ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 10

ಲೋಟನ ಹೆಂಡತಿಯಿಂದ ಪಾಠ

ಲೋಟನ ಹೆಂಡತಿಯಿಂದ ಪಾಠ

ಲೋಟನು ಕಾನಾನ್‌ನಲ್ಲಿ ತನ್ನ ಸಂಬಂಧಿಕನಾದ ಅಬ್ರಹಾಮನ ಜೊತೆ ಇದ್ದ. ದಿನಗಳು ಹೋದ ಹಾಗೆ ಅವರ ದನ-ಕುರಿಗಳು ಜಾಸ್ತಿ ಆದವು. ಎಷ್ಟು ಹೆಚ್ಚಾದವೆಂದರೆ ಅವರೆಲ್ಲ ಒಟ್ಟಿಗಿರಲು ಸ್ಥಳ ಸಾಕಾಗಲಿಲ್ಲ. ಹಾಗಾಗಿ ಅಬ್ರಹಾಮ ಲೋಟನಿಗೆ ‘ನಾವಿಬ್ಬರೂ ಇನ್ನು ಮುಂದೆ ಒಂದೇ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ದಯವಿಟ್ಟು ನಿನಗೆ ಯಾವ ಸ್ಥಳ ಬೇಕೋ ಅದನ್ನು ಆರಿಸಿಕೋ. ನೀನೊಂದು ಕಡೆ ಹೋದರೆ ನಾನೊಂದು ಕಡೆ ಹೋಗುತ್ತೇನೆ. ಆಯ್ಕೆ ನಿನ್ನದು’ ಎಂದನು. ಎಂಥ ದೊಡ್ಡ ಮನಸ್ಸು ಅಬ್ರಹಾಮನದು! ಅಲ್ಲವಾ?

ಲೋಟ ಸುತ್ತಲೂ ಕಣ್ಣಾಡಿಸಿದ. ಸುಂದರವಾದ ಹಚ್ಚಹಸಿರಿನ ನೀರಾವರಿ ಸ್ಥಳವೊಂದು ಅವನ ಕಣ್ಣನ್ನು ಸೆಳೆಯಿತು. ಆ ಪಟ್ಟಣದ ಹೆಸರು ಸೊದೋಮ್‌. ಆ ಸ್ಥಳವನ್ನೇ ಆರಿಸಿ ಲೋಟನ ಕುಟುಂಬ ಅಲ್ಲಿಗೆ ಹೋಯಿತು.

ಸೊದೋಮಿನ ಹತ್ತಿರದಲ್ಲಿ ಗೊಮೋರ ಎಂಬ ಪಟ್ಟಣವಿತ್ತು. ಸೊದೋಮ್‌ ಹಾಗೂ ಗೊಮೋರದಲ್ಲಿದ್ದ ಜನರು ತುಂಬ ಕೆಟ್ಟವರಾಗಿದ್ದರು. ಎಷ್ಟು ಕೆಟ್ಟವರೆಂದರೆ ಯೆಹೋವ ದೇವರು ಅವರನ್ನು ನಾಶಮಾಡಲು ತೀರ್ಮಾನಿಸಿದನು. ಆದರೆ ಲೋಟ ಮತ್ತು ಅವನ ಕುಟುಂಬವನ್ನು ಉಳಿಸಬೇಕೆಂದಿದ್ದನು. ಆದ್ದರಿಂದ ಇಬ್ಬರು ದೇವದೂತರನ್ನು ಕಳುಹಿಸಿ ಅವರನ್ನು ಎಚ್ಚರಿಸಿದನು. ಆ ದೂತರು ಅವರಿಗೆ ‘ಯೆಹೋವನು ಈ ಪಟ್ಟಣವನ್ನು ನಾಶಮಾಡುತ್ತಾನೆ. ಆದ್ದರಿಂದ ಬೇಗ ಇಲ್ಲಿಂದ ಓಡಿ ಹೋಗಿ’ ಎಂದರು.

ಲೋಟ ಹೊರಡಲು ತಡ ಮಾಡುತ್ತಿದ್ದ. ಆದ್ದರಿಂದ ದೇವದೂತರೇ ಲೋಟನ ಕುಟುಂಬದವರ ಕೈ ಹಿಡಿದು ಊರಾಚೆ ಬಿಟ್ಟು ‘ಬೇಗ ಓಡಿಹೋಗಿ. ಜೀವ ಉಳಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡಬೇಡಿ. ಹಿಂದೆ ತಿರುಗಿದರೆ ಸಾಯುತ್ತೀರ!’ ಎಂದರು.

ಯೆಹೋವನು ಸೊದೋಮ್‌ ಮತ್ತು ಗೊಮೋರವನ್ನು ನಾಶಮಾಡಲು ಬೆಂಕಿ ಮಳೆ ಸುರಿಸಿದನು. ಅಷ್ಟು ಹೊತ್ತಿಗಾಗಲೇ ಲೋಟ ಮತ್ತು ಅವನ ಹೆಂಡತಿ-ಮಕ್ಕಳು ಚೋಗರ್‌ ಎಂಬ ಸ್ಥಳಕ್ಕೆ ಬಂದಿದ್ದರು. ಬೆಂಕಿ ಮಳೆ ಆ ಪಟ್ಟಣಗಳನ್ನು ಸುಟ್ಟು ಬೂದಿ ಮಾಡಿಬಿಟ್ಟಿತು. ಹಿಂದೆ ತಿರುಗಿ ನೋಡಬೇಡಿ ಎಂದು ಯೆಹೋವನು ಹೇಳಿದ್ದರೂ ಲೋಟನ ಹೆಂಡತಿ ದೇವರಿಗೆ ಅವಿಧೇಯಳಾಗಿ ಹಿಂದೆ ತಿರುಗಿದಳು. ಆ ಕ್ಷಣನೇ ಅವಳು ಉಪ್ಪಿನ ಕಂಬವಾದಳು! ಆದರೆ ಲೋಟ ಮತ್ತವನ ಹೆಣ್ಣು ಮಕ್ಕಳು ದೇವರಿಗೆ ವಿಧೇಯರಾದರು. ಹಿಂದೆ ತಿರುಗಲೇ ಇಲ್ಲ. ಅದರಿಂದ ಅವರ ಜೀವ ಉಳಿಯಿತು. ಲೋಟನ ಹೆಂಡತಿ ದೇವರಿಗೆ ಅವಿಧೇಯಳಾಗಿದ್ದರಿಂದ ಅವರ ಕುಟುಂಬಕ್ಕೆ ಎಷ್ಟು ಬೇಜಾರಾಗಿರಬೇಕಲ್ಲಾ? ಆದರೆ ಲೋಟ ಮತ್ತು ಅವನ ಇಬ್ಬರು ಹೆಣ್ಣು ಮಕ್ಕಳು ಯೆಹೋವನ ಮಾತು ಕೇಳಿ ಆತನನ್ನು ಖುಷಿಪಡಿಸಿದರು.

“ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ.”—ಲೂಕ 17:32