ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 99

ಸತ್ಯ ಕಲಿತ ಸೆರೆಮನೆಯ ಅಧಿಕಾರಿ

ಸತ್ಯ ಕಲಿತ ಸೆರೆಮನೆಯ ಅಧಿಕಾರಿ

ಫಿಲಿಪ್ಪಿಯಲ್ಲಿ ದೆವ್ವ ಹಿಡಿದ ಒಬ್ಬ ಹುಡುಗಿ ಇದ್ದಳು. ಆ ದೆವ್ವದ ಸಹಾಯದಿಂದ ಅವಳು ಭವಿಷ್ಯ ನುಡಿಯುತ್ತಿದ್ದಳು. ಇದರಿಂದ ಅವಳ ಯಜಮಾನರಿಗೆ ತುಂಬಾ ಆದಾಯ ಬರುತ್ತಿತ್ತು. ಪೌಲ ಮತ್ತು ಸೀಲರು ಫಿಲಿಪ್ಪಿಗೆ ಬಂದಾಗ ಅವಳು ಅನೇಕ ದಿನಗಳವರೆಗೆ ಅವರನ್ನು ಹಿಂಬಾಲಿಸುತ್ತಿದ್ದಳು. ದೆವ್ವದ ಪ್ರಭಾವದಿಂದ ಅವಳು, “ಈ ಮನುಷ್ಯರು ಮಹೋನ್ನತನಾದ ದೇವರ ದಾಸರು” ಎಂದು ಕೂಗುತ್ತಿದ್ದಳು. ಕೊನೆಗೆ ಪೌಲನು ಅವಳಲ್ಲಿದ್ದ ದೆವ್ವಕ್ಕೆ ‘ಯೇಸುವಿನ ಹೆಸರಿನಲ್ಲಿ ಅವಳನ್ನು ಬಿಟ್ಟು ಹೋಗು’ ಎಂದನು. ತಕ್ಷಣ ಆ ದೆವ್ವ ಅವಳನ್ನು ಬಿಟ್ಟು ಹೋಯಿತು.

ಈ ವಿಷಯ ಆ ಹುಡುಗಿಯ ಯಜಮಾನರಿಗೆ ತಿಳಿದಾಗ ಅವಳಿಂದ ಇನ್ನು ಮುಂದೆ ತಮಗೆ ಯಾವ ಆದಾಯವು ಬರುವುದಿಲ್ಲ ಎಂದು ತಿಳಿದು ತುಂಬಾ ಕೋಪಗೊಂಡರು. ಅವರು ಪೌಲ ಮತ್ತು ಸೀಲರನ್ನು ಪೌರ ನ್ಯಾಯಾಧಿಪತಿಗಳ ಹತ್ತಿರ ಎಳೆದುಕೊಂಡು ಬಂದು ‘ಇವರು ಕಾನೂನನ್ನು ಮುರಿಯುತ್ತಿದ್ದಾರೆ ಮತ್ತು ಪಟ್ಟಣದಲ್ಲಿ ಗಲಿಬಿಲಿ ಎಬ್ಬಿಸುತ್ತಿದ್ದಾರೆ’ ಎಂದರು. ಆಗ ನ್ಯಾಯಾಧಿಪತಿ ಪೌಲ-ಸೀಲರನ್ನು ಹೊಡೆಸಿ ಸೆರೆಮನೆಗೆ ಹಾಕಲು ಹೇಳಿದನು. ಸೆರೆಮನೆಯ ಅಧಿಕಾರಿ ಅವರನ್ನು ಸೆರೆಮನೆಯ ಕತ್ತಲ ಕೋಣೆಗೆ ಹಾಕಿ ಬೇಡಿಗಳಿಂದ ಬಂಧಿಸಿದನು.

ಸೆರೆಮನೆಯಲ್ಲಿ ಪೌಲ ಮತ್ತು ಸೀಲರು ಯೆಹೋವನಿಗೆ ಸ್ತುತಿ ಗೀತೆಗಳನ್ನು ಹಾಡುತ್ತಿದ್ದಾಗ ಸೆರೆಯಲ್ಲಿದ್ದ ಇತರರು ಕೇಳಿಸಿಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಒಂದು ದೊಡ್ಡ ಭೂಕಂಪವಾಯಿತು. ಸೆರೆಮನೆಯ ಬಾಗಿಲು ತೆರೆದುಕೊಂಡಿತು. ಸೆರೆಯಾಳುಗಳ ಬೇಡಿಗಳು ಕಳಚಿಬಿದ್ದವು. ಆಗ ಸೆರೆಮನೆಯ ಅಧಿಕಾರಿ ಒಳಗೆ ಓಡಿಹೋಗಿ ನೋಡಿದಾಗ ಸೆರೆಮನೆಯ ಬಾಗಿಲು ತೆರೆದಿತ್ತು. ಸೆರೆಯಾಳುಗಳು ತಪ್ಪಿಸಿಕೊಂಡು ಹೋಗಿರಬಹುದೆಂದು ಭಾವಿಸಿದನು. ತನ್ನ ಕತ್ತಿ ತೆಗೆದುಕೊಂಡು ಪ್ರಾಣ ಕಳೆದುಕೊಳ್ಳಲು ಮುಂದಾದನು.

ಆಗ ಪೌಲನು ‘ನಿನಗೇನೂ ಹಾನಿಮಾಡಿಕೊಳ್ಳಬೇಡ. ನಾವೆಲ್ಲರೂ ಇಲ್ಲೇ ಇದ್ದೇವೆ’ ಅಂದನು. ಸೆರೆಮನೆಯ ಅಧಿಕಾರಿ ಓಡಿಹೋಗಿ ಪೌಲ ಸೀಲರ ಮುಂದೆ ಬಿದ್ದನು. ‘ನಾನು ರಕ್ಷಣೆ ಪಡೆಯಲು ಏನು ಮಾಡಬೇಕು?’ ಎಂದು ಅವರ ಹತ್ತಿರ ಕೇಳಿದನು. ಅದಕ್ಕೆ ಅವರು ‘ನೀನೂ ನಿನ್ನ ಮನೆಯವರೂ ಯೇಸುವಿನಲ್ಲಿ ನಂಬಿಕೆ ಇಡಬೇಕು’ ಅಂದನು. ಆಮೇಲೆ ಪೌಲ ಮತ್ತು ಸೀಲ ಅವನಿಗೆ ಯೆಹೋವನ ವಾಕ್ಯವನ್ನು ಬೋಧಿಸಿದರು. ಅವನು ಮತ್ತು ಅವನ ಮನೆಯವರು ದೀಕ್ಷಾಸ್ನಾನ ಪಡೆದುಕೊಂಡರು.

“ಜನರು ನಿಮ್ಮನ್ನು ಹಿಡಿದು ಸಭಾಮಂದಿರಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನಿಮ್ಮನ್ನು ಹಿಂಸಿಸುವರು; ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಅರಸರ ಮುಂದೆಯೂ ರಾಜ್ಯಪಾಲರ ಮುಂದೆಯೂ ಎಳೆದುಕೊಂಡುಹೋಗುವರು. ಇದು ನಿಮಗೆ ಸಾಕ್ಷಿ ನೀಡುವ ಸಂದರ್ಭವಾಗಿರುವುದು.”—ಲೂಕ 21:12, 13