ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 32

ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಮಹಿಳೆಯರು

ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಮಹಿಳೆಯರು

ಯೆಹೋಶುವ ಅನೇಕ ವರ್ಷಗಳವರೆಗೆ ಯೆಹೋವನ ಜನರನ್ನು ಮುನ್ನಡೆಸಿದ. ಅವನು 110 ವರ್ಷದವನಾದಾಗ ತೀರಿಕೊಂಡ. ಅವನು ಜೀವದಿಂದ ಇರುವವರೆಗೆ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುತ್ತಿದ್ದರು. ಆದರೆ ಯೆಹೋಶುವ ಸತ್ತ ನಂತರ ಅವರು ಕಾನಾನ್ಯರಂತೆ ವಿಗ್ರಹಗಳನ್ನು ಆರಾಧಿಸಲು ಆರಂಭಿಸಿದರು. ಇಸ್ರಾಯೇಲ್ಯರು ತನ್ನ ಮಾತನ್ನು ಕೇಳದೇ ಇದ್ದದ್ದರಿಂದ ಕಾನಾನ್ಯ ಅರಸನಾದ ಯಾಬೀನನಿಂದ ಕಷ್ಟ ಅನುಭವಿಸುವಂತೆ ಯೆಹೋವನು ಮಾಡಿದನು. ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನ ಹತ್ತಿರ ಬೇಡಿಕೊಂಡಾಗ ಆತನು ಬಾರಾಕನನ್ನು ಇಸ್ರಾಯೇಲ್ಯರ ಹೊಸ ನಾಯಕನಾಗಿ ನೇಮಿಸಿದನು. ಇವನು ಇಸ್ರಾಯೇಲ್ಯರು ಯೆಹೋವನ ಬಳಿ ಹಿಂತಿರುಗುವಂತೆ ಸಹಾಯ ಮಾಡಿದ.

ಪ್ರವಾದಿನಿಯಾದ ದೆಬೋರಳು ಬಾರಾಕನಿಗೆ ಕರೆ ಕಳುಹಿಸಿದಳು. ಬಾರಾಕನಿಗೆ ತಿಳಿಸಬೇಕಿದ್ದ ಒಂದು ಸಂದೇಶವನ್ನು ಯೆಹೋವನು ಅವಳಿಗೆ ನೀಡಿದ್ದನು. ಅವಳು ಬಾರಾಕನಿಗೆ ‘10,000 ಪುರುಷರನ್ನು ಕರೆದುಕೊಂಡು ಕೀಷೋನ್‌ ಹಳ್ಳಕ್ಕೆ ಹೋಗಿ ಯಾಬೀನನ ಸೈನ್ಯವನ್ನು ಎದುರಾಗು. ಅಲ್ಲಿ ನೀನು ಯಾಬೀನನ ಸೇನಾಪತಿಯಾದ ಸೀಸೆರನನ್ನು ಸೋಲಿಸುವಿ’ ಎಂದಳು. ಆಗ ಬಾರಾಕನು ದೆಬೋರಳಿಗೆ ‘ನೀನು ಬಂದರೆ ಮಾತ್ರ ನಾನು ಹೋಗುತ್ತೇನೆ’ ಅಂದನು. ಆಗ ಅವಳು ‘ನಾನು ನಿನ್ನ ಜೊತೆ ಬರುತ್ತೇನೆ. ಆದರೆ ಸೀಸೆರನನ್ನು ನೀನು ಕೊಲ್ಲುವುದಿಲ್ಲ. ಒಬ್ಬ ಸ್ತ್ರೀ ಕೊಲ್ಲುತ್ತಾಳೆ ಎಂದು ಯೆಹೋವನು ಹೇಳಿದ್ದಾನೆ’ ಅಂದಳು.

ದೆಬೋರಳು ಬಾರಾಕ ಮತ್ತು ಅವನ ಸೈನಿಕರೊಂದಿಗೆ ಯುದ್ಧ ಮಾಡಲು ತಾಬೋರ್‌ ಬೆಟ್ಟಕ್ಕೆ ಹೋದಳು. ಈ ಸುದ್ದಿ ಸೀಸೆರನ ಕಿವಿಗೆ ಬಿದ್ದಾಗ ತನ್ನ ಯುದ್ಧರಥಗಳನ್ನು ಮತ್ತು ಸೇನಾಪಡೆಯನ್ನು ಅಲ್ಲಿಗೆ ಕರತಂದನು. ಆಗ ದೆಬೋರ ಬಾರಾಕನಿಗೆ ‘ಇವತ್ತು ಯೆಹೋವನು ನಿನಗೆ ಜಯವನ್ನು ಕೊಡುವನು’ ಎಂದಳು. ಬಾರಾಕ ಮತ್ತು ಅವನ 10,000 ಪುರುಷರು ಶಕ್ತಿಶಾಲಿ ಸೀಸೆರನ ಸೈನ್ಯದ ಮೇಲೆ ಯುದ್ಧ ಮಾಡಲು ಹೋದರು.

ಯೆಹೋವನು ಕೀಷೋನ್‌ ಹಳ್ಳ ತುಂಬಿ ಹರಿಯುವಂತೆ ಮಾಡಿದನು. ಆಗ ಸೀಸೆರನ ಯುದ್ಧರಥಗಳು ಮಣ್ಣಿನಲ್ಲಿ ಹೂತು ಹೋದವು. ಸೀಸೆರನು ರಥದಿಂದ ಇಳಿದು ಓಡಿ ಹೋದ. ಬಾರಾಕ ಮತ್ತು ಅವನ ಸೈನಿಕರು ಸೀಸೆರನ ಸೈನ್ಯವನ್ನು ಸೋಲಿಸಿದರು. ಆದರೆ ಸೀಸೆರ ತಪ್ಪಿಸಿಕೊಂಡ! ಅವನು ಯಾಯೇಲ ಎಂಬ ಸ್ತ್ರೀಯ ಗುಡಾರಕ್ಕೆ ಹೋಗಿ ಅಡಗಿಕೊಂಡನು. ಅವಳು ಅವನಿಗೆ ಕುಡಿಯಲು ಹಾಲನ್ನು ಕೊಟ್ಟು ಕಂಬಳಿಯನ್ನು ಅವನ ಮೇಲೆ ಹಾಕಿದಳು. ಅವನಿಗೆ ತುಂಬಾ ಸುಸ್ತಾಗಿದ್ದರಿಂದ ನಿದ್ದೆ ಹೋದ. ಆಗ ಯಾಯೇಲ ಮೆಲ್ಲಮೆಲ್ಲನೆ ಅವನ ಹತ್ತಿರ ಹೋಗಿ ಗುಡಾರದ ಗೂಟವನ್ನು ಅವನ ತಲೆಗೆ ಜಡಿದಳು. ಅವನು ಸತ್ತನು.

ಬಾರಾಕನು ಸೀಸೆರನನ್ನು ಹುಡುಕಿಕೊಂಡು ಬಂದ. ಯಾಯೇಲಳು ಗುಡಾರದಿಂದ ಹೊರಗೆ ಬಂದು ಬಾರಾಕನಿಗೆ ‘ಒಳಗೆ ಬಾ, ನೀನು ಹುಡುಕುತ್ತಿರುವ ವ್ಯಕ್ತಿಯನ್ನು ತೋರಿಸುತ್ತೇನೆ’ ಅಂದಳು. ಬಾರಾಕ ಒಳಗೆ ಹೋದಾಗ ಸೀಸೆರನು ಸತ್ತು ಬಿದ್ದಿದ್ದ. ಹೀಗೆ ಯೆಹೋವನು ಇಸ್ರಾಯೇಲ್ಯರಿಗೆ ಶತ್ರುಗಳ ಮೇಲೆ ಜಯ ಸಿಗುವಂತೆ ಮಾಡಿದನು. ಆದ್ದರಿಂದ ಬಾರಾಕ ಮತ್ತು ದೆಬೋರ ಆತನನ್ನು ಹಾಡಿ ಹೊಗಳಿದರು. ಮುಂದಿನ 40 ವರ್ಷಗಳು ಇಸ್ರಾಯೇಲ್‌ನಲ್ಲಿ ಸಮಾಧಾನವಿತ್ತು.

“ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.”—ಕೀರ್ತನೆ 68:11