ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 40

ದಾವೀದ ಮತ್ತು ಗೊಲ್ಯಾತ

ದಾವೀದ ಮತ್ತು ಗೊಲ್ಯಾತ

ಯೆಹೋವನು ಸಮುವೇಲನಿಗೆ ‘ಇಷಯನ ಮನೆಗೆ ಹೋಗು. ಅವನ ಮಕ್ಕಳಲ್ಲಿ ಒಬ್ಬ ಇಸ್ರಾಯೇಲಿನ ಮುಂದಿನ ರಾಜನಾಗುವನು’ ಅಂದನು. ಸಮುವೇಲ ಇಷಯನ ಮನೆಗೆ ಹೋದ. ಅವನು ಇಷಯನ ಮೊದಲನೇ ಮಗನನ್ನು ನೋಡಿ, ‘ದೇವರು ಆರಿಸಿರುವುದು ಇವನನ್ನೇ ಇರಬೇಕು’ ಅಂದುಕೊಂಡ. ಆಗ ಯೆಹೋವನು ‘ನಾನು ಇವನನ್ನು ಆರಿಸಿಲ್ಲ. ನಾನು ಮನುಷ್ಯನ ಹೊರತೋರಿಕೆಯನ್ನಲ್ಲ ಅವನು ಎಂಥವನಾಗಿದ್ದಾನೆ ಎಂದು ನೋಡುತ್ತೇನೆ’ ಅಂದನು.

ಆಮೇಲೆ ಇಷಯನು ಇನ್ನೂ ಆರು ಗಂಡುಮಕ್ಕಳನ್ನು ಸಮುವೇಲನ ಹತ್ತಿರ ಕರೆದುಕೊಂಡು ಬಂದ. ಸಮುವೇಲ ‘ಯೆಹೋವನು ಇವರಲ್ಲಿ ಯಾರನ್ನೂ ಆರಿಸಿಕೊಂಡಿಲ್ಲ. ನಿನಗೆ ಇಷ್ಟೇ ಮಕ್ಕಳಿರೋದಾ?’ ಅಂದನು. ಆಗ ಇಷಯ ‘ನನಗೆ ದಾವೀದನೆಂಬ ಇನ್ನೊಬ್ಬ ಮಗನಿದ್ದಾನೆ. ಅವನೇ ಕೊನೆಯವನು. ಕುರಿ ಮೇಯಿಸಲು ಹೋಗಿದ್ದಾನೆ’ ಅಂದನು. ದಾವೀದನು ಮನೆಗೆ ಬಂದಾಗ ಯೆಹೋವನು ಸಮುವೇಲನಿಗೆ ‘ನಾನು ಆರಿಸಿಕೊಂಡಿರುವುದು ಇವನನ್ನೇ!’ ಅಂದನು. ಆಗ ಸಮುವೇಲ ದಾವೀದನ ತಲೆಯ ಮೇಲೆ ಎಣ್ಣೆ ಸುರಿದು ಅವನನ್ನು ಇಸ್ರಾಯೇಲಿನ ಮುಂದಿನ ರಾಜನಾಗಿ ಅಭಿಷೇಕಿಸಿದನು.

ಸ್ವಲ್ಪ ಸಮಯದ ನಂತರ ಇಸ್ರಾಯೇಲ್ಯರಿಗೂ ಫಿಲಿಷ್ಟಿಯರಿಗೂ ಯುದ್ಧ ಆರಂಭವಾಯಿತು. ಗೊಲ್ಯಾತನೆಂಬ ದೈತ್ಯ ಪುರುಷ ಅವರ ಪರವಾಗಿ ಹೋರಾಡುತ್ತಿದ್ದ. ಪ್ರತಿದಿನ ಅವನು ಇಸ್ರಾಯೇಲ್ಯರನ್ನು ಗೇಲಿ ಮಾಡುತ್ತಿದ್ದ. ‘ನನ್ನ ಜೊತೆ ಯುದ್ಧ ಮಾಡಲು ಒಬ್ಬನನ್ನು ಕಳುಹಿಸಿ. ಅವನು ಗೆದ್ದರೆ ನಾವು ನಿಮ್ಮ ಸೇವಕರಾಗುತ್ತೇವೆ. ನಾನು ಗೆದ್ದರೆ ನೀವು ನಮ್ಮ ಸೇವಕರಾಗಬೇಕು’ ಎಂದು ಕೂಗುತ್ತಿದ್ದ.

ಹೀಗಿರುವಾಗ ಒಂದಿನ ದಾವೀದ ಸೈನಿಕರಾದ ತನ್ನ ಅಣ್ಣಂದಿರಿಗೆ ಊಟ ಕೊಡಲು ಯುದ್ಧಭೂಮಿಗೆ ಬಂದ. ಆಗ ಗೊಲ್ಯಾತನ ಮಾತು ದಾವೀದನ ಕಿವಿಗೆ ಬಿತ್ತು. ‘ನಾನು ಅವನ ವಿರುದ್ಧ ಹೋರಾಡುತ್ತೇನೆ!’ ಅಂದ ದಾವೀದ. ಆಗ ರಾಜ ಸೌಲ ‘ನೀನು ಇನ್ನೂ ಚಿಕ್ಕ ಹುಡುಗ’ ಅಂದ. ಅದಕ್ಕೆ ದಾವೀದ ‘ಯೆಹೋವನು ನನಗೆ ಸಹಾಯ ಮಾಡುತ್ತಾನೆ’ ಎಂದು ಉತ್ತರಿಸಿದ.

ಸೌಲ ತನ್ನ ಯುದ್ಧವಸ್ತ್ರಗಳನ್ನು ದಾವೀದನಿಗೆ ಹಾಕಿದಾಗ ‘ಇವುಗಳನ್ನು ಹಾಕಿಕೊಂಡು ಯುದ್ಧ ಮಾಡೋದಕ್ಕೆ ನನಗೆ ಆಗಲ್ಲ’ ಅಂದನು. ಆಮೇಲೆ ದಾವೀದ ತನ್ನ ಕವಣೆಯನ್ನು ತೆಗೆದುಕೊಂಡು ಹಳ್ಳದ ಕಡೆ ಹೆಜ್ಜೆ ಹಾಕಿದ. ಅಲ್ಲಿ ನುಣುಪಾದ ಐದು ಕಲ್ಲುಗಳನ್ನು ಆರಿಸಿ ಚೀಲದಲ್ಲಿ ಹಾಕಿಕೊಂಡು ಗೊಲ್ಯಾತನ ಕಡೆಗೆ ಓಡಿದ. ದಾವೀದನನ್ನು ಕಂಡ ಗೊಲ್ಯಾತ ‘ಇಲ್ಲಿ ಬಾರೋ, ನಾನು ನಿನ್ನನ್ನು ಕೊಂದು ಪ್ರಾಣಿಪಕ್ಷಿಗಳಿಗೆ ಹಾಕುತ್ತೇನೆ’ ಅಂದ. ದಾವೀದ ಸ್ವಲ್ಪವೂ ಭಯಪಡಲಿಲ್ಲ. ‘ನೀನು ಈಟಿ ಕತ್ತಿ ಬರ್ಜಿಗಳನ್ನು ಹಿಡಿದುಕೊಂಡು ಬರುತ್ತೀ. ನಾನಾದರೋ ಯೆಹೋವನ ನಾಮದೊಡನೆ ಬರುತ್ತೇನೆ. ನೀನು ಹೋರಾಡುತ್ತಿರುವುದು ನಮ್ಮ ವಿರುದ್ಧವಲ್ಲ. ದೇವರ ವಿರುದ್ಧ. ಕತ್ತಿ ಬರ್ಜಿಗಳಿಗಿಂತ ಯೆಹೋವನು ಬಲಶಾಲಿ ಎಂದು ಇಲ್ಲಿರುವ ಎಲ್ಲರಿಗೆ ಗೊತ್ತಾಗುವುದು. ಆತನು ನಿಮ್ಮೆಲ್ಲರನ್ನು ನಮ್ಮ ಕೈಗೆ ಒಪ್ಪಿಸುವನು’ ಎಂದು ಉತ್ತರಿಸಿದ.

ದಾವೀದ ತನ್ನ ಚೀಲದಿಂದ ಕಲ್ಲೊಂದನ್ನು ತೆಗೆದು ಕವಣೆಗೆ ಸಿಕ್ಕಿಸಿದ. ಆಮೇಲೆ ಅದನ್ನು ತಿರುಗಿಸಿ ಜೋರಾಗಿ ಬೀಸಿದ. ಯೆಹೋವನ ಸಹಾಯದಿಂದ ಆ ಕಲ್ಲು ಗೊಲ್ಯಾತನ ಹಣೆಗೆ ಹೊಕ್ಕಿತು. ದೈತ್ಯ ಗೊಲ್ಯಾತ ದೊಪ್ಪನೇ ನೆಲಕ್ಕುರುಳಿದ. ಆಗ ಫಿಲಿಷ್ಟಿಯರು ಕಂಗೆಟ್ಟು ಜೀವ ಉಳಿಸಿಕೊಳ್ಳಲು ಓಡಿ ಹೋದರು ದಾವೀದನಂತೆ ನೀನೂ ಯೆಹೋವ ಮೇಲೆ ಭರವಸೆ ಇಡುತ್ತೀಯಾ?.

“ಮನುಷ್ಯರಿಂದ ಇದು ಅಸಾಧ್ಯ. ಆದರೆ ದೇವರಿಗೆ ಅಸಾಧ್ಯವಲ್ಲ, ದೇವರಿಗೆ ಎಲ್ಲವೂ ಸಾಧ್ಯ.”—ಮಾರ್ಕ 10:27