ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 18

ಉರಿಯುತ್ತಿರುವ ಪೊದೆ

ಉರಿಯುತ್ತಿರುವ ಪೊದೆ

ಮೋಶೆ ಮಿದ್ಯಾನಿನಲ್ಲಿ 40 ವರ್ಷ ಇದ್ದ. ಅಲ್ಲಿ ಅವನಿಗೆ ಮದುವೆ ಆಯಿತು, ಮಕ್ಕಳೂ ಆದರು. ಒಂದಿನ ಅವನು ಸೀನಾಯಿ ಬೆಟ್ಟದಲ್ಲಿ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗ ಆಶ್ಚರ್ಯಕರವಾದ ಒಂದು ವಿಷಯ ನೋಡಿದ. ಪೊದೆಯೊಂದಕ್ಕೆ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಆದರೆ ಅದು ಸುಟ್ಟು ಹೋಗುತ್ತಿರಲಿಲ್ಲ! ಯಾಕಿರಬಹುದು ಅಂತ ನೋಡಲು ಮೋಶೆ ಪೊದೆಯ ಹತ್ತಿರ ಹತ್ತಿರ ಹೋದಾಗ ಪೊದೆಯೊಳಗಿಂದ ಬಂದ ಧ್ವನಿ ‘ಮೋಶೆ! ಇನ್ನೂ ಹತ್ತಿರ ಬರಬೇಡ. ನಿನ್ನ ಚಪ್ಪಲಿಯನ್ನು ಬಿಚ್ಚು. ಯಾಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದದ್ದು’ ಅಂದಿತು. ಅಲ್ಲಿ ದೇವದೂತನ ಮೂಲಕ ಯೆಹೋವನು ಮಾತಾಡಿದನು.

ಆಗ ಮೋಶೆಗೆ ಭಯ ಆಗಿ ಮುಖವನ್ನು ಮುಚ್ಚಿಕೊಂಡ. ಆ ಧ್ವನಿ ಅವನಿಗೆ ‘ನಾನು ಇಸ್ರಾಯೇಲ್ಯರ ಕಷ್ಟವನ್ನು ನೋಡಿದ್ದೇನೆ. ನಾನು ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸಿ ಒಳ್ಳೇ ದೇಶಕ್ಕೆ ಕರಕೊಂಡು ಬರುತ್ತೇನೆ. ಈಜಿಪ್ಟಿನಿಂದ ಅವರನ್ನು ಕರಕೊಂಡು ಬರಬೇಕಾಗಿರುವುದು ನೀನೇ’ ಎಂದಿತು. ಈ ಮಾತನ್ನು ಕೇಳಿದಾಗ ಮೋಶೆಗೆ ಎಷ್ಟು ಆಶ್ಚರ್ಯ ಆಗಿರಬೇಕಲ್ವಾ?

ಆಮೇಲೆ ಮೋಶೆ ‘ಜನರು ನಿನ್ನನ್ನು ಯಾರು ಕಳುಹಿಸಿದರು ಅಂತ ಕೇಳಿದರೆ ನಾನೇನು ಹೇಳಬೇಕು?’ ಎಂದು ಕೇಳಿದ. ಅದಕ್ಕೆ ದೇವರು ‘ಅಬ್ರಹಾಮ, ಇಸಾಕ, ಯಾಕೋಬರ ದೇವರಾದ ಯೆಹೋವನು ನನ್ನನ್ನು ಕಳುಹಿಸಿದನು ಎಂದು ಹೇಳು’ ಅಂದನು. ಮತ್ತೆ ಮೋಶೆ ‘ಒಂದುವೇಳೆ ಜನ ನನ್ನ ಮಾತನ್ನು ಕೇಳದೇ ಹೋದರೆ ಏನು ಮಾಡಲಿ?’ ಎಂದು ಕೇಳಿದ. ಆಗ ಯೆಹೋವನು ಮೋಶೆಗೆ ‘ನಾನು ನಿನಗೆ ಸಹಾಯ ಮಾಡುತ್ತೇನೆ’ ಎಂದು ಒಂದು ಗುರುತನ್ನು ಕೊಟ್ಟನು. ದೇವರು ಮೋಶೆಗೆ ಅವನ ಕೋಲನ್ನು ನೆಲಕ್ಕೆ ಬಿಸಾಡಲು ಹೇಳಿದನು. ಮೋಶೆ ಬಿಸಾಡಿದಾಗ ಕೋಲು ಹಾವಾಯಿತು! ಮೋಶೆ ಹಾವಿನ ಬಾಲವನ್ನು ಹಿಡಿದಾಗ ಅದು ಪುನಃ ಕೋಲಾಯಿತು. ಆಗ ಯೆಹೋವನು ‘ನೀನು ಈ ಅದ್ಭುತವನ್ನು ಮಾಡಿದಾಗ ನಿನ್ನನ್ನು ಕಳುಹಿಸಿದ್ದು ನಾನೇ ಎಂದು ಗೊತ್ತಾಗುತ್ತದೆ’ ಎಂದನು.

ನಂತರ ಮೋಶೆ ‘ನನಗೆ ಅಷ್ಟೊಂದು ಚೆನ್ನಾಗಿ ಮಾತಾಡಲು ಬರುವುದಿಲ್ಲ’ ಅಂದನು. ಅದಕ್ಕೆ ಯೆಹೋವನು ‘ಏನು ಮಾತಾಡಬೇಕು ಅನ್ನೋದನ್ನು ನಾನು ನಿನಗೆ ಹೇಳುತ್ತೇನೆ. ನಿನಗೆ ಸಹಾಯ ಮಾಡೋಕೆ ನಿನ್ನ ಅಣ್ಣ ಆರೋನನನ್ನು ಕಳುಹಿಸುತ್ತೇನೆ’ ಎಂದು ಮಾತುಕೊಟ್ಟನು. ಯೆಹೋವನು ತನ್ನ ಜೊತೆ ಇರುತ್ತಾನೆ ಎಂಬ ಭರವಸೆಯಿಂದ ಮೋಶೆ ಹೆಂಡತಿ-ಮಕ್ಕಳನ್ನು ಕರೆದುಕೊಂಡು ಈಜಿಪ್ಟಿನ ಕಡೆಗೆ ಹೆಜ್ಜೆಹಾಕಿದ.

“ನೀವು ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಎಂದು ಚಿಂತಿಸಬೇಡಿರಿ; ನೀವು ಏನು ಮಾತಾಡಬೇಕು ಎಂಬುದು ಆ ಗಳಿಗೆಯಲ್ಲಿ ನಿಮಗೆ ತಿಳಿಯುವುದು.”—ಮತ್ತಾಯ 10:19