ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 6

ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ

ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ

ಕೊನೆಗೂ ನೋಹ, ಅವನ ಕುಟುಂಬ ಮತ್ತು ಪ್ರಾಣಿಗಳು ನಾವೆಯ ಒಳಗೆ ಹೋದರು. ಯೆಹೋವ ದೇವರು ನಾವೆಯ ಬಾಗಿಲನ್ನು ಗಟ್ಟಿಯಾಗಿ ಮುಚ್ಚಿದನು. ನಂತರ ಧೋ ಎಂದು ಮಳೆ ಸುರಿಯಲು ಆರಂಭವಾಯಿತು. ಮಳೆಯ ಆರ್ಭಟಕ್ಕೆ ಭೂಮಿಯಲ್ಲಿ ನೀರು ತುಂಬಿ ನಾವೆ ತೇಲಲು ಶುರು ಆಯಿತು. ಎಲ್ಲಿ ನೋಡಿದ್ರು ಬರೀ ನೀರು! ನಾವೆಯ ಹೊರಗಿದ್ದವರೆಲ್ಲಾ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಆದರೆ ನೋಹ ಮತ್ತು ಅವನ ಕುಟುಂಬ ಮಾತ್ರ ನಾವೆಯಲ್ಲಿ ಸುರಕ್ಷಿತವಾಗಿತ್ತು. ಅವರು ‘ಅಬ್ಬಾ! ಯೆಹೋವ ದೇವರ ಮಾತು ಕೇಳಿದ್ದು ಒಳ್ಳೇದಾಯಿತು’ ಎಂದು ಅಂದುಕೊಂಡಿರಬಹುದು.

40 ದಿನ ಹಗಲು ರಾತ್ರಿ ಸತತವಾಗಿ ಸುರಿದ ಮಳೆ ಕೊನೆಗೂ ನಿಂತಿತು. ದಿನದಿಂದ ದಿನಕ್ಕೆ ಭೂಮಿ ಮೇಲಿದ್ದ ನೀರು ಕಡಿಮೆಯಾಗುತ್ತಾ ಹೋಯಿತು. ಒಂದಿನ ನಾವೆಯು ಬೆಟ್ಟದ ಮೇಲೆ ಬಂದು ನಿಂತಿತು. ಆದರೆ ಭೂಮಿ ಮೇಲೆ ನೀರು ಇನ್ನೂ ಇದ್ದಿದ್ದರಿಂದ ನೋಹನ ಕುಟುಂಬ ನಾವೆಯ ಒಳಗೇ ಇರಬೇಕಾಯಿತು.

ತಿಂಗಳುಗಳು ಕಳೆದಂತೆ ನೀರು ಕಡಿಮೆಯಾಯಿತು. ಒಂದು ವರ್ಷಕ್ಕಿಂತ ಹೆಚ್ಚು ಸಮಯ ನೋಹನ ಕುಟುಂಬ ನಾವೆಯ ಒಳಗೇ ಇತ್ತು. ಆಮೇಲೆ ಯೆಹೋವ ದೇವರು ನೋಹನಿಗೆ ನಾವೆಯಿಂದ ಹೊರಗೆ ಬರುವಂತೆ ಹೇಳಿದನು. ಆಹಾ! ನೋಹನ ಕುಟುಂಬಕ್ಕೆ ಒಂದು ಹೊಸ ಲೋಕಕ್ಕೆ ಕಾಲಿಟ್ಟ ಅನುಭವ ಆಯಿತು. ನಾವೆಯಿಂದ ಹೊರಬಂದ ನಂತರ ತಮ್ಮನ್ನು ಕಾಪಾಡಿದ್ದಕ್ಕಾಗಿ ಅವರು ಯೆಹೋವನಿಗೆ ಉಪಕಾರ ಹೇಳಿ ಯಜ್ಞವನ್ನು ಕೊಟ್ಟರು.

ಆ ಯಜ್ಞವನ್ನು ಯೆಹೋವನು ಮೆಚ್ಚಿದನು. ಭೂಮಿಯ ಮೇಲಿರುವ ಎಲ್ಲವನ್ನು ಇನ್ನೆಂದಿಗೂ ನೀರಿನಿಂದ ನಾಶ ಮಾಡುವುದಿಲ್ಲ ಎಂದು ಮಾತು ಕೊಟ್ಟನು. ಇದಕ್ಕೆ ಸಾಕ್ಷಿಯಾಗಿ ಆಕಾಶದಲ್ಲಿ ಮೊದಲ ಮುಗಿಲುಬಿಲ್ಲು ಕಾಣುವಂತೆ ಮಾಡಿದನು. ನೀವು ಬಣ್ಣಬಣ್ಣದ ಮುಗಿಲುಬಿಲ್ಲನ್ನು ನೋಡಿದ್ದೀರಿ ತಾನೇ?

ಆಮೇಲೆ ಯೆಹೋವ ದೇವರು ನೋಹ ಮತ್ತು ಅವನ ಕುಟುಂಬದವರಿಗೆ ಮಕ್ಕಳನ್ನು ಪಡೆದು ಭೂಮಿಯಲ್ಲಿ ತುಂಬಿಕೊಳ್ಳಲು ಹೇಳಿದನು.

‘ನೋಹನು ನಾವೆಯೊಳಗೆ ಪ್ರವೇಶಿಸಿ ಪ್ರಳಯವು ಬಂದು ಜನರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.’—ಮತ್ತಾಯ 24:38, 39