ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 11

ನಂಬಿಕೆಯ ಪರೀಕ್ಷೆ

ನಂಬಿಕೆಯ ಪರೀಕ್ಷೆ

ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಯೆಹೋವನನ್ನು ಪ್ರೀತಿಸಲು ಮತ್ತು ಆತನ ಎಲ್ಲಾ ವಾಗ್ದಾನಗಳ ಮೇಲೆ ಭರವಸೆ ಇಡಲು ಕಲಿಸಿದನು. ಇಸಾಕನಿಗೆ 25 ವರ್ಷ ಇದ್ದಾಗ ಯೆಹೋವನು ಒಂದು ಕಷ್ಟದ ಕೆಲಸ ಮಾಡಲು ಅಬ್ರಹಾಮನಿಗೆ ಹೇಳಿದನು. ಅದೇನು ಗೊತ್ತಾ?

ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನು ಮೊರೀಯ ಬೆಟ್ಟದಲ್ಲಿ ಯಜ್ಞವಾಗಿ ನನಗೆ ಕೊಡು’ ಅಂದನು. ಯೆಹೋವನು ಯಾಕೆ ಹೀಗೆ ಹೇಳುತ್ತಿದ್ದಾನೆಂದು ಅಬ್ರಹಾಮನಿಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ಆದರೂ ಯೆಹೋವನ ಮಾತಿಗೆ ವಿಧೇಯನಾದನು.

ಅಬ್ರಹಾಮ ಮಾರನೇ ದಿನ ಬೆಳಗ್ಗೆ ಇಸಾಕ ಮತ್ತು ಇಬ್ಬರು ಸೇವಕರನ್ನು ಕರೆದುಕೊಂಡು ಮೊರೀಯ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದನು. ಮೂರು ದಿನಗಳ ನಂತರ ಅವರು ಮೊರೀಯ ಬೆಟ್ಟದ ಹತ್ತಿರ ತಲುಪಿದರು. ಆಗ ಅಬ್ರಹಾಮ ತನ್ನ ಸೇವಕರಿಗೆ ‘ನೀವು ಇಲ್ಲೇ ಇರಿ. ನಾನು ನನ್ನ ಮಗ ದೇವರಿಗೆ ಯಜ್ಞ ಅರ್ಪಿಸಿ ಬರುತ್ತೇವೆ’ ಎಂದು ಹೇಳಿದನು. ಕಟ್ಟಿಗೆಯನ್ನು ಇಸಾಕನ ಮೇಲೆ ಹೊರಿಸಿ ಅಬ್ರಹಾಮ ಕತ್ತಿಯನ್ನು ಕೈಯಲ್ಲಿಡಿದು ಹೋದನು. ಆಗ ಇಸಾಕನು ‘ಅಪ್ಪಾ, ಯಜ್ಞಕ್ಕೆ ಬೇಕಾದ ಪ್ರಾಣಿ ಎಲ್ಲಿ?’ ಎಂದು ಕೇಳಿದನು. ಅದಕ್ಕೆ ಅಬ್ರಹಾಮ ‘ಅದನ್ನು ಯೆಹೋವನೇ ಕೊಡುವನು’ ಎಂದು ಉತ್ತರಿಸಿದನು.

ಮೊರೀಯ ಬೆಟ್ಟವನ್ನು ತಲುಪಿದ ನಂತರ ಅವರಿಬ್ಬರು ಸೇರಿ ಯಜ್ಞವೇದಿಯನ್ನು ಕಟ್ಟಿದರು. ಅಬ್ರಹಾಮನು ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು.

ಅಬ್ರಹಾಮ ಕತ್ತಿಯನ್ನು ಕೈಗೆತ್ತಿಕೊಂಡನು. ತಕ್ಷಣ ಯೆಹೋವನ ದೂತನು ಆಕಾಶದಿಂದ ‘ಅಬ್ರಹಾಮನೇ, ಹುಡುಗನ ಮೇಲೆ ಕೈ ಹಾಕಬೇಡ. ನೀನು ಒಬ್ಬನೇ ಮಗನನ್ನು ಯಜ್ಞವಾಗಿ ಅರ್ಪಿಸಲು ಹಿಂಜರಿಯದ ಕಾರಣ ದೇವರ ಮೇಲೆ ನಿನಗೆ ನಂಬಿಕೆ ಇದೆ ಎಂದು ತಿಳಿದು ಬಂತು’ ಅಂದನು. ಇದಾದ ಮೇಲೆ ಟಗರೊಂದು ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ಅಬ್ರಹಾಮ ಕಂಡನು. ತಕ್ಷಣ ಇಸಾಕನಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅವನಿಗೆ ಬದಲಾಗಿ ಟಗರನ್ನು ಯಜ್ಞವಾಗಿ ಕೊಟ್ಟನು.

ಆ ದಿನದಿಂದ ಯೆಹೋವನು ಅಬ್ರಹಾಮನನ್ನು ‘ನನ್ನ ಸ್ನೇಹಿತ’ ಎಂದು ಕರೆದನು. ಯಾಕೆ ಗೊತ್ತಾ? ಯಾಕೆಂದರೆ ಅಬ್ರಹಾಮ ಯೆಹೋವ ದೇವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೇ ಮಾಡುತ್ತಿದ್ದ. ಯೆಹೋವನು ಯಾಕೆ ಹೇಳಿದರು ಅಂತ ಅರ್ಥ ಆಗದೇ ಇದ್ದಾಗಲೂ ಅದನ್ನು ಮಾಡಿದ.

ಮತ್ತೊಮ್ಮೆ ಯೆಹೋವ ದೇವರು ಅಬ್ರಹಾಮನಿಗೆ ‘ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತತಿಯನ್ನು ಹೆಚ್ಚಿಸುವೆನು’ ಎಂದು ಮಾತುಕೊಟ್ಟನು. ಇದರರ್ಥ ಯೆಹೋವ ದೇವರು ಎಲ್ಲಾ ಒಳ್ಳೇ ಜನರನ್ನು ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸುವನು ಎಂದಾಗಿತ್ತು.

“ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”—ಯೋಹಾನ 3:16