ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 73

ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು

ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು

ಜಕರೀಯ ಮತ್ತು ಎಲಿಸಬೇತರ ಮಗನಾದ ಯೋಹಾನನು ದೊಡ್ಡವನಾದಾಗ ಒಬ್ಬ ಪ್ರವಾದಿಯಾದನು. ಮೆಸ್ಸೀಯನು ಬರುತ್ತಾನೆ ಎಂದು ಜನರಿಗೆ ಕಲಿಸಲು ಯೆಹೋವನು ಯೋಹಾನನನ್ನು ಉಪಯೋಗಿಸಿದನು. ಅವನು ಸಭಾಮಂದಿರಗಳಲ್ಲಿ ಅಥವಾ ಪಟ್ಟಣಗಳಲ್ಲಿ ಸಾರದೆ ಅರಣ್ಯದಲ್ಲಿ ಸಾರಿದನು. ಯೋಹಾನನಿಂದ ಕಲಿಯಲು ಜನರು ಯೆರೂಸಲೇಮ್‌ ಮತ್ತು ಯೂದಾಯದ ಎಲ್ಲಾ ಕಡೆಗಳಿಂದ ಬಂದರು. ದೇವರನ್ನು ಮೆಚ್ಚಿಸಬೇಕೆಂದರೆ ಕೆಟ್ಟ ಕೆಲಸಗಳನ್ನು ಮಾಡುವುದನ್ನು ಬಿಟ್ಟುಬಿಡಬೇಕೆಂದು ಅವನು ಆ ಜನರಿಗೆ ಕಲಿಸಿದನು. ಯೋಹಾನನ ಮಾತುಗಳನ್ನು ಕೇಳಿದಾಗ ಅನೇಕರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು ಮತ್ತು ಯೋಹಾನನು ಅವರಿಗೆ ಯೊರ್ದನ್‌ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು.

ಯೋಹಾನ ತುಂಬ ಸರಳ ಜೀವನ ನಡೆಸಿದನು. ಅವನು ಒಂಟೆಯ ಕೂದಲಿನಿಂದ ಮಾಡಿದ ಬಟ್ಟೆಯನ್ನು ಧರಿಸುತ್ತಿದ್ದನು. ಮಿಡತೆ ಹಾಗೂ ಕಾಡುಜೇನನ್ನು ತಿನ್ನುತ್ತಿದ್ದನು. ಜನರು ಯೋಹಾನನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದರು. ಅಹಂಕಾರಿಗಳಾಗಿದ್ದ ಫರಿಸಾಯರು ಮತ್ತು ಸದ್ದುಕಾಯರು ಸಹ ಅವನನ್ನು ನೋಡಲು ಬಂದರು. ಯೋಹಾನನು ಅವರಿಗೆ, ‘ನೀವು ನಿಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಪಶ್ಚಾತ್ತಾಪಪಡಬೇಕು. ನೀವು ಅಬ್ರಹಾಮನ ಮಕ್ಕಳು ಎಂದು ಹೇಳಿಕೊಂಡ ಮಾತ್ರಕ್ಕೆ ಇತರರಿಗಿಂತ ಶ್ರೇಷ್ಠರೆಂದು ಭಾವಿಸಬೇಡಿ. ಅಬ್ರಹಾಮನ ಮಕ್ಕಳೆಂದ ಮಾತ್ರಕ್ಕೆ ನೀವು ದೇವರ ಮಕ್ಕಳಾಗುವುದಿಲ್ಲ’ ಎಂದನು.

ಅನೇಕರು ಯೋಹಾನನ ಹತ್ತಿರ ಬಂದು, ‘ದೇವರನ್ನು ಮೆಚ್ಚಿಸಲು ನಾವೇನು ಮಾಡಬೇಕು?’ ಎಂದು ಕೇಳಿದರು. ಅದಕ್ಕೆ ಯೋಹಾನ, ‘ನಿಮ್ಮ ಹತ್ತಿರ ಎರಡು ಅಂಗಿ ಇದ್ದರೆ ಯಾರ ಹತ್ತಿರ ಇಲ್ಲವೋ ಅವರಿಗೆ ಒಂದನ್ನು ಕೊಡಿ’ ಅಂದನು. ಯೋಹಾನನು ಯಾಕೆ ಹಾಗೆ ಹೇಳಿದನೆಂದು ನಿನಗೆ ಗೊತ್ತಾ? ದೇವರನ್ನು ಮೆಚ್ಚಿಸಬೇಕೆಂದರೆ ಜನರನ್ನು ಪ್ರೀತಿಸಬೇಕು. ಈ ವಿಷಯವನ್ನು ಜನರು ತಿಳಿದುಕೊಳ್ಳಬೇಕೆಂದು ಅವನು ಹಾಗೆ ಹೇಳಿದನು.

ಯೋಹಾನ ಸುಂಕ ವಸೂಲಿ ಮಾಡುವವರಿಗೆ, ‘ಪ್ರಾಮಾಣಿಕರಾಗಿರಿ, ಯಾರಿಗೂ ಮೋಸ ಮಾಡಬೇಡಿ’ ಅಂದನು. ಸೈನಿಕರಿಗೆ, ‘ಲಂಚ ತೆಗೆದುಕೊಳ್ಳಬೇಡಿ ಮತ್ತು ಸುಳ್ಳು ಹೇಳಬೇಡಿ’ ಎಂದನು.

ಯಾಜಕರು ಮತ್ತು ಲೇವಿಯರು ಸಹ ಯೋಹಾನನ ಹತ್ತಿರ ಬಂದು, ‘ನೀನು ಯಾರು? ಎಲ್ಲರೂ ನಿನ್ನ ಬಗ್ಗೆ ತಿಳಿಯಬೇಕು ಅಂತಿದ್ದಾರೆ’ ಅಂದರು. ಅದಕ್ಕೆ ಯೋಹಾನನು, ‘ಯೆಶಾಯನು ಹೇಳಿದಂತೆ, ಜನರನ್ನು ಯೆಹೋವನ ಕಡೆಗೆ ನಡೆಸುವ ಅಡವಿಯಲ್ಲಿ ಕೇಳಿಸುವ ಶಬ್ದವೇ ನಾನು’ ಎಂದನು.

ಯೋಹಾನ ಕಲಿಸಿದ ವಿಷಯಗಳು ಜನರಿಗೆ ತುಂಬ ಇಷ್ಟವಾದವು. ಅನೇಕರು ಯೋಹಾನನೇ ಮೆಸ್ಸೀಯನು ಇರಬಹುದೇನೋ ಎಂದು ಯೋಚಿಸಿದರು. ಆದರೆ ಯೋಹಾನನು, ‘ನನಗಿಂತ ಶ್ರೇಷ್ಠನು ಬರುತ್ತಾನೆ, ನಾನು ಅವನ ಚಪ್ಪಲಿಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನೀರಿನ ಮೂಲಕ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಅವನು ಪವಿತ್ರಾತ್ಮದ ಮೂಲಕ ದೀಕ್ಷಾಸ್ನಾನ ಮಾಡಿಸುತ್ತಾನೆ’ ಅಂದನು.

“ಈ ಮನುಷ್ಯನು ಸಾಕ್ಷಿಗಾಗಿ ಬಂದನು, ತನ್ನ ಮೂಲಕ ಎಲ್ಲ ರೀತಿಯ ಜನರು ನಂಬುವವರಾಗುವಂತೆ ಆ ಬೆಳಕಿನ ಕುರಿತು ಸಾಕ್ಷಿಕೊಡಲು ಬಂದನು.”—ಯೋಹಾನ 1:7