ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 64

ಸಿಂಹಗಳ ಗವಿಯಲ್ಲಿ ದಾನಿಯೇಲ

ಸಿಂಹಗಳ ಗವಿಯಲ್ಲಿ ದಾನಿಯೇಲ

ಬಾಬೆಲನ್ನು ಆಳಿದ ಇನ್ನೊಬ್ಬ ರಾಜ ದಾರ್ಯಾವೆಷ. ಇವನು ಮೇದ್ಯ ಜನಾಂಗದವನು. ದಾನಿಯೇಲನಲ್ಲಿ ಏನೋ ವಿಶೇಷತೆ ಇದೆ ಎಂದು ಇವನಿಗೆ ಗೊತ್ತಾಯಿತು. ಆದ್ದರಿಂದ ತನ್ನ ರಾಜ್ಯದ ಮುಖ್ಯಸ್ಥರ ಮೇಲೆ ದಾನಿಯೇಲನನ್ನು ನೇಮಿಸಿದನು. ಇದರಿಂದ ಆ ಮುಖ್ಯಸ್ಥರಿಗೆ ದಾನಿಯೇಲನ ಮೇಲೆ ಹೊಟ್ಟೆಕಿಚ್ಚಾಗಿ ಅವನನ್ನು ಕೊಲ್ಲಬೇಕೆಂದು ಯೋಚಿಸಿದರು. ದಾನಿಯೇಲನು ದಿನಕ್ಕೆ ಮೂರು ಸಲ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾನೆಂದು ಇವರಿಗೆ ಗೊತ್ತಿತ್ತು. ಆದ್ದರಿಂದ ಅವರು ದಾರ್ಯಾವೆಷನ ಹತ್ತಿರ ಹೋಗಿ, ‘ರಾಜನೇ, ಎಲ್ಲರೂ ನಿನ್ನೊಬ್ಬನಿಗೇ ಪ್ರಾರ್ಥನೆ ಮಾಡಬೇಕು ಎಂಬ ಆಜ್ಞೆ ಹೊರಡಿ ಸಬೇಕು. ಯಾರು ಹಾಗೆ ಮಾಡುವುದಿಲ್ಲವೋ ಅವರನ್ನು ಸಿಂಹಗಳ ಗವಿಯಲ್ಲಿ ಹಾಕಬೇಕು’ ಎಂದು ಹೇಳಿದರು. ಇದು ದಾರ್ಯಾವೆಷನಿಗೆ ಇಷ್ಟವಾಗಿ ಈ ಆಜ್ಞೆಯನ್ನು ಹೊರಡಿಸಿದನು.

ಈ ಹೊಸ ಆಜ್ಞೆಯ ಬಗ್ಗೆ ದಾನಿಯೇಲನಿಗೆ ಗೊತ್ತಾಯಿತು. ಅವನು ಕೂಡಲೆ ತನ್ನ ಮನೆಗೆ ಹೋಗಿ ತೆರೆದ ಕಿಟಕಿಯ ಮುಂದೆ ಮೊಣಕಾಲೂರಿ ಯೆಹೋವನಿಗೆ ಪ್ರಾರ್ಥಿಸಿದನು. ಆಗ ಅವನ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದವರು ಅವನ ಮನೆಯೊಳಗೆ ನುಗ್ಗಿ ಅವನನ್ನು ಹಿಡಿದರು. ನಂತರ ದಾರ್ಯಾವೆಷನ ಹತ್ತಿರ ಹೋಗಿ, ‘ದಾನಿಯೇಲನು ನಿನ್ನ ಆಜ್ಞೆಯನ್ನು ಮೀರಿದ್ದಾನೆ. ಅವನು ದಿನಾಲೂ ಮೂರು ಸಲ ತನ್ನ ದೇವರಿಗೆ ಪ್ರಾರ್ಥಿಸುತ್ತಾನೆ’ ಅಂದರು. ದಾರ್ಯಾವೆಷನಿಗೆ ದಾನಿಯೇಲ ನೆಂದರೆ ತುಂಬ ಇಷ್ಟ. ಹಾಗಾಗಿ ಅವನು ಸಾಯುವುದು ರಾಜನಿಗೆ ಇಷ್ಟವಿರಲಿಲ್ಲ. ಅದಕ್ಕೆ ದಾನಿಯೇಲನನ್ನು ಕಾಪಾಡಲು ಯಾವುದಾದರೂ ದಾರಿ ಇದೆಯಾ ಎಂದು ಇಡೀ ದಿನ ಯೋಚಿಸಿದ. ಆದರೆ ಸ್ವತಃ ರಾಜ ಕೂಡ ತಾನು ಹೊರಡಿಸಿದ ಆಜ್ಞೆಯನ್ನು ಬದಲಾಯಿಸಲು ಸಾಧ್ಯ ಇರಲಿಲ್ಲ. ಹಾಗಾಗಿ, ಅವನು ದಾನಿಯೇಲನನ್ನು ಹಸಿದ ಸಿಂಹಗಳ ಗವಿಯಲ್ಲಿ ಹಾಕುವಂತೆ ಆಜ್ಞಾಪಿಸಲೇಬೇಕಾಯಿತು.

ದಾರ್ಯಾವೆಷನಿಗೆ ದಾನಿಯೇಲನ ಬಗ್ಗೆ ಎಷ್ಟು ಚಿಂತೆ ಆಯಿತೆಂದರೆ ರಾತ್ರಿಯೆಲ್ಲಾ ನಿದ್ದೆ ಮಾಡಲು ಆಗಲಿಲ್ಲ. ಬೆಳಗಾದ ಕೂಡಲೆ ಅವನು ಗವಿಯ ಹತ್ತಿರ ಹೋಗಿ, ‘ನಿನ್ನ ದೇವರು ನಿನ್ನನ್ನು ಕಾಪಾಡಿದನಾ?’ ಅಂತ ಕೇಳಿದನು.

ದಾರ್ಯಾವೆಷನಿಗೆ ಗವಿಯಿಂದ ಒಂದು ಧ್ವನಿ ಕೇಳಿಸಿತು. ಅದು ದಾನಿಯೇಲನದ್ದು. ‘ಯೆಹೋವನ ದೂತನು ಸಿಂಹಗಳ ಬಾಯನ್ನು ಮುಚ್ಚಿಸಿದನು. ಅವು ನನಗೆ ಏನೂ ಮಾಡಲಿಲ್ಲ’ ಎಂದ ದಾನಿಯೇಲ. ಇದನ್ನು ಕೇಳಿದ ದಾರ್ಯಾವೆಷನಿಗೆ ತುಂಬ ಸಂತೋಷವಾಯಿತು. ದಾನಿಯೇಲನನ್ನು ಗವಿಯಿಂದ ಎತ್ತುವಂತೆ ಆಜ್ಞಾಪಿಸಿದನು. ದಾನಿಯೇಲನಿಗೆ ಸ್ವಲ್ಪವೂ ಗಾಯ ಆಗಿರಲಿಲ್ಲ. ನಂತರ ರಾಜ, ‘ದಾನಿಯೇಲನನ್ನು ಸಾಯಿಸಲು ಒಳಸಂಚು ಮಾಡಿದವರನ್ನು ಸಿಂಹಗಳ ಗವಿಯಲ್ಲಿ ಹಾಕಿ’ ಅಂದನು. ಅವರನ್ನು ಸಿಂಹಗಳ ಗವಿಯಲ್ಲಿ ಹಾಕಿದರು. ತಕ್ಷಣ ಸಿಂಹಗಳು ಅವರನ್ನು ತಿಂದುಬಿಟ್ಟವು.

ನಂತರ ದಾರ್ಯಾವೆಷ ತನ್ನೆಲ್ಲಾ ಜನರಿಗೆ, ‘ದಾನಿಯೇಲನ ದೇವರು ದಾನಿಯೇಲನನ್ನು ಸಿಂಹಗಳಿಂದ ರಕ್ಷಿಸಿದನು. ಎಲ್ಲರೂ ಅವನ ದೇವರಿಗೆ ಭಯಪಡಬೇಕು’ ಎಂದು ಆಜ್ಞೆ ಹೊರಡಿಸಿದನು.

ದಾನಿಯೇಲನ ಹಾಗೆ ನೀನೂ ಯೆಹೋವನಿಗೆ ದಿನಾಲೂ ಪ್ರಾರ್ಥನೆ ಮಾಡುತ್ತೀಯಾ?

“ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೂ . . . ತಿಳಿದವನಾಗಿದ್ದಾನೆ.”—2 ಪೇತ್ರ 2:9