ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 26

ಹನ್ನೆರಡು ಗೂಢಚಾರರು

ಹನ್ನೆರಡು ಗೂಢಚಾರರು

ಇಸ್ರಾಯೇಲ್ಯರು ಸೀನಾಯಿ ಬೆಟ್ಟದಿಂದ ಹೊರಟು ಪಾರಾನ್‌ ಮರುಭೂಮಿಯನ್ನು ದಾಟಿ ಕಾದೇಶ್‌ ಎಂಬ ಸ್ಥಳಕ್ಕೆ ಬಂದರು. ಅಲ್ಲಿ ಯೆಹೋವನು ಮೋಶೆಗೆ ‘ನಾನು ಇಸ್ರಾಯೇಲ್ಯರಿಗೆ ಕೊಡುವ ಕಾನಾನ್‌ ದೇಶವನ್ನು ನೋಡಿ ಬರಲು ಪ್ರತಿ ಕುಲದಿಂದ ಒಬ್ಬೊಬ್ಬರನ್ನು ಆರಿಸಿ, 12 ಮಂದಿ ಪುರುಷರನ್ನು ಕಳುಹಿಸು’ ಎಂದನು. ಈ ಕೆಲಸಕ್ಕೆ ಹೋಗುವವರನ್ನು ಗೂಢಚಾರರು ಎನ್ನುವರು. ಆದ್ದರಿಂದ ಮೋಶೆ 12 ಮಂದಿ ಪುರುಷರನ್ನು ಆರಿಸಿ ಅವರಿಗೆ ‘ನೀವು ಕಾನಾನಿಗೆ ಹೋಗಿ. ಆ ದೇಶದಲ್ಲಿ ಬೆಳೆ ಚೆನ್ನಾಗಿ ಬೆಳೆಯುತ್ತಾ, ಜನರು ಬಲಿಷ್ಠರಾ ಅಥವಾ ಬಲಹೀನರಾ, ಡೇರೆಯಲ್ಲಿ ವಾಸಿಸುತ್ತಿದ್ದಾರಾ ಅಥವಾ ಪಟ್ಟಣಗಳಲ್ಲಿ ಇದ್ದಾರಾ ಎಂದು ನೋಡಿಕೊಂಡು ಬನ್ನಿ’ ಅಂದನು. ಕಾನಾನಿಗೆ ಹೋದ 12 ಗೂಢಚಾರರಲ್ಲಿ ಯೆಹೋಶುವ ಮತ್ತು ಕಾಲೇಬ ಸಹ ಇದ್ದರು.

40 ದಿನಗಳ ನಂತರ ಗೂಢಚಾರರು ಹಿಂದಿರುಗಿ ಬಂದರು. ಬರುವಾಗ ಅಂಜೂರ, ದಾಳಿಂಬೆ, ದ್ರಾಕ್ಷೀ ಹಣ್ಣುಗಳನ್ನು ತೆಗೆದುಕೊಂಡು ಬಂದರು. ಗೂಢಚಾರರು ಮೋಶೆಗೆ ‘ಅದು ನಿಜವಾಗಿಯೂ ಉತ್ತಮವಾದ ದೇಶ. ಆದರೆ ಅಲ್ಲಿನ ಜನರು ತುಂಬಾ ಶಕ್ತಿಶಾಲಿಗಳು. ಅವರ ಪಟ್ಟಣಕ್ಕೆ ದೊಡ್ಡ ದೊಡ್ಡ ಗೋಡೆಗಳಿವೆ’ ಎಂದರು. ಆಗ ಕಾಲೇಬ ನಾವು ಅವರನ್ನು ಸೊಲಿಸಬಹುದು. ಬನ್ನಿ, ಈಗಲೇ ಹೋಗೋಣ!’ ಅಂದನು. ಕಾಲೇಬ ಯಾಕೆ ಹಾಗೆ ಹೇಳಿದ ಎಂದು ಗೊತ್ತಾ? ಏಕೆಂದರೆ ಕಾಲೇಬ ಮತ್ತು ಯೆಹೋಶುವನಿಗೆ ಯೆಹೋವನಲ್ಲಿ ಭರವಸೆ ಇತ್ತು. ಆದರೆ ಉಳಿದ 10 ಮಂದಿ ಗೂಢಚಾರರು ‘ಇಲ್ಲ! ಅಲ್ಲಿರುವ ಜನರು ತುಂಬ ಎತ್ತರವಾಗಿ ದೈತ್ಯರಂತೆ ಇದ್ದಾರೆ! ಅವರ ಮುಂದೆ ನಾವು ಸಣ್ಣ ಮಿಡತೆಗಳ ಹಾಗೆ ಇದ್ದೀವಿ’ ಎಂದರು.

ಇದನ್ನು ಕೇಳಿದಾಗ ಇಸ್ರಾಯೇಲ್ಯರಿಗೆ ಭಯ ಆಯಿತು. ಅವರು ಗುಣುಗುಟ್ಟುತ್ತಾ ಒಬ್ಬರಿಗೊಬ್ಬರು ‘ನಾವು ಒಬ್ಬ ಹೊಸ ನಾಯಕನನ್ನು ಆರಿಸಿ ಈಜಿಪ್ಟಿಗೆ ವಾಪಸ್ಸು ಹೋಗೋಣ. ನಾವು ಕಾನಾನ್‌ ದೇಶಕ್ಕೆ ಹೋಗಿ ಆ ದೇಶದವರ ಕೈಯಿಂದ ಯಾಕೆ ಸಾಯಬೇಕು?’ ಅಂದರು. ಆಗ ಯೆಹೋಶುವ ಮತ್ತು ಕಾಲೇಬ ‘ಯೆಹೋವನಿಗೆ ಅವಿಧೇಯರಾಗಬೇಡಿ. ಹೆದರಬೇಡಿ. ಆತನು ನಮ್ಮನ್ನು ಖಂಡಿತ ಕಾಪಾಡುತ್ತಾನೆ’ ಎಂದರು. ಆದರೆ ಇಸ್ರಾಯೇಲ್ಯರು ಅವರ ಮಾತು ಕೇಳಲಿಲ್ಲ. ಅವರು ಯೆಹೋಶುವ ಮತ್ತು ಕಾಲೇಬನನ್ನು ಕೊಲ್ಲಬೇಕು ಅಂದುಕೊಂಡರು!

ಯೆಹೋವನು ಏನು ಮಾಡಿದ? ಆತನು ಮೋಶೆಗೆ ‘ನಾನು ಇಸ್ರಾಯೇಲ್ಯರಿಗಾಗಿ ಇಷ್ಟೆಲ್ಲಾ ಮಾಡಿದರೂ ಅವರು ಇನ್ನೂ ನನ್ನ ಮಾತನ್ನು ಕೇಳುತ್ತಿಲ್ಲ. ಆದ್ದರಿಂದ ಅವರು 40 ವರ್ಷ ಅರಣ್ಯದಲ್ಲಿಯೇ ಇದ್ದು ಅಲ್ಲೇ ಸಾಯಬೇಕು. ಅವರ ಮಕ್ಕಳು ಮತ್ತು ಯೆಹೋಶುವ-ಕಾಲೇಬರು ಮಾತ್ರ ನಾನು ವಾಗ್ದಾನ ಮಾಡಿದ ದೇಶಕ್ಕೆ ಹೋಗುತ್ತಾರೆ’ ಎಂದನು.

“ಅಲ್ಪವಿಶ್ವಾಸಿಗಳೇ, ನೀವೇಕೆ ಭಯಪಡುತ್ತೀರಿ?”—ಮತ್ತಾಯ 8:26