ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 75

ಯೇಸುವನ್ನು ಪಿಶಾಚನು ಪರೀಕ್ಷಿಸಿದನು

ಯೇಸುವನ್ನು ಪಿಶಾಚನು ಪರೀಕ್ಷಿಸಿದನು

ಯೇಸು ದೀಕ್ಷಾಸ್ನಾನ ಪಡೆದ ಮೇಲೆ, ಪವಿತ್ರಾತ್ಮವು ಅವನನ್ನು ಅರಣ್ಯಕ್ಕೆ ನಡೆಸಿತು. ಯೇಸು ನಲವತ್ತು ದಿನಗಳವರೆಗೆ ಏನೂ ತಿನ್ನಲಿಲ್ಲ, ಅವನಿಗೆ ತುಂಬಾ ಹಸಿವಾಯಿತು. ಆಗ ಪಿಶಾಚನು ಯೇಸುವನ್ನು ಪರೀಕ್ಷಿಸಲು ಬಂದನು. ಅವನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ದರೆ ಈ ಕಲ್ಲುಗಳನ್ನು ರೊಟ್ಟಿಯಾಗುವಂತೆ ಹೇಳು’ ಅಂದನು. ಆದರೆ ಯೇಸು ಶಾಸ್ತ್ರವಚನಗಳನ್ನು ಉಪಯೋಗಿಸಿ, ‘ಬದುಕಲು ಕೇವಲ ಆಹಾರ ಅಷ್ಟೇ ಸಾಕಾಗಲ್ಲ. ಯೆಹೋವನು ಹೇಳುವ ಪ್ರತಿಯೊಂದು ಮಾತನ್ನು ಕೇಳಬೇಕು ಎಂದು ಬರೆದಿದೆ’ ಎಂದು ಉತ್ತರಿಸಿದನು.

ನಂತರ, ಪಿಶಾಚನು ಯೇಸುವಿಗೆ, ‘ನೀನು ನಿಜವಾಗಿ ದೇವರ ಮಗನಾಗಿದ್ದರೆ ದೇವಾಲಯದ ಮೇಲಿಂದ ಕೆಳಕ್ಕೆ ಧುಮುಕು. ದೇವರು ತನ್ನ ದೂತರನ್ನು ಕಳುಹಿಸಿ ನಿನ್ನನ್ನು ಕಾಪಾಡುವನು ಎಂದು ಬರೆದಿದೆಯಲ್ಲಾ’ ಎಂದು ಹೇಳಿದನು. ಆದರೆ ಯೇಸು ಪುನಃ ಶಾಸ್ತ್ರವಚನಗಳನ್ನು ಉಪಯೋಗಿಸಿ, ‘ಯೆಹೋವನನ್ನು ಪರೀಕ್ಷಿಸಬಾರದು ಎಂದು ಸಹ ಬರೆದಿದೆ’ ಅಂದನು.

ಬಳಿಕ, ಸೈತಾನನು ಎಲ್ಲಾ ರಾಜ್ಯಗಳನ್ನೂ ಅವುಗಳ ಐಶ್ವರ್ಯವನ್ನೂ, ಮಹಿಮೆಯನ್ನೂ ತೋರಿಸಿ, ‘ನೀನು ನನಗೆ ಒಂದೇ ಒಂದು ಸಾರಿ ಆರಾಧನೆ ಮಾಡಿದರೆ ಈ ಎಲ್ಲಾ ರಾಜ್ಯಗ ಳನ್ನು ಮತ್ತು ಐಶ್ವರ್ಯವನ್ನು ನಿನಗೆ ಕೊಡುವೆನು’ ಅಂದನು. ಆದರೆ ಯೇಸು ಅವನಿಗೆ, ‘ಸೈತಾನನೇ, ಇಲ್ಲಿಂದ ತೊಲಗಿ ಹೋಗು! ಯೆಹೋವನನ್ನು ಮಾತ್ರ ಆರಾಧಿಸಬೇಕು ಎಂದು ಬರೆದಿದೆ’ ಅಂದನು.

ಆಗ ಪಿಶಾಚನು ಅಲ್ಲಿಂದ ಹೋದನು ಮತ್ತು ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು. ಅಂದಿನಿಂದ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು. ಈ ಕೆಲಸಕ್ಕಾಗಿಯೇ ದೇವರು ಅವನನ್ನು ಭೂಮಿಗೆ ಕಳುಹಿಸಿದ್ದನು. ಯೇಸುವಿನ ಬೋಧನೆಯನ್ನು ಜನರು ಇಷ್ಟಪಟ್ಟರು. ಅವನು ಹೋದಲ್ಲೆಲ್ಲಾ ಅವರು ಅವನ ಹಿಂದೆ ಹೋದರು.

“ಅವನು [ಪಿಶಾಚನು] ಸುಳ್ಳಾಡುವಾಗ ತನ್ನ ಸ್ವಭಾವಕ್ಕೆ ಅನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.”—ಯೋಹಾನ 8:44