ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 53

ಧೀರ ಯೆಹೋಯಾದಾವ

ಧೀರ ಯೆಹೋಯಾದಾವ

ಈಜೆಬೆಲಳಿಗೆ ಅತಲ್ಯಳೆಂಬ ಮಗಳಿದ್ದಳು. ಅವಳೂ ತನ್ನ ತಾಯಿಯಂತೆ ತುಂಬಾ ದುಷ್ಟಳಾಗಿದ್ದಳು. ಅತಲ್ಯಳು ಯೆಹೂದದ ರಾಜನನ್ನು ಮದುವೆಯಾದಳು. ಅವನು ತೀರಿಹೋದಾಗ ಅವನ ಮಗ ರಾಜನಾದ. ಅವನೂ ಸತ್ತಾಗ ಯೆಹೂದದ ರಾಜ್ಯಭಾರವನ್ನು ಅತಲ್ಯಳು ತನ್ನ ಕೈಗೆತ್ತಿಕೊಂಡಳು. ಅವಳು ಎಷ್ಟು ಕೆಟ್ಟವಳಾಗಿದ್ದಳು ಅಂದರೆ ಇಡೀ ರಾಜವಂಶವನ್ನೇ ನಾಶ ಮಾಡಲು ಪ್ರಯತ್ನಿಸಿದಳು. ಅವಳ ಬದಲಿಗೆ ಯಾರಿಗೆಲ್ಲಾ ರಾಜರಾಗಲು ಹಕ್ಕಿತ್ತೋ ಅವರೆಲ್ಲರನ್ನು ಕೊಲ್ಲಿಸಿದಳು. ತನ್ನ ಸ್ವಂತ ಮೊಮ್ಮಕ್ಕಳನ್ನು ಕೂಡ ಬಿಡಲಿಲ್ಲ. ಹಾಗಾಗಿ ಅವಳನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು.

ಮಹಾಯಾಜಕ ಯೆಹೋಯಾದವ ಮತ್ತು ಅವನ ಹೆಂಡತಿ ಯೆಹೋಷೆಬಳಿಗೆ ಅತಲ್ಯಳು ಮಾಡುತ್ತಿದ್ದ ಕೆಟ್ಟ ಕೆಲಸಗಳ ಬಗ್ಗೆ ಗೊತ್ತಿತ್ತು. ಅವರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಅತಲ್ಯಳ ಮೊಮ್ಮಗ ಯೆಹೋವಾಷನನ್ನು ಬಚ್ಚಿಟ್ಟು ಸಾಕಿದರು. ಅವನು ದೇವಾಲಯದಲ್ಲಿ ಬೆಳೆದ.

ಯೆಹೋವಾಷ ಏಳು ವರ್ಷದವನಾದಾಗ ಯೆಹೋಯಾದವ ಎಲ್ಲಾ ಶತಾಧಿಪತಿಗಳನ್ನು ಮತ್ತು ಯಾಜಕರನ್ನು ಕರೆಸಿ ‘ದೇವಾಲಯದ ಬಾಗಿಲನ್ನು ಕಾಯಿರಿ. ಯಾರನ್ನೂ ಒಳಗೆ ಬಿಡಬೇಡಿ’ ಎಂದು ಹೇಳಿದ. ಆಮೇಲೆ ಅವನು ಯೆಹೋವಾಷನ ತಲೆಯ ಮೇಲೆ ಕಿರೀಟವನ್ನಿಟ್ಟು ಯೆಹೂದದ ರಾಜನಾಗಿ ಅಭಿಷೇಕ ಮಾಡಿದ. ಆಗ ಜನರೆಲ್ಲರೂ ‘ಅರಸನು ಚಿರಂಜೀವಿಯಾಗಿರಲಿ!’ ಎಂದು ಕೂಗಿದರು.

ಜನರ ಆರ್ಭಟ ಅತಲ್ಯಳಿಗೆ ಕೇಳಿಸಿತು. ಅವಳು ದೇವಾಲಯಕ್ಕೆ ಓಡಿಬಂದಳು. ಅವಳು ಹೊಸ ರಾಜನನ್ನು ಕಂಡಾಗ ‘ಮೋಸ! ಮೋಸ!’ ಎಂದು ಅರಚಿದಳು. ಶತಾಧಿಪತಿಗಳು ಆ ದುಷ್ಟ ರಾಣಿಯನ್ನು ಹಿಡಿದು ಹೊರಗೆ ಕರೆದುಕೊಂಡು ಹೋಗಿ ಕೊಂದರು. ಅವಳು ಜನರ ಮೇಲೆ ಕೆಟ್ಟ ಪ್ರಭಾವ ಬೀರಿದ್ದಳು. ಇದು ಹೇಗೆ ಸರಿಯಾಯಿತು ಗೊತ್ತಾ?

ಜನರು ಯೆಹೋವನೊಬ್ಬನನ್ನೇ ಆರಾಧಿಸುತ್ತೇವೆಂದು ಮಾತುಕೊಟ್ಟು ಆತನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳಲು ಯೆಹೋಯಾದಾವ ಸಹಾಯ ಮಾಡಿದ. ಅಲ್ಲದೇ ಬಾಳನ ದೇವಾಲಯವನ್ನು ಕೆಡವಿ ಎಲ್ಲಾ ವಿಗ್ರಹಗ ಳನ್ನು ಪುಡಿ ಪುಡಿ ಮಾಡಿದ. ದೇವಾಲಯದಲ್ಲಿ ಕೆಲಸ ಮಾಡಲು ಯಾಜಕರು ಮತ್ತು ಲೇವಿಯರನ್ನು ನೇಮಿಸಿದ. ಇದರಿಂದ ಜನರು ದೇವಾಲಯದಲ್ಲಿ ಪುನಃ ಆರಾಧನೆ ಮಾಡಲು ಶುರು ಮಾಡಿದರು. ದೇವಾಲಯದ ಬಾಗಿಲು ಕಾಯಲು ಜನರನ್ನು ನೇಮಿಸಿ ಯಾವ ಅಶುದ್ಧನೂ ದೇವಾಲಯದೊಳಗೆ ಬರದಂತೆ ನೋಡಿಕೊಳ್ಳಲು ಹೇಳಿದ. ಯೆಹೋಯಾದಾವ ಮತ್ತು ಶತಾಧಿಪತಿಗಳು ಯೆಹೋವಾಷನನ್ನು ಅರಮನೆಗೆ ಕರೆದುಕೊಂಡು ಹೋಗಿ ಸಿಂಹಾಸನದಲ್ಲಿ ಕೂರಿಸಿದರು. ಯೆಹೂದದ ಜನರೆಲ್ಲರೂ ಸಂತೋಷಪಟ್ಟರು. ಕೊನೆಗೂ ದುಷ್ಟ ಅತಲ್ಯ ಮತ್ತು ಬಾಳನ ಆರಾಧನೆಯಿಂದ ಜನರು ಬಿಡುಗಡೆ ಪಡೆದು ಈಗ ಯೆಹೋವನನ್ನು ಆರಾಧಿಸಬಹುದಿತ್ತು. ಯೆಹೋಯಾದಾವನ ಧೈರ್ಯ ಅನೇಕರಿಗೆ ಎಷ್ಟು ಸಹಾಯ ಮಾಡಿತಲ್ವಾ?

“ದೇಹವನ್ನು ಕೊಂದು ಪ್ರಾಣವನ್ನು ಕೊಲ್ಲಲಾರದವರಿಗೆ ಭಯಪಡಬೇಡಿರಿ; ಪ್ರಾಣವನ್ನೂ ದೇಹವನ್ನೂ ಗೆಹೆನ್ನದಲ್ಲಿ ನಾಶಮಾಡಬಲ್ಲಾತನಿಗೆ ಭಯಪಡಿರಿ.”—ಮತ್ತಾಯ 10:28