ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 36

ಯೆಪ್ತಾಹ ಕೊಟ್ಟ ಮಾತು

ಯೆಪ್ತಾಹ ಕೊಟ್ಟ ಮಾತು

ಇಸ್ರಾಯೇಲ್ಯರು ಮತ್ತೆ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಅಮ್ಮೋನಿಯರು ಇಸ್ರಾಯೇಲ್ಯರ ಮೇಲೆ ಆಕ್ರಮಣ ಮಾಡಿದಾಗ ಆ ಸುಳ್ಳು ದೇವರುಗಳು ಇಸ್ರಾಯೇಲ್ಯರಿಗೆ ಯಾವುದೇ ಸಹಾಯ ಮಾಡಲಿಲ್ಲ. ಅನೇಕ ವರ್ಷಗಳ ವರೆಗೆ ಇಸ್ರಾಯೇಲ್ಯರು ಕಷ್ಟ ಅನುಭವಿಸಿದರು. ಕೊನೆಗೆ ಅವರು ಯೆಹೋವನಿಗೆ ‘ನಾವು ಪಾಪ ಮಾಡಿದ್ದೇವೆ. ದಯವಿಟ್ಟು ಶತ್ರುಗಳಿಂದ ನಮ್ಮನ್ನು ಕಾಪಾಡು’ ಎಂದು ಬೇಡಿಕೊಂಡರು. ಇಸ್ರಾಯೇಲ್ಯರು ತಮ್ಮಲ್ಲಿದ್ದ ವಿಗ್ರಹಗಳನ್ನು ನಾಶ ಮಾಡಿ ಮತ್ತೆ ಯೆಹೋವನನ್ನು ಆರಾಧಿಸಲು ಶುರು ಮಾಡಿದರು. ಅವರು ಇನ್ನು ಮುಂದೆ ಕಷ್ಟ ಪಡುವುದು ಯೆಹೋವನಿಗೆ ಇಷ್ಟವಿರಲಿಲ್ಲ.

ಅಮ್ಮೋನಿಯರ ವಿರುದ್ಧದ ಯುದ್ಧದಲ್ಲಿ ಇಸ್ರಾಯೇಲ್ಯರನ್ನು ಮುನ್ನಡೆಸಲು ಯೆಪ್ತಾಹ ಎಂಬ ಯೋಧನನ್ನು ಆರಿಸಲಾಯಿತು. ಅವನು ಯೆಹೋವನಿಗೆ, ‘ಈ ಯುದ್ಧವನ್ನು ಗೆಲ್ಲಲು ನೀನು ನಮಗೆ ಸಹಾಯ ಮಾಡಿದರೆ ನಾನು ನಿನಗೆ ಒಂದು ಮಾತು ಕೊಡುತ್ತೇನೆ. ಅದೇನೆಂದರೆ ನಾನು ಮನೆಗೆ ವಾಪಸ್ಸು ಹೋಗುವಾಗ ನನ್ನನ್ನು ಭೇಟಿಯಾಗಲು ನನ್ನ ಮನೆಯಿಂದ ಹೊರಗೆ ಬರುವ ಮೊದಲ ವ್ಯಕ್ತಿಯನ್ನು ನಿನಗೆ ಕೊಡುತ್ತೇನೆ’ ಎಂದನು. ಯೆಹೋವನು ಯೆಪ್ತಾಹನ ಬೇಡಿಕೆಯನ್ನು ಕೇಳಿ ಯುದ್ಧದಲ್ಲಿ ಅವನಿಗೆ ಜಯ ನೀಡಿದನು.

ಯೆಪ್ತಾಹನು ಮನೆಗೆ ವಾಪಸ್ಸು ಬಂದಾಗ ಮೊದಲು ಅವನನ್ನು ನೋಡಲು ಬಂದದ್ದು ಅವನ ಒಬ್ಬಳೇ ಮುದ್ದಿನ ಮಗಳು. ಅವಳು ನೃತ್ಯ ಮಾಡುತ್ತಾ ದಮ್ಮಡಿ ಬಡಿಯುತ್ತಾ ಬಂದಳು. ಆಗ ಯೆಪ್ತಾಹ ಏನು ಮಾಡಿದ? ಅವನು ತನ್ನ ಮಾತನ್ನು ನೆನಪಿಸಿಕೊಂಡು ‘ಅಯ್ಯೋ, ನನ್ನ ಮಗಳೇ! ನೀನು ನನ್ನನ್ನು ಕುಗ್ಗಿಸಿ ಬಿಟ್ಟೆ. ನಾನು ಯೆಹೋವನಿಗೆ ಮಾತು ಕೊಟ್ಟಿದ್ದೇನೆ. ಅದನ್ನು ಪಾಲಿಸಲು ನಿನ್ನನ್ನು ದೇವರ ಸೇವೆ ಮಾಡಲು ಶೀಲೋವಿನಲ್ಲಿರುವ ದೇವಗುಡಾರಕ್ಕೆ ಕಳುಹಿಸಬೇಕು’ ಅಂದನು. ಆಗ ಅವನ ಮಗಳು ‘ಅಪ್ಪಾ, ನೀನು ಯೆಹೋವನಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಲೇಬೇಕು. ಆದರೆ ನನ್ನದೊಂದೇ ಆಸೆ, ಎರಡು ತಿಂಗಳು ಗೆಳತಿಯರ ಜೊತೆ ಬೆಟ್ಟದ ಪ್ರದೇಶಗಳಿಗೆ ಹೋಗಿ ಇದ್ದು ಬರುತ್ತೇನೆ. ಆಮೇಲೆ ಶೀಲೋವಿಗೆ ಹೋಗುತ್ತೇನೆ’ ಅಂದಳು. ಯೆಪ್ತಾಹನ ಮಗಳು ತನ್ನ ಉಳಿದ ಜೀವಮಾನವೆಲ್ಲಾ ದೇವಗುಡಾರದಲ್ಲಿ ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡಿದಳು. ಪ್ರತಿವರ್ಷ ಆಕೆಯ ಗೆಳತಿಯರು ಅವಳನ್ನು ಭೇಟಿ ಮಾಡಲು ಶೀಲೋವಿಗೆ ಹೋಗುತ್ತಿದ್ದರು.

“ನನಗಿಂತಲೂ ಹೆಚ್ಚಾಗಿ ಮಗನ ಅಥವಾ ಮಗಳ ಮೇಲೆ ಮಮತೆಯಿರುವವನು ನನಗೆ ಯೋಗ್ಯನಲ್ಲ.”—ಮತ್ತಾಯ 10:37