ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 67

ಯೆರೂಸಲೇಮಿನ ಗೋಡೆಗಳು

ಯೆರೂಸಲೇಮಿನ ಗೋಡೆಗಳು

ಎಜ್ರನ ಸಮಯದಲ್ಲಿ ನೆಹೆಮೀಯನೆಂಬ ಇಸ್ರಾಯೇಲ್ಯನಿದ್ದನು. ಅವನು ರಾಜ ಅರ್ತಷಸ್ತನ ಸೇವಕನಾಗಿದ್ದು, ಪರ್ಷಿಯದ ಶೂಷನ್‌ ಪಟ್ಟಣದಲ್ಲಿ ವಾಸಿಸುತ್ತಿದ್ದ. ಒಮ್ಮೆ ನೆಹೆಮೀಯನ ಸಹೋದರ ಯೆಹೂದದಿಂದ ಒಂದು ಕೆಟ್ಟ ಸುದ್ದಿ ತಂದ. ‘ಯೆರೂಸಲೇಮಿಗೆ ಹಿಂದಿರುಗಿದ ಜನರಿಗೆ ರಕ್ಷಣೆ ಇಲ್ಲ. ಬಾಬೆಲಿನವರು ನಾಶಮಾಡಿದ ಪಟ್ಟಣದ ಗೋಡೆಗಳು ಮತ್ತು ಬಾಗಿಲುಗಳನ್ನು ಪುನಃ ಕಟ್ಟಿಲ್ಲ’ ಎಂದನು. ಇದನ್ನು ಕೇಳಿದಾಗ ನೆಹೆಮೀಯನಿಗೆ ತುಂಬ ಬೇಜಾರಾಯಿತು. ಯೆರೂಸಲೇಮಿಗೆ ಹೋಗಿ ಸಹಾಯಮಾಡಬೇಕೆಂದು ಅವನು ಬಯಸಿದನು. ಆದ್ದರಿಂದ ‘ಅಲ್ಲಿಗೆ ಹೋಗಲು ರಾಜನು ಅನುಮತಿ ಕೊಡುವಂತೆ ಮಾಡಪ್ಪಾ’ ಎಂದು ದೇವರಿಗೆ ಪ್ರಾರ್ಥಿಸಿದನು.

ಒಂದಿನ ನೆಹೆಮೀಯ ಬೇಸರದಲ್ಲಿರುವುದನ್ನು ರಾಜ ಗಮನಿಸಿದ. ‘ನೀನು ಯಾವತ್ತೂ ಈ ರೀತಿ ಇರೋದನ್ನು ನಾನು ನೋಡಿಲ್ಲ. ಏನಾಯ್ತು?’ ಅಂತ ಕೇಳಿದ. ಅದಕ್ಕೆ ನೆಹೆಮೀಯ, ‘ಯೆರೂಸಲೇಮ್‌ ಪಟ್ಟಣ ಹಾಳುಬಿದ್ದಿರುವಾಗ ನಾನು ಹೇಗೆ ತಾನೇ ಸಂತೋಷವಾಗಿರಲು ಸಾಧ್ಯ?’ ಅಂದನು. ಆಗ ರಾಜ ‘ನಾನು ನಿನಗೋಸ್ಕರ ಏನು ಮಾಡಬೇಕು?’ ಎಂದು ಕೇಳಿದನು. ತಕ್ಷಣ ನೆಹೆಮೀಯ ಮನಸ್ಸಿನಲ್ಲೇ ಪ್ರಾರ್ಥಿಸಿ, ‘ಯೆರೂಸಲೇಮಿಗೆ ಹೋಗಿ ಗೋಡೆಗಳನ್ನು ಪುನಃ ಕಟ್ಟಲು ಅನುಮತಿ ಕೊಡಿ’ ಅಂದನು. ರಾಜ ಅರ್ತಷಸ್ತ ನೆಹೆಮೀಯನಿಗೆ ಅನುಮತಿ ಕೊಟ್ಟನು. ಜೊತೆಗೆ, ಆ ದೂರದ ಪ್ರಯಾಣದಲ್ಲಿ ಯಾವುದೇ ಅಪಾಯ ಆಗದಂತೆ ಬೇಕಾದ ರಕ್ಷಣೆಯನ್ನೂ ಒದಗಿಸಿದನು. ನೆಹೆಮೀಯನನ್ನು ಯೆಹೂದದ ಅಧಿಪತಿಯಾಗಿ ನೇಮಿಸಿ ಪಟ್ಟಣದ ಬಾಗಿಲುಗಳನ್ನು ಮಾಡಲು ಬೇಕಾದ ಮರವನ್ನು ಸಹ ಕೊಟ್ಟನು.

ನೆಹೆಮೀಯನು ಯೆರೂಸಲೇಮನ್ನು ತಲುಪಿದಾಗ ಪಟ್ಟಣದ ಗೋಡೆಗಳನ್ನು ಪರೀಕ್ಷಿಸಿದನು. ನಂತರ ಯಾಜಕರು ಮತ್ತು ಅಧಿಕಾರಿಗಳನ್ನು ಕರೆದು ಅವರಿಗೆ, ‘ನಮ್ಮ ಪಟ್ಟಣಕ್ಕೆ ಎಂಥಾ ಗತಿ ಬಂದಿದೆ! ತಕ್ಷಣ ನಾವಿದನ್ನು ಕಟ್ಟಬೇಕು’ ಎಂದನು. ಜನರು ಅದಕ್ಕೆ ಒಪ್ಪಿ ಗೋಡೆಗಳನ್ನು ಕಟ್ಟಲು ಆರಂಭಿಸಿದರು.

ಆದರೆ ಇಸ್ರಾಯೇಲ್ಯರ ಕೆಲವು ವೈರಿಗಳು ಅವರ ಬಗ್ಗೆ ಅಪಹಾಸ್ಯ ಮಾಡುತ್ತಾ ‘ನೀವು ಕಟ್ಟುತ್ತಿರುವ ಗೋಡೆಗಳನ್ನು ನರಿ ಸಹ ಬೀಳಿಸಬಹುದು’ ಎಂದರು. ಕೆಲಸಗಾರರು ಅದನ್ನು ತಲೆಗೇ ಹಾಕಿಕೊಳ್ಳದೆ ಕೆಲಸ ಮುಂದುವರಿಸಿದರು. ಹೀಗೆ ಗೋಡೆ ಕೆಲಸ ಮುಂದುವರಿಯಿತು.

ವೈರಿಗಳು, ಬೇರೆ ಬೇರೆ ದಿಕ್ಕಿನಿಂದ ಬಂದು ಒಂದೇ ಸಾರಿ ಯೆರೂಸಲೇಮಿನ ಮೇಲೆ ದಾಳಿ ಮಾಡಬೇಕೆಂದು ನಿರ್ಣಯಿಸಿದರು. ಇದರ ಬಗ್ಗೆ ಯೆಹೂದಿಗಳಿಗೆ ಗೊತ್ತಾದಾಗ ಅವರು ತುಂಬ ಭಯಪಟ್ಟರು. ಆದರೆ ನೆಹೆಮೀಯನು, ‘ಭಯಪಡಬೇಡಿ. ಯೆಹೋವನು ನಮ್ಮ ಜೊತೆ ಇದ್ದಾನೆ’ ಎಂದನು. ಅವನು ಕೆಲಸಗಾರರ ರಕ್ಷಣೆಗಾಗಿ ಕಾವಲುಗಾರರನ್ನು ನೇಮಿಸಿದನು. ಆದ್ದರಿಂದ ವೈರಿಗಳಿಂದ ದಾಳಿ ಮಾಡಲು ಆಗಲಿಲ್ಲ.

ಹೀಗೆ ಕೇವಲ 52 ದಿನಗಳಲ್ಲಿ ಗೋಡೆಗಳನ್ನು ಕಟ್ಟಿ ಬಾಗಿಲುಗಳನ್ನು ಇಡಲಾಯಿತು. ಕೆಲಸ ಮುಗಿದಾಗ ನೆಹೆಮೀಯನು ಎಲ್ಲಾ ಲೇವಿಯರನ್ನು ಕರೆದುಕೊಂಡು ಬಂದನು. ಅವರನ್ನು ಎರಡು ಗುಂಪುಗಳಾಗಿ ಮಾಡಿ ಹಾಡಲು ನೇಮಿಸಿದನು. ಪಟ್ಟಣದ ಸುತ್ತಲೂ ಗೋಡೆಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಈ ಎರಡು ಗುಂಪಿನವರು ಬಂದು ನಿಂತರು. ಅವರು ತುತೂರಿ, ತಾಳ ಮತ್ತು ಕಿನ್ನರಿ ನುಡಿಸುತ್ತಾ ಯೆಹೋವನಿಗೆ ಹಾಡಿದರು. ಎಜ್ರ ಒಂದು ಗುಂಪಿನ ಜೊತೆಯಲ್ಲಿ ಹೋದರೆ ನೆಹೆಮೀಯನು ಇನ್ನೊಂದು ಗುಂಪಿನ ಜೊತೆ ಹೋದನು. ಕೊನೆಗೆ ಅವರು ದೇವಾಲಯದಲ್ಲಿ ಬಂದು ಸೇರಿದರು. ಪುರುಷರು, ಸ್ತ್ರೀಯರು ಮತ್ತು ಮಕ್ಕಳು, ಹೀಗೆ ಎಲ್ಲರೂ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಿ ಸಂಭ್ರಮಿಸಿದರು. ಸಂತೋಷದಿಂದ ಸ್ತುತಿಸುವ ಅವರ ಸ್ವರ ದೂರ ದೂರದವರೆಗೆ ಕೇಳಿಸುತ್ತಿತ್ತು.

“ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.”—ಯೆಶಾಯ 54:17