ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 79

ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ

ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ

ಯೇಸು ಭೂಮಿಗೆ ಬಂದದ್ದು ದೇವರ ರಾಜ್ಯದ ಸುವಾರ್ತೆಯನ್ನು ಸಾರಲು. ಯೇಸು ರಾಜನಾದಾಗ ಏನೆಲ್ಲಾ ಮಾಡುತ್ತಾನೆಂದು ತೋರಿಸಲಿಕ್ಕಾಗಿ ಯೆಹೋವನು ಅವನಿಗೆ ಅದ್ಭುತಗಳನ್ನು ಮಾಡಲು ಪವಿತ್ರಾತ್ಮ ಶಕ್ತಿಯನ್ನು ಕೊಟ್ಟನು. ಅವನು ಯಾವುದೇ ಕಾಯಿಲೆಯನ್ನಾದರೂ ಗುಣಪಡಿಸುತ್ತಿದ್ದನು. ಅವನು ಎಲ್ಲೇ ಹೋದರೂ ಕಾಯಿಲೆಬಿದ್ದವರು ಸಹಾಯಕ್ಕಾಗಿ ಅವನ ಹತ್ತಿರ ಬರುತ್ತಿದ್ದರು. ಯೇಸು ಅವರೆಲ್ಲರನ್ನು ಗುಣಪಡಿಸಿದನು. ಕುರುಡರಿಗೆ ಕಣ್ಣು ಬಂತು, ಕಿವುಡರಿಗೆ ಕಿವಿ ಕೇಳಿಸಿತು, ಲಕ್ವ ಹೊಡೆದವರೂ ನಡೆದಾಡಲು ಆರಂಭಿಸಿದರು. ದೆವ್ವ ಹಿಡಿದವರನ್ನು ಯೇಸುವಿನ ಬಳಿ ಕರೆದುಕೊಂಡು ಬಂದಾಗ ಅವನು ಆ ದೆವ್ವಗಳನ್ನು ಬಿಡಿಸಿದನು. ಯೇಸುವಿನ ಬಟ್ಟೆಯ ತುದಿಯನ್ನು ಮುಟ್ಟಿದರೂ ಅವರು ಗುಣ ಆಗುತ್ತಿದ್ದರು. ಯೇಸು ಹೋದಲ್ಲೆಲ್ಲ ಜನರು ಅವನನ್ನು ಹಿಂಬಾಲಿಸುತ್ತಿದ್ದರು. ತಾನು ಏಕಾಂತವಾಗಿ ಇರಲು ಬಯಸಿದಾಗಲೂ ಜನ ಸಹಾಯ ಕೇಳಿ ಬಂದರೆ ಯೇಸು ‘ಇಲ್ಲ’ ಅಂದವನಲ್ಲ.

ಒಂದು ಸಲ, ಯೇಸು ಇದ್ದ ಮನೆಗೆ ಒಬ್ಬ ಲಕ್ವ ಹೊಡೆದ ಮನುಷ್ಯನನ್ನು ಜನ ತೆಗೆದುಕೊಂಡು ಬಂದರು. ಮನೆಯಲ್ಲಿ ಎಷ್ಟು ಜನ ಇದ್ದರು ಅಂದರೆ ಅವರಿಗೆ ಒಳಗೆ ಹೋಗಲು ಆಗಲಿಲ್ಲ. ಆಗ ಅವರು ಮನೆಯ ಛಾವಣಿಯ ಸ್ವಲ್ಪ ಭಾಗವನ್ನು ತೆಗೆದು ಮಂಚದ ಸಮೇತ ಆ ಮನುಷ್ಯನನ್ನು ಯೇಸುವಿನ ಬಳಿ ಇಳಿಸಿದರು. ಯೇಸು ಆ ಮನುಷ್ಯನಿಗೆ, ‘ಎದ್ದು ನಡೆ’ ಅಂದನು. ಅವನು ನಡೆದನು. ಇದನ್ನು ನೋಡಿದಾಗ ಜನರಿಗೆ ತುಂಬ ಆಶ್ಚರ್ಯ ಆಯಿತು.

ಇನ್ನೊಂದು ಸಲ, ಯೇಸು ಒಂದು ಹಳ್ಳಿಗೆ ಹೋಗುವಾಗ ಹತ್ತು ಜನ ಕುಷ್ಠರೋಗಿಗಳು ದೂರದಲ್ಲಿ ನಿಂತುಕೊಂಡು, ‘ಯೇಸು, ನಮಗೆ ಸಹಾಯ ಮಾಡಿ’ ಅಂತ ಕೂಗಿ ಹೇಳಿದರು. ಆ ಕಾಲದಲ್ಲಿ ಕುಷ್ಠರೋಗಿಗಳು ಬೇರೆ ಜನರ ಹತ್ತಿರನೂ ಬರಬಾರದಿತ್ತು. ಕುಷ್ಠ ಗುಣವಾದಾಗ ದೇವಾಲಯಕ್ಕೆ ಹೋಗಿ ತೋರಿಸಬೇಕು ಅಂತ ಯೆಹೋವನ ಧರ್ಮಶಾಸ್ತ್ರ ಹೇಳುತ್ತಿತ್ತು. ಹಾಗಾಗಿ ಯೇಸು ಆ ಕುಷ್ಠರೋಗಿಗಳನ್ನು ದೇವಾಲಯಕ್ಕೆ ಹೋಗುವಂತೆ ಹೇಳಿದನು. ಅವರು ದಾರಿಯಲ್ಲಿ ಹೋಗುತ್ತಾ ಇರುವಾಗಲೇ ಅವರ ಕುಷ್ಠ ಗುಣವಾಯಿತು. ಆಗ ಆ ಹತ್ತು ಕುಷ್ಠರೋಗಿಗಳಲ್ಲಿ ಒಬ್ಬನು ಮಾತ್ರ ಯೇಸುವಿಗೆ ಧನ್ಯವಾದ ಹೇಳಲು ವಾಪಾಸ್ಸು ಬಂದನು ಮತ್ತು ದೇವರನ್ನು ಸ್ತುತಿಸಿದನು.

ಒಬ್ಬ ಸ್ತ್ರೀಗೆ 12 ವರ್ಷಗಳಿಂದ ಒಂದು ಕಾಯಿಲೆಯಿತ್ತು. ಹೇಗಾದರೂ ತನ್ನ ಕಾಯಿಲೆ ಗುಣ ಆಗಬೇಕು ಅಂತ ಅವಳು ಹಾತೊರೆಯುತ್ತಿದ್ದಳು. ಅದಕ್ಕೆ ಅವಳು ಜನರ ಗುಂಪಿನ ಮಧ್ಯೆ ದಾರಿ ಮಾಡಿಕೊಂಡು ಬಂದು ಯೇಸುವಿನ ಮೇಲಂಗಿಯ ತುದಿಯನ್ನು ಹಿಂದಿನಿಂದ ಮುಟ್ಟಿದಳು. ತಕ್ಷಣ ಅವಳ ಕಾಯಿಲೆ ಗುಣ ಆಯಿತು. ಆಗ ಯೇಸು, ‘ಯಾರು ನನ್ನನ್ನು ಮುಟ್ಟಿದ್ದು?’ ಅಂತ ಕೇಳಿದನು. ಆ ಸ್ತ್ರೀಗೆ ತುಂಬ ಭಯವಾಯಿತು. ಆದರೂ ಆಕೆ ಮುಂದೆ ಬಂದು ಸತ್ಯವನ್ನು ಹೇಳಿದಳು. ಆಗ ಯೇಸು, ‘ಮಗಳೇ, ಸಮಾಧಾನದಿಂದ ಹೋಗು’ ಎಂದು ಸಂತೈಸಿದನು.

ಯಾಯೀರ ಎಂಬ ಅಧಿಕಾರಿ ಯೇಸು ಹತ್ತಿರ ಬಂದು, ‘ದಯವಿಟ್ಟು ನನ್ನ ಮನೆಗೆ ಬಾ, ನನ್ನ ಮಗಳಿಗೆ ತುಂಬಾ ಹುಷಾರಿಲ್ಲ’ ಅಂತ ಬೇಡಿದನು. ಆದರೆ ಯೇಸು ಅವನ ಮನೆ ತಲುಪುವ ಮುಂಚೆನೇ ಅವನ ಮಗಳು ತೀರಿಕೊಂಡಳು. ತೀರಿಹೋಗಿದ್ದ ಮಗುವನ್ನು ನೋಡಲು ಅಲ್ಲಿ ತುಂಬ ಜನ ಬಂದಿದ್ದರು. ಯೇಸು ಅವರಿಗೆ, ‘ಅಳಬೇಡಿ, ಅವಳು ಬರೀ ನಿದ್ದೆ ಮಾಡುತ್ತಿದ್ದಾಳೆ’ ಅಂತ ಹೇಳಿದನು. ನಂತರ, ಅವನು ಆ ಹುಡುಗಿಯ ಕೈ ಹಿಡಿದು, ‘ಮಗಳೇ, ಎದ್ದೇಳು’ ಅಂದನು. ಕೂಡಲೇ ಅವಳು ಎದ್ದು ಕುಳಿತಳು. ಆಗ ಯೇಸು ಅವಳಿಗೆ ಏನಾದರೂ ತಿನ್ನಲು ಕೊಡುವಂತೆ ಅವಳ ಹೆತ್ತವರಿಗೆ ಹೇಳಿದನು. ತೀರಿಕೊಂಡಿದ್ದ ಮಗಳು ಬದುಕಿದಾಗ ಆ ಹೆತ್ತವರಿಗೆ ಹೇಗಾಗಿರಬಹುದು ಅಂತ ಸ್ವಲ್ಪ ಯೋಚಿಸು!

‘ಯೇಸುವನ್ನು ದೇವರು ಪವಿತ್ರಾತ್ಮದಿಂದಲೂ ಶಕ್ತಿಯಿಂದಲೂ ಅಭಿಷೇಕಿಸಿದನು. ದೇವರು ಅವನೊಂದಿಗಿದ್ದುದರಿಂದ ಅವನು ದೇಶದಾದ್ಯಂತ ಹೋಗಿ ಒಳ್ಳೇದನ್ನು ಮಾಡುತ್ತಾ ಪಿಶಾಚನಿಂದ ಪೀಡಿಸಲ್ಪಟ್ಟವರೆಲ್ಲರನ್ನು ಸ್ವಸ್ಥಪಡಿಸಿದನು.’—ಅಪೊಸ್ತಲರ ಕಾರ್ಯಗಳು 10:38