ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 3

ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ

ಆದಾಮ-ಹವ್ವ ದೇವರ ಮಾತನ್ನು ಕೇಳಲಿಲ್ಲ

ಒಂದಿನ ಹವ್ವ ಒಬ್ಬಳೇ ಇದ್ದಾಗ ಒಂದು ಹಾವು ಅವಳ ಜೊತೆ ಮಾತಾಡಿತು. ಅದು ‘ನೀವು ಯಾವ ಮರದ ಹಣ್ಣನ್ನೂ ತಿನ್ನಬಾರದು ಅಂತ ದೇವರು ಹೇಳಿದ್ದಾನಂತೆ, ಅದು ನಿಜನಾ?’ ಎಂದು ಕೇಳಿತು. ಅದಕ್ಕೆ ಹವ್ವ ‘ಹಾಗೇನಿಲ್ಲ, ನಾವು ಎಲ್ಲಾ ಮರದ ಹಣ್ಣನ್ನು ತಿನ್ನಬಹುದು. ಆದರೆ ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರದು, ತಿಂದರೆ ಸಾಯುತ್ತೀರ ಅಂತ ದೇವರು ಹೇಳಿದ್ದಾನೆ’ ಎಂದಳು. ಅದಕ್ಕೆ ಹಾವು ‘ನೀವು ಖಂಡಿತ ಸಾಯಲ್ಲ. ಆ ಹಣ್ಣು ತಿಂದರೆ ನೀವು ದೇವರಂತೆ ಆಗುತ್ತೀರ’ ಎಂದಿತು. ಅದು ನಿಜನಾ? ಇಲ್ಲ, ಅದು ಶುದ್ಧಸುಳ್ಳು. ಆದರೆ ಹವ್ವ ಆ ಸುಳ್ಳನ್ನು ನಂಬಿದಳು. ಆ ಹಣ್ಣನ್ನು ನೋಡುತ್ತಾ ಇದ್ದಂತೆ ತಿನ್ನಬೇಕು ಎನ್ನುವ ಆಸೆ ಅವಳಲ್ಲಿ ಬೆಳೆಯಿತು. ಕೊನೆಗೆ ಆ ಹಣ್ಣನ್ನು ತಿಂದೇ ಬಿಟ್ಟಳು ಮತ್ತು ಆದಾಮನಿಗೂ ಕೊಟ್ಟಳು. ಆ ಹಣ್ಣು ತಿಂದರೆ ಸಾಯುತ್ತೇವೆ ಎಂದು ಆದಾಮನಿಗೆ ಗೊತ್ತಿದ್ದರೂ ಅವನು ತಿಂದುಬಿಟ್ಟ.

ಸಂಜೆ ಯೆಹೋವನು ಆದಾಮ-ಹವ್ವರಿಗೆ, ‘ಯಾಕೆ ಆ ಹಣ್ಣನ್ನು ತಿಂದಿರಿ’ ಎಂದು ಕೇಳಿದನು. ‘ಹವ್ವ ಕೊಟ್ಟಳು ತಿಂದೆ’ ಎಂದನು ಆದಾಮ. ‘ಹಾವು ಹೇಳಿತು ಅದಕ್ಕೆ ತಿಂದೆ’ ಎಂದಳು ಹವ್ವ. ಆದಾಮ ಹವ್ವ ದೇವರ ಮಾತನ್ನು ಕೇಳದೆ ತಪ್ಪು ಮಾಡಿದ್ದರಿಂದ ಆತನು ಅವರನ್ನು ತೋಟದಿಂದ ಹೊರಗೆ ಹಾಕಿದನು. ತೋಟದೊಳಗೆ ಅವರು ಯಾವತ್ತೂ ಬರದೇ ಇರುವ ಹಾಗೆ ದೇವದೂತರನ್ನು ಹಾಗೂ ಧಗಧಗನೆ ಉರಿಯುವ ಕತ್ತಿಯನ್ನು ತೋಟದ ಮುಂದೆ ಕಾವಲಿಟ್ಟನು.

ಹಣ್ಣನ್ನು ತಿನ್ನಲು ಕುಮ್ಮಕ್ಕು ಕೊಟ್ಟವನನ್ನೂ ಶಿಕ್ಷಿಸುತ್ತೇನೆ ಎಂದು ಯೆಹೋವನು ಹೇಳಿದನು. ಹವ್ವಳ ಜೊತೆ ಮಾತಾಡಿದ್ದು ನಿಜವಾದ ಹಾವಲ್ಲ. ಯೆಹೋವ ದೇವರು ಹಾವಿಗೆ ಮಾತಾಡುವ ಶಕ್ತಿ ಕೊಟ್ಟಿರಲಿಲ್ಲ. ಹಾವು ಮಾತಾಡುವಂತೆ ಮಾಡಿದ್ದು ಒಬ್ಬ ಕೆಟ್ಟ ದೇವದೂತ. ಅವನು ಹವ್ವಳಿಗೆ ಮೋಸಮಾಡಲು ಹೀಗೆ ಮಾಡಿದ. ಅವನೇ ಪಿಶಾಚನಾದ ಸೈತಾನ. ಮುಂದೆ ಒಂದಿನ ಯೆಹೋವನು ಈ ಸೈತಾನನನ್ನು ನಾಶ ಮಾಡುತ್ತಾನೆ. ಆಗ ಜನರನ್ನು ಮೋಸಮಾಡಲಿಕ್ಕಾಗಲಿ ಅಥವಾ ತಪ್ಪುಮಾಡುವಂತೆ ಕುಮ್ಮಕ್ಕು ಕೊಡಲಿಕ್ಕಾಗಲಿ ಅವನಿರಲ್ಲ.

‘ಪಿಶಾಚನು ಆರಂಭದಿಂದಲೇ ನರಹಂತಕನಾಗಿದ್ದು ಸತ್ಯದಲ್ಲಿ ನೆಲೆನಿಲ್ಲಲಿಲ್ಲ; ಯಾಕೆಂದರೆ ಸತ್ಯವು ಅವನಲ್ಲಿ ಇಲ್ಲ.’—ಯೋಹಾನ 8:44