ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 9

ಕೊನೆಗೂ ಮಗನನ್ನು ಹೆತ್ತಳು!

ಕೊನೆಗೂ ಮಗನನ್ನು ಹೆತ್ತಳು!

ಅಬ್ರಹಾಮ ಮತ್ತು ಸಾರ ಮದುವೆಯಾಗಿ ವರುಷಗಳೇ ಕಳೆದವು. ಅವರು ಊರ್‌ ಪಟ್ಟಣದಲ್ಲಿದ್ದ ಆರಾಮವಾದ ಜೀವನವನ್ನು ಬಿಟ್ಟು ಈಗ ಡೇರೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದರ ಬಗ್ಗೆ ಸಾರಳಿಗೆ ಒಂಚೂರು ಬೇಜಾರಿಲ್ಲ. ಏಕೆಂದರೆ ಅವಳಿಗೆ ಯೆಹೋವ ದೇವರ ಮೇಲೆ ತುಂಬ ಭರವಸೆ ಇತ್ತು.

ಸಾರಳಿಗೆ ಮಗುವನ್ನು ಪಡೆಯುವ ಹಂಬಲ. ಅದಕ್ಕಾಗಿ ಆಕೆ ಅಬ್ರಹಾಮನಿಗೆ ‘ನನ್ನ ದಾಸಿಯಾದ ಹಾಗರಳಿಗೆ ಮಗು ಹುಟ್ಟಿದರೆ ನನಗೇ ಹುಟ್ಟಿದಷ್ಟು ಖುಷಿಯಾಗುತ್ತೆ’ ಅಂದಳು. ಸ್ವಲ್ಪ ಸಮಯದ ನಂತರ ಹಾಗರಳಿಗೆ ಒಬ್ಬ ಮಗ ಹುಟ್ಟಿದನು. ಅವನ ಹೆಸರು ಇಷ್ಮಾಯೇಲ್‌.

ವರ್ಷಗಳು ದಾಟಿದವು. ಈಗ ಅಬ್ರಹಾಮನಿಗೆ 99 ವರ್ಷ, ಸಾರಳಿಗೆ 89 ವರ್ಷ. ಒಂದಿನ ಅವರ ಮನೆಗೆ ಮೂವರು ಅತಿಥಿಗಳು ಬಂದರು. ಅಬ್ರಹಾಮನು ಅವರಿಗೆ ‘ದಯವಿಟ್ಟು ಊಟ ಮಾಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಹೋಗಿ’ ಎಂದು ಕೇಳಿಕೊಂಡನು. ಆ ಅತಿಥಿಗಳು ಯಾರು ಗೊತ್ತಾ? ಅವರು ದೇವದೂತರಾಗಿದ್ದರು! ಅವರು ಅಬ್ರಹಾಮನಿಗೆ ‘ಮುಂದಿನ ವರ್ಷ ಇದೇ ಸಮಯದಲ್ಲಿ ನಿನಗೆ ಮತ್ತು ಸಾರಳಿಗೆ ಒಬ್ಬ ಮಗನಿರುವನು’ ಎಂದು ಹೇಳಿದರು. ಈ ಮಾತು ಡೇರೆಯಲ್ಲಿದ್ದ ಸಾರಳ ಕಿವಿಗೆ ಬಿತ್ತು. ‘ವಯಸ್ಸಾದ ನನಗೆ ಮಗು ಹುಟ್ಟೋದು ಸಾಧ್ಯನಾ?’ ಅಂದುಕೊಂಡು ಒಳಗೊಳಗೆ ನಗಾಡಿದಳು.

ಯೆಹೋವನ ದೂತನು ಹೇಳಿದಂತೆ ಮುಂದಿನ ವರ್ಷ ಸಾರಳಿಗೆ ಒಬ್ಬ ಮಗ ಹುಟ್ಟಿದ. ಅಬ್ರಹಾಮ ಅವನಿಗೆ ಇಸಾಕ ಎಂದು ಹೆಸರಿಟ್ಟನು. ಆ ಹೆಸರಿನ ಅರ್ಥ “ನಗು.”

ಪುಟ್ಟ ಇಸಾಕನಿಗೆ ಈಗ ಐದು ವರ್ಷ. ಒಂದಿನ ಇಷ್ಮಾಯೇಲನು ಇಸಾಕನನ್ನು ಗೇಲಿ ಮಾಡುತ್ತಿದ್ದ. ಇದನ್ನು ನೋಡಿದ ಸಾರ ಮಗನನ್ನು ಕಾಪಾಡಬೇಕು ಎಂದುಕೊಂಡಳು. ಅವಳು ಅಬ್ರಹಾಮನ ಹತ್ತಿರ ಹೋಗಿ ಹಾಗರ ಮತ್ತು ಇಷ್ಮಾಯೇಲನನ್ನು ಮನೆಯಿಂದ ದೂರ ಕಳುಹಿಸುವಂತೆ ಹೇಳಿದಳು. ಹೀಗೆ ಮಾಡಲು ಅಬ್ರಹಾಮನಿಗೆ ಇಷ್ಟ ಇರಲಿಲ್ಲ. ಆಗ ಯೆಹೋವನು ಅಬ್ರಹಾಮನಿಗೆ ‘ಸಾರಳು ಹೇಳಿದಂತೆ ಮಾಡು, ಇಷ್ಮಾಯೇಲನ ಬಗ್ಗೆ ಚಿಂತೆ ಮಾಡಬೇಡ. ಅವನನ್ನು ನಾನು ನೋಡಿಕೊಳ್ಳುತ್ತೇನೆ. ಇಸಾಕನ ಮೂಲಕವೇ ನಾನು ನಿನಗೆ ಮಾಡಿದ ವಾಗ್ದಾನಗಳು ನೆರವೇರುವವು’ ಎಂದು ಹೇಳಿದನು.

“ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನಮಾಡಿದಾತನನ್ನು ನಂಬಿಗಸ್ತನೆಂದೆಣಿಸಿದ್ದರಿಂದ . . . ಗರ್ಭಧರಿಸುವ ಶಕ್ತಿಯನ್ನು ಹೊಂದಿದಳು.”—ಇಬ್ರಿಯ 11:11