ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 94

ಶಿಷ್ಯರ ಮೇಲೆ ಪವಿತ್ರಾತ್ಮ ಬಂತು

ಶಿಷ್ಯರ ಮೇಲೆ ಪವಿತ್ರಾತ್ಮ ಬಂತು

ಯೇಸು ಸ್ವರ್ಗಕ್ಕೆ ಹೋಗಿ ಹತ್ತು ದಿನಗಳಾದ ಮೇಲೆ ಶಿಷ್ಯರ ಮೇಲೆ ಪವಿತ್ರಾತ್ಮ ಬಂತು. ಅದು ನಡೆದದ್ದು ಕ್ರಿ.ಶ. 33​ರ ಪಂಚಾಶತ್ತಮದಂದು. ಆ ದಿನ, ಜನರು ಹಬ್ಬ ಮಾಡಲು ಬೇರೆ ಬೇರೆ ಊರುಗಳಿಂದ ಯೆರೂಸಲೇಮಿಗೆ ಬಂದಿದ್ದರು. ಯೇಸುವಿನ ಸುಮಾರು 120 ಶಿಷ್ಯರು ಒಂದು ಮನೆಯ ಮೇಲಿನ ಕೋಣೆಯಲ್ಲಿ ಕೂಡಿಬಂದಿದ್ದರು. ಇದ್ದಕ್ಕಿದ್ದಂತೆ ಒಂದು ಅದ್ಭುತ ನಡೆಯಿತು. ಶಿಷ್ಯರಲ್ಲಿ ಪ್ರತಿಯೊಬ್ಬರ ತಲೆಯ ಮೇಲೆ ಬೆಂಕಿಯ ಜ್ವಾಲೆ ಥರ ಏನೋ ಕಾಣಿಸಿತು! ಆಗ ಅವರು ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲು ಆರಂಭಿಸಿದರು. ಆಗ ಮನೆಯಲ್ಲಿ ಜೋರಾಗಿ ಗಾಳಿ ಬೀಸುವ ಶಬ್ದ ಕೇಳಿಸಿತು.

ಬೇರೆ ಬೇರೆ ಊರಿನಿಂದ ಬಂದವರು ಆ ಶಬ್ದ ಕೇಳಿ ಏನಾಯ್ತು ಎಂದು ನೋಡಲು ಆ ಮನೆಗೆ ಓಡೋಡಿ ಬಂದರು. ಬೇರೆ ಬೇರೆ ಭಾಷೆಗಳಲ್ಲಿ ಮಾತಾಡುತ್ತಾ ಇರುವ ಶಿಷ್ಯರನ್ನು ನೋಡಿ ಅವರಿಗೆ ತುಂಬ ಆಶ್ಚರ್ಯ ಆಯಿತು. ‘ಇವರು ಗಲಿಲಾಯದವರಲ್ವಾ? ಮತ್ತೆ ನಮ್ಮ ಭಾಷೆ ಹೇಗೆ ಮಾತಾಡುತ್ತಿದ್ದಾರೆ?’ ಅಂತ ಅವರವರೇ ಮಾತಾಡಿಕೊಂಡರು.

ಆಗ ಪೇತ್ರ ಮತ್ತು ಇತರ ಅಪೊಸ್ತಲರು ಜನರ ಮುಂದೆ ಬಂದರು. ಯೇಸುವನ್ನು ಹೇಗೆ ಕೊಲ್ಲಲಾಯಿತು ಮತ್ತು ಹೇಗೆ ಯೆಹೋವನು ಅವನನ್ನು ಮತ್ತೆ ಬದುಕಿಸಿದನು ಎಂದು ಪೇತ್ರ ಜನರಿಗೆ ಹೇಳಿದನು. ‘ಈಗ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿದ್ದಾನೆ ಮತ್ತು ಅವನು ಮೊದಲೇ ಹೇಳಿದಂತೆ ಪವಿತ್ರಾತ್ಮವನ್ನು ಸುರಿಸಿದ್ದಾನೆ. ಆದ್ದರಿಂದಲೇ ನೀವು ಈ ಅದ್ಭುತಗಳನ್ನು ಕೇಳುತ್ತಿದ್ದೀರಿ, ನೋಡುತ್ತಿದ್ದೀರಿ’ ಎಂದನು.

ಪೇತ್ರನ ಮಾತು ಅವರ ಮನಮುಟ್ಟಿತು. ಅದಕ್ಕೆ ಅವರು “ನಾವು ಏನು ಮಾಡಬೇಕು?” ಎಂದು ಕೇಳಿದರು. ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಿ. ನಿಮ್ಮ ಮೇಲೂ ಪವಿತ್ರಾತ್ಮ ಬರುವುದು’ ಎಂದನು ಪೇತ್ರ. ಅದೇ ದಿನ, ಸುಮಾರು ಮೂರು ಸಾವಿರ ಜನರು ದೀಕ್ಷಾಸ್ನಾನ ಪಡೆದುಕೊಂಡರು. ಅಂದಿನಿಂದ ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಯೇಸು ಆಜ್ಞಾಪಿಸಿದ ಎಲ್ಲಾ ವಿಷಯಗಳನ್ನು ಶಿಷ್ಯರಿಗೆ ಕಲಿಸಬೇಕಿತ್ತು. ಅದಕ್ಕಾಗಿ ಅಪೊಸ್ತಲರು ಪವಿತ್ರಾತ್ಮದ ಸಹಾಯದಿಂದ ತುಂಬ ಸಭೆಗಳನ್ನು ಸ್ಥಾಪಿಸಿದರು.

“ಕ್ರಿಸ್ತನೇ ಕರ್ತನೆಂದು ‘ನಿಮ್ಮ ಬಾಯಿಂದಲೇ ಆ ವಾಕ್ಯವನ್ನು’ ಬಹಿರಂಗವಾಗಿ ಪ್ರಕಟಿಸಿ, ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ನಿಮ್ಮ ಹೃದಯದಲ್ಲಿ ನಂಬಿಕೆಯಿಡುವುದಾದರೆ ನೀವು ರಕ್ಷಿಸಲ್ಪಡುವಿರಿ.”—ರೋಮನ್ನರಿಗೆ 10:9