ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 96

ಯೇಸು ಸೌಲನನ್ನು ಆರಿಸಿಕೊಂಡನು

ಯೇಸು ಸೌಲನನ್ನು ಆರಿಸಿಕೊಂಡನು

ಸೌಲ ಹುಟ್ಟಿದ್ದು ತಾರ್ಸ ಎಂಬಲ್ಲಿ. ಇವನು ರೋಮನ್‌ ಪ್ರಜೆಯಾಗಿದ್ದ. ಫರಿಸಾಯನಾಗಿದ್ದ ಇವನು ಯೆಹೂದಿ ಧರ್ಮಶಾಸ್ತ್ರದಲ್ಲಿ ಪರಿಣಿತನಾಗಿದ್ದನು. ಅವನಿಗೆ ಕ್ರೈಸ್ತರನ್ನು ಕಂಡರೆ ಆಗುತ್ತಿರಲಿಲ್ಲ. ಅವನು ಕ್ರೈಸ್ತ ಗಂಡಸರನ್ನು ಮತ್ತು ಹೆಂಗಸರನ್ನು ಮನೆಯಿಂದ ಹೊರಗೆ ಎಳೆದು ತಂದು ಸೆರೆಮನೆಗೆ ಹಾಕಿಸುತ್ತಿದ್ದನು. ಅಲ್ಲದೆ ಕೋಪಗೊಂಡ ಗುಂಪೊಂದು ಶಿಷ್ಯನಾದ ಸ್ತೆಫನನನ್ನು ಕಲ್ಲೆಸೆದು ಕೊಲ್ಲುತ್ತಿದ್ದಾಗ ಸೌಲನು ನೋಡುತ್ತಾ ನಿಂತಿದ್ದನು.

ಅವನು ಯೆರೂಸಲೇಮಿನಲ್ಲಿರುವ ಕ್ರೈಸ್ತರನ್ನು ಸೆರೆಮನೆಗೆ ಹಾಕಿಸಿದ. ಅಷ್ಟಕ್ಕೆ ಅವನಿಗೆ ತೃಪ್ತಿಯಾಗಲಿಲ್ಲ. ದಮಸ್ಕಕ್ಕೆ ಹೋಗಿ ಅಲ್ಲಿರುವ ಕ್ರೈಸ್ತರನ್ನು ಸಹ ಹಿಂಸಿಸಲು ಮಹಾಯಾಜಕನ ಹತ್ತಿರ ಅನುಮತಿ ಪಡೆದನು. ಅವನು ದಮಸ್ಕದ ಹತ್ತಿರ ಬಂದಾಗ ಆಕಾಶದಿಂದ ಒಂದು ಬೆಳಕು ಅವನ ಸುತ್ತಲೂ ಮಿಂಚಿತು. ಸೌಲನು ನೆಲಕ್ಕೆ ಬಿದ್ದನು. ಆಗ ಅವನಿಗೆ ‘ಸೌಲನೇ, ನನ್ನನ್ನು ಏಕೆ ಹಿಂಸೆ ಮಾಡುತ್ತಿದ್ದೀ?’ ಎಂಬ ಮಾತು ಕೇಳಿಸಿತು. ಆಗ ಸೌಲನು ‘ನೀನು ಯಾರು?’ ಎಂದು ಕೇಳಿದನು. ಅದಕ್ಕೆ ‘ನಾನು ಯೇಸು. ನೀನು ದಮಸ್ಕಕ್ಕೆ ಹೋಗು. ನೀನು ಏನು ಮಾಡಬೇಕೆಂದು ಅಲ್ಲಿ ನಿನಗೆ ಗೊತ್ತಾಗುವುದು’ ಎಂಬ ಉತ್ತರ ಕೇಳಿಸಿತು. ಕ್ಷಣದಲ್ಲೇ ಸೌಲನಿಗೆ ಕಣ್ಣು ಕಾಣಿಸದಂತಾಯಿತು. ಅವನ ಜೊತೆಯಲ್ಲಿದ್ದವರು ಅವನನ್ನು ಕೈ ಹಿಡಿದು ಊರೊಳಕ್ಕೆ ಕರೆದುಕೊಂಡು ಹೋದರು.

ದಮಸ್ಕದಲ್ಲಿ ಅನನೀಯನೆಂಬ ನಂಬಿಗಸ್ತ ಕ್ರೈಸ್ತನಿದ್ದನು. ಯೇಸು ಅವನಿಗೆ ದರ್ಶನದಲ್ಲಿ ‘ನೀನು ನೆಟ್ಟನೆ ಬೀದಿಯಲ್ಲಿರುವ ಯೂದನ ಮನೆಗೆ ಹೋಗಿ ಸೌಲನನ್ನು ಭೇಟಿಯಾಗು’ ಎಂದನು. ಆಗ ಅನನೀಯನು ‘ಕರ್ತನೇ, ಅವನು ಎಂಥವನು ಎಂದು ನನಗೆ ಗೊತ್ತು. ಅವನು ನಿನ್ನ ಶಿಷ್ಯರನ್ನೆಲ್ಲಾ ಸೆರೆಮನೆಗೆ ಹಾಕಿಸುತ್ತಿದ್ದಾನೆ’ ಎಂದನು. ಆಗ ಯೇಸು ‘ಅವನ ಹತ್ತಿರ ಹೋಗು. ಅನೇಕ ದೇಶಗಳಿಗೆ ಸುವಾರ್ತೆ ಸಾರಲು ನಾನು ಸೌಲನನ್ನು ಆರಿಸಿದ್ದೇನೆ’ ಅಂದನು.

ಅನನೀಯ ಸೌಲನನ್ನು ಕಂಡಾಗ ‘ಸಹೋದರನಾದ ಸೌಲನೇ, ನಿನಗೆ ಕಣ್ಣು ಕಾಣಿಸುವಂತೆ ಮಾಡಲು ಯೇಸು ನನ್ನನ್ನು ಕಳುಹಿಸಿದ್ದಾನೆ’ ಅಂದನು. ತಕ್ಷಣ ಸೌಲನಿಗೆ ಕಣ್ಣು ಕಾಣಿಸಿತು. ಸೌಲನು ಯೇಸುವಿನ ಬಗ್ಗೆ ಕಲಿತು ಆತನ ಹಿಂಬಾಲಕನಾದನು. ದೀಕ್ಷಾಸ್ನಾನ ಪಡೆದ ಸೌಲ, ಇತರ ಕ್ರೈಸ್ತರೊಂದಿಗೆ ಸಭಾಮಂದಿರಗಳಲ್ಲಿ ಸಾರಲು ಆರಂಭಿಸಿದನು. ಯೇಸುವಿನ ಬಗ್ಗೆ ಬೋಧಿಸುತ್ತಿರುವ ಸೌಲನನ್ನು ಯೆಹೂದಿಗಳು ಕಂಡಾಗ ಅವರಿಗೆ ಎಷ್ಟು ಆಶ್ಚರ್ಯವಾಗಿರಬೇಕಲ್ವಾ? ಅವರು ‘ಯೇಸುವಿನ ಶಿಷ್ಯರನ್ನು ಕ್ರೂರವಾಗಿ ಹಿಂಸಿಸಿದ ಮನುಷ್ಯನು ಇವನೇ ಅಲ್ಲವೇ’ ಎಂದು ಮಾತಾಡಿಕೊಂಡರು.

ಮೂರು ವರ್ಷ ಸೌಲನು ದಮಸ್ಕದ ಜನರಿಗೆ ಸಾರಿದನು. ಯೆಹೂದಿಗಳು ಸೌಲನನ್ನು ಎಷ್ಟು ದ್ವೇಷಿಸಿದರೆಂದರೆ ಅವನನ್ನು ಕೊಲ್ಲಲು ಸಂಚು ಮಾಡಿದರು. ಆದರೆ ಈ ವಿಚಾರ ಅಲ್ಲಿನ ಸಹೋದರರಿಗೆ ಗೊತ್ತಾಗಿ ಅವರಿಂದ ತಪ್ಪಿಸಿಕೊಳ್ಳಲು ಸೌಲನಿಗೆ ಸಹಾಯ ಮಾಡಿದರು. ಅವರು ಅವನನ್ನು ಒಂದು ಬುಟ್ಟಿಯಲ್ಲಿ ಕೂರಿಸಿ ಪಟ್ಟಣದ ಗೋಡೆಯ ಮೇಲಿಂದ ಕೆಳಗೆ ಇಳಿಸಿದರು.

ಸೌಲನು ಯೆರೂಸಲೇಮಿಗೆ ಹೋದಾಗ ಅಲ್ಲಿನ ಸಹೋದರರು ಅವನನ್ನು ಕಂಡು ಹೆದರಿದರು. ಅಲ್ಲಿ ಬಾರ್ನಬನೆಂಬ ಒಬ್ಬ ದಯಾಭರಿತ ವ್ಯಕ್ತಿ ಇದ್ದನು. ಅವನು ಸೌಲನನ್ನು ಅಪೊಸ್ತಲರ ಹತ್ತಿರ ಕರೆದುಕೊಂಡು ಬಂದು ಇವನು ನಿಜವಾಗಿಯೂ ಬದಲಾಗಿದ್ದಾನೆ ಎಂದು ಮನವರಿಕೆ ಮಾಡಿದನು. ಆಮೇಲೆ ಸೌಲನು ಯೆರೂಸಲೇಮಿನ ಸಭೆಯೊಟ್ಟಿಗೆ ಸುವಾರ್ತೆಯನ್ನು ಹುರುಪಿನಿಂದ ಸಾರಲು ಆರಂಭಿಸಿದನು. ನಂತರ ಪೌಲನೆಂದು ಹೆಸರುವಾಸಿಯಾದನು.

“ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು . . . ಆ ಪಾಪಿಗಳಲ್ಲಿ ನಾನೇ ಅಗ್ರಗಣ್ಯನು.”—1 ತಿಮೊಥೆಯ 1:15