ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 34

ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು

ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು

ಸ್ವಲ್ಪ ಸಮಯದ ನಂತರ ಇಸ್ರಾಯೇಲ್ಯರು ಮತ್ತೆ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಏಳು ವರ್ಷಗಳವರೆಗೆ ಮಿದ್ಯಾನ್ಯರು ಇಸ್ರಾಯೇಲ್ಯರ ದನಕರುಗಳನ್ನು ಕದ್ದು ಬೆಳೆಗಳನ್ನು ನಾಶಮಾಡಿದರು. ಅವರಿಂದ ತಪ್ಪಿಸಿಕೊಳ್ಳಲು ಇಸ್ರಾಯೇಲ್ಯರು ಗುಹೆ ಮತ್ತು ಬೆಟ್ಟಗಳಿಗೆ ಹೋಗಿ ಅಡಗಿಕೊಂಡರು. ‘ಇವರಿಂದ ಕಾಪಾಡಪ್ಪಾ’ ಎಂದು ಯೆಹೋವನನ್ನು ಅಂಗಲಾಚಿದರು. ಆಗ ಯೆಹೋವನು ಒಬ್ಬ ದೇವದೂತನನ್ನು ಗಿದ್ಯೋನನೆಂಬ ಯುವಕನ ಬಳಿ ಕಳುಹಿಸಿದ. ಆ ದೇವದೂತ ಗಿದ್ಯೋನನಿಗೆ ‘ಒಬ್ಬ ಬಲಿಷ್ಠ ನಾಯಕನನ್ನಾಗಿ ಮಾಡಲು ಯೆಹೋವನು ನಿನ್ನನ್ನು ಆರಿಸಿದ್ದಾನೆ’ ಅಂದನು. ಆಗ ಅವನು ‘ಸ್ವಾಮಿ ಅಲ್ಪನಾದ ನಾನು ಇಸ್ರಾಯೇಲ್ಯರನ್ನು ಹೇಗೆ ರಕ್ಷಿಸಲಿ?’ ಎಂದು ಕೇಳಿದ.

ಯೆಹೋವನು ತನ್ನನ್ನೇ ಆರಿಸಿದ್ದಾನೆಂದು ಗಿದ್ಯೋನನಿಗೆ ಗೊತ್ತಾಯಿತು. ಹೇಗೆ? ಅವನು ಚರ್ಮದ ಬಟ್ಟೆಯ ತುಂಡನ್ನು ನೆಲಕ್ಕೆ ಹಾಕಿ ಯೆಹೋವನಿಗೆ ‘ನಾಳೆ ಬೆಳಿಗ್ಗೆ ಮಂಜಿನಿಂದ ಬಟ್ಟೆ ಮಾತ್ರ ಒದ್ದೆಯಾಗಿ ನೆಲ ಒಣಗಿರುವಂತೆ ಮಾಡು. ಆಗ ಇಸ್ರಾಯೇಲ್ಯರನ್ನು ಕಾಪಾಡಲು ನೀನು ನನ್ನನ್ನೇ ಆರಿಸಿದ್ದೀ ಎಂದು ತಿಳುಕೊಳ್ಳುವೆ’ ಅಂದನು. ಮಾರನೇ ದಿನ ಬೆಳಿಗ್ಗೆ ಬಟ್ಟೆ ಮಾತ್ರ ಒದ್ದೆಯಾಗಿ ನೆಲ ಒಣಗಿತ್ತು! ಗಿದ್ಯೋನ ಮತ್ತೊಮ್ಮೆ ‘ನಾಳೆ ಬೆಳಿಗ್ಗೆ ನೆಲ ಮಾತ್ರ ಒದ್ದೆಯಾಗಿದ್ದು ಬಟ್ಟೆ ಒಣಗಿರುವಂತೆ ಮಾಡು’ ಎಂದು ಹೇಳಿದನು. ಅವನು ಹೇಳಿದಂತೆ ಆದಾಗ ಯೆಹೋವನು ತನ್ನನ್ನೇ ಆರಿಸಿದ್ದಾನೆ ಎಂದು ಗಿದ್ಯೋನನಿಗೆ ಮನವರಿಕೆ ಆಯಿತು. ಅವನು ಮಿದ್ಯಾನ್ಯರ ಮೇಲೆ ಯುದ್ಧ ಮಾಡಲು ಸೈನಿಕರನ್ನು ಕೂಡಿಸಿ ಸಜ್ಜಾದನು.

ಯೆಹೋವನು ಗಿದ್ಯೋನನಿಗೆ ‘ನಾನು ಇಸ್ರಾಯೇಲ್ಯರನ್ನು ಗೆಲ್ಲುವಂತೆ ಮಾಡುತ್ತೇನೆ. ಆದರೆ ನಿನ್ನ ಬಳಿ ತುಂಬಾ ಸೈನಿಕರಿದ್ದರೆ ನಿಮ್ಮ ತೋಳು ಬಲದಿಂದ ಗೆದ್ದಿರೆಂದು ನೀವು ನೆನೆಸಬಹುದು. ಹಾಗಾಗಿ ಯುದ್ಧಕ್ಕೆ ಬರಲು ಧೈರ್ಯವಿಲ್ಲದವರನ್ನು ಮನೆಗೆ ಕಳುಹಿಸು’ ಅಂದನು. ಆಗ 22,000 ಸೈನಿಕರು ಮನೆಗೆ ಹೋಗಿ 10,000 ಸೈನಿಕರು ಉಳಿದುಕೊಂಡರು. ಯೆಹೋವನು ‘ಸೈನಿಕರು ಈಗಲೂ ಜಾಸ್ತಿ ಇದ್ದಾರೆ. ಅವರನ್ನು ಹಳ್ಳಕ್ಕೆ ಕರೆದುಕೊಂಡು ಹೋಗಿ ನೀರನ್ನು ಕುಡಿಯಲು ಹೇಳು. ನೀರು ಕುಡಿಯುವಾಗ ಶತ್ರುಗಳು ನಮ್ಮನ್ನು ಆಕ್ರಮಿಸುತ್ತಾರೋ ಅಂತ ಗಮನಿಸಿ ನೀರು ಕುಡಿಯುವವರನ್ನು ಮಾತ್ರ ಆರಿಸಿಕೋ’ ಅಂದನು. 300 ಮಂದಿ ಮಾತ್ರ ನೀರು ಕುಡಿಯುವಾಗ ಎಚ್ಚರದಿಂದ ಇದ್ದರು. ಈ ಕೆಲವೇ ಪುರುಷರು 1,35,000 ಮಿದ್ಯಾನ್ಯ ಸೈನಿಕರನ್ನು ಸೋಲಿಸುವರು ಎಂದು ಯೆಹೋವನು ಮಾತು ಕೊಟ್ಟನು.

ಅವತ್ತು ರಾತ್ರಿ ಯೆಹೋವನು ಗಿದ್ಯೋನನಿಗೆ ‘ಮಿದ್ಯಾನ್ಯರ ಮೇಲೆ ಆಕ್ರಮಣ ಮಾಡಲು ಇದೇ ಸರಿಯಾದ ಸಮಯ!’ ಅಂದನು. ಗಿದ್ಯೋನನು ತನ್ನ ಸೈನಿಕರಿಗೆ ಕೊಂಬುಗಳನ್ನು ಮತ್ತು ಪಂಜಿರುವ ಮಡಕೆಯನ್ನು ಕೊಟ್ಟು ‘ನೀವು ನನ್ನನ್ನೇ ನೋಡುತ್ತಾ ನಾನು ಮಾಡಿದಂತೆ ಮಾಡಿ’ ಅಂದ. ಗಿದ್ಯೋನ ತನ್ನ ಕೊಂಬನ್ನು ಊದಿ, ಮಡಕೆಯನ್ನು ಒಡೆದು ಬೆಂಕಿಯ ಪಂಜನ್ನು ಮೇಲಕ್ಕೆ ಎತ್ತಿ ‘ಯೆಹೋವನ ಕತ್ತಿ, ಗಿದ್ಯೋನನ ಕತ್ತಿ’ ಎಂದು ಜೋರಾಗಿ ಆರ್ಭಟಿಸಿದ. ಮೂನ್ನೂರು ಮಂದಿ ಕೂಡ ಅದನ್ನೇ ಮಾಡಿದರು. ಆಗ ಮಿದ್ಯಾನ್ಯರು ಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿಹೋದರು. ಗಲಿಬಿಲಿಗೊಂಡ ಮಿದ್ಯಾನ್ಯರು ಒಬ್ಬರನ್ನೊಬ್ಬರು ಕೊಂದುಹಾಕಿದರು. ಹೀಗೆ ಮತ್ತೊಮ್ಮೆ ತಮ್ಮ ಶತ್ರುಗಳನ್ನು ಸೋಲಿಸಲು ಇಸ್ರಾಯೇಲ್ಯರಿಗೆ ಯೆಹೋವನು ಸಹಾಯ ಮಾಡಿದನು.

“ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯು ದೇವರಿಂದಲೇ ಹೊರತು ನಮ್ಮೊಳಗಿಂದ ಬರುವಂಥದ್ದಲ್ಲ.”—2 ಕೊರಿಂಥ 4:7