ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 89

ಯೇಸುವಿನ ಪರಿಚಯವಿಲ್ಲ ಎಂದ ಪೇತ್ರ

ಯೇಸುವಿನ ಪರಿಚಯವಿಲ್ಲ ಎಂದ ಪೇತ್ರ

ಯೇಸು ಅಪೊಸ್ತಲರೊಂದಿಗೆ ಮೇಲಂತಸ್ತಿನ ಕೋಣೆಯಲ್ಲಿದ್ದಾಗ ‘ನೀವೆಲ್ಲರೂ ನನ್ನ ಬಿಟ್ಟು ಓಡಿ ಹೋಗುತ್ತೀರಿ’ ಎಂದು ಹೇಳಿದನು. ಅದಕ್ಕೆ ಪೇತ್ರನು ‘ಯಾರು ನಿನ್ನನ್ನು ಬಿಟ್ಟರೂ ನಾನಂತೂ ಬಿಟ್ಟು ಹೋಗುವುದಿಲ್ಲ’ ಎಂದು ಹೇಳಿದನು. ಆಗ ಯೇಸು, ‘ಬೆಳಿಗ್ಗೆ ಹುಂಜ ಕೂಗುವುದರೊಳಗೆ ನನ್ನ ಪರಿಚಯವಿಲ್ಲ ಎಂದು ನೀನು ಮೂರು ಸಾರಿ ಹೇಳುವಿ’ ಎಂದನು.

ಸೈನಿಕರು ಯೇಸುವನ್ನು ಬಂಧಿಸಿ ಕಾಯಫನ ಮನೆಗೆ ಕರೆದುಕೊಂಡು ಹೋದಾಗ ಅನೇಕ ಅಪೊಸ್ತಲರು ಓಡಿ ಹೋದರು. ಆದರೆ ಇಬ್ಬರು ಯೇಸುವನ್ನು ಹಿಂಬಾಲಿಸುತ್ತಾ ಜನರ ಗುಂಪಿನೊಂದಿಗೆ ಹೋದರು. ಅವರಲ್ಲಿ ಒಬ್ಬ ಪೇತ್ರನಾಗಿದ್ದನು. ಇವನು ಕಾಯಫನ ಮನೆಯ ಅಂಗಳಕ್ಕೆ ಹೋಗಿ ಅಲ್ಲಿ ಬೆಂಕಿಯ ಬಳಿ ಚಳಿ ಕಾಯಿಸಿಕೊಳ್ಳುತ್ತಿದ್ದನು. ಆಗ ಒಬ್ಬ ಸೇವಕಿ ‘ನೀನು ಯೇಸುವಿನೊಂದಿಗೆ ಇದ್ದವನು! ನಾನು ನೋಡಿದ್ದೀನಿ!’ ಅಂದಳು.

ಆಗ ಪೇತ್ರನು ‘ಇಲ್ಲ, ನೀನು ಹೇಳುತ್ತಿರುವುದು ನನಗರ್ಥವಾಗುತ್ತಿಲ್ಲ!’ ಅಂದನು. ಅಲ್ಲಿಂದ ಮುಖ್ಯದ್ವಾರದ ಬಳಿ ಬಂದನು. ಆದರೆ ಅಲ್ಲಿ ಇನ್ನೊಬ್ಬ ಸೇವಕಿ ಇವನನ್ನು ನೋಡಿ ಜನರಿಗೆ ‘ಇವನೂ ಯೇಸುವಿನೊಂದಿಗಿದ್ದವನು’ ಎಂದು ಹೇಳಿದಳು. ಪೇತ್ರ ‘ನನಗೆ ಯೇಸುವಿನ ಪರಿಚಯವೇ ಇಲ್ಲ’ ಅಂದನು. ಇನ್ನೊಬ್ಬ ವ್ಯಕ್ತಿ ‘ನಿನ್ನ ಭಾಷೆ ನೋಡಿದರೇನೇ ಗೊತ್ತಾಗುತ್ತೆ, ನೀನು ಆ ಯೇಸುವಿನಂತೆ ಗಲಿಲಾಯದವನು ಅಂತ’ ಎಂದು ಹೇಳಿದನು. ಆದರೆ ಪೇತ್ರನು ಪ್ರಮಾಣ ಮಾಡಿ ‘ನಿಜವಾಗಲೂ ನನಗೆ ಅವನ ಪರಿಚಯವೇ ಇಲ್ಲ!’ ಅಂದನು.

ಆ ಕ್ಷಣವೇ ಹುಂಜ ಕೂಗಿತು ಮತ್ತು ಯೇಸು ಪೇತ್ರನನ್ನು ನೋಡಿದನು. ಆಗ ಪೇತ್ರನಿಗೆ ಯೇಸು ಹೇಳಿದ ಮಾತು ನೆನಪಿಗೆ ಬಂತು. ಹೊರಗೆ ಹೋಗಿ ಜೋರಾಗಿ ಅತ್ತನು.

ಅದೇ ಸಮಯದಲ್ಲಿ, ಯೆಹೂದಿ ನ್ಯಾಯಾಲಯದ ಸದಸ್ಯರು ಕಾಯಫನ ಮನೆಯಲ್ಲಿ ಯೇಸುವಿನ ನ್ಯಾಯವಿಚಾರಣೆಗಾಗಿ ಸೇರಿದ್ದರು. ಆದರೆ ಅವರು ವಿಚಾರಣೆಯ ಮೊದಲೇ ಯೇಸುವನ್ನು ಕೊಲ್ಲಲು ತೀರ್ಮಾನಿಸಿ ಬಿಟ್ಟಿದ್ದರು. ಈಗ ಕೇವಲ ತಪ್ಪು ಹೊರಿಸಲು ಒಂದು ಕಾರಣ ಹುಡುಕುತ್ತಿದ್ದರು ಅಷ್ಟೇ. ಆದರೆ ಯೇಸುವಿನಲ್ಲಿ ತಪ್ಪು ಹೊರಿಸಲು ಅವರಿಗೆ ಏನೂ ಸಿಗಲಿಲ್ಲ. ಕೊನೆಗೆ, ಕಾಯಫನು ಯೇಸುವಿಗೆ ನೇರವಾಗಿ ‘ನೀನು ದೇವರ ಮಗನೋ?’ ಎಂದು ಕೇಳಿದನು. ಅದಕ್ಕೆ ಯೇಸು ‘ಹೌದು’ ಎಂದನು. ಆಗ ಕಾಯಫನು, ‘ನಮಗೆ ಇದಕ್ಕಿಂತ ದೊಡ್ಡ ಕಾರಣ ಇನ್ನೇನೂ ಬೇಕಿಲ್ಲ. ಇದು ದೇವದೂಷಣೆ!’ ಎಂದನು. ನ್ಯಾಯಾಲಯ ‘ಈ ವ್ಯಕ್ತಿ ಸಾಯಲು ಅರ್ಹನು’ ಎಂದು ತೀರ್ಪು ಹೊರಡಿಸಿತು. ಅವರು ಯೇಸುವಿನ ಕೆನ್ನೆಗೆ ಹೊಡೆದರು, ಮುಖದ ಮೇಲೆ ಉಗುಳಿದರು, ಕಣ್ಣಿಗೆ ಬಟ್ಟೆ ಕಟ್ಟಿ ಗುದ್ದುತ್ತಾ ‘ನೀನು ಪ್ರವಾದಿಯಲ್ವಾ? ನಿನ್ನನ್ನು ಹೊಡೆದವರು ಯಾರು ಹೇಳು ನೋಡೋಣ’ ಎಂದು ಗೇಲಿ ಮಾಡಿದರು.

ಬೆಳಗಾದಾಗ, ಅವರು ಯೇಸುವನ್ನು ಯೆಹೂದಿ ನ್ಯಾಯಾಲಯದ ಮುಂದೆ ನಿಲ್ಲಿಸಿ ಮತ್ತೆ ‘ನೀನು ದೇವರ ಮಗನೋ?’ ಎಂದು ಕೇಳಿದರು. ಅದಕ್ಕೆ ಯೇಸು, ‘ನೀನೇ ಹೇಳುತ್ತಿದ್ದಿ’ ಎಂದು ಹೇಳಿದನು. ನಂತರ ಅವರು ಯೇಸುವಿನ ಮೇಲೆ ದೇವದೂಷಣೆಯ ಆರೋಪ ಹಾಕಿ ರೋಮನ್‌ ಅಧಿಕಾರಿ ಪೊಂತ್ಯ ಪಿಲಾತನ ಬಳಿ ಕರೆದುಕೊಂಡು ಹೋದರು. ಆಮೇಲೆ ಏನಾಯ್ತು? ಬನ್ನಿ ನೋಡೋಣ.

“ನೋಡಿರಿ, ನಿಮ್ಮಲ್ಲಿ ಒಬ್ಬೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಕಾಲ ಬರುವದು, ಈಗ ಬಂದಿದೆ. ಆದರೆ ನಾನು ಒಂಟಿಗನಲ್ಲ, ತಂದೆಯು ನನ್ನ ಸಂಗಡ ಇದ್ದಾನೆ.”—ಯೋಹಾನ 16:32