ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 35

ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ

ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ

ಇಸ್ರಾಯೇಲ್ಯ ಪುರುಷನಾದ ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ, ಇನ್ನೊಬ್ಬಳು ಪೆನಿನ್ನ. ಎಲ್ಕಾನನಿಗೆ ಹನ್ನಳ ಮೇಲೆ ತುಂಬ ಪ್ರೀತಿ. ಪೆನಿನ್ನಳಿಗೆ ತುಂಬ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ಪೆನಿನ್ನ ಹನ್ನಳನ್ನು ಗೇಲಿ ಮಾಡುತ್ತಿದ್ದಳು. ಎಲ್ಕಾನ ಪ್ರತಿವರ್ಷ ಆರಾಧನೆಗಾಗಿ ತನ್ನ ಇಡೀ ಕುಟುಂಬವನ್ನು ಕರಕೊಂಡು ಶೀಲೋವಿನಲ್ಲಿದ್ದ ದೇವಗುಡಾರಕ್ಕೆ ಹೋಗುತ್ತಿದ್ದ. ಒಂದು ಸಾರಿ ಅಲ್ಲಿಗೆ ಹೋದಾಗ ತನ್ನ ಹೆಂಡತಿ ತುಂಬ ದುಃಖದಿಂದ ಇರುವುದನ್ನು ಎಲ್ಕಾನ ಗಮನಿಸಿದ. ಆಗ ಅವನು ‘ಹನ್ನ, ದಯವಿಟ್ಟು ಅಳಬೇಡ. ನಿನಗೆ ನಾನಿದ್ದೀನಿ. ನಾನು ನಿನ್ನನ್ನ ಪ್ರೀತಿಸುತ್ತೀನಿ’ ಎಂದ.

ನಂತರ ಹನ್ನ ಪ್ರಾರ್ಥನೆ ಮಾಡಲು ಒಂಟಿಯಾಗಿ ಗುಡಾರಕ್ಕೆ ಹೋದಳು. ಅವಳು ಅಳುತ್ತಾ ‘ಯೆಹೋವನೇ ನನಗೆ ಸಹಾಯ ಮಾಡು’ ಅಂತ ಪ್ರಾರ್ಥಿಸುತ್ತಿದ್ದಳು. ‘ಯೆಹೋವನೇ, ನೀನು ನನಗೊಬ್ಬ ಮಗನನ್ನು ಕೊಟ್ಟರೆ ಅವನನ್ನು ಜೀವನ ಪೂರ್ತಿ ನಿನ್ನ ಸೇವೆ ಮಾಡಲು ನಿನಗೆ ಕೊಡುತ್ತೇನೆ’ ಎಂದು ಯೆಹೋವನಿಗೆ ಮಾತು ಕೊಟ್ಟಳು.

ಹೀಗೆ ಪ್ರಾರ್ಥಿಸುವಾಗ ಹನ್ನಳ ತುಟಿಗಳು ಮಾತ್ರ ಅಲ್ಲಾಡುತ್ತಿದ್ದು ಶಬ್ದ ಹೊರಗೆ ಬರುತ್ತಿರಲಿಲ್ಲ. ಇದನ್ನು ಮಹಾಯಾಜಕ ಏಲಿ ನೋಡಿ ಹನ್ನ ಕುಡಿದ್ದಾಳೆ ಅಂತ ಅಂದುಕೊಂಡ. ಆಗ ಹನ್ನ ‘ಸ್ವಾಮಿ ನಾನು ಕುಡಿದಿಲ್ಲ. ನನ್ನ ಕಷ್ಟನಾ ಯೆಹೋವನ ಹತ್ತಿರ ಹೇಳುತ್ತಿದ್ದೇನೆ’ ಅಂದಳು. ಏಲಿಗೆ ತನ್ನ ತಪ್ಪು ಅರಿವಾಗಿ ‘ನೀನು ಕೇಳಿಕೊಂಡದ್ದನ್ನು ಯೆಹೋವನು ನಿನಗೆ ಕೊಡಲಿ’ ಎಂದ. ಹನ್ನಳ ಮನಸ್ಸು ಹಗುರವಾಯಿತು. ಅವಳು ಮನೆ ಕಡೆ ಹೆಜ್ಜೆ ಹಾಕಿದಳು. ಇದಾಗಿ ಒಂದು ವರ್ಷದೊಳಗೆ ಅವಳಿಗೆ ಒಬ್ಬ ಮಗ ಹುಟ್ಟಿದ. ಅವನಿಗೆ ಸಮುವೇಲ ಎಂದು ಹೆಸರಿಟ್ಟಳು. ಆಗ ಹನ್ನಳಿಗೆ ಅದೆಷ್ಟು ಖುಷಿ ಆಗಿರಬೇಕಲ್ವಾ?

ಯೆಹೋವನಿಗೆ ಕೊಟ್ಟ ಮಾತನ್ನು ಹನ್ನ ಮರೆಯಲಿಲ್ಲ. ಸಮುವೇಲ ಮೊಲೆ ಬಿಟ್ಟ ಕೂಡಲೆ ತಕ್ಷಣ ಅವಳು ಅವನನ್ನು ದೇವಗುಡಾರಕ್ಕೆ ಕರಕೊಂಡು ಬಂದಳು. ಅವಳು ಏಲಿಗೆ ‘ನಾನು ಬೇಡಿಕೊಂಡಿದ್ದು ಇದೇ ಮಗನಿಗಾಗಿ. ಜೀವನಪೂರ್ತಿ ಯೆಹೋವನ ಸೇವೆ ಮಾಡಲು ಇವನನ್ನು ಇಲ್ಲೇ ಬಿಟ್ಟುಹೋಗುತ್ತೇನೆ’ ಅಂದಳು. ಪ್ರತಿವರ್ಷ ಎಲ್ಕಾನ ಮತ್ತು ಹನ್ನ ಸಮುವೇಲನನ್ನು ನೋಡಲು ಬರುತ್ತಿದ್ದರು. ಅವನಿಗಾಗಿ ತೋಳಿಲ್ಲದ ಅಂಗಿಯನ್ನು ತರುತ್ತಿದ್ದರು. ಯೆಹೋವನು ಹನ್ನಳಿಗೆ ಇನ್ನೂ ಮೂರು ಗಂಡು ಹಾಗೂ ಎರಡು ಹೆಣ್ಣುಮಕ್ಕಳನ್ನು ಕೊಟ್ಟು ಆಶೀರ್ವದಿಸಿದನು.

“ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ.”—ಮತ್ತಾಯ 7:7