ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 23

ಯೆಹೋವನಿಗೆ ಕೊಟ್ಟ ಮಾತು

ಯೆಹೋವನಿಗೆ ಕೊಟ್ಟ ಮಾತು

ಈಜಿಪ್ಟಿನಿಂದ ಬಂದ ಎರಡು ತಿಂಗಳ ನಂತರ, ಇಸ್ರಾಯೇಲ್ಯರು ಸೀನಾಯಿ ಬೆಟ್ಟದ ಹತ್ತಿರ ಡೇರೆಗಳನ್ನು ಹಾಕಿ ಅಲ್ಲಿ ವಾಸಿಸಿದರು. ಯೆಹೋವನು ಮೋಶೆಯನ್ನು ಬೆಟ್ಟಕ್ಕೆ ಕರೆದು ‘ಇಸ್ರಾಯೇಲ್ಯರನ್ನು ಕಾಪಾಡಿದ್ದು ನಾನೇ. ಅವರು ನನಗೆ ವಿಧೇಯರಾಗಿ, ನನ್ನ ನಿಯಮಗಳನ್ನು ಪಾಲಿಸಿದರೆ ಅವರು ನನಗೆ ವಿಶೇಷ ಜನರಾಗುವರು’ ಅಂದನು. ಮೋಶೆ ಬೆಟ್ಟದಿಂದ ಇಳಿದು ಬಂದು ಯೆಹೋವನು ಹೇಳಿದ್ದನ್ನು ಇಸ್ರಾಯೇಲ್ಯರಿಗೆ ತಿಳಿಸಿದನು. ಅವರು ಏನು ಉತ್ತರ ಕೊಟ್ಟರು ಗೊತ್ತಾ? ‘ಯೆಹೋವ ದೇವರು ನಮಗೆ ಹೇಳುವ ಪ್ರತಿಯೊಂದು ವಿಷಯವನ್ನು ನಾವು ಖಂಡಿತ ಮಾಡುತ್ತೇವೆ’ ಅಂದರು.

ಮೋಶೆ ಪುನಃ ಬೆಟ್ಟಕ್ಕೆ ಹೋದನು. ಯೆಹೋವನು ಮೋಶೆಗೆ ‘ಮೂರು ದಿನಗಳಾದ ಮೇಲೆ ನಾನು ನಿನ್ನ ಹತ್ತಿರ ಮಾತಾಡುತ್ತೇನೆ. ಜನರು ಸೀನಾಯಿ ಬೆಟ್ಟಕ್ಕೆ ಬರದಂತೆ ಎಚ್ಚರಿಸು’ ಅಂದನು. ಮೋಶೆ ಕೆಳಗೆ ಹೋಗಿ ಇಸ್ರಾಯೇಲ್ಯರಿಗೆ ‘ಯೆಹೋವನ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಾಗಿರಿ’ ಅಂದನು.

ಮೂರು ದಿನಗಳ ನಂತರ, ಇಸ್ರಾಯೇಲ್ಯರು ಬೆಟ್ಟದ ಮೇಲೆ ದಟ್ಟವಾದ ಕಪ್ಪು ಮೋಡ ಹಾಗೂ ಮಿಂಚನ್ನು ನೋಡಿದರು. ಅದರೊಟ್ಟಿಗೆ ಭಯಂಕರವಾದ ಗುಡುಗು ಮತ್ತು ತುತೂರಿಯ ಶಬ್ದವನ್ನೂ ಕೇಳಿಸಿಕೊಂಡರು. ನಂತರ ಯೆಹೋವನು ಬೆಂಕಿಯಿಂದ ಸೀನಾಯಿ ಬೆಟ್ಟದ ಮೇಲೆ ಇಳಿದುಬಂದನು. ಇದನ್ನೆಲ್ಲಾ ನೋಡಿ ಇಸ್ರಾಯೇಲ್ಯರು ಭಯದಿಂದ ನಡುಗಿದರು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು ಮತ್ತು ಎಲ್ಲಾ ಕಡೆ ಹೊಗೆ ತುಂಬಿಕೊಂಡಿತು. ತುತೂರಿಯ ಶಬ್ದ ಹೆಚ್ಚಾಗುತ್ತಾ ಬಂತು. ಆಮೇಲೆ ದೇವರು ‘ನನ್ನ ಹೆಸರು ಯೆಹೋವ. ನನ್ನನ್ನು ಬಿಟ್ಟು ಬೇರೆ ಯಾವುದೇ ದೇವರುಗಳನ್ನು ಆರಾಧಿಸಬಾರದು’ ಎಂದನು.

ಮೋಶೆ ಪುನಃ ಬೆಟ್ಟಕ್ಕೆ ಹೋದನು. ಅಲ್ಲಿ ಯೆಹೋವನು ಅವನಿಗೆ ನಿಯಮಗಳನ್ನು ಕೊಟ್ಟನು. ಅದರಲ್ಲಿ ಜನರು ದೇವರನ್ನು ಹೇಗೆ ಆರಾಧಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಅಂತ ಇತ್ತು. ಮೋಶೆ ಆ ನಿಯಮಗಳನ್ನು ಬರೆದು ಇಸ್ರಾಯೇಲ್ಯರ ಮುಂದೆ ಓದಿದನು. ಆಗ ಇಸ್ರಾಯೇಲ್ಯರು ‘ಯೆಹೋವ ದೇವರು ನಮಗೆ ಹೇಳುವ ಪ್ರತಿಯೊಂದು ವಿಷಯವನ್ನು ನಾವು ಖಂಡಿತ ಮಾಡುತ್ತೇವೆ’ ಎಂದು ಮಾತು ಕೊಟ್ಟರು. ಅವರು ಮಾತು ಕೊಟ್ಟಿದ್ದು ಸ್ವತಃ ಯೆಹೋವನಿಗೆ. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡರಾ?

“ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.”—ಮತ್ತಾಯ 22:37