ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 5

ನೋಹನ ನಾವೆ

ನೋಹನ ನಾವೆ

ದಿನ ಕಳೆದಂತೆ ಭೂಮಿಯಲ್ಲಿ ಜನರು ಹೆಚ್ಚಾದರು. ಅವರಲ್ಲಿ ತುಂಬ ಜನ ಕೆಟ್ಟದ್ದನ್ನೇ ಮಾಡುತ್ತಿದ್ದರು. ಮನುಷ್ಯರು ಮಾತ್ರ ಅಲ್ಲ, ಸ್ವರ್ಗದಲ್ಲಿದ್ದ ಕೆಲವು ದೇವದೂತರು ಕೂಡ ಕೆಟ್ಟವರಾದರು. ಅವರು ಸ್ವರ್ಗವನ್ನು ಬಿಟ್ಟು ಭೂಮಿಗೆ ಬಂದರು. ಯಾಕೆ ಗೊತ್ತಾ? ಮಾನವ ದೇಹವನ್ನು ಧರಿಸಿ ಭೂಮಿಯಲ್ಲಿದ್ದ ಸುಂದರ ಸ್ತ್ರೀಯರನ್ನು ಮದುವೆಯಾಗಲಿಕ್ಕಾಗಿ.

ಹೀಗೆ ಮದುವೆಯಾದ ದೇವದೂತರಿಗೆ ಮಕ್ಕಳು ಹುಟ್ಟಿದರು. ಆ ಮಕ್ಕಳು ಬೇರೆ ಮಕ್ಕಳಂತೆ ಇರಲಿಲ್ಲ. ಅವರಿಗೆ ತುಂಬ ಶಕ್ತಿ ಇತ್ತು, ನೋಡಲು ತುಂಬ ಎತ್ತರ ಹಾಗೂ ಸಿಕ್ಕಾಪಟ್ಟೆ ದಪ್ಪ ಇದ್ದರು. ಅವರು ಜನರಿಗೆ ಹಿಂಸೆ ಕೊಡುತ್ತಿದ್ದರು. ಪರಿಸ್ಥಿತಿ ಹೀಗೇ ಮುಂದುವರಿಯುವುದು ಯೆಹೋವನಿಗೆ ಇಷ್ಟವಿರಲಿಲ್ಲ. ಆದ್ದರಿಂದಲೇ ಜಲಪ್ರಳಯದ ಮೂಲಕ ಎಲ್ಲಾ ಕೆಟ್ಟ ಜನರನ್ನು ನಾಶಮಾಡಲು ಮುಂದಾದನು.

ಆದರೆ ಇವರ ಮಧ್ಯೆ ಒಬ್ಬ ಒಳ್ಳೇ ವ್ಯಕ್ತಿ ಇದ್ದ. ಅವನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅವನೇ ನೋಹ. ಅವನ ಕುಟುಂಬದಲ್ಲಿ ಹೆಂಡತಿ, ಶೇಮ್‌, ಹಾಮ್‌, ಯೆಫೆತ್‌ ಎಂಬ ಮೂರು ಗಂಡುಮಕ್ಕಳು ಹಾಗೂ ಮೂರು ಜನ ಸೊಸೆಯರಿದ್ದರು. ನೋಹ ಮತ್ತವನ ಕುಟುಂಬ ಜಲಪ್ರಳಯದಿಂದ ಬಚಾವಾಗಲು ದೊಡ್ಡದೊಂದು ನಾವೆಯನ್ನು ಕಟ್ಟಲು ಯೆಹೋವನು ಹೇಳಿದನು. ನಾವೆ ಅಂದರೆ ನೀರಿನ ಮೇಲೆ ತೇಲುವ ಒಂದು ದೊಡ್ಡ ಪೆಟ್ಟಿಗೆ. ಯೆಹೋವನು ನೋಹನಿಗೆ ಪ್ರಾಣಿಗಳನ್ನೂ ನಾವೆಯಲ್ಲಿ ಸೇರಿಸಲು ಹೇಳಿದನು. ಹೀಗೆ ಪ್ರಾಣಿಗಳ ಜೀವ ಸಹ ಉಳಿಯಲು ಸಾಧ್ಯವಿತ್ತು.

ನೋಹನು ಕೂಡಲೇ ನಾವೆಯನ್ನು ಕಟ್ಟಲು ಶುರುಮಾಡಿದನು. ಅದನ್ನು ಕಟ್ಟಿ ಮುಗಿಸಲು ನೋಹ ಮತ್ತು ಅವನ ಕುಟುಂಬಕ್ಕೆ ಸುಮಾರು 50 ವರ್ಷ ಹಿಡಿಯಿತು. ಯೆಹೋವನು ನಾವೆಯನ್ನು ಹೇಗೆ ಕಟ್ಟಬೇಕೆಂದು ಹೇಳಿದನೋ ನೋಹನು ಹಾಗೆಯೇ ಕಟ್ಟಿದನು. ನಾವೆ ಕಟ್ಟುವುದರ ಜೊತೆಗೆ ಜಲಪ್ರಳಯ ಬರುತ್ತದೆ ಎಂದು ನೋಹ ಜನರನ್ನು ಎಚ್ಚರಿಸುತ್ತಿದ್ದನು. ಆದರೆ ಆ ಎಚ್ಚರಿಕೆಯನ್ನು ಜನ ಕೇಳಲೇ ಇಲ್ಲ.

ಕೊನೆಗೂ ನಾವೆಯ ಒಳಗೆ ಹೋಗುವ ದಿನ ಬಂದೇ ಬಿಟ್ಟಿತು! ನಂತರ ಏನಾಯಿತು? ನೋಡೋಣ ಬನ್ನಿ.

“ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು.”—ಮತ್ತಾಯ 24:37