ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 12

ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

ಯಾಕೋಬನಿಗೆ ಬಾಧ್ಯತೆ ಸಿಕ್ಕಿತು

ಇಸಾಕನಿಗೆ 40 ವರ್ಷವಾದಾಗ ಅವನು ರೆಬೆಕ್ಕಳನ್ನು ಮದುವೆಯಾದ. ಅವನು ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ. ನಂತರ ಅವರಿಗೆ ಇಬ್ಬರು ಅವಳಿ ಗಂಡುಮಕ್ಕಳು ಹುಟ್ಟಿದರು.

ಮೊದಲ ಮಗನ ಹೆಸರು ಏಸಾವ. ಎರಡನೇ ಮಗನ ಹೆಸರು ಯಾಕೋಬ. ಏಸಾವನಿಗೆ ಹೊರಗೆ ಇರಲು ತುಂಬ ಇಷ್ಟ ಮತ್ತು ಅವನೊಬ್ಬ ಒಳ್ಳೇ ಬೇಟೆಗಾರ. ಆದರೆ ಯಾಕೋಬ ಹಾಗಲ್ಲ, ಅವನಿಗೆ ಮನೆಯಲ್ಲಿರಲು ಇಷ್ಟ.

ಆ ಕಾಲದಲ್ಲಿ ತಂದೆ ತೀರಿಕೊಂಡ ನಂತರ ಆಸ್ತಿ-ಪಾಸ್ತಿ, ಹೊಲ-ಗದ್ದೆಯಲ್ಲಿ ಹೆಚ್ಚಿನ ಪಾಲು ಮೊದಲನೇ ಮಗನಿಗೆ ಸಿಗುತ್ತಿತ್ತು. ಅದನ್ನು ಬಾಧ್ಯತೆ ಅನ್ನುತ್ತಾರೆ. ಇಸಾಕನ ಕುಟುಂಬದಲ್ಲಿ ಈ ಬಾಧ್ಯತೆ ಇನ್ನೂ ವಿಶೇಷವಾಗಿತ್ತು. ಯಾಕೆಂದರೆ ಇದರಲ್ಲಿ ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನದಿಂದ ಬರುವ ಆಶೀರ್ವಾದಗಳೂ ಸೇರಿತ್ತು. ಏಸಾವನಿಗೆ ಆ ಆಶೀರ್ವಾದಗಳ ಬಗ್ಗೆ ಒಂಚೂರು ಗಣ್ಯತೆ ಇರಲಿಲ್ಲ. ಆದರೆ ಯಾಕೋಬನಿಗೆ ಅವು ತುಂಬ ಮುಖ್ಯ ಎಂದು ಗೊತ್ತಿತ್ತು.

ಒಂದು ದಿನ ಏಸಾವ ಇಡೀ ದಿನ ಬೇಟೆಯಾಡಿ ತುಂಬ ಸುಸ್ತಾಗಿ ಮನೆಗೆ ಬಂದ. ಯಾಕೋಬ ರುಚಿಯಾದ ಅಡುಗೆ ತಯಾರಿಸುತ್ತಿದ್ದ. ಅದರ ಪರಿಮಳ ಏಸಾವನ ಮೂಗಿಗೆ ಹತ್ತಿತು. ಆಗ ಏಸಾವ ಯಾಕೋಬನಿಗೆ ‘ನನಗೆ ತುಂಬ ಹೊಟ್ಟೆ ಹಸಿಯುತ್ತಾ ಇದೆ. ಆ ಕೆಂಪಾದ ರುಚಿ ಪದಾರ್ಥವನ್ನು ತಿನ್ನಲು ಕೊಡು’ ಎಂದನು. ಆಗ ಯಾಕೋಬ ‘ಕೊಡುತ್ತೀನಿ, ಆದರೆ ಅದಕ್ಕೆ ಮುಂಚೆ ನಿನಗೆ ಸಿಗಬೇಕಾಗಿರುವ ಬಾಧ್ಯತೆಯನ್ನು ನನಗೆ ಕೊಡುತ್ತೀನಿ ಅಂತ ಮಾತುಕೊಡು’ ಎಂದನು. ಅದಕ್ಕೆ ಏಸಾವ ‘ಬಾಧ್ಯತೆಯನ್ನು ಇಟ್ಟುಕೊಂಡು ನಾನೇನು ಮಾಡಲಿ? ನೀನೇ ತಗೋ. ನನಗೀಗ ಊಟ ಕೊಡು ಸಾಕು’ ಎಂದ. ಏಸಾವ ಮಾಡಿದ್ದು ಜಾಣತನನಾ? ಖಂಡಿತ ಇಲ್ಲ. ಬರೀ ಒಂದು ಹೊತ್ತು ಊಟಕ್ಕಾಗಿ ಅವನು ತುಂಬ ಅಮೂಲ್ಯವಾದ ವಿಷಯವನ್ನೇ ಕೊಟ್ಟುಬಿಟ್ಟ.

ವರ್ಷಗಳು ಉರುಳಿತು. ಬಹಳ ವೃದ್ಧನಾದ ಇಸಾಕನು ಮೊದಲ ಮಗನನ್ನು ಆಶೀರ್ವದಿಸುವ ಸಮಯ ಬಂದೇ ಬಿಟ್ಟಿತು. ಆದರೆ ರೆಬೆಕ್ಕ ಆ ಆಶೀರ್ವಾದ ಎರಡನೇ ಮಗನಾದ ಯಾಕೋಬನಿಗೆ ಸಿಗುವಂತೆ ಮಾಡಿದಳು. ಈ ವಿಷಯ ಏಸಾವನಿಗೆ ಗೊತ್ತಾದಾಗ ಅವನ ಕೋಪ ನೆತ್ತಿಗೇರಿತು. ಎಷ್ಟರ ಮಟ್ಟಿಗೆಂದರೆ ಅವನು ತನ್ನ ಜೊತೆ ಹುಟ್ಟಿದ ತಮ್ಮನನ್ನು ಕೊಲ್ಲಲು ಮುಂದಾದ. ಇಸಾಕ ಮತ್ತು ರೆಬೆಕ್ಕ ಯಾಕೋಬನನ್ನು ಏಸಾವನಿಂದ ಕಾಪಾಡಲು ಬಯಸಿದರು. ಆದ್ದರಿಂದ ಅವನಿಗೆ ‘ನಿನ್ನ ತಾಯಿಯ ಅಣ್ಣನಾದ ಲಾಬಾನನ ಮನೆಗೆ ಹೋಗು. ಏಸಾವನ ಕೋಪ ತಣ್ಣಗಾಗುವ ವರೆಗೆ ಅಲ್ಲೇ ಇರು’ ಎಂದರು. ಯಾಕೋಬ ಅಪ್ಪ-ಅಮ್ಮನ ಮಾತನ್ನು ಕೇಳಿದ ಮತ್ತು ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋದನು.

“ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಒಬ್ಬನು ನಿಜವಾಗಿಯೂ ತನ್ನ ಪ್ರಾಣಕ್ಕೆ ಪ್ರತಿಯಾಗಿ ಏನನ್ನು ಕೊಡುವನು?”—ಮಾರ್ಕ 8:36, 37