ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 13

ಯಾಕೋಬ ಮತ್ತು ಏಸಾವ ಒಂದಾದರು

ಯಾಕೋಬ ಮತ್ತು ಏಸಾವ ಒಂದಾದರು

ಯೆಹೋವನು ಯಾಕೋಬನಿಗೆ ‘ಅಬ್ರಹಾಮ ಇಸಾಕನನ್ನು ಕಾಪಾಡಿದಂತೆ ನಿನ್ನನ್ನೂ ಕಾಪಾಡುತ್ತೇನೆ’ ಎಂದು ಮಾತು ಕೊಟ್ಟನು. ಯಾಕೋಬನು ಖಾರಾನಿನಲ್ಲಿ ನೆಲೆನಿಂತನು. ಅಲ್ಲಿ ಅವನಿಗೆ ಮದುವೆಯಾಗಿ ಅನೇಕ ಮಕ್ಕಳು ಹುಟ್ಟಿದರು. ಅಲ್ಲದೇ ಅವನು ದೊಡ್ಡ ಶ್ರೀಮಂತನಾದನು.

ಸಮಯಾನಂತರ ಯೆಹೋವ ದೇವರು ಯಾಕೋಬನಿಗೆ ‘ನೀನು ನಿನ್ನ ಸ್ವಂತ ಊರಿಗೆ ವಾಪಸ್ಸು ಹೋಗು’ ಅಂದನು. ಆಗ ಯಾಕೋಬ ತನ್ನ ಕುಟುಂಬದೊಂದಿಗೆ ದೂರದ ಪ್ರಯಾಣ ಬೆಳೆಸಿದ. ದಾರಿಯಲ್ಲಿ ಹೋಗುತ್ತಿರುವಾಗ ಕೆಲವರು ಯಾಕೋಬನ ಹತ್ತಿರ ಬಂದು ‘ನಿನ್ನ ಅಣ್ಣನಾದ ಏಸಾವ 400 ಮಂದಿ ಪುರುಷರೊಟ್ಟಿಗೆ ಬರುತ್ತಿದ್ದಾನೆ’ ಎಂದು ಹೇಳಿದರು. ಈ ಮಾತನ್ನು ಕೇಳಿದಾಗ ಎಲ್ಲಿ ಏಸಾವ ತನಗೂ, ತನ್ನ ಕುಟುಂಬಕ್ಕೂ ಹಾನಿ ಮಾಡುತ್ತಾನೋ ಅಂತ ಯಾಕೋಬ ಹೆದರಿದ. ಆಗ ಅವನು ಯೆಹೋವನಿಗೆ ‘ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನು ಕಾಪಾಡಪ್ಪಾ’ ಎಂದು ಪ್ರಾರ್ಥಿಸಿದ. ಮಾರನೇ ದಿನ ಯಾಕೋಬ ತನ್ನ ಅಣ್ಣನಿಗೆ ಅನೇಕ ಕುರಿ, ಆಡು, ದನ, ಒಂಟೆ ಮತ್ತು ಕತ್ತೆಗಳನ್ನು ಉಡುಗೊರೆಯಾಗಿ ಕಳುಹಿಸಿದ.

ಆ ರಾತ್ರಿ ಯಾಕೋಬ ಒಬ್ಬನೇ ಇದ್ದಾಗ ಒಬ್ಬ ದೇವದೂತನನ್ನು ನೋಡಿದ! ಆ ದೇವದೂತ ಇಡೀ ರಾತ್ರಿ ಯಾಕೋಬನೊಟ್ಟಿಗೆ ಹೋರಾಡಿದ. ಹೋರಾಟದಲ್ಲಿ ಯಾಕೋಬನಿಗೆ ನೋವಾಯಿತು. ಆದರೂ ಯಾಕೋಬ ಬಿಟ್ಟುಕೊಡಲಿಲ್ಲ. ದೇವದೂತ ‘ನನ್ನನ್ನ ಬಿಡು, ನಾನು ಹೋಗಬೇಕು’ ಎಂದು ಹೇಳಿದನು. ಆಗ ಯಾಕೋಬ ‘ನೀನು ನನ್ನನ್ನ ಆಶೀರ್ವದಿಸುವವರೆಗೆ ನಾನು ನಿನ್ನನ್ನು ಹೋಗಲು ಬಿಡುವುದಿಲ್ಲ’ ಎಂದನು.

ಕೊನೆಗೆ ದೇವದೂತ ಯಾಕೋಬನನ್ನು ಆಶೀರ್ವದಿಸಿದ. ಆಗ ಏಸಾವನಿಂದ ತನಗೆ ಯಾವುದೇ ತೊಂದರೆ ಆಗಲು ಯೆಹೋವನು ಬಿಡುವುದಿಲ್ಲ ಎಂದು ಯಾಕೋಬನಿಗೆ ಗೊತ್ತಾಯಿತು.

ಮಾರನೇ ದಿನ ಏಸಾವ 400 ಪುರುಷರೊಂದಿಗೆ ದೂರದಲ್ಲಿ ಬರುತ್ತಿರುವುದನ್ನು ಯಾಕೋಬ ನೋಡಿದ. ಆಗ ಯಾಕೋಬ ಕುಟುಂಬದವರಿಗಿಂತ ಮುಂದೆ ಹೋಗಿ ಏಸಾವನ ಮುಂದೆ ಬಗ್ಗಿ ಏಳು ಸಾರಿ ನಮಸ್ಕರಿಸಿದ. ಇದನ್ನು ಕಂಡ ಏಸಾವ ಓಡಿ ಬಂದು ಯಾಕೋಬನನ್ನು ಗಟ್ಟಿಯಾಗಿ ತಬ್ಬಿಕೊಂಡನು. ಇಬ್ಬರು ತುಂಬ ಅತ್ತರು. ಹೀಗೆ ಅವರಿಬ್ಬರು ಒಂದಾದರು. ಈ ಸನ್ನಿವೇಶವನ್ನು ಯಾಕೋಬ ನಿಭಾಯಿಸಿದ ವಿಧದ ಬಗ್ಗೆ ಯೆಹೋವನಿಗೆ ಹೇಗನಿಸಿರಬಹುದು?

ಆಮೇಲೆ ಯಾಕೋಬ ಮತ್ತು ಏಸಾವ ತಮ್ಮ ತಮ್ಮ ಮನೆಗಳಿಗೆ ಹೋದರು. ಯಾಕೋಬನಿಗೆ 12 ಗಂಡು ಮಕ್ಕಳು. ಅವರು ಯಾರೆಂದರೆ ರೂಬೇನ್‌, ಸಿಮೆಯೋನ್‌, ಲೇವಿ, ಯೆಹೂದಾ, ದಾನ್‌, ನಫ್ತಾಲಿ, ಗಾದ್‌, ಆಶೇರ್‌, ಇಸ್ಸಾಕಾರ್‌, ಜೆಬುಲೂನ್‌, ಯೋಸೇಫ ಮತ್ತು ಬೆನ್ಯಾಮೀನ್‌. ಇವರಲ್ಲಿ ಒಬ್ಬನಾದ ಯೋಸೇಫನನ್ನು ಉಪಯೋಗಿಸಿ ಯೆಹೋವನು ತನ್ನ ಜನರನ್ನು ಕಾಪಾಡಿದನು. ಅದು ಹೇಗೆ? ನೋಡೋಣ ಬನ್ನಿ.

“ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ.”—ಮತ್ತಾಯ 5:44, 45