ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 101

ಪೌಲನನ್ನು ರೋಮಿಗೆ ಕಳುಹಿಸಲಾಯಿತು

ಪೌಲನನ್ನು ರೋಮಿಗೆ ಕಳುಹಿಸಲಾಯಿತು

ಪೌಲನು ಸಾರಲಿಕ್ಕಾಗಿ ಮಾಡಿದ ಮೂರನೇ ಪ್ರಯಾಣ ಯೆರೂಸಲೇಮಿನಲ್ಲಿ ಮುಗಿಯಿತು. ಅಲ್ಲಿ ಅವನನ್ನು ಬಂಧಿಸಿ ಸೆರೆಮನೆಗೆ ಹಾಕಲಾಯಿತು. ರಾತ್ರಿ ಒಂದು ದರ್ಶನದಲ್ಲಿ ಯೇಸು ಪೌಲನಿಗೆ, ‘ನೀನು ರೋಮಿಗೆ ಹೋಗಿ ಅಲ್ಲಿ ಸಾರುವಿ’ ಎಂದು ಹೇಳಿದನು. ಪೌಲನನ್ನು ಯೆರೂಸಲೇಮಿನಿಂದ ಕೈಸರೈಯಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ಸೆರೆಮನೆಯಲ್ಲಿ ಅವನು ಎರಡು ವರ್ಷ ಕಳೆದನು. ರಾಜ್ಯಪಾಲ ಫೆಸ್ತನ ಮುಂದೆ ವಿಚಾರಣೆ ಆಗುತ್ತಿರುವಾಗ ಪೌಲನು, ‘ನನಗೆ ರೋಮಿನಲ್ಲಿ ಕೈಸರನೇ ನ್ಯಾಯತೀರಿಸಲಿ’ ಎಂದನು. ಅದಕ್ಕೆ ಫೆಸ್ತನು, “ನೀನು ಕೈಸರನಿಗೆ ಮನವಿಮಾಡಿಕೊಂಡಿದ್ದೀ. ನೀನು ಕೈಸರನ ಬಳಿಗೇ ಹೋಗುವೆ” ಅಂದನು. ಪೌಲನನ್ನು ಹಡಗಿನಲ್ಲಿ ರೋಮಿಗೆ ಕಳುಹಿಸಲು ಏರ್ಪಾಡು ಮಾಡಲಾಯಿತು. ಅವನ ಜೊತೆಯಲ್ಲಿ ಲೂಕ ಮತ್ತು ಅರಿಸ್ತಾರ್ಕ ಎಂಬ ಸಹೋದರರೂ ಹೋದರು.

ಅವರು ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಭಯಂಕರ ಬಿರುಗಾಳಿ ಎದ್ದಿತು. ಅನೇಕ ದಿನಗಳವರೆಗೆ ಬಿರುಗಾಳಿ ಕಡಿಮೆ ಆಗಲೇ ಇಲ್ಲ. ಎಲ್ಲರೂ ತಾವು ಸಾಯುತ್ತೇವೆಂದು ಭಯಭೀತರಾದರು. ಆದರೆ ಪೌಲನಿಗೆ ಒಬ್ಬ ದೇವದೂತನು “ಪೌಲನೇ, ಭಯಪಡಬೇಡ. ನೀನು ರೋಮಿಗೆ ಹೋಗುತ್ತೀ ಮತ್ತು ನಿನ್ನ ಜೊತೆ ಹಡಗಿನಲ್ಲಿರುವ ಎಲ್ಲರೂ ಸುರಕ್ಷಿತರಾಗಿರುತ್ತಾರೆ” ಎಂದು ಕನಸಿನಲ್ಲಿ ಹೇಳಿದನು. ಆದ್ದರಿಂದ ಪೌಲನು ಹಡಗಿನಲ್ಲಿ ಇದ್ದವರಿಗೆ ‘ಧೈರ್ಯದಿಂದಿರಿ, ನೀವು ಸಾಯುವುದಿಲ್ಲ’ ಎಂದು ಹೇಳಿದನು.

14 ದಿನಗಳವರೆಗೆ ಸತತವಾಗಿ ಬಿರುಗಾಳಿ ಬೀಸುತ್ತಲೇ ಇತ್ತು. ಕೊನೆಗೂ ದಡ ಕಾಣಿಸಿತು. ಅದು ಮಾಲ್ಟ ಎಂಬ ದ್ವೀಪವಾಗಿತ್ತು. ಆದರೆ ಹಡಗು ಮರಳದಿಬ್ಬಕ್ಕೆ ಸಿಕ್ಕಿಹಾಕಿಕೊಂಡು ಅಲೆಗಳ ರಭಸಕ್ಕೆ ಹೊಡೆದು ಹೋಯಿತು. ಹಡಗಿನಲ್ಲಿದ್ದ ಎಲ್ಲಾ 276 ಜನರೂ ಸುರಕ್ಷಿತವಾಗಿ ದಡ ಸೇರಿದರು. ಕೆಲವರು ಈಜಿದರೆ ಇನ್ನು ಕೆಲವರು ಹಡಗಿನ ತುಂಡುಗಳನ್ನು ಹಿಡಿದುಕೊಂಡು ನೀರಿನಲ್ಲಿ ತೇಲುತ್ತಾ ದಡ ಸೇರಿದರು. ಮಾಲ್ಟ ದ್ವೀಪದ ಜನರು ಅವರ ಅಗತ್ಯಗಳನ್ನು ನೋಡಿಕೊಂಡರು ಮತ್ತು ಬೆಂಕಿ ಹಾಕಿ ಚಳಿಕಾಯಿಸಿಕೊಳ್ಳಲು ಅವರಿಗೆ ಸಹಾಯ ಮಾಡಿದರು.

ಇದಾಗಿ ಮೂರು ತಿಂಗಳ ನಂತರ, ಸೈನಿಕರು ಪೌಲನನ್ನು ಬೇರೊಂದು ಹಡಗಿನಲ್ಲಿ ರೋಮಿಗೆ ಕರೆದುಕೊಂಡು ಹೋದರು. ಅಲ್ಲಿ ತಲುಪಿದಾಗ ಪೌಲನನ್ನು ಭೇಟಿಯಾಗಲು ಸಹೋದರರು ಬಂದರು. ಅವರನ್ನು ನೋಡಿದಾಗ ಪೌಲನು ಯೆಹೋವನಿಗೆ ಕೃತಜ್ಞತೆ ಹೇಳಿದನು ಮತ್ತು ಧೈರ್ಯ ಪಡೆದು ಕೊಂಡನು. ಪೌಲನು ಸೆರೆಯಾಳು ಆಗಿದ್ದರೂ ಒಂದು ಬಾಡಿಗೆ ಮನೆಯಲ್ಲಿ ಇರಲು ಅವನಿಗೆ ಅನುಮತಿ ಇತ್ತು. ಅದಕ್ಕೆ ಒಬ್ಬ ಸೈನಿಕನು ಕಾವಲಿದ್ದನು. ಅಲ್ಲಿ ಅವನು ಎರಡು ವರ್ಷ ಇದ್ದನು. ಜನರು ಅವನನ್ನು ನೋಡಲು ಬಂದರು. ಆಗ ಪೌಲನು ಅವರಿಗೆ ದೇವರ ರಾಜ್ಯದ ಬಗ್ಗೆ ಮತ್ತು ಯೇಸುವಿನ ಬಗ್ಗೆ ಕಲಿಸಿದನು. ಪೌಲನು ಏಷ್ಯಾ ಮೈನರ್‌ ಮತ್ತು ಯೂದಾಯದ ಸಭೆಗಳಿಗೆ ಪತ್ರಗಳನ್ನು ಸಹ ಬರೆದನು. ಹೀಗೆ ಯೆಹೋವನು ಪೌಲನನ್ನು ಜನಾಂಗಗಳಿಗೆ ಸುವಾರ್ತೆಯನ್ನು ಸಾರಲು ಉಪಯೋಗಿಸಿದನು.

‘ನಾವು ಬಹಳ ಸಂಗತಿಗಳನ್ನು ತಾಳಿಕೊಳ್ಳುವುದರಲ್ಲಿಯೂ ಸಂಕಟಗಳಲ್ಲಿಯೂ ಕೊರತೆಗಳಲ್ಲಿರುವಾಗಲೂ ಕಷ್ಟಗಳಲ್ಲಿಯೂ ಪ್ರತಿಯೊಂದು ವಿಧದಲ್ಲಿ ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತಿದ್ದೇವೆ.’—2 ಕೊರಿಂಥ 6:4