ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 86

ಲಾಜರನ ಪುನರುತ್ಥಾನ

ಲಾಜರನ ಪುನರುತ್ಥಾನ

ಯೇಸುವಿಗೆ ಬೇಥಾನ್ಯದಲ್ಲಿ ಮೂವರು ಆಪ್ತ ಸ್ನೇಹಿತರಿದ್ದರು. ಅವರು ಯಾರೆಂದರೆ ಲಾಜರ ಮತ್ತು ಅವನ ಇಬ್ಬರು ಸಹೋದರಿಯರಾದ ಮರಿಯ ಮತ್ತು ಮಾರ್ಥ. ಒಂದು ದಿನ, ಯೇಸು ಯೋರ್ದನಿನ ಆಚೆ ಪಕ್ಕದಲ್ಲಿದ್ದನು. ಆಗ ಮರಿಯ ಮತ್ತು ಮಾರ್ಥ ಯೇಸುವಿಗೆ, ‘ಲಾಜರನು ಕಾಯಿಲೆ ಬಿದ್ದಿದ್ದಾನೆ. ದಯವಿಟ್ಟು ಬೇಗ ಬನ್ನಿ!’ ಎಂಬ ತುರ್ತಿನ ಸಂದೇಶ ಕಳುಹಿಸಿದರು. ಆದರೆ ಯೇಸು ತಕ್ಷಣ ಹೋಗಲಿಲ್ಲ. ಅವನು ಇನ್ನೆರಡು ದಿನ ಅಲ್ಲೇ ಉಳಿದನು, ನಂತರ ಯೇಸು ಶಿಷ್ಯರಿಗೆ, ‘ಬೇಥಾನ್ಯಕ್ಕೆ ಹೋಗೋಣ ಬನ್ನಿ. ಲಾಜರನು ನಿದ್ರಿಸುತ್ತಿದ್ದಾನೆ, ನಾನು ಹೋಗಿ ಅವನನ್ನು ಎಬ್ಬಿಸಬೇಕು’ ಎಂದನು. ಶಿಷ್ಯರು, ‘ಲಾಜರನು ನಿದ್ರಿಸುತ್ತಿರುವಲ್ಲಿ ಅವನೇ ಎದ್ದೇಳುತ್ತಾನೆ’ ಎಂದರು. ಆಗ ಯೇಸು ಅವರಿಗೆ ಸ್ಪಷ್ಟವಾಗಿ, ‘ಲಾಜರನು ಸತ್ತುಹೋಗಿದ್ದಾನೆ’ ಅಂದನು.

ಯೇಸು ಬೇಥಾನ್ಯಕ್ಕೆ ಬಂದು ಮುಟ್ಟಿದಾಗ ಲಾಜರನನ್ನು ಸಮಾಧಿ ಮಾಡಿ ಈಗಾಗಲೇ ನಾಲ್ಕು ದಿನಗಳಾಗಿದ್ದವು. ಮಾರ್ಥ ಮತ್ತು ಮರಿಯಳನ್ನು ಸಮಾಧಾನ ಪಡಿಸಲು ಜನರು ಗುಂಪು ಬಂದಿತ್ತು. ಯೇಸು ಬಂದಿದ್ದಾನೆಂದು ಮಾರ್ಥ ಕೇಳಿದ ಕೂಡಲೇ, ಅವನನ್ನು ನೋಡಲು ಓಡೋಡಿ ಬಂದಳು. ಅವಳು ಯೇಸುವಿಗೆ, ‘ಕರ್ತನೇ, ನೀನು ಇಲ್ಲಿರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ’ ಅಂದಳು. ಯೇಸು ಅವಳಿಗೆ, ‘ನಿನ್ನ ಸಹೋದರ ಪುನಃ ಬದುಕುವನು. ನೀನು ಇದನ್ನು ನಂಬುತ್ತೀಯಾ ಮಾರ್ಥ?’ ಎಂದು ಕೇಳಿದನು. ಮಾರ್ಥಳು, ‘ಅವನು ಪುನರುತ್ಥಾನದಲ್ಲಿ ಎದ್ದು ಬರುವನೆಂದು ನಾನು ನಂಬುತ್ತೇನೆ’ ಅಂದಳು. ಯೇಸು ಮಾರ್ಥಳಿಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಎಂದನು.

ನಂತರ ಮಾರ್ಥಳು ಮರಿಯಳ ಬಳಿಗೆ ಹೋಗಿ, ‘ಯೇಸು ಬಂದಿದ್ದಾನೆ’ ಎಂದಳು. ಮರಿಯಳು ಯೇಸುವಿನ ಬಳಿಗೆ ಓಡೋಡಿ ಹೋದಳು, ಜನರ ಗುಂಪೂ ಅವಳನ್ನು ಹಿಂಬಾಲಿಸಿತು. ಅವಳು ಯೇಸುವಿನ ಕಾಲ ಹತ್ತಿರ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತ, ‘ಕರ್ತನೇ, ನೀನು ಇಲ್ಲಿರುತ್ತಿದ್ದರೆ ನನ್ನ ಸಹೋದರ ಈಗಲೂ ಜೀವದಿಂದ ಇರುತ್ತಿದ್ದ!’ ಎಂದಳು. ಮರಿಯಳು ಪಡುತ್ತಿದ್ದ ಸಂಕಟವನ್ನು ನೋಡಿ ಯೇಸು ಸಹ ಅತ್ತನು. ಇದನ್ನು ನೋಡಿದ ಜನರ ಗುಂಪು, ‘ಯೇಸು ಲಾಜರನನ್ನು ಎಷ್ಟು ಪ್ರೀತಿಸುತ್ತಿದ್ದಾನೆ’ ಎಂದರು. ಆದರೆ ಕೆಲವರು, ‘ಇವನು ತನ್ನ ಸ್ನೇಹಿತನನ್ನೇಕೆ ಕಾಪಾಡಲಿಲ್ಲ?’ ಅಂದುಕೊಂಡರು. ಯೇಸು ಮುಂದೆ ಏನು ಮಾಡಿದನು? ನೋಡೋಣ ಬನ್ನಿ.

ಯೇಸು ಸಮಾಧಿಯ ಹತ್ತಿರ ಹೋದನು. ಅದರ ಬಾಗಿಲಿಗೆ ಒಂದು ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. ‘ಈ ಕಲ್ಲನ್ನು ತೆಗೆದುಹಾಕಿರಿ’ ಎಂದನು ಯೇಸು. ಮಾರ್ಥಳು ಯೇಸುವಿಗೆ, ‘ಅವನು ಸತ್ತು ನಾಲ್ಕು ದಿನ ಆಯ್ತು. ಈಗ ಅವನ ದೇಹ ಕೊಳೆತು ನಾರುತ್ತಿರಬಹುದು’ ಎಂದಳು. ಆದರೂ ಅವರು ಕಲ್ಲನ್ನು ತೆಗೆದರು. ಆಗ ಯೇಸು, ‘ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ತುಂಬ ಧನ್ಯವಾದ. ನೀನು ಯಾವಾಗಲೂ ನನಗೆ ಕಿವಿಗೊಡುತ್ತೀ ಎಂಬುದು ನನಗೆ ಗೊತ್ತು, ಆದರೂ ನನ್ನನ್ನು ಕಳುಹಿಸಿದ್ದು ನೀನು ಎಂದು ಈ ಜನರು ತಿಳಿಯಲಿಕ್ಕಾಗಿ ನಾನು ಗಟ್ಟಿಯಾಗಿ ಮಾತಾಡುತ್ತಿದ್ದೇನೆ’ ಎಂದು ಪ್ರಾರ್ಥಿಸಿದನು. ನಂತರ, ಯೇಸು ಗಟ್ಟಿಯಾದ ಸ್ವರದಿಂದ, “ಲಾಜರನೇ, ಹೊರಗೆ ಬಾ!” ಎಂದು ಕೂಗಿದನು. ಆಗೊಂದು ಅದ್ಭುತ ನಡೆಯಿತು. ಲಾಜರನು ಸಮಾಧಿಯಿಂದ ಹೊರಗೆ ಬಂದನು. ಅವನಿಗೆ ಸುತ್ತಿದ್ದ ಬಟ್ಟೆಯು ಇನ್ನೂ ಹಾಗೆಯೇ ಇತ್ತು. ಯೇಸು ಅಲ್ಲಿದ್ದವರಿಗೆ, ‘ಅದನ್ನು ಬಿಚ್ಚಿರಿ, ಅವನು ಹೋಗಲಿ’ ಎಂದನು.

ಇದನ್ನು ನೋಡಿದ ಅನೇಕರು ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಕೆಲವರು ಫರಿಸಾಯರ ಬಳಿ ಹೋಗಿ ಎಲ್ಲಾ ಸಂಗತಿಗಳನ್ನು ತಿಳಿಸಿದರು. ಅಂದಿನಿಂದ ಫರಿಸಾಯರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಲು ನೋಡುತ್ತಿದ್ದರು. ಹನ್ನೆರಡು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತ ಯೂದ ಗುಪ್ತವಾಗಿ ಫರಿಸಾಯರ ಹತ್ತಿರ ಹೋಗಿ, ‘ನಾನು ಯೇಸುವನ್ನು ಹಿಡಿದುಕೊಟ್ಟರೆ ನೀವು ನನಗೆಷ್ಟು ಹಣಕೊಡುವಿರಿ?’ ಎಂದು ಕೇಳಿದ. ಅವರು ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಲು ಒಪ್ಪಿಕೊಂಡರು. ಅಂದಿನಿಂದ ಯೂದನು ಯೇಸುವನ್ನು ಫರಿಸಾಯರಿಗೆ ಹಿಡಿದುಕೊಡುವ ಸಂದರ್ಭಕ್ಕಾಗಿ ಹುಡುಕುತ್ತಿದ್ದನು.

“ನಮ್ಮ ದೇವರು ನಮ್ಮನ್ನು ವಿಮೋಚಿಸುವದಕ್ಕೋಸ್ಕರ ದೇವರಾಗಿದ್ದಾನೆ; ಕರ್ತನಾದ ಯೆಹೋವನು ಮರಣಕ್ಕೆ ತಪ್ಪಿಸ ಶಕ್ತನಾಗಿದ್ದಾನೆ.”—ಕೀರ್ತನೆ 68:20