ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 50

ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು

ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು

ಯೆಹೋಷಾಫಾಟ ಯೆಹೂದದ ರಾಜನಾದ ಮೇಲೆ ದೇಶದಿಂದ ಬಾಳನ ಯಜ್ಞವೇದಿ ಹಾಗೂ ವಿಗ್ರಹಗಳನ್ನು ತೆಗೆದುಹಾಕಿದನು. ಜನರು ಯೆಹೋವನ ನಿಯಮಗಳನ್ನು ತಿಳಿದುಕೊಳ್ಳಬೇಕು ಎನ್ನುವುದು ಅವನ ಆಸೆ. ಆದ್ದರಿಂದ ತನ್ನ ಸರದಾರರನ್ನು ಹಾಗೂ ಲೇವಿಯರನ್ನು ಯೆಹೂದದ ಎಲ್ಲಾ ಕಡೆಗೂ ಕಳುಹಿಸಿ ಜನರಿಗೆ ಯೆಹೋವನ ನಿಯಮಗಳನ್ನು ಕಲಿಸಲು ಹೇಳಿದ.

ಸುತ್ತಮುತ್ತ ಇದ್ದ ಜನಾಂಗದವರು ಯೆಹೂದದ ಮೇಲೆ ದಾಳಿಮಾಡಲು ಭಯಪಡುತ್ತಿದ್ದರು. ಯಾಕೆಂದರೆ ಯೆಹೋವನು ಅವರ ಜೊತೆ ಇದ್ದಾನೆ ಎಂದು ಅವರಿಗೆ ಗೊತ್ತಿತ್ತು. ಅವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನು ಕೂಡ ಕೊಡುತ್ತಿದ್ದರು. ಆದರೆ ಮೋವಾಬ್ಯರು, ಅಮ್ಮೋನಿಯರು ಹಾಗೂ ಮೆಗೂನ್ಯರು ಯೆಹೂದದ ವಿರುದ್ಧ ಯುದ್ಧಕ್ಕೆ ಬಂದರು. ತಮಗೆ ಯೆಹೋವನ ಸಹಾಯದ ಅಗತ್ಯ ಇದೆ ಎಂದು ಯೆಹೋಷಾಫಾಟನಿಗೆ ಗೊತ್ತಿತ್ತು. ಆದ್ದರಿಂದ ಅವನು ಯೆಹೂದದ ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಯೆರೂಸಲೇಮಿನಲ್ಲಿ ಒಟ್ಟುಸೇರಿಸಿದ. ಆಮೇಲೆ ‘ಯೆಹೋವನೇ, ನಿನ್ನ ಸಹಾಯವಿಲ್ಲದೆ ನಾವು ಯುದ್ಧದಲ್ಲಿ ಜಯಗಳಿಸಲು ಆಗಲ್ಲ. ದಯವಿಟ್ಟು ನಾವೇನು ಮಾಡಬೇಕು ಎಂದು ತಿಳಿಸು’ ಎಂದು ಪ್ರಾರ್ಥಿಸಿದ.

ಆಗ ಯೆಹೋವನು ‘ಭಯಪಡಬೇಡಿರಿ. ನಾನು ನಿಮಗೆ ಸಹಾಯ ಮಾಡುತ್ತೇನೆ. ಸುಮ್ಮನೆ ನಿಂತುಕೊಂಡು ನಾನು ನಿಮ್ಮನ್ನು ಹೇಗೆ ರಕ್ಷಿಸುತ್ತೇನೆ ಎಂದು ನೋಡಿರಿ’ ಎಂದು ಉತ್ತರಿಸಿದನು. ಯೆಹೋವನು ಅವರನ್ನು ಹೇಗೆ ಕಾಪಾಡಿದ?

ಮಾರನೇ ದಿನ ಯೆಹೋಷಾಫಾಟ ಕೆಲವು ಹಾಡುಗಾರರನ್ನು ಆರಿಸಿ ಸೈನ್ಯದ ಮುಂದೆ ನಡೆಯಲು ಹೇಳಿದ. ಅವರು ಯೆರೂಸಲೇಮಿನಿಂದ ತೆಕೋವದ ಯುದ್ಧ ಭೂಮಿಯವರೆಗೆ ನಡೆದುಕೊಂಡು ಹೋದರು.

ಒಂದು ಕಡೆ ಹಾಡುಗಾರರು ಸಂತೋಷದಿಂದ ಗಟ್ಟಿಯಾಗಿ ಯೆಹೋವನಿಗೆ ಸ್ತುತಿಯನ್ನು ಹಾಡುತ್ತಿದ್ದರು. ಇನ್ನೊಂದು ಕಡೆ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುತ್ತಿದ್ದನು. ಆತನು ಅಮ್ಮೋನಿಯರಿಗೆ ಹಾಗೂ ಮೋವಾಬ್ಯರಿಗೆ ಗಲಿಬಿಲಿಯಾಗುವಂತೆ ಮಾಡಿದನು. ಆಗ ಅವರು ಒಬ್ಬರನ್ನೊಬ್ಬರು ಕೊಲ್ಲಲು ಶುರುಮಾಡಿದ್ದರಿಂದ ಒಬ್ಬನೂ ಉಳಿಯಲಿಲ್ಲ. ಆದರೆ ಯೆಹೋವನು ಯೆಹೂದದ ಜನರು, ಸೈನಿಕರು ಹಾಗೂ ಯಾಜಕರನ್ನು ಕಾಪಾಡಿದನು. ಯೆಹೋವನು ತನ್ನ ಜನರನ್ನು ಹೀಗೆ ಕಾಪಾಡಿದ ಸುದ್ದಿ ಸುತ್ತಮುತ್ತಲಿನ ದೇಶಗಳಿಗೆ ಹಬ್ಬಿತು. ಆಗ ಅವರಿಗೆ ಯೆಹೋವನು ಇನ್ನೂ ತನ್ನ ಜನರನ್ನು ಕಾಪಾಡುತ್ತಿದ್ದಾನೆ ಎಂದು ಗೊತ್ತಾಯಿತು. ಯೆಹೋವನು ತನ್ನ ಜನರನ್ನು ಹೇಗೆ ಕಾಪಾಡುತ್ತಾನೆ? ಅನೇಕ ವಿಧಗಳಿವೆ. ತನ್ನವರನ್ನು ಕಾಪಾಡಲು ಯೆಹೋವನಿಗೆ ಮನುಷ್ಯರ ಸಹಾಯದ ಅಗತ್ಯವಿಲ್ಲ.

“ನೀವು ಯುದ್ಧಮಾಡುವದು ಅವಶ್ಯ ವಿಲ್ಲ . . . ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ.”—2 ಪೂರ್ವಕಾಲವೃತ್ತಾಂತ 20:17