ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 100

ಪೌಲ ಮತ್ತು ತಿಮೊಥೆಯ

ಪೌಲ ಮತ್ತು ತಿಮೊಥೆಯ

ಲುಸ್ತ್ರ ಎಂಬ ಸಭೆಯಲ್ಲಿ ತಿಮೊಥೆಯ ಎಂಬ ಯುವ ಸಹೋದರನಿದ್ದ. ಅವನ ತಂದೆ ಗ್ರೀಕನಾಗಿದ್ದನು. ತಾಯಿ ಯೆಹೂದ್ಯಳಾಗಿದ್ದಳು. ತಾಯಿ ಯೂನೀಕೆ ಮತ್ತು ಅಜ್ಜಿ ಲೋವಿ ತಿಮೊಥೆಯನಿಗೆ ಚಿಕ್ಕ ವಯಸ್ಸಿನಿಂದಲೇ ಯೆಹೋವನ ಬಗ್ಗೆ ಕಲಿಸಿದರು.

ಪೌಲ ತನ್ನ ಎರಡನೇ ಸಾರುವ ಸಂಚಾರದಲ್ಲಿ ಲುಸ್ತ್ರಕ್ಕೆ ಭೇಟಿ ಮಾಡಿದ. ಆಗ ತಿಮೊಥೆಯನು ಸಹೋದರರಿಗೆ ತೋರಿಸುತ್ತಿದ್ದ ಪ್ರೀತಿಯನ್ನ, ಅವರಿಗೆ ಸಹಾಯ ಮಾಡಲು ಇದ್ದ ಸಿದ್ಧ ಮನಸ್ಸನ್ನ ಪೌಲ ಗಮನಿಸಿದನು. ಪೌಲನು ತಿಮೊಥೆಯನನ್ನು ತನ್ನೊಂದಿಗೆ ಸಾರಲು ಬರುವಂತೆ ಹೇಳಿದನು. ಹೀಗೆ ಸಮಯ ಕಳೆದಂತೆ, ತಿಮೊಥೆಯನು ಚೆನ್ನಾಗಿ ಸುವಾರ್ತೆ ಸಾರಲು ಮತ್ತು ಒಳ್ಳೇ ಬೋಧಕನಾಗಲು ಪೌಲ ತರಬೇತಿ ಕೊಟ್ಟನು.

ಪೌಲ ಮತ್ತು ತಿಮೊಥೆಯ ಹೋದಲ್ಲೆಲ್ಲಾ ಪವಿತ್ರಾತ್ಮವು ಅವರನ್ನು ಮಾರ್ಗದರ್ಶಿಸಿತು. ಒಂದು ರಾತ್ರಿ ದರ್ಶನವೊಂದರಲ್ಲಿ ಪೌಲನಿಗೆ ಒಬ್ಬ ವ್ಯಕ್ತಿ, ‘ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು’ ಎಂದು ಹೇಳಿದನು. ಆಗ ಪೌಲ, ತಿಮೊಥೆಯ, ಸೀಲ ಮತ್ತು ಲೂಕ ಸುವಾರ್ತೆಯನ್ನು ಸಾರಲು ಮತ್ತು ಸಭೆಗಳನ್ನು ಸ್ಥಾಪಿಸಲು ಅಲ್ಲಿಗೆ ಹೋದರು.

ಮಕೆದೋನ್ಯದ ಥೆಸಲೊನೀಕದಲ್ಲಿ ಅನೇಕ ಸ್ತ್ರೀ-ಪುರುಷರು ಕ್ರೈಸ್ತರಾದರು. ಆದರೆ ಕೆಲವು ಯೆಹೂದ್ಯರು ಪೌಲ ಮತ್ತು ಆತನ ಸಂಗಡಿಗರ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದ್ದರಿಂದ ಅವರು ಗುಂಪು ಕಟ್ಟಿಕೊಂಡು ಬಂದು ಪೌಲ ಮತ್ತು ಸಹೋದರರನ್ನು ಊರಿನ ಅಧಿಕಾರಿಗಳ ಬಳಿಗೆ ಎಳೆದು ತಂದು, ‘ಈ ಪುರುಷರು ರೋಮನ್‌ ಸರಕಾರದ ವಿರೋಧಿಗಳು’ ಎಂದು ಗಟ್ಟಿಯಾಗಿ ಕೂಗಿದರು. ಪೌಲ ಮತ್ತು ತಿಮೊಥೆಯರ ಜೀವಗಳು ಅಪಾಯದಲ್ಲಿ ಇದ್ದದ್ದರಿಂದ ಅವರು ರಾತ್ರಿವೇಳೆಯಲ್ಲಿ ಬೆರೋಯಕ್ಕೆ ಹೊರಟುಹೋದರು.

ಬೆರೋಯದ ಜನರಿಗೆ ಸುವಾರ್ತೆ ಕೇಳಲು ತುಂಬಾ ಇಷ್ಟವಿತ್ತು. ಅಲ್ಲಿನ ಗ್ರೀಕರು ಮತ್ತು ಯೆಹೂದ್ಯರು ವಿಶ್ವಾಸಿಗಳಾದರು. ಆದರೆ ಥೆಸಲೊನೀಕದಿಂದ ಬಂದ ಕೆಲವು ಯೆಹೂದ್ಯರು, ಮತ್ತೆ ಗಲಭೆಯನ್ನು ಎಬ್ಬಿಸಿದ್ದರಿಂದ ಪೌಲನು ಅಥೆನ್ಸ್‌ಗೆ ಹೋದನು. ತಿಮೊಥೆಯ ಮತ್ತು ಸೀಲರು ಬೆರೋಯದಲ್ಲೇ ಇದ್ದು ಸಹೋದರರನ್ನು ಬಲಪಡಿಸಿದರು. ಥೆಸಲೋನಿಕದಲ್ಲಿದ್ದ ಸಹೋದರರು ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದರು. ಆದ್ದರಿಂದ ಅವರಿಗೆ ಸಹಾಯ ಮಾಡಲು ಪೌಲನು ತಿಮೊಥೆಯನನ್ನು ಪುನಃ ಅಲ್ಲಿಗೆ ಕಳುಹಿಸಿದನು. ನಂತರ, ಪೌಲ ತಿಮೊಥೆಯನನ್ನು ಬೇರೆ ಬೇರೆ ಸಭೆಗಳನ್ನು ಭೇಟಿ ಮಾಡಲು ಮತ್ತು ಅವರನ್ನು ಉತ್ತೇಜಿಸಲು ಕಳುಹಿಸಿದನು.

ಪೌಲ ತಿಮೊಥೆಯನಿಗೆ, ‘ಯೆಹೋವನ ಸೇವೆ ಮಾಡಲು ಬಯಸುವವರು ಹಿಂಸೆಗೆ ಒಳಗಾಗುವರು’ ಎಂದನು. ನಂಬಿಕೆ ತೋರಿಸಿದ್ದರಿಂದ ತಿಮೊಥೆಯನನ್ನು ಹಿಂಸೆಪಡಿಸಿ ಸೆರೆಗೆ ಹಾಕಿದರು. ಆದರೆ, ‘ಕಷ್ಟದ ಮಧ್ಯೆಯೂ ನಾನು ಯೆಹೋವನಿಗೆ ನಂಬಿಗಸ್ತನಾಗಿದ್ದೇನೆ’ ಎಂದು ತಿಮೊಥೆಯನಿಗೆ ಸಂತೋಷವಾಯಿತು.

ಪೌಲ ಫಿಲಿಪ್ಪಿಯದವರಿಗೆ, ‘ನಾನು ನಿಮ್ಮ ಬಳಿಗೆ ತಿಮೊಥೆಯನನ್ನು ಕಳುಹಿಸುತ್ತಿದ್ದೇನೆ. ಅವನು ಯೆಹೋವನ ಸೇವಕರು ಹೇಗೆ ಜೀವಿಸಬೇಕು ಎಂದು ಕಲಿಸುವನು ಮತ್ತು ಸುವಾರ್ತೆ ಸಾರಲು ತರಬೇತಿಯನ್ನು ನೀಡುವನು’ ಎಂದನು. ಪೌಲನಿಗೆ ತಿಮೊಥೆಯನ ಮೇಲೆ ಭರವಸೆ ಇತ್ತು. ಅವರು ಸ್ನೇಹಿತರಾಗಿ, ಜೊತೆ ಸೇವಕರಾಗಿ ಅನೇಕ ವರ್ಷಗಳ ತನಕ ಕೆಲಸಮಾಡಿದರು.

“ಅವನ ಹಾಗೆ ನಿಮಗೆ ಸಂಬಂಧಿಸಿದ ವಿಷಯಗಳ ಕುರಿತು ಯಥಾರ್ಥವಾಗಿ ಚಿಂತಿಸುವ ಮನೋಭಾವವನ್ನು ತೋರಿಸುವವರು ನನ್ನ ಬಳಿ ಬೇರೆ ಯಾರೂ ಇಲ್ಲ. ಏಕೆಂದರೆ ಬೇರೆಲ್ಲರೂ ಕ್ರಿಸ್ತ ಯೇಸುವಿನ ಅಭಿರುಚಿಗಳ ಮೇಲೆ ಅಲ್ಲ, ತಮ್ಮ ಸ್ವಂತ ಅಭಿರುಚಿಗಳ ಮೇಲೆ ಮನಸ್ಸಿಟ್ಟವರಾಗಿದ್ದಾರೆ.”—ಫಿಲಿಪ್ಪಿ 2:20, 21