ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 1

ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು

ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು

ಯೆಹೋವ ದೇವರು ನಮ್ಮ ಸೃಷ್ಟಿಕರ್ತ. ನಮಗೆ ಕಾಣುವ, ಕಾಣದಿರುವ ಎಲ್ಲವನ್ನು ಸೃಷ್ಟಿಸಿದ್ದು ಆತನೇ. ಮೊದಲು ಆತನು ಅನೇಕಾನೇಕ ದೇವದೂತರನ್ನು ಸೃಷ್ಟಿಸಿದನು. ದೇವದೂತರು ಅಂದರೆ ಯಾರು ಗೊತ್ತಾ? ದೇವರನ್ನು ಹೇಗೆ ನೋಡಲು ಆಗುವುದಿಲ್ಲವೋ ಹಾಗೇ ಇವರನ್ನೂ ನೋಡಲು ಆಗುವುದಿಲ್ಲ. ದೇವರು ಸೃಷ್ಟಿಸಿದ ಮೊದಲ ದೇವದೂತ ದೇವರ ಸಹಾಯಕನಾದ. ದೇವರು ಸೂರ್ಯ, ಚಂದ್ರ, ನಕ್ಷತ್ರ, ಭೂಮಿ ಎಲ್ಲವನ್ನು ಸೃಷ್ಟಿಮಾಡುವಾಗ ಅವನು ದೇವರಿಗೆ ಸಹಾಯಮಾಡಿದನು. ದೇವರು ಸೃಷ್ಟಿಸಿದ ಅನೇಕ ಗ್ರಹಗಳಲ್ಲಿ ಈ ಸುಂದರ ಭೂಮಿಯು ನಮ್ಮ ಮನೆ ಆಯಿತು.

ನಂತರ ಯೆಹೋವನು ಮನುಷ್ಯರು ಮತ್ತು ಪ್ರಾಣಿಗಳಿಗಾಗಿ ಭೂಮಿಯನ್ನು ಸಿದ್ಧಮಾಡಿದನು. ಸೂರ್ಯನ ಬೆಳಕು ಭೂಮಿ ಮೇಲೆ ಬೀಳುವಂತೆ ಮಾಡಿದನು. ನಂತರ ಬೆಟ್ಟ, ನದಿ ಮತ್ತು ಸಾಗರವನ್ನು ಮಾಡಿದನು.

ಆಮೇಲೆ ಏನಾಯಿತು ಗೊತ್ತಾ? ಯೆಹೋವ ದೇವರು ‘ಹುಲ್ಲು, ಗಿಡ, ಮರಗಳು ಬೆಳೆಯಲಿ’ ಎಂದು ಹೇಳಿದನು. ಆಗ ಭೂಮಿಯಲ್ಲಿ ಬಗೆಬಗೆಯ ಗಿಡ, ಮರ, ಹಣ್ಣು-ಹಂಪಲು ಬೆಳೆಯಿತು. ಆಮೇಲೆ ಹಾರುವ, ಈಜುವ, ತೆವಳುವ, ಹರಿದಾಡುವ ಪ್ರಾಣಿಗಳನ್ನು ಸೃಷ್ಟಿಮಾಡಿದನು. ಪುಟ್ಟ ಇರುವೆಯಿಂದ ಹಿಡಿದು ಆನೆಯಂಥ ದೊಡ್ಡದೊಡ್ಡ ಪ್ರಾಣಿಗಳನ್ನೂ ದೇವರು ಸೃಷ್ಟಿಮಾಡಿದನು. ನಿನಗೆ ಯಾವ ಪ್ರಾಣಿ ತುಂಬ ಇಷ್ಟ?

ಆಮೇಲೆ ದೇವರು ಮೊದಲ ದೇವದೂತನಿಗೆ ‘ನಾವು ಮನುಷ್ಯರನ್ನು ಸೃಷ್ಟಿಮಾಡೋಣ’ ಎಂದನು. ಮನುಷ್ಯರಿಗೂ ಪ್ರಾಣಿಗಳಿಗೂ ತುಂಬ ವ್ಯತ್ಯಾಸ ಇದೆ. ದೇವರು ಮನುಷ್ಯರಿಗೆ ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಕೊಟ್ಟನು! ಅಲ್ಲದೇ ಮಾತಾಡುವ, ಯೋಚಿಸುವ, ನಗುವ, ಪ್ರಾರ್ಥಿಸುವ ಸಾಮರ್ಥ್ಯವನ್ನೂ ಕೊಟ್ಟನು. ಅಷ್ಟೇ ಅಲ್ಲ, ಇನ್ನು ಮುಂದೆ ಇಡೀ ಭೂಮಿಯನ್ನು, ಎಲ್ಲಾ ಪ್ರಾಣಿ-ಪಕ್ಷಿಗಳನ್ನು ನೋಡಿಕೊಳ್ಳುವ ಕೆಲಸವನ್ನೂ ಕೊಟ್ಟನು. ದೇವರು ಸೃಷ್ಟಿಮಾಡಿದ ಮೊದಲ ಮನುಷ್ಯ ಯಾರು ಅಂತ ಗೊತ್ತಾ? ನೋಡೋಣಾ?

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”—ಆದಿಕಾಂಡ 1:1