ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 95

ಯಾವುದೂ ಅವರನ್ನು ತಡೆಯಲಿಲ್ಲ

ಯಾವುದೂ ಅವರನ್ನು ತಡೆಯಲಿಲ್ಲ

ಒಬ್ಬ ಕುಂಟ ಪ್ರತಿ ದಿನ ದೇವಾಲಯದ ಬಾಗಿಲ ಹತ್ತಿರ ಭಿಕ್ಷೆ ಬೇಡುತ್ತಿದ್ದ. ಒಂದು ಮಧ್ಯಾಹ್ನ ಪೇತ್ರ ಮತ್ತು ಯೋಹಾನ ದೇವಾಲಯದ ಒಳಗೆ ಹೋಗುತ್ತಿದ್ದರು. ಆಗ ಆ ಕುಂಟ ‘ಸ್ವಾಮಿ ನನಗೆ ಏನಾದರೂ ಕೊಡಿ’ ಎಂದು ಕೇಳಿದ. ಅದಕ್ಕೆ ಪೇತ್ರ ‘ಹಣಕ್ಕಿಂತ ಹೆಚ್ಚಾಗಿರುವುದನ್ನು ನಾನು ನಿನಗೆ ಕೊಡುತ್ತೇನೆ. ಯೇಸುವಿನ ಹೆಸರಿನಲ್ಲಿ ಎದ್ದು ನಡೆ!’ ಎಂದು ಅವನನ್ನು ಎಬ್ಬಿಸಿದನು. ಅವನು ಎದ್ದು ನಡೆದಾಡಲು ಆರಂಭಿಸಿದನು! ಈ ಅದ್ಭುತವನ್ನು ನೋಡಿದ ಜನರೆಲ್ಲಾ ಸಂತೋಷಪಟ್ಟರು. ಅನೇಕರು ಅಂದಿನಿಂದ ಯೇಸುವಿನ ಶಿಷ್ಯರಾದರು.

ಆದರೆ ಫರಿಸಾಯರು ಮತ್ತು ಸದ್ದುಕಾಯರಿಗೆ ಕೋಪ ಬಂತು. ಅವರು ಅಪೊಸ್ತಲರನ್ನು ಹಿಡಿದು ಧಾರ್ಮಿಕ ಮುಖಂಡರ ಸನ್ಹೆದ್ರಿನ್‌ ನ್ಯಾಯಾಲಯಕ್ಕೆ ಕರೆಸಿ ‘ಅವನನ್ನು ಗುಣಮಾಡಲು ಯಾರು ನಿಮಗೆ ಅಧಿಕಾರ ಕೊಟ್ಟರು?’ ಎಂದು ಕೇಳಿದರು. ಅದಕ್ಕೆ ಪೇತ್ರ ‘ನೀವು ಕೊಂದ ಯೇಸು ಕ್ರಿಸ್ತ ನಮಗೆ ಈ ಅಧಿಕಾರವನ್ನು ಕೊಟ್ಟನು’ ಎಂದನು. ಆಗ ಧಾರ್ಮಿಕ ಮುಖಂಡರು ‘ಆ ಯೇಸುವಿನ ಬಗ್ಗೆ ಮಾತಾಡುವುದನ್ನು ನಿಲ್ಲಿಸಿ’ ಎಂದು ಕಿರುಚಿದರು. ಅದಕ್ಕೆ ಅಪೊಸ್ತಲರು ‘ನಾವು ಯೇಸುವಿನ ಬಗ್ಗೆ ಮಾತಾಡೇ ಮಾತಾಡುತ್ತೇವೆ. ನಿಲ್ಲಿಸುವುದಿಲ್ಲ’ ಅಂದರು.

ಪೇತ್ರ ಯೋಹಾನ ಅಲ್ಲಿಂದ ಬಂದ ತಕ್ಷಣ ಬೇರೆ ಶಿಷ್ಯರ ಬಳಿಗೆ ಹೋಗಿ ನಡೆದ ಎಲ್ಲವನ್ನೂ ಹೇಳಿದರು. ಅವರೆಲ್ಲರೂ ಜೊತೆಯಾಗಿ ಯೆಹೋವನಿಗೆ ‘ಅಪ್ಪಾ, ನಿನ್ನ ಸೇವೆ ಮಾಡುತ್ತಾ ಇರುವುದಕ್ಕೆ ನಮಗೆ ಧೈರ್ಯ ಕೊಡು’ ಎಂದು ಪ್ರಾರ್ಥಿಸಿದರು. ಆಗ ಯೆಹೋವನು ಅವರಿಗೆ ಪವಿತ್ರಾತ್ಮವನ್ನು ಕೊಟ್ಟನು. ಅವರು ಸುವಾರ್ತೆ ಸಾರುವುದನ್ನು, ಅದ್ಭುತ ಮಾಡುವುದನ್ನು ಮುಂದುವರಿಸಿದರು. ಇನ್ನೂ ಹೆಚ್ಚೆಚ್ಚು ಜನ ಶಿಷ್ಯರಾದರು. ಸದ್ದುಕಾಯರಿಗೆ ಎಷ್ಟು ಹೊಟ್ಟೆಕಿಚ್ಚಾಯಿತೆಂದರೆ ಅವರು ಅಪೊಸ್ತಲರನ್ನು ಹಿಡಿದು ಸೆರೆಮನೆಗೆ ಹಾಕಿದರು. ಆದರೆ ಅವತ್ತು ರಾತ್ರಿ ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದನು. ಅವನು ಸೆರೆಮನೆಯ ಬಾಗಿಲನ್ನು ತೆರೆದು ಅಪೊಸ್ತಲರಿಗೆ ‘ದೇವಾಲಯಕ್ಕೆ ಹೋಗಿ ಬೋಧಿಸಿ’ ಎಂದನು.

ಮಾರನೇ ದಿನ ಬೆಳಿಗ್ಗೆ ಸನ್ಹೆದ್ರಿನ್‌ ನ್ಯಾಯಾಲಯದಲ್ಲಿ ‘ಸೆರೆಮನೆಗೆ ಹಾಕಿದ ಬೀಗ ಹಾಗೇ ಇದೆ. ಆದರೆ ಒಳಗೆ ಒಬ್ಬರೂ ಇಲ್ಲ. ಅವರು ಮತ್ತೆ ದೇವಾಲಯಕ್ಕೆ ಹೋಗಿ ಜನರಿಗೆ ಬೋಧಿಸುತ್ತಿದ್ದಾರೆ!’ ಎಂಬ ಸುದ್ದಿ ಧಾರ್ಮಿಕ ಮುಖಂಡರಿಗೆ ಮುಟ್ಟಿತು. ಅಪೊಸ್ತಲರನ್ನು ಪುನಃ ಹಿಡಿದು ನ್ಯಾಯಾಲಯಕ್ಕೆ ಕರೆತಂದರು. ಮಹಾಯಾಜಕ ಅವರಿಗೆ ‘ಯೇಸುವಿನ ಬಗ್ಗೆ ಸಾರಬಾರದೆಂದು ನಾವು ಹೇಳಿದ್ದೆವು ತಾನೇ’ ಎಂದನು. ಆಗ ಪೇತ್ರ ಅವರಿಗೆ “ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಅಂದನು.

ಧಾರ್ಮಿಕ ಮುಖಂಡರಿಗೆ ಎಷ್ಟು ಕೋಪ ಬಂತು ಅಂದರೆ ಅಪೊಸ್ತಲರನ್ನು ಸಾಯಿಸಬಿಡಬೇಕು ಅಂದುಕೊಂಡಿದ್ದರು. ಆದರೆ ಗಮಲಿಯೇಲ ಎಂಬ ಫರಿಸಾಯನೊಬ್ಬ ಎದ್ದು ನಿಂತು ‘ಆತುರಪಡಬೇಡಿ! ದೇವರು ಇವರೊಂದಿಗೆ ಇರಬಹುದು. ದೇವರಿಗೆ ಎದುರಾಗಿ ಹೋರಾಡಲು ನೀವು ಇಷ್ಟಪಡುತ್ತೀರಾ?’ ಎಂದು ಹೇಳಿದನು. ಧಾರ್ಮಿಕ ಮುಖಂಡರು ಅವನ ಮಾತನ್ನು ಕೇಳಿ ಅಪೊಸ್ತಲರನ್ನು ದೊಣ್ಣೆಗಳಿಂದ ಹೊಡೆಸಿ, ಯೇಸುವಿನ ಬಗ್ಗೆ ಮಾತಾಡಬಾರದು ಎಂದು ಪುನಃ ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟರು. ಆದರೆ ಅಪೊಸ್ತಲರು ಇದಕ್ಕೆ ಬಗ್ಗಲಿಲ್ಲ. ಅವರು ಧೈರ್ಯದಿಂದ ದೇವಾಲಯದಲ್ಲಿ ಮತ್ತು ಮನೆ ಮನೆಯಲ್ಲಿ ಸುವಾರ್ತೆ ಸಾರುವುದನ್ನು ಮುಂದುವರೆಸಿದರು.

“ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ.”—ಅಪೊಸ್ತಲರ ಕಾರ್ಯಗಳು 5:29