ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 81

ಪರ್ವತ ಪ್ರಸಂಗ

ಪರ್ವತ ಪ್ರಸಂಗ

12 ಅಪೊಸ್ತಲರನ್ನು ಆರಿಸಿದ ನಂತರ ಯೇಸು ಬೆಟ್ಟದಿಂದ ಇಳಿದು ಬಂದನು. ಅಲ್ಲಿ ಗಲಿಲಾಯ, ಯೂದಾಯ, ತೂರ್‌, ಸೀದೋನ್‌, ಸಿರಿಯ ಮತ್ತು ಯೋರ್ದನ್‌ ನದಿಯ ಆಚೇ ಕಡೆಯಿಂದ ಬಂದ ಜನರ ಒಂದು ದೊಡ್ಡ ಗುಂಪೇ ಇತ್ತು. ಅವರು ಕಾಯಿಲೆಬಿದ್ದ ಮತ್ತು ದೆವ್ವ ಹಿಡಿದ ಜನರನ್ನು ಕರೆದುಕೊಂಡು ಬಂದಿದ್ದರು. ಯೇಸು ಅವರೆಲ್ಲರನ್ನು ಗುಣಪಡಿಸಿದನು. ನಂತರ ಅವನು ಬೆಟ್ಟದ ಮೇಲೆ ಕುಳಿತು ಅವರೊಂದಿಗೆ ಮಾತಾಡಲು ಆರಂಭಿಸಿದನು. ದೇವರ ಸ್ನೇಹಿತರಾಗಬೇಕೆಂದರೆ ಏನು ಮಾಡಬೇಕಂತ ಅವನು ಕಲಿಸಿದನು. ಯೆಹೋವನ ಸಹಾಯ ನಮಗೆ ಬೇಕಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಮತ್ತು ಆತನನ್ನು ಪ್ರೀತಿಸಲು ಕಲಿಯಬೇಕು. ನಾವು ಜನರನ್ನು ಪ್ರೀತಿಸದಿದ್ದರೆ ದೇವರನ್ನು ಪ್ರೀತಿಸಲು ಸಾಧ್ಯ ಇಲ್ಲ. ಆದ್ದರಿಂದ ನಾವು ಎಲ್ಲರಿಗೂ ನಮ್ಮ ವೈರಿಗಳಿಗೂ ದಯೆ ತೋರಿಸಬೇಕು ಮತ್ತು ಅವರ ಜೊತೆ ಚೆನ್ನಾಗಿ ನಡೆದುಕೊಳ್ಳಬೇಕು.

‘ನಿಮ್ಮ ಸ್ನೇಹಿತರನ್ನು ಮಾತ್ರ ಪ್ರೀತಿಸಿದರೆ ಸಾಕಾಗಲ್ಲ. ನಿಮ್ಮ ವೈರಿಗಳನ್ನೂ ಪ್ರೀತಿಸಬೇಕು ಮತ್ತು ಜನರನ್ನು ಮನಸಾರೆ ಕ್ಷಮಿಸಬೇಕು. ನಿಮ್ಮಿಂದ ಬೇರೆಯವರಿಗೆ ನೋವಾಗಿದೆ ಅಂತ ನಿಮಗೆ ಗೊತ್ತಾದರೆ ಕೂಡಲೇ ಅವರ ಹತ್ತಿರ ಹೋಗಿ ಕ್ಷಮೆ ಕೇಳಿ. ಬೇರೆಯವರು ನಿಮ್ಮ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತೀರೋ ಅವರ ಜೊತೆ ನೀವೂ ಹಾಗೇ ನಡೆದುಕೊಳ್ಳಿ’ ಅಂತ ಯೇಸು ಹೇಳಿದನು.

ಯೇಸು ಹಣ, ಸಂಪತ್ತಿನ ಬಗ್ಗೆ ಕೂಡ ಜನರಿಗೆ ಒಳ್ಳೇ ಸಲಹೆ ಕೊಟ್ಟನು. ‘ತುಂಬ ಹಣ ಮಾಡಿಕೊಳ್ಳುವುದಕ್ಕಿಂತ ಯೆಹೋವನ ಸ್ನೇಹಿತರಾಗುವುದು ತುಂಬ ಮುಖ್ಯ. ಕಳ್ಳ ಬಂದು ನಿಮ್ಮ ಹಣವನ್ನು ಕದಿಯಬಹುದು. ಆದರೆ ಯೆಹೋವನ ಜೊತೆ ನಿಮಗಿರೋ ಸ್ನೇಹವನ್ನು ಯಾರೂ ಕದಿಯಲು ಆಗುವುದಿಲ್ಲ. ತಿನ್ನೋದು, ಕುಡಿಯೋದರ ಬಗ್ಗೆ, ಬಟ್ಟೆಗಳ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿ. ಹಕ್ಕಿಗಳನ್ನು ನೋಡಿ, ದೇವರು ಅವುಗಳಿಗೆ ತಿನ್ನಲು ಸಾಕಷ್ಟು ಆಹಾರವನ್ನು ಕೊಡುತ್ತಾನೆ. ಚಿಂತೆ ಮಾಡುವುದರಿಂದ ನೀವು ಒಂದು ದಿನ ಸಹ ಜಾಸ್ತಿ ಬದುಕಲು ಆಗುವುದಿಲ್ಲ. ನಿಮಗೇನು ಬೇಕು ಅಂತ ಯೆಹೋವನಿಗೆ ಗೊತ್ತು ಅನ್ನೋದನ್ನು ಮರೆಯಬೇಡಿ’ ಅಂತ ಯೇಸು ಹೇಳಿದನು.

ಯಾರೂ ಯೇಸು ಥರ ಮಾತಾಡಿದ್ದನ್ನು ಆ ಜನರು ಕೇಳಿಸಿಕೊಂಡಿರಲಿಲ್ಲ. ಈ ವಿಷಯಗಳನ್ನು ಧಾರ್ಮಿಕ ಮುಖಂಡರಾದ ಶಾಸ್ತ್ರಿಗಳು, ಫರಿಸಾಯರು ಅವರಿಗೆ ಕಲಿಸಿರಲಿಲ್ಲ. ಯೇಸು ಅಂಥ ಮಹಾ ಬೋಧಕ ಆಗಲು ಕಾರಣ ಏನಿರಬಹುದು? ಕಾರಣ, ಯೆಹೋವನು ಹೇಳಿದ್ದನ್ನೇ ಯೇಸು ಕಲಿಸಿದನು.

“ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ.”—ಮತ್ತಾಯ 11:29