ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 19

ಯೆಹೋವನಿಗೆ ಆಪ್ತರಾಗಿಯೇ ಇರಿ

ಯೆಹೋವನಿಗೆ ಆಪ್ತರಾಗಿಯೇ ಇರಿ

1, 2. ಇಂದು ನಮಗೆ ಯಾರಿಂದ ಮಾತ್ರ ಸಂರಕ್ಷಣೆ ಸಿಗುತ್ತದೆ?

ಊಹಿಸಿಕೊಳ್ಳಿ ನೀವು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ. ತಕ್ಷಣ ಆಕಾಶ ಕಪ್ಪುಗಟ್ಟಿ, ಬೆಚ್ಚಿಬೀಳಿಸುವಂಥ ಮಿಂಚು, ನಡುಗಿಸುವಂಥ ಗುಡುಗು ಆರಂಭವಾಗುತ್ತದೆ. ಜೊತೆಗೆ ಧಾರಾಕಾರವಾಗಿ ಮಳೆ ಸುರಿಯಲು ಶುರುವಾಗುತ್ತದೆ. ನೀವು ಇದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಒಂದು ಜಾಗವನ್ನು ಹುಡುಕುತ್ತೀರಿ. ಅಂತೂ ಇಂತೂ ನಿಮಗೆ ನಿಂತುಕೊಳ್ಳಲು ಒಂದು ಸರಿಯಾದ ನೆಲೆ ಸಿಕ್ಕುತ್ತದೆ. ಆಗ ನಿಮಗೆಷ್ಟು ಸಮಾಧಾನ ಅನಿಸುತ್ತದಲ್ವಾ?

2 ಇಂದು ನಾವು ಅಂಥದ್ದೇ ಪರಿಸ್ಥಿತಿಯಲ್ಲಿದ್ದೇವೆ. ಈ ಪ್ರಪಂಚದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಾ ಇದೆ. ಹಾಗಾಗಿ ‘ಇಂಥ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ನಾನು ಎಲ್ಲಿಗೆ ಹೋಗಲಿ’ ಎಂದು ನಿಮಗನಿಸಬಹುದು. ಇದಕ್ಕೆ ಉತ್ತರ ಕೀರ್ತನೆಗಾರನು ಹೇಳಿರುವ ಈ ಮಾತುಗಳಲ್ಲಿದೆ: “ನಾನು ಯೆಹೋವನಿಗೆ—ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.” (ಕೀರ್ತನೆ 91:2) ಅವನ ಈ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಈಗ ನಮಗಿರುವ ಸಮಸ್ಯೆಗಳಿಂದ ನಮ್ಮನ್ನು ಬಿಡಿಸುವ ಮತ್ತು ಮುಂದಕ್ಕೆ ಸಂತೋಷದ ಜೀವನವನ್ನು ಕೊಡುವ ಶಕ್ತಿ ಯೆಹೋವನಿಗೆ ಮಾತ್ರ ಇದೆ.

3. ಯೆಹೋವನ ಸಂರಕ್ಷಣೆಯನ್ನು ಪಡೆದುಕೊಳ್ಳಬೇಕಾದರೆ ನಾವೇನು ಮಾಡಬೇಕು?

3 ಯೆಹೋವನು ನಮಗೆ ಹೇಗೆ ಸಂರಕ್ಷಣೆ ನೀಡುತ್ತಾನೆ? ನಮ್ಮ ದೇವರಾದ ಯೆಹೋವನು ಅಂತಿಂಥ ದೇವರಲ್ಲ. ಆತ ತುಂಬಾ ಶಕ್ತಿಶಾಲಿ. ನಮಗೆ ಹಾನಿ ಮಾಡಲು ಬಯಸುವವರು ಯಾರೇ ಆಗಿರಲಿ ಆತನ ಶಕ್ತಿಯ ಮುಂದೆ ಸೋತು ಹೋಗುತ್ತಾರೆ. ನಮಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಆತನು ನಮಗೆ ಸಹಾಯ ಮಾಡುತ್ತಾನೆ. ಕೆಲವೊಂದು ಕಷ್ಟಗಳನ್ನು ನಾವು ಈಗ ಅನುಭವಿಸಬೇಕಾಗಿ ಬರಬಹುದು. ಆದರೆ ಆ ಕಷ್ಟಗಳನ್ನು ಮುಂದೆ ಯೆಹೋವನು ಸರಿಮಾಡಿಯೇ ಮಾಡುತ್ತಾನೆ ಎಂಬ ಭರವಸೆ ನಮಗಿದೆ. ನಾವು ಯೆಹೋವನಿಗೆ ಆಪ್ತರಾಗಿ ಉಳಿದರೆ ಮಾತ್ರ ನಮ್ಮ ಕಷ್ಟದ ಸಮಯದಲ್ಲಿ ಆತನು ನಮಗೆ ಸಹಾಯಮಾಡುತ್ತಾನೆ. ಹಾಗಾಗಿ ಬೈಬಲ್‌ ನಮಗೆ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂದು ಪ್ರೋತ್ಸಾಹಿಸುತ್ತದೆ. (ಯೂದ 21) ಆದರೆ ಇದನ್ನು ಮಾಡುವುದು ಹೇಗೆ?

ಯೆಹೋವನು ತೋರಿಸಿದ ಪ್ರೀತಿಗೆ ಸ್ಪಂದಿಸಿ

4, 5. ಯೆಹೋವನು ನಮಗೆ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ?

4 ಯೆಹೋವನಿಗೆ ನಾವು ಹತ್ತಿರವಾಗಬೇಕೆಂದರೆ ಆತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದು ಮೊದಲು ನಾವು ಅರ್ಥಮಾಡಿಕೊಳ್ಳಬೇಕು. ಯೆಹೋವನು ಪ್ರೀತಿಯಿಂದ ನಮಗೆ ಏನೆಲ್ಲಾ ಕೊಟ್ಟಿದ್ದಾನೆಂದು ಯೋಚಿಸಿ. ಆತನು ನಮಗೆ ಸುಂದರವಾದ ಭೂಮಿಯನ್ನು ಮತ್ತು ಅಂದವಾದ ಮರಗಿಡ, ಪ್ರಾಣಿಪಕ್ಷಿಗಳನ್ನು ಕೊಟ್ಟಿದ್ದಾನೆ. ನಮಗೆ ತಿನ್ನಲಿಕ್ಕಾಗಿ ರುಚಿರುಚಿಯಾದ ಆಹಾರವನ್ನು, ಕುಡಿಯಲು ಶುದ್ಧವಾದ ನೀರನ್ನು ಕೊಟ್ಟಿದ್ದಾನೆ. ಜೊತೆಗೆ ಬೈಬಲನ್ನು ಕೊಟ್ಟು ಅದರಲ್ಲಿ ತನ್ನ ಹೆಸರನ್ನು, ಗುಣಗಳನ್ನು ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಮುದ್ದು ಮಗನಾದ ಯೇಸುವನ್ನು ನಮಗಾಗಿ ಕೊಟ್ಟಿದ್ದಾನೆ. (ಯೋಹಾನ 3:16) ಯೇಸು ಭೂಮಿಗೆ ಬಂದು ತನ್ನ ಜೀವವನ್ನೇ ನಮಗಾಗಿ ಕೊಟ್ಟಿದ್ದರಿಂದ ಮುಂದೆ ನಮಗೆ ಬಹಳ ಸುಂದರವಾದ ಜೀವನ ಸಿಗಲಿದೆ.

5 ಯೆಹೋವನು ಸ್ವರ್ಗದಲ್ಲಿ ತನ್ನ ಸರ್ಕಾರವನ್ನು ಸ್ಥಾಪಿಸಿದ್ದಾನೆ. ಆ ಸರ್ಕಾರ ಬೇಗನೆ ಭೂಮಿಯಲ್ಲಿರುವ ಎಲ್ಲ ಕಷ್ಟಸಮಸ್ಯೆಗಳನ್ನು ತೆಗೆದುಹಾಕಲಿದೆ ಮತ್ತು ಇಡೀ ಭೂಮಿಯನ್ನು ಒಂದು ಸುಂದರ ತೋಟವನ್ನಾಗಿ ಮಾಡಲಿದೆ. ಆಗ ನಾವು ಸದಾಕಾಲಕ್ಕೂ ಶಾಂತಿ-ಸಮಾಧಾನದಿಂದ, ಸಂತೋಷದಿಂದ ಜೀವಿಸುತ್ತೇವೆ. (ಕೀರ್ತನೆ 37:29) ನಾವು ಈಗಲೂ ಹೇಗೆ ಉತ್ತಮವಾದ ಜೀವನವನ್ನು ಸಾಗಿಸುವುದು ಎಂದು ಹೇಳಿಕೊಡುವ ಮೂಲಕ ಯೆಹೋವನು ನಮಗೆ ಪ್ರೀತಿಯನ್ನು ತೋರಿಸಿದ್ದಾನೆ. ನಾವು ಆತನಿಗೆ ಪ್ರಾರ್ಥಿಸಬೇಕೆಂದು ಸಹ ಆತನು ಬಯಸುತ್ತಾನೆ. ಜೊತೆಗೆ ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳಲು ಯಾವಾಗಲೂ ಸಿದ್ಧನಾಗಿರುತ್ತಾನೆ. ಹೀಗೆ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ತನ್ನ ಪ್ರೀತಿಯನ್ನು ತೋರಿಸಿದ್ದಾನೆ.

6. ಯೆಹೋವನ ಪ್ರೀತಿಗೆ ನೀವು ಹೇಗೆ ಸ್ಪಂದಿಸಬೇಕು?

6 ಯೆಹೋವನ ಪ್ರೀತಿಗೆ ನೀವು ಹೇಗೆ ಸ್ಪಂದಿಸಬೇಕು? ಆತನು ನಿಮಗಾಗಿ ಏನೆಲ್ಲಾ ಮಾಡಿದ್ದಾನೋ ಅದಕ್ಕೆಲ್ಲ ನೀವು ಆತನಿಗೆ ಋಣಿಗಳಾಗಿದ್ದೀರಿ ಎಂದು ತೋರಿಸಿ. ದುಃಖದ ವಿಷಯವೇನೆಂದರೆ ಇವತ್ತು ಅನೇಕರು ಆತನು ತೋರಿಸಿದ ಪ್ರೀತಿಯನ್ನು ಮರೆತುಬಿಟ್ಟಿದ್ದಾರೆ. ಯೇಸು ಭೂಮಿಯಲ್ಲಿದ್ದಾಗ ಸಹ ಇಂಥ ಜನರಿದ್ದರು. ಒಮ್ಮೆ ಯೇಸು ಹತ್ತು ಮಂದಿ ಕುಷ್ಠರೋಗಿಗಳನ್ನು ವಾಸಿಮಾಡಿದನು. ಆದರೆ ಅವರಲ್ಲಿ ಒಬ್ಬನು ಮಾತ್ರ ಯೇಸುವಿನ ಸಹಾಯವನ್ನು ಮರೆಯದೆ ಆತನಿಗೆ ಧನ್ಯವಾದ ಹೇಳಿದನು. (ಲೂಕ 17:12-17) ಯೇಸುವಿನ ಸಹಾಯವನ್ನು ಮರೆಯದಿದ್ದ ಆ ವ್ಯಕ್ತಿಯಂತೆ ನಾವಿರಬೇಕು. ಯೆಹೋವನು ತೋರಿಸಿದ ಪ್ರೀತಿಗೆ ನಾವು ಯಾವಾಗಲೂ ಋಣಿಗಳಾಗಿರಬೇಕು.

7. ಯೆಹೋವನನ್ನು ನಾವು ಎಷ್ಟು ಪ್ರೀತಿಸಬೇಕು?

7 ನಾವು ಸಹ ಯೆಹೋವನನ್ನು ಪ್ರೀತಿಸಬೇಕು. ಯೆಹೋವನನ್ನು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ಮತ್ತು ಪೂರ್ಣ ಮನಸ್ಸಿನಿಂದ ಪ್ರೀತಿಸಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. (ಮತ್ತಾಯ 22:37 ಓದಿ.) ಯೇಸು ಹೇಳಿದ ಈ ಮಾತಿನ ಅರ್ಥವೇನಾಗಿತ್ತು?

8, 9. ಯೆಹೋವನನ್ನು ಪ್ರೀತಿಸುತ್ತೇವೆಂದು ನಾವು ಹೇಗೆ ತೋರಿಸಬಹುದು?

8 ‘ನಾನು ಯೆಹೋವನನ್ನು ತುಂಬ ಪ್ರೀತಿಸುತ್ತೇನೆ’ ಎಂದು ಹೇಳಿಬಿಟ್ಟರೆ ಸಾಕಾ? ಖಂಡಿತ ಇಲ್ಲ. ನಾವು ಯೆಹೋವನನ್ನು ಪೂರ್ಣ ಹೃದಯ, ಪೂರ್ಣ ಪ್ರಾಣ ಮತ್ತು ಪೂರ್ಣ ಮನಸ್ಸಿನಿಂದ ಪ್ರೀತಿಸುವುದಾದರೆ ಅದನ್ನು ನಾವು ನಮ್ಮ ನಡೆನುಡಿಯಲ್ಲಿ ತೋರಿಸುತ್ತೇವೆ. (ಮತ್ತಾಯ 7:16-20) ನಾವು ಯೆಹೋವನನ್ನು ಪ್ರೀತಿಸುವುದಾದರೆ ಆತನ ಆಜ್ಞೆಗಳ ಪ್ರಕಾರ ನಡೆದುಕೊಳ್ಳುತ್ತೇವೆಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ಯೆಹೋವನು ಹೇಳಿದಂತೆ ನಡೆದುಕೊಳ್ಳಲು ನಮಗೆ ಕಷ್ಟ ಆಗಬಹುದಾ? ಇಲ್ಲವೇ ಇಲ್ಲ. ಯಾಕೆಂದರೆ ಯೆಹೋವನ “ಆಜ್ಞೆಗಳು ಭಾರವಾದವುಗಳಲ್ಲ.”1 ಯೋಹಾನ 5:3 ಓದಿ.

9 ಯಾವಾಗ ನಾವು ಯೆಹೋವನು ಹೇಳಿದಂತೆ ನಡೆದುಕೊಳ್ಳುತ್ತೇವೋ ಆಗ ನಾವು ಸಂತೋಷವಾಗಿರುತ್ತೇವೆ ಮತ್ತು ನಮ್ಮ ಜೀವನದಲ್ಲಿ ಸಂತೃಪ್ತಿ ಇರುತ್ತದೆ. (ಯೆಶಾಯ 48:17, 18) ಅದಕ್ಕಾಗಿ ನಾವು ಯೆಹೋವನಿಗೆ ಆಪ್ತರಾಗಿಯೇ ಇರಬೇಕು. ಬನ್ನಿ ಅದು ಹೇಗೆಂದು ನೋಡೋಣ.

ಯೆಹೋವನಿಗೆ ಆಪ್ತರಾಗುತ್ತಾ ಇರಿ

10. ನೀವು ಯಾಕೆ ಯೆಹೋವನ ಬಗ್ಗೆ ತಿಳಿದುಕೊಳ್ಳುತ್ತಲೇ ಇರಬೇಕು?

10 ನೀವು ಯೆಹೋವನ ಸ್ನೇಹಿತರಾದದ್ದು ಹೇಗೆ? ನೀವು ಬೈಬಲ್‌ ಅಧ್ಯಯನ ಮಾಡುವ ಮೂಲಕ ಯೆಹೋವನ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು, ಆತನೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿರಿ. ನಿಮ್ಮ ಮತ್ತು ಯೆಹೋವನ ಸ್ನೇಹವನ್ನು ಉರಿಯುತ್ತಿರುವ ಬೆಂಕಿಗೆ ಹೋಲಿಸಬಹುದು. ಬೆಂಕಿ ಉರಿಯುತ್ತಲೇ ಇರಬೇಕೆಂದರೆ ನಾವು ಅದಕ್ಕೆ ಇಂಧನವನ್ನು ಹಾಕಬೇಕು. ಅದೇ ರೀತಿಯಲ್ಲಿ ಯೆಹೋವನ ಮತ್ತು ನಿಮ್ಮ ಸ್ನೇಹ ಯಾವಾಗಲೂ ಉಳಿಯಬೇಕೆಂದರೆ ನೀವು ಆತನ ಬಗ್ಗೆ ತಿಳಿದುಕೊಳ್ಳುತ್ತಲೇ ಇರಬೇಕು.—ಜ್ಞಾನೋಕ್ತಿ 2:1-5.

ಬೆಂಕಿ ಉರಿಯುತ್ತಾ ಇರಲು ಹೇಗೆ ಇಂಧನ ಬೇಕೋ, ಹಾಗೆಯೇ ಯೆಹೋವನ ಮೇಲೆ ನಿಮಗಿರುವ ಪ್ರೀತಿ ತಣ್ಣಗಾಗದಿರಲು ಬೈಬಲನ್ನು ಅಧ್ಯಯನ ಮಾಡುತ್ತಾ ಇರಬೇಕು

11. ಬೈಬಲಿನ ಬೋಧನೆಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ?

11 ನೀವು ಬೈಬಲ್‌ ಅಧ್ಯಯನವನ್ನು ಮುಂದುವರಿಸುತ್ತಾ ಹೋದರೆ ಇನ್ನೂ ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಅವು ನಿಮ್ಮ ಮನಮುಟ್ಟುತ್ತವೆ. ಬೈಬಲ್‌ ಪ್ರವಾದನೆಗಳ ಬಗ್ಗೆ ಯೇಸು ತನ್ನ ಇಬ್ಬರು ಶಿಷ್ಯರಿಗೆ ವಿವರಿಸಿದಾಗ ಅದು ಅವರ ಮೇಲೆ ತುಂಬ ಪ್ರಭಾವ ಬೀರಿತು. ಅದು ನಮಗೆ ಅವರ ಈ ಮಾತಿನಿಂದ ಗೊತ್ತಾಗುತ್ತದೆ: “[ಯೇಸುವು] ದಾರಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದಾಗಲೂ ನಮಗೆ ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತಿದ್ದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?”ಲೂಕ 24:32.

12, 13. (ಎ) ಯೆಹೋವನ ಮೇಲಿರುವ ನಮ್ಮ ಪ್ರೀತಿಗೆ ಏನಾಗಬಹುದು? (ಬಿ) ನಮ್ಮ ಮತ್ತು ಯೆಹೋವನ ಸ್ನೇಹ ಹಚ್ಚಹಸುರಾಗಿಯೇ ಉಳಿಯಲು ನಾವೇನು ಮಾಡಬೇಕು?

12 ಯೇಸುವಿನ ಶಿಷ್ಯರಿಗೆ ಬೈಬಲಿನ ಪ್ರವಾದನೆಗಳು ಅರ್ಥವಾದಾಗ ಅದು ಅವರ ಹೃದಯವನ್ನು ಪ್ರಚೋದಿಸಿತು. ಹಾಗೆಯೇ ನೀವು ಬೈಬಲನ್ನು ಅರ್ಥಮಾಡಿಕೊಳ್ಳಲು ಶುರುಮಾಡಿದಾಗ ಆ ವಿಷಯಗಳು ನಿಮ್ಮನ್ನು ಯೆಹೋವನ ಬಗ್ಗೆ ತಿಳಿದುಕೊಳ್ಳುವಂತೆ ಮತ್ತು ಆತನನ್ನು ಪ್ರೀತಿಸುವಂತೆ ಪ್ರಚೋದಿಸಿದವು. ಆಗ ಆರಂಭವಾದ ಆ ನಿಮ್ಮ ಪ್ರೀತಿ ತಣ್ಣಗಾಗಿ ಹೋಗುವ ಸಾಧ್ಯತೆ ಇದೆ. ಹಾಗೆ ಯಾವತ್ತೂ ಆಗದಂತೆ ನೋಡಿಕೊಳ್ಳಿ.—ಮತ್ತಾಯ 24:12.

13 ನಿಮ್ಮ ಮತ್ತು ಯೆಹೋವನ ಸ್ನೇಹ ಒಂದುಸಲ ಬೆಳೆದ ಮೇಲೆ, ಆ ಸ್ನೇಹ ಹಾಗೇ ಹಚ್ಚಹಸುರಾಗಿ ಉಳಿಯಲು ನೀವು ಪ್ರಯತ್ನ ಹಾಕುತ್ತಾ ಇರಬೇಕು. ನೀವು ಯೆಹೋವನ ಬಗ್ಗೆ, ಯೇಸುವಿನ ಬಗ್ಗೆ ಕಲಿಯುತ್ತಾ ಇರಬೇಕು. ಕಲಿತ ಆ ವಿಷಯಗಳ ಬಗ್ಗೆ ಆಲೋಚಿಸಬೇಕು, ಅದನ್ನು ನಿಮ್ಮ ಜೀವನದಲ್ಲಿ ಹೇಗೆ ಪಾಲಿಸಬಹುದೆಂದು ಸಹ ಯೋಚಿಸಬೇಕು. (ಯೋಹಾನ 17:3) ನೀವು ಬೈಬಲನ್ನು ಓದಿದಾಗ ಮತ್ತು ಅದನ್ನು ಅಧ್ಯಯನ ಮಾಡಿದಾಗ ಹೀಗೆ ಆಲೋಚಿಸಿ: ‘ನಾನು ಓದಿದ ವಿಷಯ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ? ಯೆಹೋವನನ್ನು ಪೂರ್ಣ ಹೃದಯ ಮತ್ತು ಪೂರ್ಣ ಪ್ರಾಣದಿಂದ ಪ್ರೀತಿಸಲು ನನಗೆ ಇದರಲ್ಲಿ ಯಾವೆಲ್ಲ ಕಾರಣಗಳು ಸಿಗುತ್ತವೆ?’—1 ತಿಮೊಥೆಯ 4:15.

14. ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಕಾಪಾಡಿಕೊಳ್ಳಲು ಪ್ರಾರ್ಥನೆ ಹೇಗೆ ಸಹಾಯಮಾಡುತ್ತದೆ?

14 ನಿಮಗೊಬ್ಬ ಒಳ್ಳೇ ಸ್ನೇಹಿತನಿದ್ದರೆ, ನೀವು ಯಾವಾಗಲೂ ಅವನ ಹತ್ತಿರ ಮಾತಾಡುತ್ತಾ ಇರುತ್ತೀರಿ. ಹಾಗೆ ಮಾತಾಡಿದರೆ ನೀವು ನಿಮ್ಮ ಸ್ನೇಹವನ್ನು ಕಾಪಾಡಿಕೊಳ್ಳಲು ಸಾಧ್ಯ. ಅದೇ ರೀತಿಯಲ್ಲಿ ನಾವು ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಯಾವಾಗಲೂ ಮಾತಾಡುತ್ತಿದ್ದರೆ, ಆತನ ಮೇಲಿನ ನಮ್ಮ ಪ್ರೀತಿ ಗಾಢವಾಗಿಯೇ ಇರುತ್ತದೆ. (1 ಥೆಸಲೊನೀಕ 5:17 ಓದಿ.) ನಮ್ಮ ಪ್ರೀತಿಯ ತಂದೆಯಾದ ಯೆಹೋವನು ನಮಗೆ ಕೊಟ್ಟಿರುವ ಒಂದು ಅದ್ಭುತ ಉಡುಗೊರೆ ಪ್ರಾರ್ಥನೆ. ಆದರೆ ನಾವು ಪ್ರಾರ್ಥನೆಯನ್ನು ಬಾಯಿಪಾಠ ಮಾಡಿ ಅದನ್ನೇ ಪದೇ ಪದೇ ಹೇಳಬಾರದು. ಬದಲಿಗೆ ನಮ್ಮ ಹೃದಯದಲ್ಲಿ ಏನಿದೆಯೋ ಅದನ್ನೇ ಹೇಳಬೇಕು. (ಕೀರ್ತನೆ 62:8) ಯಾವಾಗ ನಾವು ಬೈಬಲ್‌ ಅಧ್ಯಯನವನ್ನು ಮುಂದುವರಿಸಿಕೊಂಡು ಹೋಗುತ್ತೇವೋ ಮತ್ತು ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇವೋ ಆಗಲೇ ನಾವು ಯೆಹೋವನ ಮೇಲಿನ ನಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳಲು ಸಾಧ್ಯ.

ಯೆಹೋವನ ಬಗ್ಗೆ ಬೇರೆಯವರಿಗೂ ತಿಳಿಸಿ

15, 16. ಸುವಾರ್ತೆ ಸಾರುವ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?

15 ನಾವು ಯೆಹೋವನಿಗೆ ಆಪ್ತರಾಗಿಯೇ ಉಳಿಯಬೇಕೆಂದರೆ ಬೈಬಲಿನಿಂದ ಕಲಿತಿರುವ ವಿಷಯಗಳನ್ನು ಬೇರೆಯವರಿಗೂ ತಿಳಿಸಬೇಕು. ಬೇರೆಯವರೊಂದಿಗೆ ನಾವು ಯೆಹೋವನ ಬಗ್ಗೆ ಮತ್ತು ಆತನು ಕಲಿಸಿರುವ ವಿಷಯಗಳ ಬಗ್ಗೆ ಮಾತಾಡುವುದು ನಿಜವಾಗಿಯೂ ನಮಗೊಂದು ಸುಯೋಗವಾಗಿದೆ. (ಲೂಕ 1:74, 75) ಜೊತೆಗೆ ಇದು ಯೇಸು ಕ್ರೈಸ್ತರಿಗೆ ಕೊಟ್ಟಿರುವ ಒಂದು ಜವಾಬ್ದಾರಿಯೂ ಆಗಿದೆ. ಹಾಗಾಗಿ ನಾವೆಲ್ಲರೂ ದೇವರ ಬಗ್ಗೆ ಮತ್ತು ಆತನ ರಾಜ್ಯದ ಬಗ್ಗೆ ಬೇರೆಯವರಿಗೆ ತಿಳಿಸಬೇಕು. ಇದನ್ನು ನೀವು ಈಗಾಗಲೇ ಮಾಡುತ್ತಿದ್ದೀರಾ?—ಮತ್ತಾಯ 24:14; 28:19, 20.

16 ಸುವಾರ್ತೆ ಸಾರುವ ಕೆಲಸವನ್ನು ಪೌಲನು ತುಂಬ ಅಮೂಲ್ಯವಾಗಿ ಕಂಡನು. ಹಾಗಾಗಿ ಅವನು ಅದನ್ನು “ನಿಕ್ಷೇಪ” ಎಂದು ಕರೆದನು. (2 ಕೊರಿಂಥ 4:7) ಯೆಹೋವನ ಬಗ್ಗೆ, ಭೂಮಿಯ ಮೇಲೆ ಆತನು ಮಾಡಲಿಕ್ಕಿರುವ ವಿಷಯಗಳ ಬಗ್ಗೆ ಇತರರಿಗೆ ತಿಳಿಸುವುದು ನೀವು ಮಾಡುವ ಕೆಲಸಗಳಲ್ಲೇ ಪ್ರಾಮುಖ್ಯವಾದ ಕೆಲಸವಾಗಿದೆ. ಇದು ಯೆಹೋವನ ಸೇವೆ ಮಾಡುವ ಒಂದು ಮಾರ್ಗವಾಗಿದೆ ಮತ್ತು ನೀವು ಯೆಹೋವನಿಗಾಗಿ ಏನು ಮಾಡುತ್ತೀರೋ ಅದಕ್ಕೆ ಆತನು ತುಂಬ ಬೆಲೆಕೊಡುತ್ತಾನೆ. (ಇಬ್ರಿಯ 6:10) ಸುವಾರ್ತೆ ಸಾರುವುದರಿಂದ ನಿಮಗೂ ಪ್ರಯೋಜನವಾಗುತ್ತದೆ, ಯಾರು ನಿಮಗೆ ಕಿವಿಗೊಡುತ್ತಾರೋ ಅವರಿಗೂ ಪ್ರಯೋಜನವಾಗುತ್ತದೆ. ಹೇಗೆಂದರೆ ನೀವೂ ನಿಮಗೆ ಕಿವಿಗೊಡುವವರೂ ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗುತ್ತೀರಿ ಮತ್ತು ಸಾವೇ ಇಲ್ಲದ ಜೀವನ ಪಡೆದುಕೊಳ್ಳುತ್ತೀರಿ. (1 ಕೊರಿಂಥ 15:58 ಓದಿ.) ಸುವಾರ್ತೆ ಸಾರುವುದರಲ್ಲಿ ಸಿಗುವಷ್ಟು ಸಂತೋಷ, ಸಂತೃಪ್ತಿ ಬೇರೆ ಯಾವ ಕೆಲಸದಲ್ಲೂ ಸಿಗುವುದಿಲ್ಲ!

17. ಸಾರುವ ಕೆಲಸವನ್ನು ಏಕೆ ತುರ್ತಾಗಿ ಮಾಡಬೇಕಾಗಿದೆ?

17 ಸಾರುವ ಕೆಲಸವನ್ನು ನಾವು ತುಂಬ ತುರ್ತಾಗಿ ಮಾಡಬೇಕಾಗಿದೆ. ಹಾಗಾಗಿ ನಾವು ‘ಅನುಕೂಲವಾದ ಸಮಯದಲ್ಲಿಯೂ ತೊಂದರೆಯ ಸಮಯದಲ್ಲಿಯೂ ಸಾರಬೇಕು.’ (2 ತಿಮೊಥೆಯ 4:2) ಏಕೆಂದರೆ “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ,” ಅದು “ತಾಮಸವಾಗದು” ಅಂದರೆ ತಡವಾಗದು ಎಂದು ಬೈಬಲ್‌ ಹೇಳುತ್ತದೆ. ಹಾಗಾಗಿ ನಾವು ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲ ಜನರಿಗೆ ಹೇಳಲೇಬೇಕು. (ಚೆಫನ್ಯ 1:14; ಹಬಕ್ಕೂಕ 2:3) ಅತೀ ಬೇಗನೆ ಯೆಹೋವನು ಸೈತಾನನ ಈ ದುಷ್ಟ ವ್ಯವಸ್ಥೆಯನ್ನು ನಾಶಮಾಡುತ್ತಾನೆ. ಹಾಗಾಗಿ ನಾವು ಜನರನ್ನು ಬೇಗ ಬೇಗ ಎಚ್ಚರಿಸಬೇಕು, ಆಗಲೇ ಅವರು ಯೆಹೋವನನ್ನು ಆರಾಧಿಸುವ ಆಯ್ಕೆ ಮಾಡಲು ಸಾಧ್ಯ.

18. ನಾವು ಯೆಹೋವನನ್ನು ಆತನ ಜನರೊಂದಿಗೆ ಸೇರಿ ಯಾಕೆ ಆರಾಧಿಸಬೇಕು?

18 ನಾವು ಯೆಹೋವನನ್ನು ಆತನ ಜನರೊಂದಿಗೆ ಸೇರಿ ಆರಾಧಿಸಬೇಕು. ಇದು ಯೆಹೋವನ ಬಯಕೆ. “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ” ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 10:24, 25) ಹಾಗಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗಲು ನಾವು ನಮ್ಮ ಕೈಲಾದದ್ದನ್ನೆಲ್ಲಾ ಮಾಡಬೇಕು. ಈ ಕೂಟಗಳು ನಮಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಮತ್ತು ಬಲಪಡಿಸಲು ಅವಕಾಶ ಕೊಡುತ್ತವೆ.

19. ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರೀತಿಸಲು ಯಾವುದು ನಮಗೆ ಸಹಾಯಮಾಡುತ್ತದೆ?

19 ನೀವು ಕೂಟಗಳಿಗೆ ಹೋದಾಗ ಯೆಹೋವನನ್ನು ಆರಾಧಿಸಲು ಸಹಾಯ ಮಾಡುವಂಥ ಒಳ್ಳೇ ಸ್ನೇಹಿತರು ನಿಮಗೆ ಸಿಗುತ್ತಾರೆ. ಅಲ್ಲಿ ನಿಮಗೆ ಸಿಗುವ ಸಹೋದರ ಸಹೋದರಿಯರು ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿರುತ್ತಾರೆ ಮತ್ತು ನಿಮ್ಮಂತೆಯೇ ಯೆಹೋವನನ್ನು ಆರಾಧಿಸಲು ತಮ್ಮಿಂದ ಆಗುವುದೆಲ್ಲವನ್ನು ಮಾಡುತ್ತಾರೆ. ಆದರೆ ಅವರಿಂದಲೂ ತಪ್ಪುಗಳು ಆಗುತ್ತವೆ. ಹಾಗಾಗಿ ಅವರು ನಿಮ್ಮ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರೆ ಅವರನ್ನು ಕ್ಷಮಿಸಿರಿ. (ಕೊಲೊಸ್ಸೆ 3:13 ಓದಿ.) ಯಾವಾಗಲೂ ಅವರಲ್ಲಿರುವ ಒಳ್ಳೆಯ ಗುಣಗಳ ಕಡೆಗೆ ಗಮನಹರಿಸಿ. ಹಾಗೆ ಮಾಡುವಾಗ ನಿಮಗೆ ಅವರನ್ನು ಪ್ರೀತಿಸಲು ಆಗುತ್ತದೆ. ಇದರಿಂದ ನೀವು ಯೆಹೋವನಿಗೆ ಇನ್ನಷ್ಟು ಆಪ್ತರಾಗುತ್ತೀರಿ.

ವಾಸ್ತವವಾದ ಜೀವನ

20, 21. “ವಾಸ್ತವವಾದ ಜೀವನ” ಎಂದರೇನು?

20 ನಾವೆಲ್ಲರೂ ಉತ್ತಮವಾದ ಜೀವನವನ್ನು ಪಡೆಯಬೇಕೆನ್ನುವುದು ಯೆಹೋವನ ಆಸೆ. ಆತನು ಮುಂದೆ ನಮಗೆ ಕೊಡಲಿರುವ ಜೀವನಕ್ಕೂ ಈಗ ನಾವು ಜೀವಿಸುತ್ತಿರುವ ಜೀವನಕ್ಕೂ ಬಹಳಷ್ಟು ವ್ಯತ್ಯಾಸವಿದೆಯೆಂದು ಬೈಬಲ್‌ ಕಲಿಸುತ್ತದೆ.

‘ವಾಸ್ತವವಾದ ಜೀವನವನ್ನು’ ನೀವು ಆನಂದಿಸಬೇಕು ಎನ್ನುವುದು ಯೆಹೋವನ ಇಷ್ಟ. ನಿಮಗೂ ಆ ಇಷ್ಟವಿದೆಯಾ?

21 ದೇವರ ರಾಜ್ಯದಲ್ಲಿ ನಾವು ಕೇವಲ 70, 80 ವರ್ಷಗಳಲ್ಲ ಸಾವೇ ಇಲ್ಲದೆ ಜೀವಿಸಲಿದ್ದೇವೆ. ಸುಂದರ ವನದಂತಾಗುವ ಭೂಮಿಯಲ್ಲಿ ನಾವು ಶಾಂತಿ-ನೆಮ್ಮದಿಯಿಂದ ಸಂತೋಷವಾಗಿ, ಆರೋಗ್ಯವಾಗಿ ಜೀವನವನ್ನು ಆನಂದಿಸಲಿದ್ದೇವೆ. ಅದನ್ನೇ ಬೈಬಲ್‌ “ವಾಸ್ತವವಾದ ಜೀವನ” ಅಂದರೆ ‘ನಿಜವಾದ ಜೀವನ’ ಎಂದು ಕರೆಯುತ್ತದೆ. ಆ ಜೀವನವನ್ನು ಕೊಡುತ್ತೇನೆಂದು ಯೆಹೋವನು ನಮಗೆ ಮಾತುಕೊಟ್ಟಿದ್ದಾನೆ. ಆದರೆ ಅದನ್ನು ನಾವು “ಭದ್ರವಾಗಿ ಹಿಡಿಯುವಂತಾಗಲು” ಅಂದರೆ ಕಳೆದುಕೊಳ್ಳದೆ ಇರಲು ನಮ್ಮ ಕೈಲಾಗುವ ಪ್ರಯತ್ನವನ್ನೆಲ್ಲ ಈಗಲೇ ಮಾಡಬೇಕು.—1 ತಿಮೊಥೆಯ 6:12, 19.

22. (ಎ) “ವಾಸ್ತವವಾದ ಜೀವನವನ್ನು” ಕಳೆದುಕೊಳ್ಳದೆ ಇರಲು ನಾವೇನು ಮಾಡಬೇಕು? (ಬಿ) ನಾವೇನೋ ಸಾಧಿಸಿದ್ದಕ್ಕೆ ‘ವಾಸ್ತವವಾದ ಜೀವನ’ ನಮಗೆ ಸಿಗುತ್ತದಾ? ವಿವರಿಸಿ.

22 “ವಾಸ್ತವವಾದ ಜೀವನವನ್ನು” ಕಳೆದುಕೊಳ್ಳದೆ ಇರಲು ನಾವೇನು ಮಾಡಬೇಕು? ‘ಒಳ್ಳೇದನ್ನು ಮಾಡುತ್ತಾ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಬೇಕು.’ (1 ತಿಮೊಥೆಯ 6:18) ಇದರರ್ಥ ಬೈಬಲಿನಿಂದ ನಾವು ಏನನ್ನು ಕಲಿಯುತ್ತೇವೋ ಅದರಂತೆ ನಡೆದುಕೊಳ್ಳಬೇಕು. ನಾವೇನೋ ಸಾಧಿಸಿದ್ದಕ್ಕೆ ಬಹುಮಾನವಾಗಿ ನಮಗೆ ವಾಸ್ತವವಾದ ಜೀವನವು ಸಿಗುತ್ತಿಲ್ಲ. ಬದಲಿಗೆ ಈ ವರವನ್ನು ನಮ್ಮ ಪ್ರೀತಿಯ ತಂದೆಯಾದ ಯೆಹೋವನು ನಮಗೆ ಉಚಿತವಾಗಿ ಕೊಡುತ್ತಿದ್ದಾನೆ. ಇದು ದೇವರು ನಮಗೆ ತೋರಿಸಿದ ‘ಅಪಾತ್ರ ದಯೆಯಾಗಿದೆ.’—ರೋಮನ್ನರಿಗೆ 5:15.

23. ಸರಿಯಾದ ಆಯ್ಕೆಗಳನ್ನು ನೀವು ಈಗಲೇ ಯಾಕೆ ಮಾಡಬೇಕು?

23 ‘ನಾನು ದೇವರನ್ನು ಆತನು ಒಪ್ಪುವಂಥ ರೀತಿಯಲ್ಲೇ ಆರಾಧಿಸುತ್ತಿದ್ದೇನಾ?’ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ನಿಮಗೆ ಅನಿಸಿದರೆ, ಈಗಲೇ ಆ ಬದಲಾವಣೆಗಳನ್ನು ಮಾಡಿಕೊಳ್ಳಿ. ನಾವು ಯೆಹೋವನ ಮೇಲೆ ಆತುಕೊಂಡರೆ ಮತ್ತು ಆತನು ಹೇಳಿದಂತೆ ನಡೆಯಲು ನಮ್ಮಿಂದ ಆಗುವುದೆಲ್ಲವನ್ನು ಮಾಡಿದರೆ ಆತನು ನಮ್ಮ ಸಂರಕ್ಷಕನಾಗಿ ಇರುತ್ತಾನೆ. ಸೈತಾನನ ಈ ದುಷ್ಟ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಆತನು ತನ್ನ ನಂಬಿಗಸ್ತ ಸೇವಕರನ್ನು ಸಂರಕ್ಷಿಸುತ್ತಾನೆ. ನಂತರ ತಾನು ಕೊಟ್ಟ ಮಾತಿನಂತೆ ನಮಗೆ ಸುಂದರವಾದ ಭೂಮಿಯಲ್ಲಿ ಸಾವೇ ಇಲ್ಲದ ಜೀವನವನ್ನು ಕೊಡುತ್ತಾನೆ. ಹಾಗಾಗಿ ಈಗಲೇ ಸರಿಯಾದ ಆಯ್ಕೆಗಳನ್ನು ಮಾಡಿ. ಆಗ “ವಾಸ್ತವವಾದ ಜೀವನ” ನಿಮ್ಮದಾಗುತ್ತದೆ.