ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 38

ಯೆಹೋವನಿಂದ ಶಕ್ತಿ ಪಡೆದ ಸಂಸೋನ

ಯೆಹೋವನಿಂದ ಶಕ್ತಿ ಪಡೆದ ಸಂಸೋನ

ಕಾಲ ಕಳೆದಂತೆ ಅನೇಕ ಇಸ್ರಾಯೇಲ್ಯರು ಮತ್ತೊಮ್ಮೆ ವಿಗ್ರಹಗಳನ್ನು ಆರಾಧಿಸಲು ಆರಂಭಿಸಿದರು. ಆದ್ದರಿಂದ ಯೆಹೋವನು ಅವರನ್ನು ಫಿಲಿಷ್ಟಿಯರ ಕೈಗೊಪ್ಪಿಸಿದನು. ಆದರೆ ಕೆಲವು ಇಸ್ರಾಯೇಲ್ಯರು ಯೆಹೋವನನ್ನು ಪ್ರೀತಿಸುತ್ತಿದ್ದರು. ಅವರಲ್ಲಿ ಒಬ್ಬ ಮಾನೋಹ. ಅವನಿಗೆ ಮಕ್ಕಳಿರಲಿಲ್ಲ. ಒಂದಿನ ಯೆಹೋವನು ಒಬ್ಬ ದೇವದೂತನನ್ನು ಮಾನೋಹನ ಹೆಂಡತಿಯ ಬಳಿ ಕಳುಹಿಸಿದ. ದೇವದೂತ ಅವಳಿಗೆ ‘ನಿನಗೊಬ್ಬ ಮಗ ಹುಟ್ಟುವನು. ಅವನು ಇಸ್ರಾಯೇಲ್ಯರನ್ನು ಫಿಲಿಷ್ಟಿಯರಿಂದ ಕಾಪಾಡುತ್ತಾನೆ. ಅವನು ನಾಜೀರನಾಗಿರುತ್ತಾನೆ’ ಅಂದನು. ನಾಜೀರ ಅಂದರೆ ಯಾರು ಗೊತ್ತಾ? ಯೆಹೋವನ ವಿಶೇಷ ಸೇವಕರೇ ನಾಜೀರರು. ಅವರು ತಮ್ಮ ತಲೆಕೂದಲನ್ನು ಕತ್ತರಿಸಬಾರದಿತ್ತು.

ಸಮಯಾನಂತರ ಮಾನೋಹನಿಗೆ ಒಬ್ಬ ಮಗ ಹುಟ್ಟಿದ. ಅವನಿಗೆ ಸಂಸೋನ ಎಂದು ಹೆಸರಿಡಲಾಯಿತು. ಸಂಸೋನ ದೊಡ್ಡವನಾದಂತೆ ಯೆಹೋವನು ಅವನಿಗೆ ತುಂಬ ಶಕ್ತಿ ಕೊಟ್ಟನು. ಅವನ ಶಕ್ತಿ ಎಷ್ಟಿತ್ತೆಂದರೆ ಅವನು ಬರೀ ಕೈಯಿಂದ ಸಿಂಹವನ್ನು ಕೊಲ್ಲಬಹುದಿತ್ತು. ಒಂದು ಸಂದರ್ಭದಲ್ಲಿ ಒಬ್ಬನೇ 30 ಫಿಲಿಷ್ಟಿಯರನ್ನು ಕೊಂದ. ಫಿಲಿಷ್ಟಿಯರು ಅವನನ್ನು ದ್ವೇಷಿಸುತ್ತಿದ್ದರು. ಅವನನ್ನು ಸಾಯಿಸಲು ದಾರಿ ಹುಡುಕುತ್ತಿದ್ದರು. ಒಂದಿನ ರಾತ್ರಿ ಸಂಸೋನ ಗಾಜ ಎಂಬಲ್ಲಿ ಮಲಗಿದ್ದನು. ಆಗ ಫಿಲಿಷ್ಟಿಯರು ಅಲ್ಲಿಗೆ ಬಂದು ಬೆಳಗಾಗುತ್ತಲೇ ಇವನನ್ನು ಕೊಂದುಹಾಕಬೇಕು ಅಂದುಕೊಂಡು ಊರಬಾಗಿಲ ಬಳಿ ಹೊಂಚು ಹಾಕಿ ಕುಳಿತಿದ್ದರು. ಆದರೆ ಸಂಸೋನ ಮಧ್ಯರಾತ್ರಿ ಎದ್ದು ಊರ ಬಾಗಿಲನ್ನು ನೆಲದಿಂದ ಬುಡಸಮೇತ ಹೊರಗೆ ಕಿತ್ತು ತೆಗೆದನು. ಅಲ್ಲದೇ ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೆಬ್ರೋನಿನ ಹತ್ತಿರವಿರುವ ಪರ್ವತದ ತುದಿಗೆ ಹೋದನು!

ನಂತರ ಫಿಲಿಷ್ಟಿಯರು ಸಂಸೋನನ ಪ್ರೇಯಸಿಯಾದ ದೆಲೀಲಳ ಬಳಿ ಹೋಗಿ ‘ಸಂಸೋನನ ಶಕ್ತಿಗೆ ಏನು ಕಾರಣ ಎಂದು ತಿಳಿದುಕೊಂಡು ಅದನ್ನು ನಮಗೆ ತಿಳಿಸಿದರೆ ನಿನಗೆ ಐದು ಸಾವಿರದ ಐನೂರು ಬೆಳ್ಳಿ ನಾಣ್ಯಗಳನ್ನು ಕೊಡುತ್ತೇವೆ. ನಾವು ಅವನನ್ನು ಹಿಡಿದು ಸೆರೆಮನೆಗೆ ಹಾಕಬೇಕು’ ಅಂದರು. ದೆಲೀಲಳಿಗೆ ಹಣ ಬೇಕಿದ್ದರಿಂದ ಅದಕ್ಕೆ ಒಪ್ಪಿದಳು. ಮೊದಮೊದಲು ಸಂಸೋನ ತನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ. ಆದರೆ ದೆಲೀಲ ಅವನನ್ನು ತುಂಬಾ ಪೀಡಿಸಿದ್ದರಿಂದ ಅವನು ತನ್ನ ಶಕ್ತಿಯ ಗುಟ್ಟನ್ನು ಹೇಳಿಬಿಟ್ಟ. ‘ನಾನು ನಾಜೀರನಾಗಿರುವುದರಿಂದ ಇದುವರೆಗೂ ನನ್ನ ತಲೆಕೂದಲನ್ನು ಕತ್ತರಿಸಲಿಲ್ಲ. ನಾನು ತಲೆಕೂದಲನ್ನು ಕತ್ತರಿಸಿದರೆ ನನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ’ ಅಂದನು. ಶಕ್ತಿಯ ಗುಟ್ಟನ್ನು ಅವಳಿಗೆ ಹೇಳಿ ಸಂಸೋನ ಅಂದೆಂಥ ದೊಡ್ಡ ತಪ್ಪು ಮಾಡಿದ ಅಲ್ವಾ?

ತಕ್ಷಣ ದೆಲೀಲ ಫಿಲಿಷ್ಟಿಯರಿಗೆ ‘ಸಂಸೋನನ ಶಕ್ತಿಯ ಗುಟ್ಟು ನನಗೆ ಗೊತ್ತಾಯಿತು!’ ಅಂದಳು. ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿ ಬೇರೆಯವರು ಬಂದು ಅವನ ತಲೆಕೂದಲನ್ನು ಕತ್ತರಿಸುವಂತೆ ಮಾಡಿದಳು. ಆಮೇಲೆ ‘ಸಂಸೋನನೇ, ಫಿಲಿಷ್ಟಿಯರು ಬರುತ್ತಿದ್ದಾರೆ!’ ಎಂದು ಕೂಗಿದಳು. ಸಂಸೋನನು ಎದ್ದಾಗ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದನು. ಫಿಲಿಷ್ಟಿಯರು ಅವನನ್ನು ಹಿಡಿದು ಕಣ್ಣುಗಳನ್ನು ಕಿತ್ತು ಸೆರೆಮನೆಗೆ ಹಾಕಿದರು.

ಒಂದಿನ ಸಾವಿರಾರು ಫಿಲಿಷ್ಟಿಯರು ತಮ್ಮ ದೇವರಾದ ದಾಗೋನನ ದೇವಾಲಯದಲ್ಲಿ ಸೇರಿದ್ದರು. ‘ನಮ್ಮ ದೇವರು ಸಂಸೋನನನ್ನು ನಮ್ಮ ಕೈಗೊಪ್ಪಿಸಿದ್ದಾನೆ. ಅವನನ್ನು ಹೊರಗೆ ಎಳೆದು ತನ್ನಿರಿ! ಅವನನ್ನು ಪರಿಹಾಸ್ಯ ಮಾಡೋಣ’ ಎಂದು ಕಿರುಚಿದರು. ಅವರು ಸಂಸೋನನನ್ನು ಎರಡು ಕಂಬಗಳ ಮಧ್ಯೆ ನಿಲ್ಲಿಸಿ ಅಪಹಾಸ್ಯ ಮಾಡಿದರು. ಆಗ ಸಂಸೋನನು ‘ಯೆಹೋವನೇ, ದಯವಿಟ್ಟು ನನಗೆ ಇನ್ನೊಂದು ಬಾರಿ ಶಕ್ತಿಯನ್ನು ಕೊಡು’ ಎಂದು ಬೇಡಿಕೊಂಡನು. ಈಗ ಅವನ ತಲೆಕೂದಲು ಬೆಳೆದಿತ್ತು. ತನ್ನೆಲ್ಲಾ ಶಕ್ತಿ ಬಿಟ್ಟು ಆ ಆಲಯದ ಕಂಬಗಳನ್ನು ತಳ್ಳಿದನು. ಇಡೀ ಕಟ್ಟಡ ಕುಸಿದು ಅಲ್ಲಿದ್ದವರ ಮೇಲೆ ಬಿದ್ದಿತು. ಹೀಗೆ ಅವರ ಜೊತೆ ಸಂಸೋನನೂ ಸತ್ತನು.

“ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13