ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 68

ಎಲಿಸಬೇತಳಿಗೆ ಮಗುವಾಯಿತು

ಎಲಿಸಬೇತಳಿಗೆ ಮಗುವಾಯಿತು

ಯೆರೂಸಲೇಮಿನ ಗೋಡೆಗಳು ಪುನಃ ಕಟ್ಟಿ ಸುಮಾರು 400 ವರ್ಷಗಳಾದವು. ಈ ಪಟ್ಟಣದ ಬಳಿ ಜಕರೀಯನೆಂಬ ಯಾಜಕ ಮತ್ತು ಅವನ ಹೆಂಡತಿ ಎಲಿಸಬೇತ್‌ ವಾಸಿಸುತ್ತಿದ್ದರು. ಮದುವೆಯಾಗಿ ಅನೇಕ ವರ್ಷಗಳಾಗಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ. ಒಂದಿನ ಜಕರೀಯನು ದೇವಾಲಯದ ಪವಿತ್ರಸ್ಥಳದಲ್ಲಿ ಧೂಪ ಹಾಕುತ್ತಿದ್ದಾಗ ಗಬ್ರಿಯೇಲ ದೇವದೂತನು ಕಾಣಿಸಿಕೊಂಡನು. ಆಗ ಜಕರೀಯನಿಗೆ ಭಯವಾಯಿತು. ಅದಕ್ಕೆ ಗಬ್ರಿಯೇಲನು ‘ಭಯಪಡಬೇಡ, ನಾನು ಯೆಹೋವನಿಂದ ನಿನಗೊಂದು ಒಳ್ಳೇ ಸುದ್ದಿ ತಂದಿದ್ದೇನೆ. ನಿನ್ನ ಹೆಂಡತಿ ಎಲಿಸಬೇತಳಿಗೆ ಒಂದು ಗಂಡು ಮಗುವಾಗುವುದು. ಅವನಿಗೆ ಯೋಹಾನ ಎಂದು ಹೆಸರಿಡಬೇಕು. ಯೆಹೋವನು ಅವನನ್ನು ಒಂದು ವಿಶೇಷ ಕೆಲಸಕ್ಕಾಗಿ ಆರಿಸಿಕೊಂಡಿದ್ದಾನೆ’ ಅಂದನು. ಅದಕ್ಕೆ ಜಕರೀಯನು ‘ನನಗೆ ಮತ್ತು ನನ್ನ ಹೆಂಡತಿಗೆ ತುಂಬಾ ವಯಸ್ಸಾಗಿದೆ. ಇದನ್ನು ನಾನು ಹೇಗೆ ನಂಬಲಿ?’ ಎಂದು ಕೇಳಿದನು. ಆಗ ಗಬ್ರಿಯೇಲನು ‘ಈ ಸುದ್ದಿಯನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. ಆದರೆ ನೀನು ಈ ಮಾತನ್ನು ನಂಬದಿದ್ದ ಕಾರಣ ಮಗು ಹುಟ್ಟುವ ತನಕ ನೀನು ಮೂಕನಾಗಿರುವೆ’ ಅಂದನು.

ಆ ದಿನ ಜಕರೀಯನು ಪವಿತ್ರಸ್ಥಳದಲ್ಲಿ ಎಂದಿಗಿಂತಲೂ ಹೆಚ್ಚು ಸಮಯ ಇದ್ದನು. ಆದ್ದರಿಂದ ಅವನು ಹೊರಗೆ ಬಂದಾಗ, ಅಲ್ಲಿ ಕಾಯುತ್ತಿದ್ದ ಜನರು ಜಕರೀಯನಿಗೆ ಏನಾಯಿತೆಂದು ಕೇಳಿದರು. ಜಕರೀಯನಿಗೆ ಮಾತಾಡಲು ಆಗಲಿಲ್ಲ. ಅವನು ತನ್ನ ಕೈಗಳ ಮೂಲಕ ಸನ್ನೆ ಮಾಡುತ್ತಿದ್ದನು. ಜಕರೀಯನಿಗೆ ದೇವರಿಂದ ಸಂದೇಶ ಸಿಕ್ಕಿರಬಹುದೆಂದು ಜನರು ಅಂದುಕೊಂಡರು.

ಸ್ವಲ್ಪ ಸಮಯದ ನಂತರ ದೇವದೂತ ಹೇಳಿದಂತೆ ಎಲಿಸಬೇತಳು ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆತ್ತಳು. ಅವಳ ಸ್ನೇಹಿತರು ಮತ್ತು ಸಂಬಂಧಿಕರು ಮಗುವನ್ನು ನೋಡಲು ಬಂದರು. ಅವಳಿಗೆ ಮಗು ಹುಟ್ಟಿದ್ದಕ್ಕಾಗಿ ಅವರು ತುಂಬಾ ಸಂತೋಷಪಟ್ಟರು. ಆಗ ಎಲಿಸಬೇತಳು ‘ಈ ಮಗುವಿಗೆ ಯೋಹಾನ ಎಂದು ಹೆಸರಿಡಬೇಕು’ ಅಂದಳು. ಅದಕ್ಕೆ ಅವರು ‘ನಿಮ್ಮ ಸಂಬಂಧಿಕರಲ್ಲಿ ಈ ಹೆಸರಿನವರು ಯಾರೂ ಇಲ್ಲ. ಈ ಮಗುವಿಗೆ ಜಕರೀಯ ಎಂದು ತಂದೆಯ ಹೆಸರಿಡಿ’ ಅಂದರು. ಆದರೆ ಜಕರೀಯನು ಹಲಗೆಯ ಮೇಲೆ ‘ಯೋಹಾನ ಎನ್ನುವುದೇ ಅವನ ಹೆಸರು’ ಎಂದು ಬರೆದನು. ಆ ಕ್ಷಣವೇ ಅವನಿಗೆ ಮಾತು ಬಂತು! ಈ ಮಗುವಿನ ಸುದ್ದಿ ಯೂದಾಯದೆಲ್ಲೆಡೆ ಹರಡಿತು. ಜನರೆಲ್ಲರೂ ‘ಇವನು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗಬಹುದು’ ಎಂದು ಕುತೂಹಲಪಟ್ಟರು.

ನಂತರ ಜಕರೀಯ ಪವಿತ್ರಾತ್ಮಭರಿತನಾಗಿ, ‘ಯೆಹೋವನಿಗೆ ಸ್ತೋತ್ರವಾಗಲಿ. ಆತನು ಅಬ್ರಹಾಮನಿಗೆ ನಮ್ಮನ್ನು ರಕ್ಷಿಸಲು ಮೆಸ್ಸೀಯನನ್ನು ಕಳುಹಿಸುವೆನು ಎಂದು ಮಾತುಕೊಟ್ಟಿದ್ದನು. ಯೋಹಾನನು ಪ್ರವಾದಿಯಾಗುವನು ಮತ್ತು ಮೆಸ್ಸೀಯನಿಗೆ ದಾರಿ ಸಿದ್ಧಮಾಡುವನು’ ಎಂದು ಹೇಳಿದನು.

ಇದೇ ಸಂದರ್ಭದಲ್ಲಿ ಎಲಿಸಬೇತಳ ಸಂಬಂಧಿಕಳಾದ ಮರಿಯಳ ಜೀವನದಲ್ಲೂ ಒಂದು ವಿಶೇಷವಾದ ಸಂಗತಿ ನಡೆಯಿತು. ಅದು ಏನು ಅಂತ ಮುಂದಿನ ಅಧ್ಯಾಯದಲ್ಲಿ ನೋಡೋಣ.

“ಮನುಷ್ಯರಿಂದ ಇದು ಅಸಾಧ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ.”—ಮತ್ತಾಯ 19:26