ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 6

ಒತ್ತಡ ಹಾಕಿದಾಗ ಏನು ಮಾಡಲಿ?

ಒತ್ತಡ ಹಾಕಿದಾಗ ಏನು ಮಾಡಲಿ?

ಪ್ರಾಮುಖ್ಯವೇಕೆ?

ನಿಮ್ಮ ಜೀವನ ನಿಮ್ಮ ಕೈಯಲ್ಲಿ ಇರಬೇಕಂದರೆ, ಒತ್ತಡಕ್ಕೆ ಬಗ್ಗಬಾರದು. ಒಂದುವೇಳೆ ಬಗ್ಗಿದರೆ ನಿಮ್ಮ ಜೀವನ ಬೇರೆಯವರ ಕೈಯಲ್ಲಿದೆ ಅಂತ ಅರ್ಥ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ತನ್ನ ಸ್ಕೂಲಿನಲ್ಲಿ ಓದುತ್ತಿರೋ ಇಬ್ಬರು ಮಕ್ಕಳು ನಡೆದುಕೊಂಡು ಬರುವುದನ್ನು ನೋಡುತ್ತಾ ಇದ್ದರೆ ಬ್ರಾಯನ್‍ನ ಎದೆ ಡವಡವ ಅಂತಿದೆ. ಯಾಕಂದರೆ ಸಿಗರೇಟ್‌ ಸೇದು ಅಂತ ಅವರು ಅವನ ಹಿಂದೆ ಬಿದ್ದಿದ್ದಾರೆ. ಹೀಗೆ ಮಾಡುತ್ತಿರೋದು ಈ ವಾರದಲ್ಲಿ ಇದು ಮೂರನೇ ಸಲ.

ಅವರಲ್ಲಿ ಒಬ್ಬ:

“ಯಾವಾಗಲೂ ಒಬ್ಬನೇ ಇರುತ್ತೀಯಲ್ಲಾ. ನಿನ್ನ ಜೊತೆನೇ ಇರೋ ಒಬ್ಬ ಫ್ರೆಂಡ್‍ನ ಪರಿಚಯ ಮಾಡಿಸ್ತೀನಿ”

ಅಂತ ಹೇಳಿ ಕಣ್ಣುಹೊಡೆದು ತನ್ನ ಜೇಬಿನಿಂದ ಏನೋ ತೆಗೆದು ಬ್ರಾಯನ್‌ಗೆ ಕೊಡುತ್ತಾನೆ.

ನೋಡಿದ್ರೆ ಸಿಗರೇಟು!! ಇದನ್ನು ನೋಡಿ ಬ್ರಾಯನ್‍ನ ಹೃದಯ ಇನ್ನೂ ಜೋರಾಗಿ ಬಡಿದುಕೊಳ್ಳೋಕೆ ಶುರುಮಾಡುತ್ತೆ.

“ಬೇಡ, ಸೇದಲ್ಲ ಅಂತ ಅವತ್ತೇ ಹೇಳಿದ್ನಲ್ಲ . . .” ಅಂತ ಬ್ರಾಯನ್‌ ಹೇಳುತ್ತಿರುವಾಗಲೇ,

ಮಧ್ಯೆ ಬಾಯಿಹಾಕಿ ಇನ್ನೊಬ್ಬ ಹುಡುಗ “ಎಂಥಾ ಹೆದರು ಪುಕ್ಕಲನೋ ನೀನು” ಅನ್ನುತ್ತಾನೆ.

ಅದಕ್ಕೆ ಬ್ರಾಯನ್‌ ಧೈರ್ಯವಾಗಿ “ನಾನ್‌ ಹೆದರುಪುಕ್ಕಲ ಅಲ್ಲ” ಅನ್ನುತ್ತಾನೆ.

ಆಗ ಆ ಹುಡುಗ ಬ್ರಾಯನ್‍ನ ಹೆಗಲ ಮೇಲೆ ಕೈ ಹಾಕಿಕೊಂಡು “ಒಂದೇ ಒಂದು ಸಲ ಸೇದೋ” ಅಂತ ಪುಸಲಾಯಿಸುತ್ತಾನೆ.

ಸಿಗರೇಟ್‌ ಹಿಡಿದಿದ್ದ ಹುಡುಗ ಅದನ್ನು ಬ್ರಾಯನ್‍ನ ಮುಖದ ಹತ್ತಿರ ತಂದು “ಯಾಕೋ ಭಯಪಡ್ತಿದ್ದೀಯಾ, ನಾವು ಯಾರಿಗೂ ಹೇಳಲ್ಲ” ಅನ್ನುತ್ತಾನೆ.

ಬ್ರಾಯನ್‍ನ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ಬ್ರಾಯನ್‌ಗೆ ಒತ್ತಡ ಹಾಕಿದವರು ಯಾಕೆ ಹೀಗೆ ಮಾಡುತ್ತಿದ್ದಾರೆ? ಸಿಗರೇಟು ಸೇದುವುದನ್ನು ಅವರಾಗಿಯೇ ಕಲಿತರಾ? ಬೇರೆಯವರ ಒತ್ತಡಕ್ಕೆ ಮಣಿದು ಈ ಕೆಟ್ಟ ಚಟಕ್ಕೆ ಬಲಿ ಬಿದ್ದಿರಬಹುದು. ಬೇರೆಯವರು ತಮ್ಮನ್ನು ಇಷ್ಟಪಡಬೇಕು ಅಂತ ಅವರು ಹೇಳಿದ ಹಾಗೆಲ್ಲ ಮಾಡಿರಬಹುದು.

ಇದೇ ಒತ್ತಡ ನಿಮಗೆ ಬಂದಾಗ ಏನು ಮಾಡುತ್ತೀರಾ?

  1. ಮೊದಲೇ ಹುಷಾರಾಗಿರಿ

    “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 22:3.

    ಕೆಲವೊಮ್ಮೆ ಒತ್ತಡಗಳು ಬರುವ ಮುಂಚೆನೇ ನಮಗೆ ಗೊತ್ತಾಗುತ್ತೆ. ಉದಾಹರಣೆಗೆ, ಮಕ್ಕಳು ಗುಂಪಾಗಿ ನಿಂತುಕೊಂಡು ಸಿಗರೇಟ್‌ ಸೇದುತ್ತಿರೋದನ್ನು ನೀವು ನೋಡುತ್ತೀರ ಅಂತ ಇಟ್ಟುಕೊಳ್ಳಿ. ಅಲ್ಲಿಗೆ ಹೋದರೆ ನಿಮಗೂ ಸೇದಲು ಹೇಳಬಹುದು. ಈ ರೀತಿ ಒತ್ತಡ ಹಾಕಿದರೆ ಏನು ಮಾಡಬೇಕು ಅಂತ ಮೊದಲೇ ಯೋಚನೆ ಮಾಡಿ, ಹುಷಾರಾಗಿರಿ.

  2. ಚೆನ್ನಾಗಿ ಯೋಚಿಸಿ

    “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ” ಅಂತ ಬೈಬಲ್ ಹೇಳುತ್ತೆ.—1 ಪೇತ್ರ 3:16.

    ಅವರು ಹೇಳಿದ್ದನ್ನು ಕೇಳಿ ‘ಛೇ, ಎಂಥಾ ತಪ್ಪು ಮಾಡಿಬಿಟ್ಟೆ ಅಂತ ಮುಂದಕ್ಕೆ ಪಶ್ಚಾತ್ತಾಪಪಡಬೇಕಾಗಿ ಬರುತ್ತಾ?’ ಅಂತ ನಿಮ್ಮನ್ನು ನೀವೇ ಕೇಳಿಕೊಳ್ಳಿ. ಯಾಕೆಂದರೆ ಫ್ರೆಂಡ್ಸ್‌ ಹೇಳಿದಂತೆ ಮಾಡಿ ಅವರನ್ನು ಆ ಸಮಯಕ್ಕೆ ಮೆಚ್ಚಿಸಬಹುದು ನಿಜ. ಆದರೆ ಆಮೇಲೆ ನಿಮಗೆ ಹೇಗನಿಸುತ್ತೆ? ನಿಮ್ಮ ಕ್ಲಾಸ್‌ಮೇಟ್ಸ್‌ ಅನ್ನು ಮೆಚ್ಚಿಸಬೇಕು ಅಂತ ನಿಮ್ಮಲ್ಲಿರುವ ಒಳ್ಳೇ ಗುಣಗಳನ್ನೇ ಬಿಟ್ಟುಕೊಡ್ತೀರಾ?—ವಿಮೋಚನಕಾಂಡ 23:2.

  3. ಒಳ್ಳೇ ತೀರ್ಮಾನ ಮಾಡಿ

    “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 14:15.

    ಇವತ್ತಲ್ಲ ನಾಳೆ ನಮ್ಮ ತೀರ್ಮಾನಗಳನ್ನು ನಾವೇ ಮಾಡಬೇಕು. ಅದರ ಪರಿಣಾಮಗಳನ್ನೂ ಅನುಭವಿಸಬೇಕು. ಒಳ್ಳೇ ತೀರ್ಮಾನಗಳನ್ನು ಮಾಡಿದ ಯೋಬ, ಯೋಸೇಫ, ಯೇಸುವಿನ ಬಗ್ಗೆ ಬೈಬಲ್‌ ಹೇಳುತ್ತೆ. ಹಾಗೇ, ಕೆಟ್ಟ ತೀರ್ಮಾನಗಳನ್ನು ಮಾಡಿದ ಕಾಯಿನ, ಏಸಾವ, ಯೂದನ ಬಗ್ಗೆನೂ ಹೇಳುತ್ತೆ. ನೀವು ಎಂಥಾ ತೀರ್ಮಾನ ಮಾಡುತ್ತೀರ?

“ಒಳ್ಳೆಯದನ್ನು ಮಾಡು” ಎನ್ನುತ್ತೆ ಬೈಬಲ್‌. (ಕೀರ್ತನೆ 37:3) ಮುಂದೆ ಏನಾಗುತ್ತೆ ಅಂತ ಮೊದಲೇ ಯೋಚನೆ ಮಾಡಿ ಏನೇ ಬಂದರೂ ಒತ್ತಡಕ್ಕೆ ಮಣಿಯೋದಿಲ್ಲ ಅಂತ ದೃಢ ಮನಸ್ಸು ಮಾಡಿ. ಅಷ್ಟೇ ಅಲ್ಲ ಅದನ್ನು ಧೈರ್ಯವಾಗಿ ಹೇಳಿ. ಹೀಗೆ ಮಾಡಿದರೆ ಒತ್ತಡವನ್ನೂ ಜಯಿಸಬಹುದು, ಒಳ್ಳೇ ಫಲಿತಾಂಶನೂ ಸಿಗುತ್ತದೆ.

ಧೈರ್ಯವಾಗಿ ಹೇಗೆ ಹೇಳೋದು ಅಂತ ಚಿಂತೆನಾ? ಅದರ ಬಗ್ಗೆ ದೊಡ್ಡ ಭಾಷಣ ಬಿಗಿಯಬೇಕು ಅಂತೇನಿಲ್ಲ. ನೇರವಾಗಿ ‘ಇಲ್ಲ’ ಅಥವಾ ‘ಬೇಡ’ ಅಂತ ಹೇಳಿದರೂ ಸಾಕು. ಅಥವಾ ಹೀಗೂ ಹೇಳಬಹುದು:

  • “ನನ್ನನ್ನ ಸುಮ್ಮನೆ ಬಿಟ್ಟುಬಿಡಿ”

  • “ನಾನು ಇದನ್ನೆಲ್ಲ ಮಾಡಲ್ಲ”

  • “ನಾನು ಇಂಥ ವಿಷಯಗಳಿಂದ ದೂರ ಇರ್ತೀನಿ ಅಂತ ನಿಮಗೇ ಚೆನ್ನಾಗಿ ಗೊತ್ತಲ್ಲ!”

ನೀವು ಒತ್ತಡ ಬಂದಾಗ ಇಲ್ಲ ಅಥವಾ ಬೇಡ ಅಂತ ತಕ್ಷಣ ದೃಢವಾಗಿ ಹೇಳಬೇಕು ಅಂತ ಯಾವಾಗಲೂ ನೆನಪಿಡಿ. ಹೀಗೆ ಮಾಡಿದರೆ, ‘ಬಂದ ದಾರಿಗೆ ಸುಂಕ ಇಲ್ಲ’ ಅಂತ ವಾಪಸ್ಸು ಹೋಗುತ್ತಾರೆ!

ಅವಮಾನ ಮಾಡಿದರೆ . . .

ನೀವು ಒತ್ತಡಕ್ಕೆ ಮಣಿದರೆ ರೋಬೋಟ್‌ ಥರ ಇನ್ನೊಬ್ಬರ ಕೈಗೊಂಬೆ ಆಗಿ ಬಿಡುತ್ತೀರ

ಸ್ಕೂಲಲ್ಲಿ ಮಕ್ಕಳು ನಿಮ್ಮನ್ನು ಗೇಲಿ ಮಾಡಿದರೆ ಏನು ಮಾಡುತ್ತೀರಾ? “ನೀನು ಹೆದರು ಪುಕ್ಕಲನಾ” ಅಂತ ಕೇಳಿದರೆ ಏನು ಹೇಳುತ್ತೀರಾ? ಇದನ್ನೇ ಒತ್ತಡ ಅನ್ನೋದು ಅಂತ ಮೊದಲು ಅರ್ಥಮಾಡಿಕೊಳ್ಳಿ. ಆಮೇಲೆ ಹೇಗೆ ಇದಕ್ಕೆ ಪ್ರತಿಕ್ರಿಯಿಸುವುದು ಅಂತ ಯೋಚನೆ ಮಾಡಿ. ಈಗ ನಿಮ್ಮ ಮುಂದೆ ಎರಡು ಆಯ್ಕೆ ಇದೆ:

  • ಒಪ್ಪಿಕೊಳ್ಳುವುದು. (“ಹೌದು, ನೀವು ಹೇಳಿದ ಹಾಗೆ ನಾನು ಹೆದರು ಪುಕ್ಕಲನೇ!” ಅಂತ ಹೇಳಿ ಆಮೇಲೆ ನಿಮ್ಮ ಕಾರಣವನ್ನು ಹೇಳಿ.)

  • ನೀವೇ ಅವರ ಮೇಲೆ ಒತ್ತಡ ಹಾಕುವುದು. ಅವರು ಹೇಳಿದ್ದನ್ನು ನೀವು ಯಾಕೆ ಮಾಡುತ್ತಿಲ್ಲ ಅಂತ ಕಾರಣ ಹೇಳಿ, ಆಮೇಲೆ ಜಾಣತನದಿಂದ ಮಾತಾಡಿ. (“ದಡ್ಡರ ಥರ ನೀವೂ ಸಿಗರೇಟ್‌ ಸೇದ್ತೀರಾ ಅಂತ ಅಂದುಕೊಂಡಿರಲಿಲ್ಲ!!”)

ಇಷ್ಟು ಆದ ಮೇಲೂ ನಿಮ್ಮನ್ನು ಇನ್ನೂ ಅವಮಾನ ಮಾಡಿದರೆ ಆ ಜಾಗವನ್ನು ಬಿಟ್ಟು ಬಂದುಬಿಡಿ! ಅಲ್ಲಿ ಜಾಸ್ತಿ ಹೊತ್ತು ಇದ್ದರೆ ನಿಮ್ಮ ಮೇಲೆ ಒತ್ತಡ ಇನ್ನೂ ಜಾಸ್ತಿ ಆಗುತ್ತೆ. ಹೀಗೆ ಮಾಡಿದರೆ ನೀವು ಬೇರೆಯವರ ಕೈಗೊಂಬೆ ಆಗಲು ಇಷ್ಟಪಡಲ್ಲ ಅಂತ ತೋರಿಸಿಕೊಡುತ್ತೀರಿ.

ಒತ್ತಡ ಇದ್ದೇ ಇರುತ್ತೆ. ಅದನ್ನು ಬದಲಾಯಿಸುವುದು ನಿಮ್ಮ ಕೈಯಲ್ಲಿ ಇಲ್ಲ. ಆದರೆ ಒತ್ತಡ ಹಾಕುವವರಿಗೆ ನೀವು ಏನು ಹೇಳುತ್ತೀರಾ, ಯಾವ ತೀರ್ಮಾನ ಮಾಡುತ್ತೀರಾ ಅನ್ನೋದು ನಿಮ್ಮ ಕೈಯಲ್ಲಿದೆ. ಆಯ್ಕೆ ನಿಮ್ಮದು!—ಯೆಹೋಶುವ 24:15.