ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 33

ರೂತ್‌ ಮತ್ತು ನೊಮೊಮಿ

ರೂತ್‌ ಮತ್ತು ನೊಮೊಮಿ

ಇಸ್ರಾಯೇಲಿನಲ್ಲಿ ಭೀಕರ ಬರಗಾಲದ ಸಮಯ. ನೊವೊಮಿ ಎಂಬ ಇಸ್ರಾಯೇಲ್ಯ ಸ್ತ್ರೀ ತನ್ನ ಗಂಡ ಹಾಗೂ ಇಬ್ಬರು ಗಂಡುಮಕ್ಕಳ ಜೊತೆ ಮೋವಾಬ್‌ ದೇಶಕ್ಕೆ ಹೋದಳು. ಸಮಾಯಾನಂತರ ಆಕೆಯ ಗಂಡ ತೀರಿಕೊಂಡ. ಅವಳ ಇಬ್ಬರು ಗಂಡುಮಕ್ಕಳು ರೂತ್‌ ಮತ್ತು ಒರ್ಫಾ ಎಂಬ ಮೋವಾಬಿನ ಹುಡುಗಿಯರನ್ನು ಮದುವೆಯಾದರು. ದುಃಖಕರವಾಗಿ ಸ್ವಲ್ಪ ದಿನಗಳ ನಂತರ ಆ ಗಂಡು ಮಕ್ಕಳೂ ತೀರಿಕೊಂಡರು.

ಇಸ್ರಾಯೇಲಿನಲ್ಲಿ ಬರಗಾಲ ಕಳೆದಿದೆ ಎಂಬ ಸುದ್ದಿ ನೊವೊಮಿಯ ಕಿವಿಗೆ ಬಿತ್ತು. ಆದ್ದರಿಂದ ತನ್ನ ಊರಿಗೆ ಹೋಗಲು ತೀರ್ಮಾನ ಮಾಡಿದಳು. ರೂತ್‌ ಮತ್ತು ಒರ್ಫಾ ಸಹ ಅವಳೊಂದಿಗೆ ಹೊರಟರು. ದಾರಿಯಲ್ಲಿ ನೊವೊಮಿ ಅವರಿಗೆ ‘ನೀವು ನನ್ನ ಮಕ್ಕಳಿಗೆ ಒಳ್ಳೇ ಹೆಂಡತಿಯರಾಗಿ, ನನಗೆ ಒಳ್ಳೇ ಸೊಸೆಯರಾಗಿ ಇದ್ರಿ. ನೀವು ಮತ್ತೆ ಮದುವೆಯಾಗಿ ಸುಖವಾಗಿ ಇರಬೇಕು ಅನ್ನೋದೇ ನನ್ನಾಸೆ. ಆದ್ದರಿಂದ ಮೋವಾಬಿನಲ್ಲಿರುವ ನಿಮ್ಮ ಮನೆಗೆ ಹೋಗಿ’ ಅಂದಳು. ಆಗ ಅವರು ‘ಇಲ್ಲ ಅತ್ತೆ. ನಾವು ನಿನ್ನನ್ನು ತುಂಬ ಪ್ರೀತಿಸುತ್ತೇವೆ! ನಾವು ನಿನ್ನನ್ನು ಬಿಟ್ಟು ಹೋಗಲ್ಲ’ ಅಂದರು. ನೊವೊಮಿ ಅವರಿಗೆ ಮನೆಗೆ ಹೋಗುವಂತೆ ಹೇಳುತ್ತಾ ಇದ್ದಳು. ಕೊನೆಗೆ ಒರ್ಫಾ ಮನೆ ದಾರಿ ಹಿಡಿದಳು. ಆದರೆ ರೂತಳು ಹೋಗಲಿಲ್ಲ. ಆಗ ನೊವೊಮಿ ಅವಳಿಗೆ ‘ನೋಡು, ಒರ್ಫಾ ಅವಳ ಜನರ ಬಳಿಗೂ ಅವಳ ದೇವರ ಬಳಿಗೂ ಹೋಗುತ್ತಿದ್ದಾಳೆ. ನೀನೂ ಅವಳ ಜೊತೆ ವಾಪಸ್‌ ನಿನ್ನ ತಾಯಿ ಮನೆಗೆ ಹೋಗು’ ಅಂದಳು. ಆದರೆ ರೂತಳು ‘ನಾನು ನಿನ್ನನ್ನು ಬಿಟ್ಟು ಹೋಗಲ್ಲ. ನಿನ್ನ ಜನರೇ ನನ್ನ ಜನರು, ನಿನ್ನ ದೇವರೇ ನನ್ನ ದೇವರು’ ಎಂದಳು. ಈ ಮಾತನ್ನು ಕೇಳಿದಾಗ ನೊವೊಮಿಗೆ ಅದೆಷ್ಟು ಖುಷಿ ಆಗಿರಬೇಕಲ್ವಾ?

ರೂತ್‌ ಮತ್ತು ನೊವೊಮಿ ಇಸ್ರಾಯೇಲಿಗೆ ಬಂದಾಗ ಅದು ಜವೆಗೋದಿಯ ಕೊಯ್ಲಿನ ಸಮಯ ವಾಗಿತ್ತು. ಒಂದಿನ ರೂತಳು ಹೊಲದಲ್ಲಿ ಉಳಿದಿರುವ ತೆನೆಯನ್ನು ಕೂಡಿಸಿಕೊಳ್ಳಲು ರಾಹಾಬಳ ಮಗನಾದ ಬೋವಜನ ಹೊಲಕ್ಕೆ ಹೋದಳು. ರೂತಳು ಒಬ್ಬ ಮೋವಾಬ್ಯಳು ಮತ್ತು ತನ್ನ ಅತ್ತೆ ನೊವೊಮಿಗೆ ನಿಷ್ಠೆ ತೋರಿಸಿ ಅವಳ ಜೊತೆ ಇಲ್ಲಿಗೆ ಬಂದಿದ್ದಾಳೆ ಅನ್ನೋ ವಿಷಯ ಬೋವಜನಿಗೆ ಗೊತ್ತಾಯಿತು. ಆದ್ದರಿಂದ ರೂತಳಿಗಾಗಿ ಹೊಲದಲ್ಲಿ ಸ್ವಲ್ಪ ಹೆಚ್ಚಾಗಿಯೇ ತೆನೆಗಳನ್ನು ಬಿಡಲು ಸೇವಕರಿಗೆ ಹೇಳಿದನು.

ಆವತ್ತು ಸಂಜೆ ನೊವೊಮಿ ‘ಇವತ್ತು ನೀನು ಯಾರ ಹೊಲದಲ್ಲಿ ಕೆಲಸ ಮಾಡಿದೆ?’ ಎಂದು ರೂತಳನ್ನು ಕೇಳಿದಳು. ಅದಕ್ಕೆ ರೂತ್‌ ‘ಬೋವಜನೆಂಬ ವ್ಯಕ್ತಿಯ ಹೊಲದಲ್ಲಿ’ ಅಂತ ಉತ್ತರ ಕೊಟ್ಟಳು. ಆಗ ನೊವೊಮಿ ‘ಬೋವಜ ನನ್ನ ಗಂಡನ ಸಂಬಂಧಿ. ನೀನು ಅವನ ಹೊಲದಲ್ಲೇ ಇತರ ಸ್ತ್ರೀಯರೊಟ್ಟಿಗೆ ಕೆಲಸ ಮಾಡು. ಅಲ್ಲಿ ನೀನು ಸುರಕ್ಷಿತವಾಗಿ ಇರುತ್ತೀಯ’ ಅಂದಳು.

ಕೊಯ್ಲಿನ ಕಾಲ ಮುಗಿಯುವ ತನಕ ರೂತಳು ಬೋವಜನ ಹೊಲದಲ್ಲೇ ಕೆಲಸ ಮಾಡಿದಳು. ರೂತ್‌ ಕಷ್ಟ ಪಟ್ಟು ಕೆಲಸಮಾಡುವುದನ್ನು ಮತ್ತು ಅವಳ ಒಳ್ಳೇ ನಡತೆಯನ್ನು ಬೋವಜ ಗಮನಿಸಿದ. ಆ ಕಾಲದಲ್ಲಿ ಒಬ್ಬನು ಮಗನಿಲ್ಲದೆ ತೀರಿಕೊಂಡರೆ ಸಂಬಂಧಿಕನೊಬ್ಬ ಸತ್ತವನ ಹೆಂಡತಿಯನ್ನು ಮದುವೆ ಆಗಬಹುದಿತ್ತು. ಆದ್ದರಿಂದ ಬೋವಜ ರೂತಳನ್ನು ಮದುವೆಯಾದ. ಅವರಿಗೆ ಮಗ ಹುಟ್ಟಿದ. ಅವನ ಹೆಸರು ಓಬೇದ. ಇವನು ಮುಂದೆ ರಾಜ ದಾವೀದನಿಗೆ ಅಜ್ಜನಾದ. ನೊವೊಮಿಯ ಸ್ನೇಹಿತರಿಗೆ ಖುಷಿನೋ ಖುಷಿ. ಅವರು ನೊವೊಮಿಗೆ ‘ಮೊದಲು ಯೆಹೋವನು ನಿನಗೆ ಮುತ್ತಿನಂಥ ಸೊಸೆ ರೂತಳನ್ನು ಕೊಟ್ಟ. ಈಗ ಮುದ್ದಾದ ಮೊಮ್ಮೊಗನನ್ನು ಕೊಟ್ಟಿದ್ದಾನೆ. ಆದ್ದರಿಂದ ಯೆಹೋವನಿಗೆ ಸ್ತುತಿ ಸಲ್ಲಲಿ’ ಅಂದರು.

“ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.”—ಜ್ಞಾನೋಕ್ತಿ 18:24