ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 87

ಯೇಸು ಆಚರಿಸಿದ ಕೊನೆಯ ಪಸ್ಕಹಬ್ಬ

ಯೇಸು ಆಚರಿಸಿದ ಕೊನೆಯ ಪಸ್ಕಹಬ್ಬ

ಯೆಹೂದ್ಯರು ಪ್ರತಿ ವರ್ಷ ನೈಸಾನ್‌ ತಿಂಗಳ 14​ನೇ ದಿನದಂದು ಪಸ್ಕಹಬ್ಬವನ್ನು ಆಚರಿಸುತ್ತಿದ್ದರು. ಯೆಹೋವನು ತಮ್ಮನ್ನು ಈಜಿಪ್ಟಿನ ದಾಸತ್ವದಿಂದ ಬಿಡುಗಡೆ ಮಾಡಿದ್ದನ್ನು, ವಾಗ್ದಾತ್ತ ದೇಶಕ್ಕೆ ಕರೆದುಕೊಂಡು ಬಂದದ್ದನ್ನು ನೆನಪು ಮಾಡಿಕೊಳ್ಳಲು ಈ ಹಬ್ಬವನ್ನು ಆಚರಿಸುತ್ತಿದ್ದರು. ಕ್ರಿ.ಶ. 33​ರಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಪಸ್ಕ ಹಬ್ಬವನ್ನು ಆಚರಿಸಲು ಯೆರೂಸಲೇಮಿನ ಮೇಲಂತಸ್ತಿನ ಒಂದು ಕೋಣೆಯಲ್ಲಿ ಸೇರಿ ಬಂದಿದ್ದರು. ಭೋಜನದ ಕೊನೆಯಲ್ಲಿ ಯೇಸು ಅಪೊಸ್ತಲರಿಗೆ, ‘ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು’ ಎಂದು ಹೇಳಿದನು. ಆಗ ಅಪೊಸ್ತಲರಿಗೆ ಆಶ್ಚರ್ಯವಾಯಿತು, ‘ಯಾರದು’ ಎಂದು ಕೇಳಿದರು. ಅದಕ್ಕೆ ಯೇಸು ‘ನಾನು ಈ ರೊಟ್ಟಿಯನ್ನು ಯಾರಿಗೆ ಕೊಡುತ್ತೇನೋ ಅವನೇ’ ಅಂದನು. ಆಮೇಲೆ ರೊಟ್ಟಿಯನ್ನು ಇಸ್ಕರಿಯೋತ ಯೂದನಿಗೆ ಕೊಟ್ಟನು. ತಕ್ಷಣ, ಯೂದ ಎದ್ದು ಅಲ್ಲಿಂದ ಹೊರಟು ಹೋದನು.

ನಂತರ ಯೇಸು, ಪ್ರಾರ್ಥನೆ ಮಾಡಿ ರೊಟ್ಟಿಯನ್ನು ಮುರಿದು ಉಳಿದ ಅಪೊಸ್ತಲರಿಗೆ ಕೊಟ್ಟು, ‘ಈ ರೊಟ್ಟಿಯನ್ನು ತಿನ್ನಿರಿ, ಇದು ನಾನು ನಿಮಗೆ ಕೊಡುವ ದೇಹವನ್ನು ಸೂಚಿಸುತ್ತದೆ’ ಎಂದನು. ಆಮೇಲೆ ದ್ರಾಕ್ಷಾಮದ್ಯದ ಮೇಲೆ ಪ್ರಾರ್ಥಿಸಿ, ‘ಈ ದ್ರಾಕ್ಷಾಮದ್ಯವನ್ನು ಕುಡಿಯಿರಿ, ಇದು ನನ್ನ ರಕ್ತವನ್ನು ಸೂಚಿಸುತ್ತದೆ. ಇದರಿಂದ ನಿಮ್ಮ ಪಾಪಗಳು ಕ್ಷಮಿಸಲ್ಪಡುತ್ತವೆ. ನೀವು ನನ್ನೊಂದಿಗೆ ಸ್ವರ್ಗದಲ್ಲಿ ರಾಜರಾಗಿರುವಿರಿ ಎಂದು ನಾನು ನಿಮಗೆ ಮಾತು ಕೊಡುತ್ತೇನೆ. ನನ್ನನ್ನು ನೆನಪಿಸಿಕೊಳ್ಳುವುದಕ್ಕಾಗಿ ಇದನ್ನು ಪ್ರತಿ ವರ್ಷ ಮಾಡಿರಿ’ ಎಂದನು. ಆದ್ದರಿಂದ ಇವತ್ತಿಗೂ ಯೇಸುವಿನ ಹಿಂಬಾಲಕರು ಪ್ರತಿ ವರ್ಷದ ಆ ದಿನ ಯೇಸುವನ್ನು ನೆನಪಿಸಿಕೊಳ್ಳಲು ಕೂಡಿಬರುತ್ತಾರೆ. ಇದನ್ನು ಕರ್ತನ ಸಂಧ್ಯಾ ಭೋಜನ ಎಂದು ಕರೆಯಲಾಗುತ್ತದೆ.

ಆ ಭೋಜನದ ನಂತರ, ಅಪೊಸ್ತಲರು ತಮ್ಮಲ್ಲಿ ಯಾರು ದೊಡ್ಡವರು ಎಂದು ವಾದ ಮಾಡಿದರು. ಅದಕ್ಕೆ ಯೇಸು, ‘ನಿಮ್ಮಲ್ಲಿ ಯಾರು ದೊಡ್ಡವನು ಆಗಬೇಕು ಅಂತಿರುವನೋ ಅವನು ಎಲ್ಲರಿಗಿಂತ ಚಿಕ್ಕವನಂತಿರಬೇಕು, ಸೇವಕನಂತಿರಬೇಕು’ ಎಂದು ಹೇಳಿದನು.

‘ನೀವು ನನ್ನ ಸ್ನೇಹಿತರು, ನಿಮಗೆ ಹೇಳಬೇಕೆಂದು ತಂದೆ ಹೇಳಿರುವುದನ್ನೆಲ್ಲ ನಾನು ನಿಮಗೆ ಹೇಳುತ್ತೇನೆ. ನಾನು ಬೇಗ ನನ್ನ ತಂದೆಯ ಬಳಿ ಸ್ವರ್ಗಕ್ಕೆ ಹೋಗುತ್ತೇನೆ. ನೀವು ಒಬ್ಬರಿಗೊಬ್ಬರು ತೋರಿಸುವ ಪ್ರೀತಿಯಿಂದ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ಗುರುತಿಸುವರು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು’ ಎಂದು ಯೇಸು ಹೇಳಿದನು.

ಕೊನೆಗೆ ಯೇಸು, ತನ್ನ ಶಿಷ್ಯರನ್ನು ಕಾಪಾಡಬೇಕೆಂದು, ಎಲ್ಲರೂ ಶಾಂತಿಯಿಂದ ಸೇವೆ ಮಾಡಲು ಸಹಾಯ ಮಾಡಬೇಕೆಂದು ಯೆಹೋವನನ್ನು ಬೇಡಿಕೊಂಡನು. ಅಷ್ಟೆ ಅಲ್ಲದೇ, ಯೆಹೋವನ ನಾಮವು ಪವಿತ್ರೀಕರಿಸಲ್ಪಡಲಿ ಎಂದು ಪ್ರಾರ್ಥಿಸಿದನು. ನಂತರ, ಯೇಸು ಮತ್ತವನ ಅಪೊಸ್ತಲರು ಯೆಹೋವನಿಗೆ ಸ್ತುತಿ ಗೀತೆಗಳನ್ನು ಹಾಡಿ ಅಲ್ಲಿಂದ ಹೊರಟರು. ಯೇಸುವನ್ನು ಬಂಧಿಸುವ ಸಮಯ ಈಗ ತುಂಬಾ ಹತ್ತಿರ ಇತ್ತು.

“ಚಿಕ್ಕ ಹಿಂಡೇ, ಭಯಪಡಬೇಡ, ಏಕೆಂದರೆ ನಿಮಗೆ ರಾಜ್ಯವನ್ನು ಕೊಡುವುದಕ್ಕೆ ನಿಮ್ಮ ತಂದೆಯು ಒಪ್ಪಿಗೆ ಕೊಟ್ಟಿದ್ದಾನೆ.”—ಲೂಕ 12:32