ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 51

ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ

ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ

ಅಪ್ಪ-ಅಮ್ಮನಿಂದ ದೂರವಾದ ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ಸಿರಿಯ ದೇಶದಲ್ಲಿ ಇದ್ದಳು. ಸಿರಿಯದ ಸೈನ್ಯದವರು ಅವಳನ್ನು ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವಳು ನಾಮಾನನೆಂಬ ಸೇನಾಪತಿಯ ಹೆಂಡತಿಗೆ ಸೇವಕಿಯಾದಳು. ತನ್ನ ಸುತ್ತಮುತ್ತ ಇದ್ದವರು ಯೆಹೋವನನ್ನು ಆರಾಧಿಸದೇ ಇದ್ದರೂ ಆ ಪುಟ್ಟ ಹುಡುಗಿ ಯೆಹೋವನನ್ನೇ ಆರಾಧಿಸುತ್ತಿದ್ದಳು.

ನಾಮಾನನಿಗೆ ಭಯಂಕರವಾದ ಚರ್ಮದ ಕಾಯಿಲೆ ಇತ್ತು. ಅದರಿಂದ ಅವನಿಗೆ ತುಂಬ ನೋವಾಗುತ್ತಿತ್ತು. ಆ ಪುಟ್ಟ ಹುಡುಗಿಗೆ ಅವನಿಗೆ ಸಹಾಯ ಮಾಡಬೇಕು ಅಂತ ಅನಿಸಿತು. ಅವಳು ನಾಮಾನನ ಹೆಂಡತಿಗೆ ‘ನಮ್ಮ ಧಣಿಯ ಕಾಯಿಲೆಯನ್ನು ವಾಸಿ ಮಾಡುವ ಒಬ್ಬ ವ್ಯಕ್ತಿ ನನಗೆ ಗೊತ್ತು. ಅವನು ಇಸ್ರಾಯೇಲಿನಲ್ಲಿರುವ ಯೆಹೋವನ ಪ್ರವಾದಿ ಎಲೀಷ. ಅವನು ಧಣಿಯನ್ನು ವಾಸಿಮಾಡುವನು’ ಅಂದಳು.

ಆ ಪುಟ್ಟ ಹುಡುಗಿ ಹೇಳಿದ್ದನ್ನು ನಾಮಾನನ ಹೆಂಡತಿ ಅವನಿಗೆ ಹೇಳಿದಳು. ತನ್ನ ಕಾಯಿಲೆ ವಾಸಿಯಾಗೋದಕ್ಕೆ ಅವನು ಏನು ಮಾಡೋದಕ್ಕೂ ಸಿದ್ಧನಿದ್ದ. ಹಾಗಾಗಿ ಅವನು ಇಸ್ರಾಯೇಲ್‌ನಲ್ಲಿದ್ದ ಎಲೀಷನ ಮನೆಗೆ ಹೋದ. ತಾನೊಬ್ಬ ದೊಡ್ಡ ವ್ಯಕ್ತಿ ಆಗಿರೋದರಿಂದ ಎಲೀಷ ತನ್ನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾನೆ ಎಂದು ನಾಮಾನ ನೆನೆಸಿದ್ದ. ಆದರೆ ಎಲೀಷ ನಾಮಾನನನ್ನು ಭೇಟಿಯಾಗಲು ತನ್ನ ಸೇವಕನನ್ನು ಕಳುಹಿಸಿ ‘ಹೋಗಿ ಯೊರ್ದನ್‌ ಹೊಳೆಯಲ್ಲಿ ಏಳು ಸಾರಿ ಸ್ನಾನ ಮಾಡು. ಆಗ ನಿನ್ನ ಕಾಯಿಲೆ ವಾಸಿಯಾಗುವುದು ಎಂದು ಹೇಳು’ ಅಂದನು.

ಆಗ ನಾಮಾನನಿಗೆ ತುಂಬಾ ನಿರಾಶೆಯಾಯಿತು. ಅವನು ‘ಈ ಪ್ರವಾದಿ ತನ್ನ ದೇವರ ಹೆಸರನ್ನು ಹೇಳಿ ನನ್ನ ಮೇಲೆ ಕೈಯಾಡಿಸಿ ವಾಸಿ ಮಾಡುತ್ತಾನೆ ಅಂದುಕೊಂಡಿದ್ದೆ. ಆದರೆ ಇವನು ಇಸ್ರಾಯೇಲಿನಲ್ಲಿರುವ ಹೊಳೆಗೆ ಹೋಗು ಎಂದು ಹೇಳುತ್ತಿದ್ದಾನೆ. ಸಿರಿಯದಲ್ಲಿ ಇದಕ್ಕಿಂತ ಉತ್ತಮ ಹೊಳೆಗಳಿವೆ. ನಾನು ಅಲ್ಲಿಗೇ ಹೋಗಬಹುದಿತ್ತಲ್ಲಾ?’ ಅಂದನು. ಕೋಪಗೊಂಡ ನಾಮಾನ ಎಲೀಷನ ಮನೆಯಿಂದ ಹೊರಟು ಹೋದನು.

ನಾಮಾನನ ಸೇವಕರು ಸರಿಯಾಗಿ ಯೋಚಿಸಲು ಅವನಿಗೆ ಸಹಾಯ ಮಾಡಿದರು. ‘ಸ್ವಾಮಿ, ಪ್ರವಾದಿ ಒಂದು ಕಷ್ಟದ ಕೆಲಸ ಹೇಳಿದ್ದರೆ ಮಾಡುತ್ತಿದ್ದಿರಿ ತಾನೆ? ಹಾಗಿರುವಾಗ ಈ ಸುಲಭದ ಕೆಲಸವನ್ನು ಯಾಕೆ ಮಾಡಬಾರದು?’ ಅಂದರು. ನಾಮಾನ ಅವರ ಮಾತನ್ನು ಕೇಳಿದನು. ಯೊರ್ದನ್‌ ಹೊಳೆಗೆ ಹೋಗಿ ಏಳು ಬಾರಿ ಮುಳುಗಿ ಎದ್ದನು. ಏಳನೇ ಬಾರಿ ನೀರಿನಿಂದ ಮೇಲೆ ಬಂದಾಗ ಅವನ ಕಾಯಿಲೆ ಸಂಪೂರ್ಣವಾಗಿ ವಾಸಿಯಾಗಿತ್ತು. ಅವನಿಗೆ ತುಂಬಾ ಸಂತೋಷವಾಯಿತು. ಎಲೀಷನ ಹತ್ತಿರ ಹೋಗಿ ‘ಯೆಹೋವನೇ ಸತ್ಯ ದೇವರು ಎಂದು ಈಗ ನನಗೆ ಗೊತ್ತಾಯಿತು’ ಅಂದನು. ಧಣಿಯ ಕಾಯಿಲೆ ವಾಸಿ ಆಗಿರೋದನ್ನು ನೋಡಿದಾಗ ಆ ಪುಟ್ಟ ಇಸ್ರಾಯೇಲ್ಯ ಹುಡುಗಿಗೆ ಎಷ್ಟು ಖುಷಿ ಆಗಿರಬೇಕಲ್ವಾ?

“ಶಿಶುಗಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ಸ್ತುತಿಯನ್ನು ಸಿದ್ಧಿಗೆ ತಂದಿದ್ದೀ.”—ಮತ್ತಾಯ 21:16