ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 72

ಬಾಲಕ ಯೇಸು

ಬಾಲಕ ಯೇಸು

ಯೋಸೇಫ ಮತ್ತು ಮರಿಯ ನಜರೇತಿನಲ್ಲಿ ವಾಸಿಸುತ್ತಿದ್ದರು. ಅವರೊಂದಿಗೆ ಯೇಸು ಮತ್ತು ಇತರ ಗಂಡು-ಹೆಣ್ಣು ಮಕ್ಕಳೂ ಇದ್ದರು. ಯೋಸೇಫನು ಬಡಗಿಯ ಕೆಲಸಮಾಡಿ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವನು ಯೆಹೋವನ ಬಗ್ಗೆ ಮತ್ತು ಧರ್ಮಶಾಸ್ತ್ರದ ಬಗ್ಗೆ ತನ್ನ ಮಕ್ಕಳಿಗೆ ಕಲಿಸುತ್ತಿದ್ದನು. ಯೋಸೇಫನು ತನ್ನ ಕುಟುಂಬದ ಜೊತೆಗೆ ಕ್ರಮವಾಗಿ ಸಭಾಮಂದಿರಕ್ಕೆ ಮತ್ತು ಪ್ರತಿ ವರ್ಷ ಪಸ್ಕಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದನು.

ಯೇಸು ಹನ್ನೆರಡು ವರ್ಷದವನಾಗಿದ್ದಾಗ, ಯೋಸೇಫನ ಕುಟುಂಬ ಪ್ರತಿವರ್ಷದಂತೆ ಯೆರೂಸಲೇಮಿಗೆ ದೀರ್ಘ ಪ್ರಯಾಣ ಮಾಡಿತು. ಪಟ್ಟಣವು ಪಸ್ಕಹಬ್ಬವನ್ನು ಆಚರಿಸಲು ಬಂದಿದ್ದ ಜನರಿಂದ ತುಂಬಿಹೋಗಿತ್ತು. ಹಬ್ಬವನ್ನು ಆಚರಿಸಿದ ನಂತರ, ಯೋಸೇಫ ಮತ್ತು ಮರಿಯ ತಮ್ಮ ಮನೆಗೆ ಪ್ರಯಾಣ ಬೆಳೆಸಿದರು. ಯೇಸು ಕೂಡ ತಮ್ಮ ಸಂಬಂಧಿಕರ ಗುಂಪಿನಲ್ಲಿ ಎಲ್ಲೋ ಇದ್ದಾನೆ ಎಂದು ನೆನಸಿದರು. ಆದರೆ, ಅವನನ್ನು ಹುಡುಕಿದಾಗ ಅವನು ಸಿಗಲಿಲ್ಲ.

ಆಗ ಅವರು ಯೆರೂಸಲೇಮಿಗೆ ಹಿಂದಿರುಗಿ ಮೂರು ದಿನಗಳ ತನಕ ಯೇಸುವನ್ನು ಹುಡುಕಿದರು. ಕೊನೆಗೆ, ಅವರು ದೇವಾಲಯಕ್ಕೆ ಹೋದರು. ಅಲ್ಲಿ ಯೇಸು ಬೋಧಕರ ಮಧ್ಯೆ ಕುಳಿತು ಅವರು ಹೇಳುವುದನ್ನು ಗಮನಕೊಟ್ಟು ಕೇಳಿಸಿಕೊಳ್ಳುತ್ತಾ, ಒಳ್ಳೊಳ್ಳೇ ಪ್ರಶ್ನೆಗಳನ್ನು ಕೇಳುತ್ತಾ ಇದ್ದನು. ಬೋಧಕರು ಅವನ ಜ್ಞಾನ ನೋಡಿ ಎಷ್ಟು ಪ್ರಭಾವಿತರಾದರೆಂದರೆ ಅವರು ಯೇಸುವಿಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಯೇಸು ಕೊಟ್ಟ ಉತ್ತರಗಳನ್ನು ನೋಡಿ ಅವರು ಆಶ್ಚರ್ಯಪಟ್ಟರು. ಯೆಹೋವನ ಧರ್ಮಶಾಸ್ತ್ರವನ್ನು ಯೇಸು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು ಎಂದು ಅವರಿಗೆ ಗೊತ್ತಾಯಿತು.

ಯೋಸೇಫ ಮತ್ತು ಮರಿಯಳಿಗೆ ಎಷ್ಟು ಚಿಂತೆ ಆಗಿತ್ತೆಂದರೆ ಮರಿಯಳು, ‘ಮಗನೇ ನಿನಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕುತ್ತಾ ಇದ್ದೆವು! ನೀನೆಲ್ಲಿಗೆ ಹೋಗಿದ್ದೆ?’ ಎಂದು ಕೇಳಿದಳು. ಆಗ ಯೇಸು, ‘ನಾನು ಇಲ್ಲಿ, ನನ್ನ ತಂದೆಯ ಮನೆಯಲ್ಲಿ ಇರಬೇಕು ಎನ್ನುವುದು ನಿಮಗೆ ಗೊತ್ತಿರಲಿಲ್ಲವಾ?’ ಅಂದನು.

ಆಮೇಲೆ ಯೇಸು ತನ್ನ ಅಪ್ಪ-ಅಮ್ಮನ ಜೊತೆ ನಜರೇತಿಗೆ ಹೋದನು. ಯೋಸೇಫನು ಯೇಸುವಿಗೆ ಬಡಗಿಯ ಕೆಲಸವನ್ನು ಕಲಿಸಿದನು. ಯೇಸು ಯುವಕನಾಗಿದ್ದಾಗ ಎಂಥಾ ವ್ಯಕ್ತಿಯಾಗಿದ್ದನು? ನಿನಗೆ ಏನನಿಸುತ್ತೆ? ಅವನು ಬೆಳೆಯುತ್ತಾ ಹೋದಂತೆ ವಿವೇಕಿಯಾಗಿ ದೇವರ ಮತ್ತು ಮನುಷ್ಯರ ಅನುಗ್ರಹವನ್ನು ಪಡೆದನು.

“ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು, ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.”—ಕೀರ್ತನೆ 40:8