ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 4

ಕೋಪದಿಂದ ಕೊಲೆಗೆ

ಕೋಪದಿಂದ ಕೊಲೆಗೆ

ಆದಾಮ-ಹವ್ವ ಏದೆನ್‌ ತೋಟದಿಂದ ಹೊರಗೆ ಬಂದ ಮೇಲೆ ಅವರಿಗೆ ಮಕ್ಕಳಾದರು. ಅವರ ಮೊದಲ ಮಗ ಕಾಯಿನ. ಇವನು ವ್ಯವಸಾಯಗಾರನಾದನು. ಎರಡನೇ ಮಗ ಹೇಬೆಲ. ಇವನು ಕುರಿಕಾಯುವವನಾದನು.

ಒಂದು ದಿನ ಕಾಯಿನ ಮತ್ತು ಹೇಬೆಲ ಯೆಹೋವನಿಗೆ ಯಜ್ಞವನ್ನು ಕೊಟ್ಟರು. ಯಜ್ಞ ಅಂದರೆ ಏನು ಗೊತ್ತಾ? ಅದು ದೇವರಿಗೆ ಕೊಡುವ ವಿಶೇಷವಾದ ಕಾಣಿಕೆ. ಯೆಹೋವನು ಹೇಬೆಲನ ಕಾಣಿಕೆಯನ್ನು ಮೆಚ್ಚಿದನು. ಆದರೆ ಕಾಯಿನನ ಕಾಣಿಕೆಯನ್ನು ಮೆಚ್ಚಲಿಲ್ಲ. ಇದು ಕಾಯಿನನಿಗೆ ಗೊತ್ತಾದಾಗ ಅವನು ಕೋಪದಿಂದ ಕೆಂಡಾಮಂಡಲನಾದನು. ಕೋಪ ಪಾಪಕ್ಕೆ ನಡೆಸುತ್ತದೆ ಎಂದು ಯೆಹೋವನು ಕಾಯಿನನನ್ನು ಎಚ್ಚರಿಸಿದನು. ಆದರೆ ಕಾಯಿನ ಆ ಎಚ್ಚರಿಕೆಯನ್ನು ಕಿವಿಗೇ ಹಾಕಿಕೊಳ್ಳಲಿಲ್ಲ.

ಇದಾದ ಮೇಲೆ ಕಾಯಿನ ‘ಹೊಲಕ್ಕೆ ಹೋಗೋಣ ಬಾ’ ಎಂದು ಹೇಬೆಲನನ್ನು ಕರೆದನು. ಅವರಿಬ್ಬರೇ ಇದ್ದಾಗ ಕಾಯಿನ ಹೇಬೆಲನನ್ನು ಹೊಡೆದು ಕೊಂದನು. ಯೆಹೋವನು ಕಾಯಿನನಿಗೆ ಏನು ಮಾಡಿದನು ಗೊತ್ತಾ? ಕಾಯಿನನನ್ನು ಕುಟುಂಬದಿಂದ ದೂರ, ತುಂಬ ದೂರ ಕಳುಹಿಸುವ ಮೂಲಕ ಅವನಿಗೆ ಶಿಕ್ಷೆ ಕೊಟ್ಟನು. ಕಾಯಿನ ಮುಂದೆ ಎಂದೂ ಅವನ ಕುಟುಂಬದವರ ಮುಖ ನೋಡಲು ಆಗಲಿಲ್ಲ.

ಇದರಿಂದ ನಮಗೇನಾದರೂ ಪಾಠ ಇದೆಯಾ? ನಾವು ಅಂದುಕೊಂಡದ್ದು ಆಗದಿದ್ದಾಗ ನಮಗೆ ಕೋಪ ಬರಬಹುದು. ಒಳಗೊಳಗೆ ಕೋಪ ಉರಿಯುತ್ತಿದೆ ಎಂದು ನಮಗನಿಸಿದರೆ ಅಥವಾ ಯಾರಾದರೂ ಕೋಪ ಕಡಿಮೆ ಮಾಡಿಕೊಳ್ಳಲು ಹೇಳಿದರೆ ತಕ್ಷಣ ಕೋಪವನ್ನು ನಿಯಂತ್ರಿಸಬೇಕು, ಇಲ್ಲ ಅಂದರೆ ಕೋಪ ನಮ್ಮನ್ನು ನಿಯಂತ್ರಿಸುತ್ತದೆ.

ಹೇಬೆಲ ಯೆಹೋವನನ್ನು ಪ್ರೀತಿಸಿ, ಸರಿಯಾದದ್ದನ್ನು ಮಾಡಿದ್ದರಿಂದ ಅವನನ್ನು ಯೆಹೋವನು ಎಂದಿಗೂ ಮರೆಯುವುದಿಲ್ಲ. ಮುಂದೆ ಈ ಭೂಮಿ ಸುಂದರ ತೋಟವಾಗುವಾಗ ಯೆಹೋವನು ಹೇಬೆಲನನ್ನು ಖಂಡಿತ ಎಬ್ಬಿಸುವನು.

“ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು.”—ಮತ್ತಾಯ 5:24