಬೇಡವೆಂದು ಅವರೊಂದಿಗೆ ಜಗಳಕ್ಕೆ ನಿಲ್ಲಬೇಡಿ. ನೆನಪಿರಲಿ ಹಬ್ಬ ಮಾಡಬೇಕಾ ಬೇಡವಾ ಎಂದು ನಿರ್ಧರಿಸುವ ಹಕ್ಕು ಅವರಿಗೂ ಇದೆ. ನಿಮ್ಮ ಭಾವನೆಗಳಿಗೆ ಅವರು ಬೆಲೆಕೊಡಬೇಕೆಂದು ನೀವು ಹೇಗೆ ಬಯಸುತ್ತೀರೋ ಅದೇ ರೀತಿಯಲ್ಲಿ ಅವರ ಭಾವನೆಗಳಿಗೆ ನೀವೂ ಬೆಲೆ ಕೊಡಬೇಕು. (ಮತ್ತಾಯ 7:12 ಓದಿ.) ಒಂದುವೇಳೆ ಹಬ್ಬದ ದಿನ ನೀವೂ ಅವರೊಂದಿಗೆ ಇರಬೇಕೆಂದು ನಿಮ್ಮ ಕುಟುಂಬದವರು ಬಯಸಿದರೆ ಆಗ ಏನು ಮಾಡುತ್ತೀರಿ? ಯಾವುದೇ ನಿರ್ಧಾರ ಮಾಡುವ ಮುಂಚೆ ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿ. ನಿಮಗೆ ಎದುರಾಗಿರುವ ಸಂದರ್ಭದ ಬಗ್ಗೆ ಯೋಚಿಸಿ, ಅದರ ಬಗ್ಗೆ ಸಂಶೋಧನೆ ಮಾಡಿ. ಯೆಹೋವ ದೇವರನ್ನು ಮೆಚ್ಚಿಸುವುದೇ ನಿಮ್ಮ ಗುರಿ ಎನ್ನುವುದನ್ನು ಮರೆಯಬೇಡಿ.

17. ಬೇರೆಯವರು ಹಬ್ಬ ಮಾಡುವುದನ್ನು ನೋಡಿ ನಿಮ್ಮ ಮಕ್ಕಳಿಗೆ ಬೇಜಾರಾಗದಂತೆ ಏನು ಮಾಡಬಹುದು?

17 ಬೇರೆಯವರು ಹಬ್ಬ ಮಾಡುವುದನ್ನು ನೋಡಿ ನಿಮ್ಮ ಮಕ್ಕಳು ಬೇಜಾರು ಮಾಡಿಕೊಳ್ಳದಂತೆ ನೀವೇನು ಮಾಡಬಹುದು? ಅವರನ್ನು ಖುಷಿಪಡಿಸಲು ಆಗಾಗ ಸಂದರ್ಭಗಳನ್ನು ಮಾಡಿಕೊಳ್ಳಬಹುದು. ಉಡುಗೊರೆ ಕೊಡುತ್ತೀರೆಂದು ಅವರು ಊಹಿಸಿರದ ಸಂದರ್ಭಗಳಲ್ಲಿ ಅವರಿಗೆ ಉಡುಗೊರೆಗಳನ್ನು ಕೊಡಬಹುದು. ನಿಮ್ಮ ಮಕ್ಕಳಿಗೆ ನೀವು ಕೊಡಬಹುದಾದ ಅತ್ಯುತ್ತಮವಾದ ಉಡುಗೊರೆಗಳೆಂದರೆ ಅದು ನಿಮ್ಮ ಸಮಯ ಮತ್ತು ಪ್ರೀತಿ.

ಸರಿಯಾದ ಆರಾಧನೆಯನ್ನೇ ಮಾಡಿ

18. ನಾವು ಕೂಟಗಳನ್ನು ಏಕೆ ತಪ್ಪಿಸಬಾರದು?

18 ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ನಾವು ತಪ್ಪಾದ ಆರಾಧನೆಗಳಿಂದ ಮತ್ತು ಅದಕ್ಕೆ ಸಂಬಂಧಪಟ್ಟ ಪದ್ಧತಿಗಳಿಂದ, ಹಬ್ಬಗಳಿಂದ ದೂರವಿರಬೇಕು. ಆದರೆ ಅಷ್ಟೇ ಸಾಕಾಗುವುದಿಲ್ಲ, ಸರಿಯಾದ ಆರಾಧನೆಯನ್ನು ಸಹ ಮಾಡಬೇಕು. ಅದಕ್ಕಾಗಿ ನಾವು ತಪ್ಪದೇ ಕೂಟಗಳಿಗೆ ಹಾಜರಾಗಬೇಕು. (ಇಬ್ರಿಯ 10:24, 25 ಓದಿ.) ನಮ್ಮ ಆರಾಧನೆಯ ಒಂದು ಪ್ರಾಮುಖ್ಯ ಭಾಗ ಕೂಟಗಳಾಗಿವೆ. (ಕೀರ್ತನೆ 22:22; 122:1) ಕೂಟಗಳಿಗೆ ಹೋದಾಗ ನಾವು ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸಬಹುದು.—ರೋಮನ್ನರಿಗೆ 1:12.

19. ಬೈಬಲ್‌ನಿಂದ ನೀವು ಕಲಿತಿರುವ ವಿಷಯಗಳನ್ನು ಬೇರೆಯವರಿಗೆ ಹೇಳುವುದು ಯಾಕೆ ಪ್ರಾಮುಖ್ಯ?

19 ಸರಿಯಾದ ಆರಾಧನೆಯನ್ನು ಮಾಡುವ ಮತ್ತೊಂದು ವಿಧ ಬೈಬಲಿನಿಂದ ನೀವು ಯಾವ ವಿಷಯಗಳನ್ನು ಕಲಿತಿದ್ದೀರೋ ಅದನ್ನು ಬೇರೆಯವರಿಗೆ ಹೇಳುವುದೇ ಆಗಿದೆ. ತುಂಬ ಜನರು ತಮ್ಮ ಸುತ್ತಮುತ್ತ ನಡೆಯುತ್ತಿರುವ ಕೆಟ್ಟ ವಿಷಯಗಳನ್ನು ನೋಡಿ ಬೇಸತ್ತು ಹೋಗಿದ್ದಾರೆ. (ಯೆಹೆಜ್ಕೇಲ 9:4) ಅಂಥವರ ಪರಿಚಯ ನಿಮಗೂ ಇರಬಹುದು. ಮುಂದೆ ನಮ್ಮೆಲ್ಲರಿಗೆ ಸಿಗಲಿರುವ ಉಜ್ವಲ ಜೀವನದ ಬಗ್ಗೆ ಅವರಿಗೆ ತಿಳಿಸಿ. ಯಾವಾಗ ನೀವು ಕ್ರೈಸ್ತ ಕೂಟಗಳಿಗೆ ಹಾಜರಾಗಲು, ನಿಮ್ಮ ನಂಬಿಕೆಗಳ ಬಗ್ಗೆ ಬೇರೆಯವರಿಗೆ ತಿಳಿಸಲು ಶುರುಮಾಡುತ್ತೀರೋ ಆಗ ನಿಮಗೆ ಹಬ್ಬಗಳನ್ನು ಮಾಡಬೇಕೆಂದು ಆಸೆಯೇ ಆಗುವುದಿಲ್ಲ. ನೀವು ಯಾವಾಗ ಸರಿಯಾದ ಆರಾಧನೆಯನ್ನು ಮಾಡಲು ಆರಿಸಿಕೊಳ್ಳುತ್ತೀರೋ ಆಗ ಸಂತೋಷವಾಗಿರುತ್ತೀರಿ ಮತ್ತು ಯೆಹೋವನು ನಿಮ್ಮೆಲ್ಲ ಪ್ರಯತ್ನಗಳನ್ನು ಖಂಡಿತ ಆಶೀರ್ವದಿಸುತ್ತಾನೆ.—ಮಲಾಕಿಯ 3:10.