ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 27

ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು

ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು

ಕೆಲವು ವರ್ಷಗಳ ನಂತರ, ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ ಕೋರಹ, ದಾತಾನ್‌, ಅಬೀರಾಮ ಮತ್ತು ಇತರ 250 ಮಂದಿ ಮೋಶೆ ವಿರುದ್ಧ ತಿರುಗಿಬಿದ್ದರು. ಅವರು ಮೋಶೆಗೆ ‘ನಿನ್ನಿಂದ ಸಾಕಾಯಿತು! ನೀನೇ ಏಕೆ ನಾಯಕನಾಗಬೇಕು ಮತ್ತು ಆರೋನನೇ ಏಕೆ ಮಹಾಯಾಜಕನಾಗಬೇಕು? ಯೆಹೋವನು ನಮ್ಮ ಎಲ್ಲರ ಜೊತೆಯಲ್ಲಿ ಇದ್ದಾನೆ, ನಿನ್ನ ಮತ್ತು ಆರೋನನ ಜೊತೆಯಲ್ಲಿ ಮಾತ್ರ ಅಲ್ಲ’ ಎಂದರು. ಇವರ ಮಾತು ಯೆಹೋವನಿಗೆ ಇಷ್ಟ ಆಗಲಿಲ್ಲ. ಏಕೆಂದರೆ ಅವರು ಮೋಶೆ ಆರೋನರ ವಿರುದ್ಧ ಅಲ್ಲ, ಯೆಹೋವನ ವಿರುದ್ಧ ತಿರುಗಿಬಿದ್ದಂತಿತ್ತು!

ಕೋರಹನಿಗೆ ಮತ್ತು ಆತನ ಬೆಂಬಲಿಗರಿಗೆ ಮೋಶೆ ‘ನಾಳೆ ನೀವೆಲ್ಲರೂ ಧೂಪಾರತಿಗಳನ್ನು ತೆಗೆದುಕೊಂಡು ದೇವಗುಡಾರಕ್ಕೆ ಬನ್ನಿ. ಯೆಹೋವನು ನಮ್ಮಲ್ಲಿ ಯಾರನ್ನು ಆರಿಸಿದ್ದಾನೆಂದು ಆತನೇ ತಿಳಿಸುವನು’ ಅಂದನು.

ಮಾರನೇ ದಿನ ಕೋರಹ ಮತ್ತು ಇತರ 250 ಮಂದಿ ಪುರುಷರು ಮೋಶೆಯನ್ನು ಭೇಟಿಯಾಗಲು ದೇವಗುಡಾರಕ್ಕೆ ಹೋದರು. ಇವರೇ ಯಾಜಕರು ಅನ್ನೋ ಥರ ಧೂಪವನ್ನು ಸುಟ್ಟರು. ಆಗ ಯೆಹೋವನು ಮೋಶೆ ಮತ್ತು ಆರೋನನಿಗೆ ‘ಕೋರಹ ಮತ್ತು ಅವನ ಜನರಿಂದ ದೂರ ನಿಲ್ಲಿರಿ’ ಅಂದನು.

ಮೋಶೆಯನ್ನು ಭೇಟಿಯಾಗಲು ಕೋರಹ ದೇವಗುಡಾರಕ್ಕೆ ಹೋಗಿದ್ದನು. ಆದರೆ ದಾತಾನ್‌, ಅಬೀರಾಮ ಮತ್ತು ಅವರ ಕುಟುಂಬದವರು ಹೋಗಲು ನಿರಾಕರಿಸಿದರು. ಯೆಹೋವನು ಇಸ್ರಾಯೇಲ್ಯರಿಗೆ ‘ಕೋರಹ, ದಾತಾನ್‌ ಮತ್ತು ಅಬೀರಾಮರ ಡೇರೆಗಳಿಂದ ದೂರ ಹೋಗಿರಿ’ ಎಂದನು. ಇಸ್ರಾಯೇಲ್ಯರು ತಕ್ಷಣ ದೂರ ಹೋದರು. ದಾತಾನ್‌, ಅಬೀರಾಮ ಮತ್ತು ಅವರ ಕುಟುಂಬದವರು ಹೊರಗೆ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು. ಆಗ ತಕ್ಷಣ ಭೂಮಿ ಬಾಯ್ದೆರೆದು ಅವರನ್ನು ನುಂಗಿಬಿಟ್ಟಿತ್ತು! ದೇವಗುಡಾರದ ಹತ್ತಿರ ಆಕಾಶದಿಂದ ಬೆಂಕಿಬಿದ್ದು ಕೋರಹ ಮತ್ತು 250 ಮಂದಿ ಪುರುಷರನ್ನು ಸುಟ್ಟುಬಿಟ್ಟಿತು.

ಆಮೇಲೆ ಯೆಹೋವನು ಮೋಶೆಗೆ ‘ಪ್ರತಿಯೊಂದು ಕುಲದ ನಾಯಕನಿಂದ ಒಂದೊಂದು ಕೋಲನ್ನು ತೆಗೆದು ಅದರ ಮೇಲೆ ಅವರ ಹೆಸರನ್ನು ಬರಿ, ಆದರೆ ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸರನ್ನು ಬರಿ. ಇದನ್ನು ದೇವಗುಡಾರದ ಒಳಗೆ ಇಡು, ನಾನು ಯಾರನ್ನು ಆರಿಸುತ್ತೇನೋ ಅವನ ಕೋಲು ಚಿಗುರಿ ಹೂಬಿಡುವುದು’ ಎಂದನು.

ಮಾರನೇ ದಿನ, ಮೋಶೆ ಎಲ್ಲರ ಕೋಲುಗಳನ್ನು ತಂದು ನಾಯಕರಿಗೆ ಕೊಟ್ಟನು. ಆರೋನನ ಕೋಲು ಚಿಗುರಿ ಹೂಬಿಟ್ಟು ಅದರಲ್ಲಿ ಬಾದಾಮಿ ಹಣ್ಣುಗಳಿದ್ದವು. ಈ ರೀತಿಯಲ್ಲಿ, ಆರೋನನ್ನೇ ಮಹಾ ಯಾಜಕನಾಗಿ ಆರಿಸಿಕೊಂಡಿದ್ದೇನೆಂದು ಯೆಹೋವನು ದೃಢಪಡಿಸಿದನು.

“ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ.”—ಇಬ್ರಿಯ 13:17