ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 16

ಯೋಬ ಯಾರು?

ಯೋಬ ಯಾರು?

ಊಚ್‌ ದೇಶದಲ್ಲಿ ಯೆಹೋವನನ್ನು ಆರಾಧಿಸುತ್ತಿದ್ದ ಒಬ್ಬ ವ್ಯಕ್ತಿ ಇದ್ದ. ಅವನೇ ಯೋಬ. ಅವನಿಗೆ ದೊಡ್ಡ ಕುಟುಂಬ, ತುಂಬ ಆಸ್ತಿ-ಪಾಸ್ತಿ ಇತ್ತು. ಅವನು ತುಂಬ ಒಳ್ಳೆಯವನು. ಬಡವರಿಗೆ, ಗಂಡ ತೀರಿಹೋಗಿರುವ ಸ್ತ್ರೀಯರಿಗೆ, ಅಪ್ಪ-ಅಮ್ಮ ಇಲ್ಲದ ಮಕ್ಕಳಿಗೆ ಸಹಾಯ ಮಾಡುತ್ತಿದ್ದ. ಯಾವುದು ಸರಿನೋ ಅದನ್ನೇ ಮಾಡುತ್ತಿದ್ದ. ಹಾಗಂತ ಅವನಿಗೆ ಕಷ್ಟಗಳೇ ಬರಲಿಲ್ಲವಾ?

ಸೈತಾನನು ಯೋಬನನ್ನು ಗಮನಿಸುತ್ತಿದ್ದ. ಇದು ಯೋಬನಿಗೆ ಗೊತ್ತಿರಲಿಲ್ಲ. ಒಮ್ಮೆ ಯೆಹೋವನು ಸೈತಾನನಿಗೆ ‘ನನ್ನ ದಾಸನಾದ ಯೋಬನನ್ನು ನೋಡಿದಿಯಾ? ಇಡೀ ಭೂಮಿಯಲ್ಲಿ ಅವನಂತೆ ಯಾರೂ ಇಲ್ಲ. ಅವನು ನನ್ನ ಮಾತು ಕೇಳುತ್ತಾನೆ ಮತ್ತು ಸರಿಯಾಗಿರೋದನ್ನೇ ಮಾಡುತ್ತಾನೆ’ ಅಂದನು. ಅದಕ್ಕೆ ಸೈತಾನ ‘ಯೋಬ ನಿನಗೆ ಯಾಕೆ ವಿಧೇಯತೆ ತೋರಿಸುತ್ತಾನೆ ಗೊತ್ತಾ? ನೀನು ಅವನಿಗೆ ಎಲ್ಲಾ ಕೊಟ್ಟಿದ್ದೀಯಾ. ಬೇಕಾದಷ್ಟು ಆಳು-ಕಾಳು, ಆಸ್ತಿ-ಪಾಸ್ತಿ ಕೊಟ್ಟು ಆಶೀರ್ವದಿಸಿದ್ದೀಯ. ಅದನ್ನೆಲ್ಲಾ ತೆಗೆದುಬಿಡು, ನಿನ್ನನ್ನು ಆರಾಧಿಸೋದನ್ನು ಬಿಟ್ಟುಬಿಡುತ್ತಾನೆ’ ಎಂದನು. ಆಗ ಯೆಹೋವನು ‘ಸರಿ ಹಾಗಾದ್ರೆ, ನೀನು ಅವನನ್ನು ಪರೀಕ್ಷೆ ಮಾಡಬಹುದು. ಆದರೆ ಅವನ ಜೀವ ಮಾತ್ರ ತೆಗೆಯಬಾರದು’ ಎಂದನು. ಸೈತಾನ ಯೋಬನನ್ನು ಪರೀಕ್ಷೆ ಮಾಡಲು ಯೆಹೋವನು ಯಾಕೆ ಬಿಟ್ಟ ಗೊತ್ತಾ? ಯಾಕೆಂದರೆ ಯೋಬ ತನಗೆ ನಂಬಿಗಸ್ತನಾಗಿ ಉಳಿಯುತ್ತಾನೆ ಎಂದು ಯೆಹೋವನಿಗೆ ಭರವಸೆ ಇತ್ತು.

ಸೈತಾನ ಯೋಬನ ಮೇಲೆ ಕಷ್ಟಗಳ ಸುರಿಮಳೆಯನ್ನೇ ಸುರಿಸಿದ. ಮೊದಲು ಶೆಬದವರು ಎಂಬ ಹೆಸರುಳ್ಳ ಕಳ್ಳರ ಗುಂಪನ್ನು ಕಳುಹಿಸಿ ಯೋಬನ ಎತ್ತು ಕತ್ತೆಗಳನ್ನು ಕದಿಯುವ ಹಾಗೆ ಮಾಡಿದ. ನಂತರ ಬೆಂಕಿ ಬಿದ್ದು ಯೋಬನ ಕುರಿಗಳೆಲ್ಲಾ ನಾಶವಾದವು. ಆಮೇಲೆ ಕಸ್ದೀಯರು ಎಂಬ ಹೆಸರುಳ್ಳ ಇನ್ನೊಂದು ಗುಂಪಿನವರು ಅವನ ಒಂಟೆಗಳನ್ನು ಕಳ್ಳತನ ಮಾಡಿದರು. ಅವುಗಳನ್ನು ನೋಡಿಕೊಳ್ಳುತ್ತಿದ್ದ ಆಳುಗಳನ್ನೂ ಕೊಂದರು. ಆಮೇಲೆ ಇನ್ನೊಂದು ದೊಡ್ಡ ವಿಪತ್ತು ಕಾದಿತ್ತು. ಯೋಬನ ಮಕ್ಕಳೆಲ್ಲ ಒಂದು ಮನೆಯಲ್ಲಿ ಔತಣ ಕೂಟಕ್ಕಾಗಿ ಸೇರಿದ್ದರು. ಇದ್ದಕ್ಕಿದ್ದಂತೆ ಆ ಮನೆ ಕುಸಿದು ಬಿದ್ದು ಅವರೆಲ್ಲರೂ ಸತ್ತುಹೋದರು. ಇದನ್ನು ಕೇಳಿ ಯೋಬನ ಎದೆ ಒಡೆದುಹೋಯಿತು. ಇಷ್ಟೆಲ್ಲಾ ಆದರೂ ಯೋಬ ಯೆಹೋವ ನನ್ನು ಆರಾಧಿಸೋದನ್ನು ಬಿಡಲೇ ಇಲ್ಲ.

ಇಷ್ಟಕ್ಕೇ ಸೈತಾನ ಸುಮ್ಮನಾಗಲಿಲ್ಲ. ಯೋಬನ ಮೈತುಂಬ ಹುಣ್ಣಾಗುವ ಹಾಗೆ ಮಾಡಿದ. ಯೋಬನಿಗೆ ತುಂಬಾ ನೋವಾಗುತ್ತಿತ್ತು. ತನಗೆ ಯಾಕೆ ಇಷ್ಟೊಂದು ಕಷ್ಟ ಬರುತ್ತಿದೆ ಅಂತ ಅವನಿಗೆ ಗೊತ್ತಿರಲಿಲ್ಲ. ಆದರೂ ಯೋಬ ಯೆಹೋವನನ್ನು ಆರಾಧಿಸೋದನ್ನು ಬಿಡಲಿಲ್ಲ. ಯೆಹೋವನು ಇದನ್ನೆಲ್ಲಾ ನೋಡಿ ತುಂಬ ಖುಷಿ ಪಟ್ಟನು.

ನಂತರ ಸೈತಾನ ಯೋಬನನ್ನು ಪರೀಕ್ಷಿಸಲು ಮೂವರನ್ನು ಕಳುಹಿಸಿದ. ಅವರು ಯೋಬನಿಗೆ ‘ನೀನು ಏನೋ ಪಾಪ ಮಾಡಿ ಅದನ್ನು ಮುಚ್ಚಿಟ್ಟಿದ್ದೀಯಾ. ಅದಕ್ಕೆ ದೇವರು ನಿನಗೆ ಹೀಗೆ ಶಿಕ್ಷೆ ಕೊಡುತ್ತಿದ್ದಾನೆ’ ಅಂದರು. ಆಗ ಯೋಬ ‘ನಾನು ಯಾವ ತಪ್ಪೂ ಮಾಡಿಲ್ಲ’ ಅಂದ. ಆದರೆ ಆಮೇಲೆ ಯೋಬನಿಗೂ ಯೆಹೋವನೇ ಈ ಕಷ್ಟಗಳನ್ನು ಕೊಡುತ್ತಿರಬಹುದು ಅಂತ ಅನಿಸಲು ಶುರುವಾಯಿತು. ಆದ್ದರಿಂದ ಯೋಬ ಯೆಹೋವನು ನನಗೆ ಅನ್ಯಾಯ ಮಾಡುತ್ತಿದ್ದಾನೆ ಎಂದ.

ಇವರೆಲ್ಲರ ಮಾತುಕತೆನಾ ಯುವ ಎಲೀಹು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ. ಕೊನೆಗೆ ಎಲೀಹು ಅವರಿಗೆ ‘ನೀವೆಲ್ಲರು ಹೇಳಿದ್ದು ತಪ್ಪು. ಯೆಹೋವನು ತುಂಬ ಒಳ್ಳೆಯವನು. ಆತನು ಯಾವತ್ತೂ ಕೆಟ್ಟದ್ದನ್ನು ಮಾಡಲ್ಲ. ಆತನು ಎಲ್ಲವನ್ನು ನೋಡುತ್ತಿರುತ್ತಾನೆ. ಜನರು ಕಷ್ಟದಿಂದ ಹೊರಗೆ ಬರಲು ಸಹಾಯ ಮಾಡುತ್ತಾನೆ’ ಎಂದ.

ಆಮೇಲೆ ಯೆಹೋವನು ಯೋಬನಿಗೆ, ‘ನಾನು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದಾಗ ನೀನು ಎಲ್ಲಿದ್ದೆ? ನನ್ನನ್ನು ಅನ್ಯಾಯಗಾರ ಅಂತ ಯಾಕೆ ಹೇಳಿದೆ? ನಿನ್ನ ಕಷ್ಟಗಳಿಗೆ ಕಾರಣ ಏನಂತ ಸರಿಯಾಗಿ ತಿಳುಕೊಳ್ಳದೆ ನೀನು ಮಾತಾಡುತ್ತಿದ್ದೀಯಾ’ ಎಂದನು. ಆಗ ಯೋಬ ತನ್ನ ತಪ್ಪನ್ನು ಒಪ್ಪಿಕೊಂಡು ‘ನಾನು ತಪ್ಪಾಗಿ ಮಾತಾಡಿದೆ. ನಾನು ಇಷ್ಟು ದಿನ ಬರೀ ನಿನ್ನ ಬಗ್ಗೆ ಕೇಳಿಸಿಕೊಂಡಿದ್ದೆ. ಆದರೆ ಈಗ ನಿನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡೆ. ನಿನ್ನ ಕೈಯಲ್ಲಿ ಆಗದೇ ಇರೋದು ಯಾವುದೂ ಇಲ್ಲ. ದಯವಿಟ್ಟು ನನ್ನನ್ನು ಕ್ಷಮಿಸು’ ಎಂದು ಬೇಡಿಕೊಂಡ.

ಪರೀಕ್ಷೆಗಳ ನಂತರ ಯೆಹೋವನು ಯೋಬನ ಕಾಯಿಲೆ ವಾಸಿಮಾಡಿದ. ಕಷ್ಟ ಬಂದಾಗಲೂ ಯೋಬ ದೇವರ ಮಾತು ಕೇಳಿದ್ದರಿಂದ ಅವನಿಗೆ ಹೆಚ್ಚು ಆಶೀರ್ವಾದ ಸಿಕ್ಕಿತು. ಆಮೇಲೆ ಯೋಬ ಅನೇಕ ವರ್ಷ ಜೀವಿಸಿದ. ಕಷ್ಟ ಬಂದಾಗ ಯೋಬನಂತೆ ನೀನೂ ಯೆಹೋವನನ್ನೇ ಆರಾಧಿಸುತ್ತೀಯಾ?

“ನೀವು ಯೋಬನ ತಾಳ್ಮೆಯ ಕುರಿತು ಕೇಳಿಸಿಕೊಂಡಿದ್ದೀರಿ ಮತ್ತು ಯೆಹೋವನು ಅವನಿಗೆ ಕೊಟ್ಟಂಥ ಪ್ರತಿಫಲವನ್ನು . . . ತಿಳಿದಿದ್ದೀರಿ.”—ಯಾಕೋಬ 5:11