ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 82

ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ

ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ

ಫರಿಸಾಯರು ಏನೇ ಮಾಡಿದರೂ ಜನರನ್ನು ಮೆಚ್ಚಿಸಲಿಕ್ಕಾಗಿ ಮಾಡುತ್ತಿದ್ದರು. ಅವರು ಏನಾದರೂ ಒಳ್ಳೇ ಕೆಲಸ ಮಾಡುವಾಗ ಬೇರೆಯವರು ನೋಡಬೇಕಂತ ಮಾಡುತ್ತಿದ್ದರು. ಪ್ರಾರ್ಥಿಸುವಾಗ ಎಲ್ಲರೂ ತಮ್ಮನ್ನು ನೋಡಬೇಕೆಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥಿಸುತ್ತಿದ್ದರು. ಫರಿಸಾಯರು ಉದ್ದವಾದ ಪ್ರಾರ್ಥನೆಗಳನ್ನು ಬಾಯಿಪಾಠ ಮಾಡಿಕೊಂಡು ಅದನ್ನು ಸಭಾಮಂದಿರಗಳಲ್ಲಿ ಮತ್ತು ಪೇಟೆಬೀದಿಗಳಲ್ಲಿ ಜನರಿಗೆ ಕೇಳಿಸುವಂತೆ ಮಾಡುತ್ತಿದ್ದರು. ಯೇಸು ಜನರಿಗೆ, ‘ಫರಿಸಾಯರ ಹಾಗೆ ನೀವು ಪ್ರಾರ್ಥಿಸಬೇಡಿ. ಅವರ ಉದ್ದವಾದ ಪ್ರಾರ್ಥನೆ ನೋಡಿ ದೇವರು ಮೆಚ್ಚುತ್ತಾನೆಂದು ಅವರು ನೆನಸುತ್ತಾರೆ. ಆದರೆ ದೇವರು ಖಂಡಿತ ಮೆಚ್ಚುವುದಿಲ್ಲ. ಪ್ರಾರ್ಥನೆ ಅನ್ನುವುದು ನಿಮಗೆ ಮತ್ತು ಯೆಹೋವನಿಗೆ ಮಾತ್ರ ಸಂಬಂಧಪಟ್ಟಿದ್ದು. ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡಿ. ನಿಮ್ಮ ಅನಿಸಿಕೆ ಅಥವಾ ಭಾವನೆಗಳನ್ನು ತನಗೆ ಹೇಳಬೇಕೆಂದು ಯೆಹೋವನು ಬಯಸುತ್ತಾನೆ’ ಎಂದನು. ಇದನ್ನು ಕೇಳಿದಾಗ ಅವರು ಆಶ್ಚರ್ಯಪಟ್ಟರು.

‘ನೀವು ಹೇಗೆ ಪ್ರಾರ್ಥಿಸಬೇಕೆಂದರೆ, “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ”’ ಅಂತ ಯೇಸು ಹೇಳಿಕೊಟ್ಟನು. ಅವರು ಆಯಾ ದಿನದ ಆಹಾರಕ್ಕಾಗಿ, ತಮ್ಮ ತಪ್ಪುಗಳ ಕ್ಷಮೆಗಾಗಿ ಮತ್ತು ಇತರ ವೈಯಕ್ತಿಕ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬೇಕೆಂದು ಯೇಸು ಹೇಳಿದನು.

‘ಪ್ರಾರ್ಥನೆ ಮಾಡುವುದನ್ನು ಯಾವತ್ತೂ ನಿಲ್ಲಿಸಬೇಡಿ. ಒಳ್ಳೇ ವಿಷಯಗಳಿಗಾಗಿ ನಿಮ್ಮ ತಂದೆಯಾದ ಯೆಹೋವನ ಹತ್ತಿರ ಕೇಳುತ್ತಾ ಇರಿ. ಪ್ರತಿಯೊಬ್ಬ ಹೆತ್ತವರು ತಮ್ಮ ಮಕ್ಕಳಿಗೆ ಒಳ್ಳೇ ವಸ್ತುಗಳನ್ನು ಕೊಡಲು ಬಯಸುತ್ತಾರೆ. ನಿಮ್ಮ ಮಕ್ಕಳು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುತ್ತೀರಾ? ಮೀನು ಕೇಳಿದರೆ ಹಾವು ಕೊಡುತ್ತೀರಾ?’ ಎಂದು ಯೇಸು ಕೇಳಿದನು.

ಬಳಿಕ ಯೇಸು ಆ ಮಾತಿನ ಅರ್ಥವನ್ನು ಕಲಿಸಿದನು, ‘ಮನುಷ್ಯರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡುವಾಗ ನಿಮ್ಮ ತಂದೆಯಾದ ಯೆಹೋವನು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುತ್ತಾನಲ್ಲವೇ? ಅದಕ್ಕೇ ನೀವು ಬೇಡಿಕೊಳ್ಳಬೇಕು’ ಅಂದನು. ಯೇಸುವಿನ ಸಲಹೆಯನ್ನು ನೀವು ಪಾಲಿಸುತ್ತೀರಾ? ಯಾವೆಲ್ಲ ವಿಷಯಗಳಿಗಾಗಿ ನೀವು ಪ್ರಾರ್ಥಿಸುತ್ತೀರಿ?

“ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.”—ಮತ್ತಾಯ 7:7