ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 8

ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು

ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು

ಬಾಬೆಲ್‌ಗೆ ಹತ್ತಿರದಲ್ಲೇ ಊರ್‌ ಎಂಬ ಪಟ್ಟಣ ಇತ್ತು. ಅಲ್ಲಿದ್ದ ಎಲ್ಲರೂ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಅವರ ಮಧ್ಯೆ ಯೆಹೋವನನ್ನು ಮಾತ್ರ ಆರಾಧಿಸುತ್ತಿದ್ದ ಒಬ್ಬ ವ್ಯಕ್ತಿ ಇದ್ದ. ಅವನೇ ಅಬ್ರಹಾಮ.

ಒಂದು ದಿನ ಯೆಹೋವನು ಅಬ್ರಹಾಮನಿಗೆ ‘ನೀನು ನಿನ್ನ ಮನೆ, ನೆಂಟರು, ಊರನ್ನು ಬಿಟ್ಟು ನಾನು ತೋರಿಸುವ ದೇಶಕ್ಕೆ ಹೋಗು’ ಎಂದು ಹೇಳಿದನು. ‘ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು. ನಿನ್ನಿಂದ ಅನೇಕ ಜನರಿಗೆ ಆಶೀರ್ವಾದ ಉಂಟಾಗುವುದು’ ಎಂದೂ ಮಾತುಕೊಟ್ಟನು.

ಯಾವ ದೇಶಕ್ಕೆ ಹೋಗಬೇಕು, ಏನು ಮಾಡಬೇಕು ಅನ್ನುವುದೇನೂ ಅಬ್ರಹಾಮನಿಗೆ ಗೊತ್ತಿರಲಿಲ್ಲ. ಆದರೆ ಅವನಿಗೆ ಯೆಹೋವನ ಮೇಲೆ ಭರವಸೆ ಇತ್ತು. ಆದ್ದರಿಂದ ಅಬ್ರಹಾಮ, ಹೆಂಡತಿ ಸಾರ, ತಂದೆ ತೆರಹ ಹಾಗೂ ತಮ್ಮನ ಮಗನಾದ ಲೋಟ ದೇವರ ಮಾತಿಗೆ ವಿಧೇಯರಾಗಿ ಗಂಟು ಮೂಟೆ ಕಟ್ಟಿಕೊಂಡು ತಮ್ಮ ದೂರದ ಪ್ರಯಾಣ ಬೆಳೆಸಿದರು.

ಕೊನೆಗೂ ಅಬ್ರಹಾಮ ಮತ್ತವನ ಕುಟುಂಬ ಯೆಹೋವನು ತೋರಿಸಿದ ದೇಶಕ್ಕೆ ಬಂದರು. ಅದೇ ಕಾನಾನ್‌. ಆಗ ಅಬ್ರಹಾಮನಿಗೆ 75 ವರ್ಷ. ಅಲ್ಲಿ ಯೆಹೋವನು ಅಬ್ರಹಾಮನಿಗೆ ‘ನೀನು ಈಗ ನೋಡುತ್ತಿರುವ ದೇಶವನ್ನು ನಾನು ನಿನ್ನ ಮಕ್ಕಳಿಗೆ ಕೊಡುವೆನು’ ಎಂದು ಮಾತು ಕೊಟ್ಟನು. ಆದರೆ ಅಷ್ಟರಲ್ಲಿ ಅಬ್ರಹಾಮ ಮತ್ತು ಸಾರಳಿಗೆ ವಯಸ್ಸಾಗಿತ್ತು. ಅವರಿಗೆ ಮಕ್ಕಳಿರಲಿಲ್ಲ. ಆದರೆ ಯೆಹೋವನು ತನ್ನ ಮಾತನ್ನು ಹೇಗೆ ಉಳಿಸಿಕೊಂಡನು? ಮುಂದೆ ಕಲಿಯೋಣ.

“ನಂಬಿಕೆಯಿಂದಲೇ ಅಬ್ರಹಾಮನು . . . ವಿಧೇಯತೆಯನ್ನು ತೋರಿಸಿದನು; ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ಅವನಿಗೆ ತಿಳಿದಿರಲಿಲ್ಲವಾದರೂ ಅವನು ಹೊರಟುಹೋದನು.”—ಇಬ್ರಿಯ 11:8